ಪ್ರಧಾನ ಸುದ್ದಿ

ಉತ್ತರದ ಪ್ರವಾಹಕ್ಕೆ 131 ಬಲಿ

ಉತ್ತರ ಭಾರತಕ್ಕೆ ಅಪ್ಪಳಿಸಿದ ಮಳೆಯಿಂದಾಗಿ ಇದುವರೆಗೆ 131 ಮಂದಿ ಅಸು ನೀಗಿದ್ದಾರೆ. ಈ ಪೈಕಿ ಅತಿ ಹೆಚ್ಚು ಸಾವುನೋವು ಸಂಭವಿಸಿರುವುದು ಉತ್ತರಾಖಂಡ...

ಉತ್ತರದ ಪ್ರವಾಹಕ್ಕೆ 131 ಬಲಿ
Published On :

ನವದೆಹಲಿ: ಉತ್ತರ ಭಾರತಕ್ಕೆ ಅಪ್ಪಳಿಸಿದ ಮಳೆಯಿಂದಾಗಿ ಇದುವರೆಗೆ 131 ಮಂದಿ ಅಸು ನೀಗಿದ್ದಾರೆ. ಈ ಪೈಕಿ ಅತಿ ಹೆಚ್ಚು ಸಾವುನೋವು ಸಂಭವಿಸಿರುವುದು ಉತ್ತರಾಖಂಡ ರಾಜ್ಯದಲ್ಲಿ. ಈ ರಾಜ್ಯದಲ್ಲೇ ಕನಿಷ್ಠ 102 ಮಂದಿ ಅಸುನೀಗಿದ್ದಾರೆ.
ಇದಲ್ಲದೆ, ಸುಮಾರು 500 ಮಂದಿ ಇನ್ನೂ ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ  ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ವೇಳೆ ಐತಿಹಾಸಿಕ ಕೇದಾರನಾಥ ದೇಗುಲದ ಆವರಣ ಗೋಡೆ ಕುಸಿದು ಹೋಗಿದೆ. ಈ ಪ್ರದೇಶದಲ್ಲಿಯೇ 50 ಮೃತದೇಹಗಳು ಸಿಕ್ಕಿವೆ. ಇದರ ಜತೆಗೆ ಪ್ರವಾಹದಲ್ಲಿ ದೇಗುಲ ಆಂಶಿಕವಾಗಿ ಮುಳುಗಿ ಹೋಗಿದೆ.
ಇದರ ಜತೆ 70 ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಕರು ಮತ್ತು ತೀರ್ಥಯಾತ್ರಿಗಳು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಹಠಾತ್ ಪ್ರವಾಹ, ನೆರೆ, ಮೇಘಸ್ಫೋಟ ಸೇರಿದಂತೆ ಹಲವು ಮಳೆ ಸಂಬಂಧಿ ದುರಂತಗಳಿಂದಾಗಿ ಈ ಅನಾಹುತ ಸಂಭವಿಸಿದೆ. ಹಿಮಾಚಲ ಪ್ರದೇಶದ ಗಡಿ ಜಿಲ್ಲೆಯ ಕಿನ್ನೌರ್‌ನ ಸಾಂಗ್ಲಾ ಕಣಿವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಮುಖ್ಯಮಂತ್ರಿ ವೀರಭದ್ರ ಸಿಂಗ್‌ಮತ್ತು ಇತರ 150 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಕರೆತರಲಾಗಿದೆ.
ಉತ್ತರಾಖಂಡದ ಹೇಮಕುಂಡ್ ಗುರುದ್ವಾರಕ್ಕೆ ತೆರಳಿ ಚಮೋಲಿ ಜಿಲ್ಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ಇಂಡೋ-ಟಿಬೆಟನ್ ಪೊಲೀಸ್ ಪಡೆ ರಕ್ಷಿಸಿದೆ. ಮಳೆ ಸಂಬಂಧಿ ಅನಾಹುತದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ ಜತೆ ಮಾತುಕತೆ ನಡೆಸಿ ವಿವರ ಪಡೆದುಕೊಂಡರು.
ಉತ್ತರಾಖಂಡದಲ್ಲಿ ಮಳೆಯಬ್ಬರಕ್ಕೆ  ಅಪಾರ ಆಸ್ತಿ ನಷ್ಟ ಉಂಟಾಗಿದೆ. ಕೇದಾರನಾಥದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ಐವರು ಇಂಡೋ-ಟಿಬೆಟನ್ ಪೊಲೀಸ್ ಪಡೆ ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ. ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಚಮೋಲಿಯಲ್ಲಿ 27,040,  ರುದ್ರಪ್ರಯಾಗದಲ್ಲಿ 25 ಸಾವಿರ ಹಾಗೂ ಉತ್ತರಕಾಶಿಯಲ್ಲಿ 9,850 ಮಂದಿ ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ಗಂಭೀರ: ಉತ್ತರಪ್ರದೇಶದಲ್ಲೂ ಪ್ರವಾಹ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಪ್ರವಾಹಕ್ಕೆ ನಾಲ್ವರು ಬಲಿಯಾಗಿದ್ದಾರೆ.

