ಬೇಸಿಗೆ ತಾಪಕ್ಕೆ 4 ಹಸುಳೆ ಬಲಿ
ಕಳೆದ ಬೇಸಿಗೆಯ ಬಿಸಿಲಿನ ತಾಪಕ್ಕೆ (ಹೀಟ್ ಸ್ಟ್ರೋಕ್) ನಾಲ್ಕು ಹಸುಗೂಸುಗಳು ಅಸುನೀಗಿದ ದಾರುಣ ಘಟನೆ ಆಲಮಟ್ಟಿ...
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜೂ. 19-
ಕಳೆದ ಬೇಸಿಗೆಯ ಬಿಸಿಲಿನ ತಾಪಕ್ಕೆ (ಹೀಟ್ ಸ್ಟ್ರೋಕ್) ನಾಲ್ಕು ಹಸುಗೂಸುಗಳು ಅಸುನೀಗಿದ ದಾರುಣ ಘಟನೆ ಆಲಮಟ್ಟಿ ಅಣೆಕಟ್ಟೆಯ ಹಿನ್ನೀರು ಸಂತ್ರಸ್ತರ ವಸತಿಗಾಗಿ ಬೀಳಗಿ ತಾಲೂಕು ಯಡಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಸಂಭವಿಸಿದ್ದು, ಈಗ ಅದು ತಡವಾಗಿ ಬೆಳಕಿಗೆ ಬಂದಿದೆ.
2000ನೇ ಇಸ್ವಿಯಲ್ಲಿ ಆಲಮಟ್ಟಿ ಅಣೆಕಟ್ಟೆ ಎತ್ತರದಿಂದಾಗಿ ಮುಳುಗಿದ ಹಲವಾರು ಗ್ರಾಮಗಳಲ್ಲಿ ಈ ಯಡಹಳ್ಳಿಯೂ ಒಂದು. 168 ಕುಟುಂಬಗಳಿಗೆ ಯಡಹಳ್ಳಿ ಗುಡ್ಡ(ಬೀಳಗಿ-ಮುಧೋಳ ರಸ್ತೆ)ದಲ್ಲಿ ತಗಡಿನ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ ಆಶ್ರಯ ಕಲ್ಪಿಸಲಾಗಿದೆ. ಈ ಶೆಡ್ಗಳಿಗೆ ಸುತ್ತಲೂ ಬಳಸಿರುವ ತಗಡುಗಳು ಬೇಸಿಗೆ ಕಾಲದಲ್ಲಿ ವಿಪರೀತವಾಗಿ ಕಾದು ಕೆಂಡವಾಗುತ್ತವೆ. ಇದರಿಂದ ಉಂಟಾದ ತಾಪಕ್ಕೆ ಆಗ ತಾನೇ ಹುಟ್ಟಿದ ನಾಲ್ಕು ಕಂದಮ್ಮಗಳು ಬಲಿಯಾಗಿವೆ.
ಈ ತಗಡಿನ ಶೆಡ್ ನಿವಾಸಿಗಳಾದ ಸಾವಿತ್ರಿ ಹನುಮಂತ ಆಲಗುಂಡಿ, ಚಂದ್ರವ್ವ ಮಲ್ಲಪ್ಪ ನಿಂಗದೋಳಿ, ರೇಣವ್ವ ಲಕ್ಷ್ಮಣ ಹೆರಕಲ್, ರುಕ್ಮವ್ವ ರಮೇಶ್ ಬಡಿಗೇರ ದಂಪತಿಗಳ ನಾಲ್ಕು ಹಸುಗೂಸುಗಳು ಕಾದ ತಗಡಿನ ತಾಪ, ಝಳ(ಹೀಟ್ ಸ್ಟ್ರೋಕ್)ಕ್ಕೆ ಬಲಿಯಾಗಿವೆ. ನಾಲ್ಕೂ ಮಕ್ಕಳು ಈ ಭೂಮಿಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸಿವೆ. ಈ ವಿಷಯವನ್ನು ಬೀಳಗಿ ಪಟ್ಟಣದ ಡಾ.ಮೋಹನ್ ಚಟ್ಟೇರ್ ಖಚಿತಪಡಿಸಿದ್ದಾರೆ.
