ಅರಣ್ಯ ರೋದನ
ಬಾಣೆ, ಜಮ್ಮಾಮವೈ, ಪೈಸರಿ, ಖಾನ್ಸ್, ಕುಮ್ಕಿ, ಇಮಾಮ್ತಿ ಭೂಮಿಯನ್ನು ಅರಣ್ಯ (ಡೀಮ್ಡ್ ಫಾರೆಸ್ಟ್) ವ್ಯಾಪ್ತಿಗೆ ಸೇರಿಸಿರುವ...
ಕನ್ನಡಪ್ರಭ ವಾರ್ತೆ, ವಿಧಾನಸಭೆ, ಜು. 15-
ಬಾಣೆ, ಜಮ್ಮಾಮವೈ, ಪೈಸರಿ, ಖಾನ್ಸ್, ಕುಮ್ಕಿ, ಇಮಾಮ್ತಿ ಭೂಮಿಯನ್ನು ಅರಣ್ಯ (ಡೀಮ್ಡ್ ಫಾರೆಸ್ಟ್) ವ್ಯಾಪ್ತಿಗೆ ಸೇರಿಸಿರುವ ಅರಣ್ಯ ಇಲಾಖೆ ಕ್ರಮ ವಿಧಾನಸಭೆಯಲ್ಲಿ ಸೋಮವಾರ ತೀವ್ರ ಗದ್ದಲಕ್ಕೆ ಕಾರಣವಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸಿ.ಟಿ. ರವಿ ಅವರು ಕೇಳಿದ ಡೀಮ್ಡ್ ಫಾರೆಸ್ಟ್ ಎಂಬುದರ ಪರಿಕಲ್ಪನೆ ಏನು ಎಂಬ ಪ್ರಶ್ನೆಗೆ ಅರಣ್ಯ ಸಚಿವ ರಮಾನಾಥ ರೈ ಅವರು ನೀಡಿದ ಉತ್ತರದಲ್ಲಿ ಬಾಣೆ, ಜಮ್ಮಾಮವೈ, ಪೈಸರಿ ಭೂಮಿ, ಖಾನ್ಸ್, ಕುಮ್ಕಿ, ಇಮಾಮ್ತಿ ಭೂಮಿ ಸೇರಿದಂತೆ 20ಕ್ಕೂ ಹೆಚ್ಚು ಪ್ರವರ್ಗಗಳು ಈ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದು ಈ ವಿವಾದಕ್ಕೆ ಕಾರಣವಾಯಿತು.
ಅರಣ್ಯ ಸಚಿವರ ಈ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೆ.ಜಿ. ಬೋಪಯ್ಯ, ಬಾಣೆ ಭೂಮಿಯಲ್ಲಿ 36 ವಿಭಾಗಗಳಿವೆ. ಈ ಪೈಕಿ ಯಾವುದು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುತ್ತದೆ. ಅದೇ ರೀತಿ ಜಮ್ಮಾಮಲೈ ಭೂಮಿಯನ್ನೂ ಡೀಮ್ಡ್ ಫಾರೆಸ್ಟ್ ಎಂದು ಪರಿಗಣಿಸಲಾಗಿದೆ. ಹೀಗಾದರೆ ಇಡೀ ಕೊಡಗು ಜಿಲ್ಲೆಯೇ ಅರಣ್ಯ ಎಂದು ಪರಿಗಣಿಸಿ ಆ ಜಿಲ್ಲೆಯ ಜನರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸಿ.ಟಿ. ರವಿ, ಡಿ.ಎನ್. ಜೀವರಾಜ್, ಜೆಡಿಎಸ್ನ ನಿಂಗಯ್ಯ, ಎಚ್.ಕೆ. ಕುಮಾರಸ್ವಾಮಿ ಮತ್ತಿತರರು, ಕುಮ್ಕಿ, ಇನಾಮ್ತಿ ಭೂಮಿಯನ್ನೂ ಡೀಮ್ಡ್ ಫಾರೆಸ್ಟ್ ಎಂದು ಪರಿಗಣಿಸಲಾಗಿದೆ. ಹೀಗಾದರೆ ರಾಜ್ಯದಲ್ಲಿ ಜನ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಮಧ್ಯೆ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಖಾನ್ಸ್ ಭೂಮಿಯನ್ನು ಅರಣ್ಯ ಎಂದು ಪರಿಗಣಿಸಿದರೆ ಹೇಗೆ. ಸಾಗರ ಪಟ್ಟಣ ಇರುವುದೇ ಖಾನ್ಸ್ ಭೂಮಿಯಲ್ಲಿ ಎಂದಾಗ, ಈ ಪಟ್ಟಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಪಕ್ಷ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್ ಅವರು, ಪಟ್ಟಿ ವಾಪಸ್ ಪಡೆಯದೇ ಇದ್ದರೆ ನಾವು ಅಪಾಯಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಸಿ.