ಪ್ರಧಾನ ಸುದ್ದಿ

ಶ್ರೀಡಿ ಕಂಪನಿ

ಬೆಟ್ಟಿಂಗ್ ದಂಧೆಗಾಗಿ ಡಿ ಕಂಪನಿಯ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್, ಕ್ರಿಕೆಟಿಗ ಶಾಂತಕುಮಾರನ್ ಶ್ರೀಶಾಂತ್...

ಶ್ರೀಡಿ ಕಂಪನಿ
Published On :

ನವದೆಹಲಿ: ಬೆಟ್ಟಿಂಗ್ ದಂಧೆಗಾಗಿ ಡಿ ಕಂಪನಿಯ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್, ಕ್ರಿಕೆಟಿಗ ಶಾಂತಕುಮಾರನ್ ಶ್ರೀಶಾಂತ್ ಜೊತೆ ಸಂಪರ್ಕ ಸಾಧಿಸಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ದೆಹಲಿ ಪೊಲೀಸರು ಈ ಅಂಶ ಬಹಿರಂಗಗೊಳಿಸಿದ್ದು, ಶ್ರೀಶಾಂತ್ ಬೆಟ್ಟಿಂಗ್ ದಂಧೆಯನ್ನು ದಾವೂದ್ ಇಬ್ರಾಹಿಂ ಅಣತಿಯಂತೆಯೇ ನಡೆಸಿದ್ದ ಎಂದು ಹೇಳಿದ್ದಾರೆ. ಈ ಬಗ್ಗೆ ಶ್ರೀಶಾಂತ್, ದಾವೂದ್ ಜೊತೆ ನಡೆಸಿರುವ ದೂರವಾಣಿ ಸಂಭಾಷಣೆಯಲ್ಲಿ ಬಹಿರಂಗವಾಗಿದೆ ಎಂದು ಹೇಳಲಾಗಿದೆ.
ಜೈಲಿನಲ್ಲಿ ಬುಕ್ಕಿ ಕೇಶವ್ ನೀಡಿದ ಮಾಹಿತಿಯಿಂದ ಈ ಅಂಶ ಬಹಿರಂಗವಾಗಿದೆ. ಸ್ಪಾಟ್ ಫಿಕ್ಸಿಂಗ್ ಆರೋಪಿಗಳ ಜೊತೆ ಭೂಗತ ದೊರೆಗಳ ನಂಟು ಬಯಲಾಗುತ್ತಿದ್ದಂತೆ, ಶ್ರೀಶಾಂತ್ ಸೇರಿದಂತೆ ಬಂಧಿತ 26 ಮಂದಿ ವಿರುದ್ಧವೂ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ಕಾಯ್ದೆಯಂತೆಯೇ ವಿಚಾರಣೆ ಕೂಡ ನಡೆದಲ್ಲಿ, ಯಾವುದೇ ಕಾರಣಕ್ಕೂ ಇವರ್ಯಾರಿಗೂ ಜಾಮೀನು ದೊರೆಯುವುದೇ ಇಲ್ಲ. ಅಲ್ಲದೆ ಇದರ ಅಡಿ ಅತಿ ಕಡಿಮೆ ಶಿಕ್ಷೆಯೇ ಜೀವಾವಧಿಯಾಗಿದ್ದು, ಜೊತೆಗೆ 5 ಲಕ್ಷ ದಂಡವನ್ನೂ ವಿಧಿಸಬಹುದಾಗಿದೆ. ಇದೇ ಮೊದಲ ಬಾರಿಗೆ ದೆಹಲಿ ಪೊಲೀಸರು ಡಿ ಕಂಪನಿ ಜೊತೆಗಿನ ಆರೋಪಿಗಳ ನಂಟಿನ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. ಹಿಂದೆ ಹಲವಾರು ಬಾರಿ ಈ ಬಗ್ಗೆ ಅನುಮಾನಗಳು ಮೂಡಿದ್ದರೂ, ಪೊಲೀಸರು ಖಚಿತವಾಗಿ ಹೇಳಿರಲಿಲ್ಲ. ಇದೀಗ ಅವರು ಕೋರ್ಟ್ ಮುಂದೆ ಹೇಳಿದ್ದಾರೆ.
ಮೋಕಾ ಕಾಯ್ದೆಯಡಿ ಪ್ರಕರಣ
