ಪ್ರಧಾನ ಸುದ್ದಿ

ಬಹುಕೋಟಿ ಹಣ ಮರಳಲ್ಲಿ ಮಾಯ!

Published On :

ಕ.ಪ್ರ.ವಾರ್ತೆ  ಗುಲ್ಬರ್ಗ  ಜೂ. 10
ಸರ್ಕಾರ ಚಾಪೆ ಕೆಳಗೆ ತೂರಿದರೆ ಮೋಸಗಾರರು ರಂಗೋಲಿ ಕೆಳಗೇ ತೂರುತ್ತಿದ್ದಾರೆ..
ಮರಳು ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿದ್ದ ಮರಳು ನೀತಿಯನ್ನೇ ಧಿಕ್ಕರಿಸಿ ಜಿಲ್ಲೆಯಲ್ಲಿ ಈ ದಂಧೆಯಲ್ಲಿ ತೊಡಗಿರುವವರು ಕಾನೂನು- ಕಟ್ಟಳೆಗಳನ್ನೆಲ್ಲ ಗಾಳಿಗೆ ತೂರಿದ್ದಾರೆ.
2011ರ ಮರಳು ನೀತಿಯಂತೆ ಇಲ್ಲಿನ ಲೋಕೋಪಯೋಗಿ ಇಲಾಖೆ ನದಿಯಿಂದ ಮರಳನ್ನು ನೇರವಾಗಿ ಗ್ರಾಹಕರಿಗೆ ಮಾರುವ ಉದ್ದೇಶಕ್ಕಾಗಿ 16 ಪಾಯಿಂಟ್‌ಗಳನ್ನು ಗುರುತಿಸಿ ಟೆಂಡರ್ ಕರೆದಿತ್ತು.
ಕೇವಲ 16 ಪಾಯಿಂಟ್‌ಗಳಿಂದಲೇ ಸರ್ಕಾರದ ಬೊಕ್ಕಸಕ್ಕೆ 5 ಕೋಟಿ ಸೇರಿದೆ. ಈಗಂತೂ ನೂರಾರು ಕಡೆಗಳಲ್ಲಿ ಭೀಮೆ, ಕಾಗಿಣಾ ನದಿ ಪಾತ್ರ ಹೊಕ್ಕು ಮರಳು ಲೂಟಿ ಮಾಡಲಾಗುತ್ತಿದೆ. ಈಗಿನ ಮರಳು ಸಾಗಣೆ ಪ್ರಕಾರ ಲೆಕ್ಕ ಹಾಕಿದಲ್ಲಿ 10-15 ಕೋಟಿಯಷ್ಟು ಹಣ ಸರ್ಕಾರದ ಬೊಕ್ಕಸ ಸೇರಬೇಕಿದ್ದ ಹಣ ಅಕ್ರಮ ಮರಳಲ್ಲಿ ಕಳೆದು ಹೋಗಿದೆ.
ಜಿಲ್ಲಾಡಳಿತದ ನಿರ್ಲಕ್ಷ: ಟೆಂಡರ್‌ನಂತೆ ಮರಳು ನಿಕ್ಷೇಪ ಸಾಗಣೆ ನಡೆಯುತ್ತಿದೆಯೋ ಅಥವಾ ಗುತ್ತಿಗೆದಾರರು ಎಗ್ಗಿಲ್ಲದೆ ಅಕ್ರಮ ಸಾಗಾಣಿಕೆಗೂ ಮುಂದಾಗಿದ್ದಾರೋ ಎಂಬುದನ್ನು ಡಿಸಿ ನೇತೃತ್ವದ ಜಿಲ್ಲಾ ಮರಳು ಸಮಿತಿ ಗಮನಿಸಬೇಕು. ಆದರೆ ಈ ಕೆಲಸ ಜಿಲ್ಲೆಯಲ್ಲಿ ನಡೆಯುತ್ತಿಲ್ಲವಾದ್ದರಿಂದ ಕಾನೂನು ರೀತ್ಯಾ ನಡೆದ ಟೆಂಡರ್‌ಗಿಂತ ಕಾನೂನು ಬಾಹಿರವಾಗಿಯೇ ಮರಳುಗಾರಿಕೆ ಮಾಡುವ ಕೈಗಳು ಹೆಚ್ಚಿವೆ.
ನದಿ ಪಾತ್ರಕ್ಕೇ ಕುತ್ತು:  ನದಿ ಪರಿಸರಕ್ಕೂ ಬೇಕಾಬಿಟ್ಟಿ ಮರಳುಗಾರಿಕೆ ಅಪಾಯಗಳನ್ನು ತಂದೊಡ್ಡುತ್ತಿದೆ. ಮರಳಲ್ಲಿರುವ ಜಲಚರಗಳಂತೂ ಉಸುಕು ಅಗೆತದಿಂದ ನಾಶವಾಗುತ್ತಲೇ ಇವೆ. ಮರಳು ಇದ್ದಲ್ಲಿ ಸಸ್ಯ ಪ್ರಭೇದಗಳು ಅಲ್ಲಿ ಬೆಳೆಯುವುದಿಲ್ಲ. ಆದರೀಗ ಅಲ್ಲೆಲ್ಲಾ ಮಣ್ಣು ಕಂಡಾಗ ಮುಳ್ಳು- ಪೊದೆಗಳು ಹಸಿರು ಚಿಗುರುವುದು ಸಹಜ. ಇದರಿಂದ ನದಿಯ ಸಹಜ ಪಾತ್ರವೇ ಕುಗ್ಗುತ್ತ ಹೊಸ ಆತಂಕ ಹುಟ್ಟು ಹಾಕಿದೆ.
ಮರಳು ಮಾಫಿಯಾ ಭೀಮಾ ಹಾಗೂ ಕಾಗಿಣಾ ತೀರದಲ್ಲಿ ಅವ್ಯಾಹತವಾಗಿದೆ. ಅಫಜಲ್ಪೂರ ಹಾಗೂ ಜೇವರ್ಗಿಗಳಲ್ಲಂತೂ ಪರವಾನಗಿ ಪಡೆದದ್ದಕ್ಕಿಂತ ಪರವಾನಗಿ ಇಲ್ಲದ ಸ್ಥಳಗಳಲ್ಲೇ ಮರಳು ಸಾಗಿಸುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ.
- ಶೋಭಾ ಬಾಣಿ, ಜಿಪಂ ಸದಸ್ಯರು ನೆಲೋಗಿ ಕ್ಷೇತ್ರ, ಜೇವರ್ಗಿ
ಜಿಲ್ಲೆಯ ಭೀಮಾ, ಕಾಗಿಣಾ ತೀರದ ಮರಳು ಕಳವಿಗೆ ಕಡಿವಾಮ ಹಾಕದಿದ್ದರೆ ಅನಾಹುತ ತಪ್ಪಿದ್ದಲ್ಲ. ಮರಳು ನಿಸರ್ಗ ಸಹಜ ನೀರು ಶುದ್ಧಿಕಾರಕ ಕೆಲಸ ಮಾಡುತ್ತದೆ. ಮರಳು ಕಮ್ಮಿ ಆದರೆ ಶುದ್ಧ ನೀರಿಲ್ಲದೆ ಜಲಚರಗಳು ಸಾಯುತ್ತವೆ.
- ದೀಪಕ ಗಾಲಾ, ಅಧ್ಯಕ್ಷರು, ಹೈ- ಕ ಪರಿಸರ ಸಂರಕ್ಷಣೆ ಜಾಗೃತಿ- ಸಂರಕ್ಷಣೆ ಸಂಘಟನೆ

- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.