ಸಹಸ್ರಾರು ಸಾವು?
ಉತ್ತರಾಖಂಡ ಪ್ರವಾಹಕ್ಕೆ ಸಿಕ್ಕಿ ಅಸು ನೀಗಿದವರು 160 ಅಲ್ಲ. ಸಾವಿರಾರು ಮಂದಿ. ಏಕೆಂದರೆ, ನಾಪತ್ತೆಯಾದ ಇನ್ನೂ ನೂರಾರು...

ಡೆಹ್ರಾಡೂನ್/ನವದೆಹಲಿ/ಶಿಮ್ಲಾ: ಉತ್ತರಾಖಂಡ ಪ್ರವಾಹಕ್ಕೆ ಸಿಕ್ಕಿ ಅಸು ನೀಗಿದವರು 160 ಅಲ್ಲ. ಸಾವಿರಾರು ಮಂದಿ. ಏಕೆಂದರೆ, ನಾಪತ್ತೆಯಾದ ಇನ್ನೂ ನೂರಾರು ಮಂದಿಯ ಸುಳಿವೇ ಸಿಕ್ಕಿಲ್ಲ. ಅದಕ್ಕೆ ಪೂರಕವಾಗಿ ಉತ್ತರಾಖಂಡದ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರಿಗಾಗಿ ನಿರ್ಮಾಣಗೊಂಡಿದ್ದ 90 ಛತ್ರಗಳು ಹಠಾತ್ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಅದರಲ್ಲಿದ್ದವರ ಒಬ್ಬರ ಸುಳಿವೂ ಪತ್ತೆಯಾಗಿಲ್ಲ ಎಂದು ಉತ್ತರಾಖಂಡ ಪ್ರಾಕೃತಿಕ ವಿಪತ್ತು ನಿರ್ವಹಣಾ ಘಟಕ ತಿಳಿಸಿದೆ. ಕೇಂದ್ರ ಗೃಹ ಖಾತೆಗೆ ಸಲ್ಲಿಸಲಾಗಿರುವ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.
ಉತ್ತರಾಖಂಡದ ವಿವಿಧ ಭಾಗಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಪ್ರವಾಹದಿಂದಾಗಿ ನದಿ ಪಾತ್ರದ ಕೆಲ ಹಳ್ಳಿಗಳೂ ಕೊಚ್ಚಿಕೊಂಡು ಹೋಗಿವೆ. ಹೀಗಾಗಿ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಕಷ್ಟವಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿಳಿಸಿದ್ದಾರೆ.
15 ಸಾವಿರ ಮಂದಿ ರಕ್ಷಣೆ: ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ಗುರುದ್ವಾರಕ್ಕೆ ತೆರಳುವ ಪ್ರದೇಶದಿಂದ ಇದುವರೆಗೆ 15 ಸಾವಿರ ಮಂದಿಯನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಮತ್ತು ರಸ್ತೆ ಮಾರ್ಗದ ಮೂಲಕ ಅವರನ್ನು ಜೋಶಿಮಠ ಶಿಬಿರಕ್ಕೆ ಕರೆತರಲಾಗಿದೆ.
ಇನ್ನೂ 55 ಸಾವಿರ ಮಂದಿ ಅತಂತ್ರ: ಯುದ್ಧದೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರಿಯುತ್ತಿದ್ದರೂ, ಭೂಕುಸಿತದಿಂದಾಗಿ ಹಲವು ಪ್ರದೇಶಗಳಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನೂ ಹಲವು ಪ್ರದೇಶಗಳಲ್ಲಿ ಮಳೆಯ ರಭಸಕ್ಕೆ ಬಿದ್ದು ಹೋಗಿರುವ ಮನೆ ಮತ್ತು ಕಟ್ಟಡಗಳ ಅವಶೇಷಗಳ ತೆರವು ಕಾರ್ಯಾಚರಣೆ ಇನ್ನಷ್ಟೇ ಆರಂಭವಾಗಬೇಕಾಗಿದೆ. ಹೀಗಾಗಿ, ದುರಂತದಲ್ಲಿ ಕೊನೆಯುಸಿರೆಳೆದವರ ಸಂಖ್ಯೆ ಹೆಚ್ಚಾಗಬಹುದೆಂದು ಭಯಪಡಲಾಗಿದೆ.
ಕೇದಾರನಾಥಕ್ಕೆ ರಕ್ಷಣಾ ತಂಡ: ಉತ್ತರಾಖಂಡ ಗೃಹ ಖಾತೆಯ ವಿಶೇಷ ಕಾರ್ಯದರ್ಶಿ ಓಂಪ್ರಕಾಶ್ ನೀಡಿರುವ ಮಾಹಿತಿ ಪ್ರಕಾರ 1 ಸಾವಿರ ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 200 ಮಂದಿ ಶ್ರೀ ಕ್ಷೇತ್ರದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅವರನ್ನು ಶುಕ್ರವಾರ ಪಾರು ಮಾಡಲಾಗುತ್ತದೆ ಎಂದು ಓಂ ಪ್ರಕಾಶ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