ಬೆಟ್ಟಿಂಗ್ ದಂಧೆಯಲ್ಲಿ ಭೂಗತ ದೊರೆಗಳ ಹೆಸರು ಕೇಳಿಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಮಹಾರಾಷ್ಟ್ರ ವ್ಯವಸ್ಥಿತ ಅಪರಾಧಗಳ ತಡೆ ನಿಗ್ರಹ ಕಾಯ್ದೆ(ಮೋಕಾ)ಯಡಿ ಪ್ರಕರಣ ದಾಖಲಿಸಿದ್ದಾರೆ.  ಕೋರ್ಟ್‌ನಲ್ಲಿ ಇನ್ನೂ ಈ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ದಾಖಲಿಸದ ಪೊಲೀಸರು ಜೂ.18ಕ್ಕೆ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ. ಒಂದು ವೇಳೆ ಪೊಲೀಸರು ಕೋರ್ಟ್‌ನಲ್ಲೂ ಇದೇ ಕಾಯ್ದೆಯಡಿ ಪ್ರಕರಣದ ವಿಚಾರಣೆ ನಡೆಯಬೇಕು ಎಂದು ಹೇಳಿದಲ್ಲಿ, ಶ್ರೀಶಾಂತ್ ಸೇರಿದಂತೆ 26 ಮಂದಿ ಬೆಟ್ಟಿಂಗ್ ಆರೋಪಿಗಳಿಗೆ ಜಾಮೀನು ಗಗನ ಕುಸುಮವೇ ಆಗಿಬಿಡಲಿದೆ.  ಈಗ ಮೋಕಾಯಡಿ ಪ್ರಕರಣ ದಾಖಲಿಸಿರುವುದರಿಂದ ಪೊಲೀಸರಿಗೆ ಆರೋಪಿಗಳನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳುವುದು ಸುಲಭವಾಗಲಿದೆ. ಇದರ ಅಡಿಯಲ್ಲಿ ಬರುವ ಆರೋಪಿಗಳನ್ನು ಕನಿಷ್ಠ 15 ದಿನಗಳ ವರೆಗೆ, ಗರಿಷ್ಠ 30 ದಿನಗಳ ವರೆಗೆ ಪೊಲೀಸರು ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಳ್ಳಬಹುದಾಗಿದೆ.
ಮೇಯಪ್ಪನ್, ವಿಂದೂಗೆ ಜಾಮೀನು
ಸ್ಪಾಟ್ ಫಿಕ್ಸಿಂಗ್ ಆರೋಪ ಸಂಬಂಧ ಬಂಧಿತರಾಗಿದ್ದ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಮತ್ತು ಬಾಲಿವುಡ್ ನಟ ವಿಂದೂ ದಾರಾಸಿಂಗ್‌ಗೆ ಮುಂಬೈ ಸ್ಥಳೀಯ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಈ ಹಿನ್ನೆಲೆಯಲ್ಲಿ ಸಂಜೆ ಇಬ್ಬರನ್ನೂ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಅಶ್ರಫುಲ್ ಅಮಾನತು
ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪ ಎದುರಿಸುತ್ತಿರುವ ಬಾಂಗ್ಲಾದೇಶದ ಮಾಜಿ ನಾಯಕ ಮೊಹ್ಮದ್ ಅಶ್ರಫುಲ್ ಅವರನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಅಮಾನತುಗೊಳಿಸಿದೆ. ಈ ನಿರ್ಧಾರ ಹೊರಬೀಳುತ್ತಿದ್ದಂತೆ, ಅಶ್ರಫುಲ್ ಇಡೀ ದೇಶವಾಸಿಗಳ ಕ್ಷಮೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.