ಮೋದಿ ಹಾದಿ ಸಲೀಸು
ಎಲ್ಲಾ ಸರಿ ಹೋದಲ್ಲಿ ಭಾನುವಾರವೇ ಗುಜರಾತ್ ಸಿಎಂ ನರೇಂದ್ರ ಮೋದಿ ಪಾಲಿಗೆ ಶುಭದಿನವಾಗಲಿದೆ.

ಪಣಜಿ/ನವದೆಹಲಿ: ಎಲ್ಲಾ ಸರಿ ಹೋದಲ್ಲಿ ಭಾನುವಾರವೇ ಗುಜರಾತ್ ಸಿಎಂ ನರೇಂದ್ರ ಮೋದಿ ಪಾಲಿಗೆ ಶುಭದಿನವಾಗಲಿದೆ.
ಬಿಜೆಪಿ ಕಾರ್ಯಕಾರಿಣಿ ಸಭೆಯ ಅಂತಿಮ ದಿನ ನರೇಂದ್ರ ಮೋದಿಗೆ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ವಹಿಸಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.
ಶುಕ್ರವಾರ ಗೋವಾ ರಾಜಧಾನಿ ಪಣಜಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆದಿದೆ. ಆದರೆ ಈ ಸಭೆಗೆ ಆಡ್ವಾಣಿ ಗೈರಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದು ವೇಳೆ ಆಡ್ವಾಣಿ ಅವರು ಶುಕ್ರವಾರದ ಸಭೆಗೆ ಹಾಜರಾಗಿದ್ದರೆ, ಆಗಲೇ ಮೋದಿ ಅವರಿಗೆ ಉನ್ನತ ಸ್ಥಾನ ಕಲ್ಪಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಆಡ್ವಾಣಿ ಅಪಸ್ವರ?: ನರೇಂದ್ರ ಮೋದಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಸಲುವಾಗಿ ಪಕ್ಷದ ನಾಯಕರು ಅನುಸರಿಸುತ್ತಿರುವ ಮಾರ್ಗಗಳು ಆಡ್ವಾಣಿಗೆ ರುಚಿಸುತ್ತಿಲ್ಲ ಎಂದು ಹೇಳಲಾಗಿದೆ.
ಅಲ್ಲದೆ ಈಗಲೇ ಮೋದಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದು ಬೇಡ ಎಂಬುದು ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ನಾಯಕರ ಅಭಿಪ್ರಾಯವಾಗಿದೆ. ಆದರೆ ಇದನ್ನು ಮೀರಿ ಗೋವಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೇ ಮೋದಿಯನ್ನು ಮೇಲ್ದರ್ಜೆಗೇರಿಸಲು ಮುಂದಾಗಿರುವುದು ಈ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಲೇ ಶುಕ್ರವಾರದ ಸಂಸದೀಯ ಮಂಡಳಿ ಸಭೆಗೆ ಆಡ್ವಾಣಿ ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆಡ್ವಾಣಿಗೆ ಹುಷಾರಿಲ್ಲ: ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳುವುದೇ ಬೇರೆ. ಆಡ್ವಾಣಿ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಹೀಗಾಗಿ ಸಂಸದೀಯ ಮಂಡಳಿ ಸಭೆಗೆ ಬಂದಿಲ್ಲ. ನಾನೇ ಅವರಿಗೆ ಸಭೆಗೆ ಬರಬೇಡಿ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರದಿಂದ ಆರಂಭವಾಗಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ. ಅಲ್ಲದೆ ಬಿಜೆಪಿಯಲ್ಲಿ ಮೋದಿ ವಿಷಯವಾಗಿ ಯಾವುದೇ ಒಡಕಿಲ್ಲ. ಒಗ್ಗಟ್ಟಾಗಿದ್ದೇವೆ ಎಂದಿದ್ದಾರೆ. ಈ ಬಗ್ಗೆ ಪತ್ರಕರ್ತರಿಂದ ಹೆಚ್ಚಿನ ಪ್ರಶ್ನೆ ಸ್ವೀಕರಿಸಲು ಅವರು ನಿರಾಕರಿಸಿದ್ದಾರೆ.
ಆರ್ಎಸ್ಎಸ್ನಿಂದ ಮೋದಿಗೆ ಗ್ರೀನ್ಸಿಗ್ನಲ್
ಬಿಜೆಪಿಯಲ್ಲಿ ಮೋದಿಗೆ ಉನ್ನತ ಸ್ಥಾನ ನೀಡುವ ಸಂಬಂಧ ರಾಜನಾಥ್ ಸಿಂಗ್ ಅವರು ಆರ್ಎಸ್ಎಸ್ನ ಒಪ್ಪಿಗೆ ಪಡೆದಿದ್ದಾರೆ. ಗುರುವಾರ ಈ ಬಗ್ಗೆ ಆರ್ಎಸ್ಎಸ್ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಒಪ್ಪಿಗೆ ಪಡೆದುಕೊಂಡಿದ್ದಾರೆ. ಮುಂದಿನ ಪಂಚ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಮೋದಿನೇತೃತ್ವದಲ್ಲೇ ಚುನಾವಣೆ ಎದುರಿಸುವುದು, ಈ ಮೂಲಕ 2014ಕ್ಕೆ ತಯಾರಿ ನಡೆಸುವ ಅಂದಾಜಿನಲ್ಲಿ ಈ ಬೆಳವಣಿಗೆ ನಡೆದಿದೆ.
