ಮಲಪ್ರಭೆ ರೌದ್ರಾವತಾರ
ಖಾನಾಪುರ ತಾಲೂಕಿನಲ್ಲಿ ಮಲಪ್ರಭೆಯ ಆರ್ಭಟ ಜೋರಾಗಿದ್ದು, ಸೋಮವಾರ ಮೂರು ಗ್ರಾಮಗಳು ಜಲಾವೃತವಾಗಿವೆ. 200 ಜನರು ಸಂಪರ್ಕ...

ಕನ್ನಡಪ್ರಭ ವಾರ್ತೆ, ಬೆಳಗಾವಿ, ಜು.15-
ಖಾನಾಪುರ ತಾಲೂಕಿನಲ್ಲಿ ಮಲಪ್ರಭೆಯ ಆರ್ಭಟ ಜೋರಾಗಿದ್ದು, ಸೋಮವಾರ ಮೂರು ಗ್ರಾಮಗಳು ಜಲಾವೃತವಾಗಿವೆ. 200 ಜನರು ಸಂಪರ್ಕ ಕಡಿದುಕೊಂಡಿದ್ದಾರೆ. ಮತ್ತೊಂದೆಡೆ ಬಳ್ಳಾರಿಯ ಹೊಸಪೇಟೆ ಪಟ್ಟಣದಲ್ಲಿ ಮಳೆ ನೀರಿನ ರಭಸಕ್ಕೆ ಚರಂಡಿಯಲ್ಲಿ ಒಬ್ಬ ಬಾಲಕ ಕೊಚ್ಚಿ ಹೋಗಿ ಮೃತಪಟ್ಟರೆ, ಇನ್ನೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ಕಳೆದ ಎರಡು ದಿನಗಳಿಂದ ರೌದ್ರಾವತಾರ ತಾಳಿದ್ದ ಕೃಷ್ಣೆ ಶಾಂತಳಾಗಿದ್ದು, ಚಿಕ್ಕೋಡಿ ತಾಲೂಕಿನ ಮೂರು ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಿವೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ತಗ್ಗಿದ ಪರಿಣಾಮ ಕೃಷ್ಣೆಯ ಪ್ರವಾಹದಲ್ಲೂ ಇಳಿಕೆಯಾಗಿದೆ. ಮಲಪ್ರಭಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದರಿಂದ ಖಾನಾಪುರ ತಾಲೂಕಿನ ಗವಾಳಿ, ಪಾಸೋಲಿ ಮತ್ತು ಹೊಂಗಳ ಗ್ರಾಮಗಳು ಜಲಾವೃತವಾಗಿದ್ದು, ಸುಮಾರು 200 ಜನರ ಸಂಪರ್ಕ ಕಡಿತಗೊಂಡಿದೆ ಎಂದು ಖಾನಾಪುರದ ಕಂದಾಂು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅವರಿಗೆ ಆಹಾರಧಾನ್ಯ ಲಭ್ಯವಿರುವುದರಿಂದ ಯಾವುದೇ ತೊಂದರೆಯಿಲ್ಲ ಎಂದೂ ತಿಳಿಸಿದ್ದಾರೆ.
ಆಲಮಟ್ಟಿ ಜಲಾಶಯಕ್ಕೆ ನೀರು: ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ನಿಂದ ಒಟ್ಟು 71103 ಕ್ಯುಸೆಕ್ ನೀರಿನ ಹರಿದು ಬರುತ್ತಿದೆ. ಅಲ್ಲದೇ ಆಲಮಟ್ಟಿ ಜಲಾಶಯಕ್ಕೆ ಒಟ್ಟು 86759 ಕ್ಯುಸೆಕ್ ನೀರು ಬರುತ್ತಿದ್ದು, ಅಲ್ಲಿ 20 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡುತ್ತಿರುವುದರಿಂದ ಈ ಭಾಗದಲ್ಲಿ ಯಾವುದೇ ಪ್ರವಾಹ ಭೀತಿಯಿಲ್ಲ ಎಂದು ಚಿಕ್ಕೋಡಿ ತಹಸಿಲ್ದಾರ್ ರಾಜಶೇಖರ ಡಂಬಳ ಹೇಳಿದ್ದಾರೆ.
