ಪರಮೇಶ್ವರ ಜೊತೆ ಹೊಂದಾಣಿಕೆ
ಕ.ಪ್ರ.ವಾರ್ತೆ ಬೆಂಗಳೂರು ಜೂ. 11-
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರೊಂದಿಗೆ ವಿಶ್ವಾಸ ಮತ್ತು ಹೊಂದಾಣಿಕೆಯಿಂದ ಹೋಗುವಂತೆ ಕಾಂಗ್ರೆಸ್ನ ಹಿರಿಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ ನಡೆದ ಶಾಸಕಾಂಗ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್ ಸೇರಿದಂತೆ ಹಿರಿಯ ಶಾಸಕರು ಈ ಸಲಹೆ ನೀಡಿದ್ದಾರೆ. ಅಂದಹಾಗೆ ಈ ಸಭೆಯಿಂದಲೂ ಪರಮೇಶ್ವರ ಅವರು ದೂರ ಉಳಿದಿದ್ದರು.
ನಿಮ್ಮ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದೇವೆ. ಸರ್ಕಾರದ ನೀತಿ ನಿರೂಪಣೆಗಳನ್ನು ನೀವೇ ನಿರ್ಧರಿಸುವುದಾದರೂ ಅದಕ್ಕೆ ಮುನ್ನ ಕೆಪಿಸಿಸಿ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದೇ ಇದ್ದರೆ ಪಕ್ಷದ ಒಳಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎಂದು ಎಚ್ಚರಿಕೆಯ ಮಾತುಗಳನ್ನು ರಾಜಶೇಖರನ್ ಅವರು ಆಡಿದ್ದಾರೆ.
ಮುಖ್ಯಮಂತ್ರಿಯಾಗಿ ಮತ್ತು ನಾಯಕರಾಗಿ ನಿಮ್ಮನ್ನು ಎಲ್ಲರೂ ಒಪ್ಪಿಕೊಂಡಿದ್ದೇವೆ. ಅಷ್ಟೇ ಅಲ್ಲ, ನಿಮ್ಮ ಬಗ್ಗೆ ಎಲ್ಲರಿಗೂ ವಿಶ್ವಾಸವಿದೆ. ಆದರೂ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದರಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಕೆಪಿಸಿಸಿ ಅಧ್ಯಕ್ಷರ ಜತೆ ಚರ್ಚಿಸುವುದು ಸಂಪ್ರದಾಯ. ಇದನ್ನು ಪಾಲಿಸುವ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆಲ ಹಿರಿಯ ಶಾಸಕರು, ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಆರ್ಥಿಕ ಇಲಾಖೆ ಕೆಲವು ಜನಪ್ರಿಯ ಯೋಜನೆಗಳಿಗೆ ಅಡ್ಡಿಪಡಿಸುವ ಸಂಪ್ರದಾಯ ಬೆಳೆಸಿಕೊಂಡಿದೆ. ಇದಕ್ಕೆ ಅವಕಾಶ ಮಾಡಿಕೊಡದೆ ಇಚ್ಛಾಶಕ್ತಿ ಪ್ರದರ್ಶಿಸುವ ಮೂಲಕ ಕಾಂಗ್ರೆಸ್ ಪಕ್ಷದ ದ್ಯೇಯೋದ್ದೇಶಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕೆಲವು ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸಚಿವರು ಈ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವಂತೆ ಕಿವಿಮಾತು ಹೇಳಬೇಕು ಎಂದು ಮನವಿ ಮಾಡಿಕೊಂಡರು. ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ ತಕ್ಷಣವೇ ಸ್ಪಂದಿಸುವಂತೆ ಸಚಿವರಿಗೆ ಸೂಚಿಸಿದರು. ಅಲ್ಲದೆ, ಮುಂಗಾರು ಆರಂಭವಾಗಿರುವುದರಿಂದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ವಿಚಾರದಲ್ಲಿ ಉಸ್ತುವಾರಿ ಸಚಿವರು ಗಮನಹರಿಸಬೇಕು ಎಂದೂ ನಿರ್ದೇಶನ ನೀಡಿದರು.
ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಗಂಭೀರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಯಾಗುವ ಅವಕಾಶ ಇರುತ್ತದೆ. ಹೀಗಾಗಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಸದನದಲ್ಲಿ ಅಂತಹ ವಿಚಾರಗಳು ಪ್ರಸ್ತಾಪವಾಗದಂತೆ ನೋಡಿಕೊಳ್ಳಬೇಕು. ಅದರಲ್ಲೂ ಆಡಳಿತ ಪಕ್ಷದ ಸದಸ್ಯರು ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದರೆ ಸರ್ಕಾರಕ್ಕೆ ಮುಜುಗರವಾಗುತ್ತದೆ. ಅಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಸಚಿವರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