ರಾಜ್ಯದ ಮಂದಿ ಸುರಕ್ಷಿತ
ಉತ್ತರಾಖಂಡ ಭಾರಿ ಮುಂಗಾರು ಮಳೆಯ ಆರ್ಭಟಕ್ಕೆ ನಲುಗಿದ್ದು, ಈ ಜಲಪ್ರಳಯದಲ್ಲಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಕನ್ನಡಿಗರು ಅಪಾಯದಿಂದ ಪಾರಾಗಿದ್ದು, ಈಗ ಸುರಕ್ಷಿತ ಸ್ಥಳದಲ್ಲಿ ಇದ್ದಾರೆಂದು ತಿಳಿದು ಬಂದಿದೆ. ಹೂವಿನಹಡಗಲಿಯ ಎಸ್.ಎಂ. ಗೋಪಾಲಶೆಟ್ಟಿ ಅವರ ಪತ್ನಿ ಗಂಗಮ್ಮ, ಪುತ್ರ ರಾಘವೇಂದ್ರ ಶೆಟ್ಟಿ, ಇವರ ಪತ್ನಿ ಮೇಘನಾ ಮತ್ತು ಬಿಜಾಪುರದ ಇವರ ಸಂಬಂಧಿಕರಾದ ಲೋಕೋಪಯೋಗಿ ಇಲಾಖೆಯ ಎಇಇ ನರಸಯ್ಯ ಶೆಟ್ಟಿ, ಪುತ್ರ ಭಾಸ್ಕರ ಶೆಟ್ಟಿ ಮತ್ತು ಪುತ್ರಿ ಪಂಕಜಾ ಇವರು ಉತ್ತರ ಭಾರತದ ತೀರ್ಥಯಾತ್ರೆಗೆಂದು ಕಳೆದ ಜೂ. 16ರಂದು ಕೇದಾರನಾಥ, ಕಾಶಿ, ಬದರಿನಾಥ ಸೇರಿದಂತೆ ಇತರೆ ಕಡೆಗಳಿಗೆ ಪ್ರವಾಸ ಹೋಗಿದ್ದಾರೆ. ಈ ಸಂದರ್ಭದಲ್ಲಿ ಬದರಿನಾಥದಲ್ಲಿ ಸುರಿದ ಭಾರಿ ಮಳೆಯ ಆರ್ಭಟಕ್ಕೆ ಸಿಲುಕಿದ್ದಾರೆಂದು ಸೋಮವಾರ ರಾತ್ರಿ ಸುದ್ದಿಯಾಗಿತ್ತು. ಸಂಬಂಧಿಕರು ಸಾಕಷ್ಟು ಪ್ರಯತ್ನ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ನಂತರದಲ್ಲಿ ಮಂಗಳವಾರ ಬೆಳಗ್ಗೆ ಹೂವಿನಹಡಗಲಿಯ ಅವರ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ಬದರಿನಾಥದ ಲಾಡ್ಜ್‌ವೊಂದರಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.