ಹಲವಾರು ನಾಯಕರು ಗೈರು
ಆಡ್ವಾಣಿಗೆ ಹುಷಾರಿಲ್ಲ, ಉಮಾಭಾರತಿಗೂ ಅನಾರೋಗ್ಯ, ಜಸ್ವಂತ್ ಸಿಂಗ್, ಶತ್ರುಘ್ನ ಸಿನ್ಹಾರಿಗೂ ಅನಾರೋಗ್ಯ... ರವಿಶಂಕರ ಪ್ರಸಾದ್ಗೆ ವೈಯಕ್ತಿಕ ಕಾರಣ, ವರುಣ್ ಗಾಂಧಿಗೂ ಒಂದು ವೈಯಕ್ತಿಕ ಕಾರಣ... ಹೀಗೆ ಪಕ್ಷದ ಹಿರಿಯ ನಾಯಕರೇ ಹಲವಾರು ಕಾರಣಗಳನ್ನು ಹೇಳಿ ರಾಷ್ಟ್ರೀಯ ಕಾರ್ಯಕಾರಿಣಿ ತಪ್ಪಿಸಿಕೊಳ್ಳುತ್ತಿದ್ದಾರೆ.ಆಡ್ವಾಣಿ ಶನಿವಾರದಿಂದ ಪಾಲ್ಗೊಳ್ಳುವುದಾಗಿ ಹೇಳಿದ್ದರೆ, ಉಳಿದವರು ಸಂಪೂರ್ಣ ಹೊರಗುಳಿಯುವ ಸಾಧ್ಯತೆ ಇದೆ. ಯಶವಂತ ಸಿನ್ಹಾ ಅವರು ಗುರುವಾರವೇ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿಗೆ ಉನ್ನತ ಸ್ಥಾನ ನೀಡುವುದು ಬೇಡ ಎಂದಿದ್ದರು. ಈ ಮೂಲಕ ಅವರೂ ಅಡ್ಡರಾಗ ತೆರೆದಿದ್ದರು.
ಮೋದಿಗೆ ಭವ್ಯ ಸ್ವಾಗತ
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಗೋವಾ ರಾಜಧಾನಿ ಪಣಜಿಗೆ ಆಗಮಿಸಿದ ಮೋದಿ ಅವರಿಗೆ ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದ್ದಾರೆ. ವಿಮಾನ ನಿಲ್ದಾಣದಿಂದ ಆಚೆ ಬರುತ್ತಿದ್ದಂತೆ ಸಂಭ್ರಮಾಚರಣೆ ನಡೆಸಿದ ಅವರು, ವಿಧ್ಯುಕ್ತವಾಗಿ ಸ್ವಾಗತ ಕೋರಿದ್ದಾರೆ.
ನಾಯಕರಿಗೆ ಅನಾರೋಗ್ಯ
ಮೋದಿಗೆ ಉನ್ನತ ಸ್ಥಾನ ನೀಡುವ ಬಿಜೆಪಿಯ ನಿರ್ಧಾರದಿಂದಾಗಿ ಆ ಪಕ್ಷದ ಕೆಲ ನಾಯಕರಿಗೆ ಅನಾರೋಗ್ಯ ಬಂದಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಸಂಬಂಧ ಮಾತನಾಡಿರುವ ರಶೀದ್ ಆಳ್ವಿ, ಬಿಜೆಪಿ ನೇತೃತ್ವ ವಹಿಸಿಕೊಳ್ಳುತ್ತಾರೆ ಎಂಬ ಪ್ರಸ್ತಾಪದಲ್ಲೇ ಆ ಪಕ್ಷದ ಬಹಳಷ್ಟು ಮಂದಿಗೆ ಅನಾರೋಗ್ಯವಾಗಿದೆ, ಆದರೆ ಮುಂದೆ ದೇಶದ ಜನತೆ ಸ್ಥಿತಿ ಏನಾಗಬಹುದು ಯೋಚಿಸಿ ಎಂದು ಲೇವಡಿ ಮಾಡಿದ್ದಾರೆ. ರೇಣುಕಾ ಚೌಧರಿಯವರು ಮಾತನಾಡಿ, ಮೋದಿಯಿಂದಾಗಿ ಬಿಜೆಪಿ ಜೆಡಿಯು ಕಳೆದುಕೊಳ್ಳಲಿದೆ ಎಂದಿದ್ದಾರೆ. ಸಮಾಜವಾದಿ ಪಕ್ಷ ಕೂಡ ಮೋದಿಯನ್ನು ಟೀಕಿಸಿದೆ. ಮೋದಿ ಗುಜರಾತ್ನಲ್ಲಿ ಗೆದ್ದಿರಬಹುದು, ಆದರೆ ಇಡೀ ದೇಶದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದಿದೆ. ಸದ್ಯದಲ್ಲೇ ಮೋದಿ ಬಲೂನ್ ಒಡೆಯಲಿದೆ ಎಂದಿದ್ದಾರೆ ಶರದ್ ಪವಾರ್.
ಆಡ್ವಾಣಿ ಬಂದಿಲ್ಲ ಎಂಬುದಕ್ಕೆ ಬೇರೆ ಅರ್ಥಗಳು ಬೇಡ. ಅವರು ಅನಾರೋಗ್ಯಪೀಡಿತರಾಗಿರುವುದರಿಂದಲೇ ಮೊದಲ ದಿನ ಬಂದಿಲ್ಲ.
- ವೆಂಕಯ್ಯ ನಾಯ್ಡು, ಬಿಜೆಪಿ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