ಸಂಚಾರಕ್ಕೆ ಮುಕ್ತವಾಗಿರುವ ಮಾರ್ಗಗಳು: ಚಿಕ್ಕೋಡಿ ತಾಲೂಕಿನ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ ಮತ್ತು ಸಿದ್ನಾಳ-ಅಕ್ಕೋಳ ಸೇತುವೆಗಳು ತೆರೆದಿದ್ದು, ಮೂರು ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ ಇನ್ನೂ ಕಲ್ಲೋಳ- ಯಡೂರ, ಸದಲಗಾ-ಬೋರಗಾವ, ಜತ್ರಾಟ-ಭೀವಸಿ, ಮಲ್ಲಿಕವಾಡ-ದತ್ತವಾಡ ಮತ್ತು ಖಾನಾಪುರ ಸಮೀಪದ ಹಳೆ ಸೇತುವೆ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.
ಹೊಸಪೇಟೆಯಲ್ಲಿ ಬಾಲಕ ಸಾವು
ಹೊಸಪೇಟೆ: ಮಳೆ ನೀರಿನ ರಭಸಕ್ಕೆ ಚರಂಡಿಯಲ್ಲಿ ಒರ್ವ ಬಾಲಕ ಕೊಚ್ಚಿ ಹೋಗಿ ಮೃತಪಟ್ಟಿದ್ದು, ಇನ್ನೊಬ್ಬ ಜೀವಾಪಾಯದಿಂದ ಪಾರಾಗಿರುವ ಘಟನೆ ನಗರದ ಚಪ್ಪರದಳ್ಳಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಸ್ಥಳೀಯ ನಿವಾಸಿ ಕರಣ್ ಸಿಂಗ್ ಅವರ ಪುತ್ರ ರಿತೀಶ್ ಸಿಂಗ್ (6) ಮೃತಪಟ್ಟ ಬಾಲಕ. ಇನ್ನೂಬ್ಬ ನಿವಾಸಿ ಬಲಸಿಂಗ್ ಅವರ ಪುತ್ರ ಪೂರನ್ ಸಿಂಗ್ (6) ಜೀವಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯ ರೋಸಬಡ್ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಇವರು, ಬಸ್ ಇಳಿದು ಮನೆಗೆ ನಡೆದುಕೊಂಡು ಹೋಗುವಾಗ ಮಳೆ ನೀರಿನ ರಭಸಕ್ಕೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದರು. ಇನ್ನೊಬ್ಬ ಬಾಲಕ ಪೂರನ್ ಸಿಂಗ್ನನ್ನು ಸ್ಥಳೀಯರು ಬದುಕುಳಿಸಿದ್ದಾರೆ.
ಮಡಿಕೇರಿಯಲ್ಲಿ ದಿನವಿಡಿ ಮಳೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಡಿಕೇರಿಯಲ್ಲಿ ಸೋಮವಾರ ದಿನವಿಡಿ ಮಳೆ, ಮಂಜಿನ ವಾತಾವರಣವಿತ್ತು. ಜಿಲ್ಲೆಯಾದ್ಯಂತ ಜನವರಿಯಿಂದ ಇಲ್ಲಿಯವರೆಗಿನ ಮಳೆ 1513.51 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 708.76 ಮಿ.ಮೀ. ಮಳೆ ದಾಖಲಾಗಿದೆ.
ದ.ಕ.ದಲ್ಲಿ ಮಳೆ ಕ್ಷೀಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆ ಕಡಿಮೆಯಾಗಿತ್ತು. ಮಂಗಳೂರು ಪರಿಸರದಲ್ಲಿ ಬೆಳಗ್ಗೆ ಧಾರಾಕಾರವಾಗಿ ಸುರಿದ ಮಳೆ, ದಿನವಿಡೀ ಬಂದು ಹೋಗಿ ಮಾಡುತ್ತಿತ್ತು. ಆಗಾಗ ಬಿಸಿಲು ಕಾಣಿಸುತ್ತಿದ್ದು, ಸಂಜೆ ವೇಳೆ ಮೋಡ ಕವಿದ ವಾತವಾರಣವಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


