ಮರಳಿ ಗೂಡಿಗೆ?
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪ್ರಚಾರ ಸಮಿತಿಯ ಸಾರಥ್ಯ ವಹಿಸುತ್ತಿದ್ದಂತೆ ಪಕ್ಷದಿಂದ ದೂರವಾಗಿ ಕರ್ನಾಟಕ ಜನತಾ ಪಕ್ಷ...

ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ.11
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪ್ರಚಾರ ಸಮಿತಿಯ ಸಾರಥ್ಯ ವಹಿಸುತ್ತಿದ್ದಂತೆ ಪಕ್ಷದಿಂದ ದೂರವಾಗಿ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಗೆ ಹತ್ತಿರವಾಗುವ ಸೂಚನೆ ಕಾಣಿಸಿಕೊಳ್ಳಲಾರಂಭಿಸಿದೆ.
ಆದರೆ, ಅವರಿಗೆ ಈಗ ಕಾಡುತ್ತಿರುವುದು ತಮ್ಮ ಅಸ್ತಿತ್ವದ ಪ್ರಶ್ನೆ. ಬಿಜೆಪಿಗೆ ಮತ್ತೆ ಸೇರಿದರೆ ಅಥವಾ ಆ ಪಕ್ಷದ ಜತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡರೆ ತಮ್ಮ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆಯಾಗುವುದೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಹೀಗಾಗಿ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಲು ಅವರು ಹಿಂದೇಟು ಹಾಕುತ್ತಿದ್ದಾರೆ.
ಆದರೆ, ರಾಷ್ಟ್ರೀಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಆತ್ಯಂತ ಗಂಭೀರವಾಗಿ ಪರಿಶೀಲಿಸುತ್ತಿರುವ ಅವರು ಇನ್ನೂ ಸ್ವಲ್ಪ ದಿನ ಕಾದು ತಮ್ಮ ಮುಂದಿನ ಕ್ರಮದ ಬಗ್ಗೆ ಯೋಚಿಸಲು ನಿರ್ಧರಿಸಿದ್ದಾರೆ. ಅದುವರೆಗೆ ಕೆಜೆಪಿ ಸಂಘಟನೆ ದೃಷ್ಟಿಯಿಂದ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಬಿಜೆಪಿಯಿಂದ ಸಾಕಷ್ಟು ದೂರ ಬಂದಿದ್ದೇನೆ. ಹೀಗಿರುವಾಗ ಮೋದಿ ನೇತೃತ್ವ ವಹಿಸಿದ್ದಾರೆ ಎಂಬ ಕಾರಣಕ್ಕೆ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಏನೇ ನಿರ್ಧಾರ ಕೈಗೊಂಡರೂ ನನ್ನ ಅಸ್ತಿತ್ವಕ್ಕೆ ಧಕ್ಕೆಯಾಗಬಾರದು. ಈ ನಿಟ್ಟಿನಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿರುವುದು ಬಿಜೆಪಿ ಬಗ್ಗೆ ಅವರ ಬದಲಾದ ಅಭಿಪ್ರಾಯ ಸ್ಪಷ್ಟವಾಗಿ ಹೇಳುತ್ತದೆ.
ಮುಂದುವರಿದಿರುವ ದ್ವಂದ್ವ: ಮೋದಿಗೆ ಉನ್ನತ ಸ್ಥಾನ ಸಿಕ್ಕಿರುವುದರಿಂದ ಮತ್ತು ತಾವು ಬಿಜೆಪಿ ತೊರೆಯಲು ಕಾರಣರಾದ ಎಲ್.ಕೆ. ಆಡ್ವಾಣಿ ತೆರೆಮರೆಗೆ ಸರಿಯುತ್ತಿರುವುದರಿಂದ ಯಡಿಯೂರಪ್ಪ ಅವರಿಗೆ ಬಿಜೆಪಿ ಬಗ್ಗೆ ಇದ್ದ ಕಠಿಣ ನಿಲುವು ಬದಲಾಗಿದೆ. ಪಕ್ಷದ ಬಗ್ಗೆ ಇದ್ದ ಧೋರಣೆ ಸ್ವಲ್ಪ ಮೃದುವಾಗಿದೆ. ಆದರೂ ದ್ವಂದ್ವ ಮಾತ್ರ ಮುಂದುವರಿದಿದೆ. ಇದಕ್ಕೆ ಕಾರಣ ಬಿಜೆಪಿ ಜತೆ ಗುರುತಿಸಿಕೊಳ್ಳುವುದೋ ಅಥವಾ ತಮ್ಮ ಪ್ರಾದೇಶಿಕ ಪಕ್ಷವನ್ನು ಕಟ್ಟಿ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗದ ಜತೆ ಗುರುತಿಸಿಕೊಳ್ಳುವುದೋ ಎಂಬ ಗೊಂದಲ. ಹೀಗಾಗಿ ಬೆಳವಣಿಗೆ ಗಮನಿಸಿ ತಮ್ಮ ನಿರ್ಧಾರದ ಬಗ್ಗೆ ಯೋಚಿಸುತ್ತಿದ್ದಾರೆ.
ಮೋದಿ ಬಗ್ಗೆ ಹೆಚ್ಚು ಪ್ರೇಮ
ಯಡಿಯೂರಪ್ಪ ಅವರು ಬಿಜೆಪಿ ತ್ಯಜಿಸಿದರೂ ನರೇಂದ್ರ ಮೋದಿ ಅವರೊಂದಿಗಿನ ಸಂಪರ್ಕ ಕಳೆದುಕೊಂಡಿಲ್ಲ. ಅಷ್ಟೇ ಅಲ್ಲ, ಮೋದಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಾರ ಸಮಿತಿಯ ಸಾರಥ್ಯ ವಹಿಸಿದ್ದು ಉತ್ತಮ ಬೆಳವಣಿಗೆ ಎಂದು ಪರಿಗಣಿಸಿದ್ದಾರೆ. ಜತೆಗೆ ಈ ಸಂದರ್ಭದಲ್ಲಿ ಉದ್ಭವವಾದ ಗೊಂದಲದ ಸಮಯದಲ್ಲೂ ಬಿಜೆಪಿ ರಾಷ್ಟ್ರೀಯ ನಾಯಕರು ಮೋದಿ ಅವರ ಬೆನ್ನಿಗೆ ನಿಂತಿರುವುದರಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬಲವರ್ಧನೆಯಾಗಬಹುದು ಎಂಬ ವಿಶ್ವಾಸದಲ್ಲೂ ಇದ್ದಾರೆ.
ಈ ಅಂಶಗಳೇ ಯಡಿಯೂರಪ್ಪ ಅವರು ಬಿಜೆಪಿಯ ಬಗ್ಗೆ ಹೊಂದಿದ್ದ ಕಠಿಣ ಧೋರಣೆಯನ್ನು ಮೃದು ಮಾಡಿದೆ. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗದ ಜತೆ ಹೋಗುವ ತಮ್ಮ ಯೋಚನೆಯನ್ನೂ ಸ್ವಲ್ಪ ದಿನದ ಮಟ್ಟಿಗೆ ತಡೆಹಿಡಿಯುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


