ಸಿದ್ದು ಆಕ್ಷೇಪ
ಕೇಂದ್ರದ ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರಕ್ಕೆ (ಎನ್ಸಿಟಿಸಿ) ಅನಿರ್ಬಂಧಿತ ಅಧಿಕಾರ ನೀಡುವುದನ್ನು ಕರ್ನಾಟಕ..

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕೇಂದ್ರದ ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರಕ್ಕೆ (ಎನ್ಸಿಟಿಸಿ) ಅನಿರ್ಬಂಧಿತ ಅಧಿಕಾರ ನೀಡುವುದನ್ನು ಕರ್ನಾಟಕ ರಾಜ್ಯ ವಿರೋಧಿಸಿದೆ.
ಭಯೋತ್ಪಾದನಾ ನಿಗ್ರಹ ಕೇಂದ್ರಕ್ಕೆ ಅನಿರ್ಬಂಧಿತ ಅಧಿಕಾರ ನೀಡುವ ಮುನ್ನ ರಾಜ್ಯದ ಸಂವಿಧಾನದತ್ತ ಸ್ವಾಯತ್ತತೆ ಅತಿಕ್ರಮಿಸುವುದನ್ನು ನಿರ್ಬಂಧಿಸಲು ಕೆಲವು ಸುರಕ್ಷತಾ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಇಲ್ಲಿ ಪ್ರತಿಪಾದಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರು ಆಂತರಿಕ ಸುರಕ್ಷತೆ ಕುರಿತಂತೆ ಚರ್ಚಿಸಲು ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು, 'ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರವು ಬಹು ಆಯಾಮದ ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಯೋಜನೆ ಸಿದ್ಧಪಡಿಸುವ ಸಂಸ್ಥೆಯಾಗಬೇಕು' ಎಂದರು.
ಭಯೋತ್ಪಾದನೆ ಕೃತ್ಯ ತಡೆಯುವ, ನಿಗ್ರಹಿಸುವ ಮತ್ತು ಕಾರ್ಯತಂತ್ರ ರೂಪಿಸುವಲ್ಲಿ ರಾಜ್ಯ ಮತ್ತು ಕೇಂದ್ರದ ಗುಪ್ತಚರ ಸಂಸ್ಥೆಗಳ ನಡುವೆ, ಕೆಲವು ವೇಳೆ ನೆರೆ ರಾಜ್ಯಗಳ ಪೊಲೀಸರ ನಡುವೆ, ಅಷ್ಟೇ ಏಕೆ ಅಂತಾರಾಷ್ಟ್ರೀಯ ಸಂಸ್ಥೆಗಳ ನಡುವೆ ಸಮನ್ವಯ ಕಾಯ್ದುಕೊಳ್ಳುವುದನ್ನು ಹಾಗೂ ಮಾಹಿತಿ ಹಂಚಿಕೊಳ್ಳುವುದನ್ನು ಕರ್ನಾಟಕ ಸರ್ಕಾರ ತಾತ್ವಿಕವಾಗಿ ಒಪ್ಪುತ್ತದೆ ಎಂದರು.
ಅಚ್ಚರಿ ಮೂಡಿಸಿದ ಸಿದ್ದು ಅಭಿಪ್ರಾಯ: ಈಗಾಗಲೇ ಕಾಂಗ್ರೆಸ್ ಆಡಳಿತವಿರುವ ಬಹುತೇಕ ರಾಜ್ಯಗಳು ಎನ್ಸಿಟಿಸಿಗೆ ತಾತ್ವಿಕ ಒಪ್ಪಿಗೆ ಸೂಚಿಸಿರುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಿಂದಲೇ ತಾತ್ವಿಕ ವಿರೋಧ ವ್ಯಕ್ತವಾಗಿದ್ದು, ಬುಧವಾರದ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಸಿಂಗ್, ಗೃಹ ಸಚಿವ ಶಿಂದೆ ಅವರಷ್ಟೆ ಅಲ್ಲ ಉಳಿದೆಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅಚ್ಚರಿ ಮೂಡಿಸಿತು. ರಾಜ್ಯದ ಈ ನಿಲುವು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಿಂದ ಮೆಚ್ಚುಗೆಗೂ ಪಾತ್ರವಾಯಿತು.
ತಾಂತ್ರಿಕ ಉನ್ನತೀಕರಣ: ತ್ವರಿತ ಮತ್ತು ಪರಿಣಾಮಕಾರಿ ಮಾಹಿತಿ ಸಂಗ್ರಹ ಹಾಗೂ ರವಾನೆಗೆ ಗುಪ್ತಚರ ಸಂಸ್ಥೆಗಳ ಆಧುನೀಕರಣ ಮತ್ತು ತಾಂತ್ರಿಕ ಉನ್ನತೀಕರಣ ಅತ್ಯಗತ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮತ್ತು ಸಲಕರಣೆ ಒದಗಿಸಬೇಕು. ಕೇಂದ್ರ, ರಾಜ್ಯಕ್ಕೆ ಅಗತ್ಯ ಆರ್ಥಿಕ ನೆರವು ಒದಗಿಸಬೇಕು ಎಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