ಹುಟ್ಟಿದ 2 ಗಂಟೆಯಲ್ಲಿ ಸಾವು: ಚಂದ್ರವ್ವ ನಿಂಗದೋಳಿ ಆರು ತಿಂಗಳು ಗರ್ಭಿಣಿ ಇರುವಾಗಲೇ ಬೀಳಗಿ ಪಟ್ಟಣದ ಡಾ.ಮೋಹನ್ ಚಟ್ಟೇರ್ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಅದಾಗಲೇ ಆಕೆಯ ಮೈಯಲ್ಲಿ ನೀರಿನ ಅಂಶ ಕಡಿಮೆಯಾಗುವುದು, ಚರ್ಮದ ಮೇಲೆ ಗುಳ್ಳೆಗಳು ಏಳುವುದನ್ನು ಗುರುತಿಸಿದ್ದ ವೈದ್ಯರು ಹೀಟ್ ಸ್ಟ್ರೋಕ್ ಲಕ್ಷಣ ತಿಳಿಹೇಳಿ ಸುರಕ್ಷಿತ ಮತ್ತು ತಂಪಾದ ಸ್ಥಳದಲ್ಲಿ ಇರುವಂತೆ ಸೂಚಿಸಿದ್ದರಂತೆ. ಆದರೆ, ಇದು ಸಾಧ್ಯವಾಗಿರಲಿಲ್ಲ. ಮುಂದೆ 9 ತಿಂಗಳು ತುಂಬಿ ಹೆರಿಗೆಗೆಂದು ಆಸ್ಪತ್ರೆಗೆ ಒಯ್ಯಬೇಕು ಎನ್ನುವಷ್ಟರಲ್ಲಿ ಸಹಜ ಹೆರಿಗೆಯಾಗಿದೆ. ಆದರೆ, ಬಿಸಿಲಿನ ತಾಪಕ್ಕೆ ಬಾಣಂತಿ, ಹಸುಗೂಸು ಇಬ್ಬರೂ ವಿಪರೀತ ಸಂಕಟ ಅನುಭವಿಸಿದ್ದಾರೆ. ಹೆರಿಗೆಯಾಗಿ 2 ಗಂಟೆಯ ಬಳಿಕ ಮಗುವಿಗೆ ಎದೆ ಹಾಲು ಉಣಿಸಿದ್ದಾಳೆ ಚಂದ್ರವ್ವ. ಮುಂದಿನ ಅರ್ಧ ಗಂಟೆಯ ಹೊತ್ತಿಗೆ ಮಗುವಿನ ಉಸಿರಾಟದಲ್ಲಿ ತೀವ್ರಗತಿಯ ಏರಿಳಿತವಾಗಿ ಕೂಸು ಅಸುನೀಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಡಾ.ಚಟ್ಟೇರ ಬಾಣಂತಿ ಮತ್ತು ಹಸುಗೂಸಿನ ಶವ ಪರಿಶೀಲಿಸಿ ಹೀಟ್ ಸ್ಟ್ರೋಕ್ನಿಂದಾಗಿ ಮಗು ಉಸಿರು ಕಳೆದುಕೊಂಡಿದ್ದನ್ನು ದೃಢಪಡಿಸಿ ಬಾಣಂತಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಸಲಹೆ ನೀಡಿದ್ದರು.