ಟಿ. ರವಿ ಪ್ರಶ್ನೆಗೆ ಉತ್ತರಿಸಿದ ಸಚಿವ ರಮಾನಾಥ ರೈ, ಸುಪ್ರೀಂ ಕೋರ್ಟ್ ಆದೇಶದಂತೆ ಅರಣ್ಯ ಎಂದು ಇದುವರೆಗೂ ಘೋಷಿಸದೇ ಇರುವ ಮತ್ತು ಅರಣ್ಯ ಸ್ವರೂಪ ಹೊಂದಿರುವ ಪ್ರದೇಶಗಳನ್ನು ಗುರುತಿಸಲು ಸರ್ಕಾರ ತಜ್ಞರ ಸಮಿತಿ ರಚಿಸಿ, ಸದರಿ ಪ್ರದೇಶಗಳನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿದೆ. ಈ ಸಮಿತಿಯು ಗುರುತಿಸಿರುವ ಪ್ರದೇಶಗಳನ್ನು ಮರುಪರಿಶೀಲಿಸಲಾಗುತ್ತಿದ್ದು, ಇದಕ್ಕೆ ಸರ್ಕಾರ ಒಪ್ಪಿದ ನಂತರ ಸುಪ್ರೀಂ ಕೋರ್ಟ್ಗೆ ಈ ಕುರಿತು ಅಂತಿಮ ವರದಿ ಸಲ್ಲಿಸಲಾಗುವುದು ಎಂದರು.
ಸಚಿವರ ಈ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ಡೀಮ್ಡ್ ಫಾರೆಸ್ಟ್ ಪ್ರದೇಶಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿ ಚೀಟಿ ನೀಡದೆ ಆ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಈಗಾಗಲೇ ಸರ್ಕಾರ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ ಎಂದು ಹೇಳಿದರು.
ಮಧ್ಯೆ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್ನ ಹಿರಿಯ ಸದಸ್ಯ ರಮೇಶ್ಕುಮಾರ್, ಅಧಿಕಾರಿಗಳೇನೋ ಉತ್ತರ ಕೊಡುತ್ತಾರೆ ಎಂದು ಅದನ್ನು ಸದನದಲ್ಲಿ ಹೇಳುವುದು ಸರಿಯಲ್ಲ. ಅವರು ಎಲ್ಲದಕ್ಕೂ ಸುಪ್ರೀಂ ಕೋರ್ಟ್ ಆದೇಶ ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಸದ್ಯ ಇರುವ ವಿವಾದ ಸುಪ್ರೀಂ ಮತ್ತು ಸರ್ಕಾರದ ಮಧ್ಯೆ ಅಲ್ಲ, ಅದು ಸರ್ಕಾರ ಮತ್ತು ಜನರ ಮಧ್ಯೆ. ಹೀಗಾಗಿ ಸರ್ಕಾರ ಜನರ ಪರವಾದ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ಸಿಎಂ ನೇತೃತ್ವದಲ್ಲಿ ಸಭೆ
ಅರಣ್ಯ ಒತ್ತುವರಿ ಸಮಸ್ಯೆ ಮತ್ತು ಡೀಮ್ಡ್ ಫಾರೆಸ್ಟ್ ಕುರಿತಂತೆ ಇರುವ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಬಂಧಿಸಿದ ಜಿಲ್ಲೆಗಳ ಶಾಸಕರ ಸಭೆ ನಡೆಸಲು ಸರ್ಕಾರ ಒಪ್ಪಿದೆ. ಅರಣ್ಯ ಒತ್ತುವರಿ ತೆರವು ಕುರಿತಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಾಡಿದ ಈ ಸಲಹೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಭೆ ಕರೆಯುವುದಾಗಿ ತಿಳಿಸಿದ್ದಾರೆ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕಿದೆ. ಆದರೆ, ಈ ಸಂದರ್ಭದಲ್ಲಿ ಅಧಿಕಾರಿಗಳ ಮಾತಿನಂತೆ ಸರ್ಕಾರ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಜನರ ಕುರಿತಾದ ಕಾಳಜಿಯನ್ನು ಸರ್ಕಾರ ತೋರಿಸಬೇಕಿದೆ. ಆದ್ದರಿಂದ ಕೂಡಲೇ ಜನಪ್ರತಿನಿಧಿಗಳ ಸಭೆ ಕರೆಯುವುದು ಸೂಕ್ತ ಎಂದು ಸ್ಪೀಕರ್ ಅವರ ಸಲಹೆಗೆ ಸರ್ಕಾರ ಒಪ್ಪಿಗೆ ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