ವೃದ್ಧರೂ ಬಲಿಯಾದರೇ? ಚರ್ಮ ರೋಗಕ್ಕೆ ತುತ್ತಾಗುವವರು, ವಾಂತಿ ಭೇದಿ ಅನುಭವಿಸುವವರು ಪ್ರತಿ ಶೆಡ್ನಲ್ಲೂ ಕಾಣಸಿಗುತ್ತಾರೆ. ವೃದ್ಧರು, ಹಸುಗೂಸುಗಳನ್ನು ಈ ಸ್ಟ್ರೋಕ್ ಅತಿಯಾಗಿ ಕಾಡುತ್ತದೆಯಂತೆ. ಅದಾಗಲೇ ಇಲ್ಲಿ ಅದೆಷ್ಟೋ ವೃದ್ಧರು ಮಣ್ಣಾಗಿ ಹೋಗಿದ್ದಾರೆ. ಆ ಸಾವುಗಳಿಗೆಲ್ಲ ವೃದ್ಧಾಪ್ಯ, ರೋಗ ಇತ್ಯಾದಿ ಕಾರಣಗಳನ್ನು ಹೇಳಲಾಗಿದೆ. ಹಸುಗೂಸುಗಳ ಸಾವಿನ ಕಾರಣ ಗೊತ್ತಾಗುತ್ತಿದ್ದಂತೆ ವೃದ್ಧರೂ ಇದೇ ಸ್ಟ್ರೋಕ್ಗೆ ಬಲಿಯಾಗಿರಬೇಕು ಎನ್ನುವ ಶಂಕೆ ಶೆಡ್ ನಿವಾಸಿಗಳನ್ನು ಕಾಡುತ್ತಿದೆ.
ಏನಿದು ಹೀಟ್ ಸ್ಟ್ರೋಕ್?
ಬಿಸಿಲಿನ ತಾಪಕ್ಕೆ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುವುದಕ್ಕೆ ಹೀಟ್ಸ್ಟ್ರೋಕ್ ಎಂದು ಕರೆಯಲಾಗುತ್ತದೆ. ಇದರಿಂದ ಚರ್ಮರೋಗ, ವಾಂತಿ ಭೇದಿ, ರಕ್ತದೊತ್ತಡದಲ್ಲಿ ಏರಿಳಿತವಾಗುತ್ತದೆ. ಮೂರ್ಛೆ ಹೋಗುವ ಸಾಧ್ಯತೆ ಇರುತ್ತದೆ. ಹಸುಗೂಸು, ವೃದ್ಧರಿಗೆ ಇದು ಹೆಚ್ಚು ಅಪಾಯಕಾರಿ. ತಗಡಿನ ಶೆಡ್ಗಳಲ್ಲಿ ವಾಸಿಸುವವರಿಗೆ ಬೇಸಿಗೆ ಕಾಲದಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತದೆ.
ವೈದ್ಯರು ಹೇಳಿದ್ದೇನು?
ಕಳೆದ ಬೇಸಿಗೆಯಲ್ಲಿ ಬಿಸಿಲು ವಿಪರೀತವಾಗಿತ್ತು. ಅದರಿಂದ ಶೆಡ್ನ ತಗಡುಗಳು ಅತಿಯಾಗಿ ಕಾದು ಆರೋಗ್ಯವಂತರೂ ಚರ್ಮರೋಗ, ವಾಂತಿ ಭೇದಿಯಿಂದ ನರಳುವಂತೆ ಮಾಡಿತ್ತು. ಇಂಥದರಲ್ಲಿ ಹಸುಗೂಸುಗಳು ಹೇಗೆ ತಾನೇ ಆ ತಾಪವನ್ನು ತಾಳಿಯಾವು..? ಖಂಡಿತವಾಗಿಯೂ ಹೀಟ್ಸ್ಟ್ರೋಕ್ನಿಂದಾಗಿಯೇ ಮಗು ಅಸುನೀಗಿದೆ ಎಂದು ಡಾ.ಚಟ್ಟೇರ್ ಸ್ಪಷ್ಟಪಡಿಸಿದರು. ಉಳಿದ ಮೂರು ಹಸುಗೂಸುಗಳೂ ಇದೇ ರೀತಿಯಲ್ಲಿ ಅಸುನೀಗಿದ್ದರಿಂದ ಇಡೀ ಪುನರ್ವಸತಿ ಕೇಂದ್ರವನ್ನು ಬೇಸಿಗೆ ಮುಗಿಯುವರೆಗೆ ಈ ಹೀಟ್ ಸ್ಟ್ರೋಕ್ ಬೇತಾಳನಂತೆ ಕಾಡಿದೆ.
- ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

