ಪ್ರಧಾನ ಸುದ್ದಿ

ಗ್ರಾಮಗಳಲ್ಲಿ 'ಪಿಂಚಣಿ ಅದಾಲತ್‌'

Published On :

ಮಂಗಳೂರು: 'ಇನ್ನೂ ಮಾಸಿಕ ಪಿಂಚಣಿ ಬಂದಿಲ್ಲ ಎಂದು ಹಪಹಪಿಸುವ ಬದಲು ನೇರವಾಗಿ ಅದಾಲತ್‌ಗೆ ತೆರಳಿ ಸಮಸ್ಯೆ ಪರಿಹರಿಸಿಕೊಳ್ಳಿ'.
ಇದು ಸಾಮಾಜಿಕ ಭದ್ರತೆ ಯೋಜನೆಯಲ್ಲಿ ಪಿಂಚಣಿ ವಂಚಿತ ಫಲಾನುಭವಿಗಳಿಗೆ ಸರ್ಕಾರ ನೀಡುವ ಹಿತವಚನ. ಕಳೆದ ನಾಲ್ಕೈದು ವರ್ಷಗಳಿಂದ ಸಾಮಾಜಿಕ ಭದ್ರತೆ ವಿಚಾರ ಪ್ರತಿ ಬಾರಿಯೂ ಚರ್ಚೆಯಾಗುತ್ತಿದೆ. ಪ್ರಗತಿ ಪರಿಶೀಲನಾ ಸಭೆಗಳಲ್ಲಿ ನಿಗದಿತ ಗುರಿ ಸಾಧನೆ ಆಗುತ್ತಿಲ್ಲ ಎಂಬ ಟೀಕೆ ಸಾಮಾನ್ಯ. ಇದನ್ನು ನಿವಾರಿಸಲು ಗ್ರಾಮ ಮಟ್ಟದಲ್ಲಿ 'ಪಿಂಚಣಿ ಅದಾಲತ್‌' ನಡೆಸಲು ಸರ್ಕಾರ ಸೂಚಿಸಿದೆ.

ಅರ್ಹರಿಗೆ ಸಿಗುತ್ತಿಲ್ಲ ಪಿಂಚಣಿ: ಸಾಮಾಜಿಕ ಭದ್ರತೆ ಯೋಜನೆ ವ್ಯಾಪ್ತಿಯ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಇತ್ಯಾದಿಗಳಲ್ಲಿ ಅರ್ಹ ಫಲಾನುಭವಿಗಳಿಗೆ ವಂಚನೆಯಾಗಿದೆ ಎಂಬುದು ಕೇಳಿಬರುತ್ತಿರುವ ಆರೋಪ. ಸರ್ಕಾರದ ಮಾಸಿಕ ಪಿಂಚಣಿ ದುರ್ಬಳಕೆ ತಡೆ ನಿಟ್ಟಿನಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಫಲಾನುಭವಿಗಳ ಪಟ್ಟಿ ಪರಿಷ್ಕರಿಸುವಂತೆ ಸೂಚಿಸಿದ್ದು, ವರ್ಷಾಂತ್ಯದ ಗಡುವು ವಿಧಿಸಲಾಗಿತ್ತು.
ಅಧಿಕಾರಿಗಳು ಪಟ್ಟಿಯನ್ನು ತರಾತುರಿಯಲ್ಲಿ ಪರಿಷ್ಕರಿಸುವಾಗ ಅರ್ಹರನ್ನು ಕೈ ಬಿಟ್ಟಿದ್ದರು. ಇದರಿಂದ ಆರೇಳು ತಿಂಗಳಿಂದ ಮಾಸಿಕ ಪಿಂಚಣಿ ಇಲ್ಲದೆ ಕೆಲವು ಅರ್ಹ ಫಲಾನುಭವಿಗಳು ಪರದಾಡುವಂತಾಗಿತ್ತು.
ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ಅಧಿಕಾರಿಗಳ ಮರ್ಜಿಯಿಂದ ಸಮೀಕ್ಷೆಯಲ್ಲಿ ಕೆಲವೇ ಮಂದಿಗೆ ಪಿಂಚಣಿ ಸಿಕ್ಕಿತೇ ವಿನಾ ಅರ್ಹರೂ ಹಾಗೆಯೇ ಉಳಿದುಕೊಂಡರು. ಆದುದರಿಂದ ಮಾಸಿಕ ಪಿಂಚಣಿಯನ್ನು ಸಮರ್ಪಕವಾಗಿ ಹಂಚಲು ಈಗ ಸರ್ಕಾರವೇ ಅದಾಲತ್ ನಡೆಸುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಏನಿದು 'ಪಿಂಚಣಿ ಅದಾಲತ್‌'?: ಹಿಂದೆ ಹೋಬಳಿ ಮಟ್ಟದಲ್ಲಿ ಜರುಗುತ್ತಿದ್ದ 'ಜನಸ್ಪಂದನ' ಕಾರ್ಯಕ್ರಮದ ಇನ್ನೊಂದು ರೂಪ ಪಿಂಚಣಿ ಅದಾಲತ್. 'ಪಿಂಚಣಿ ಅದಾಲತ್‌' ಕೋರ್ಟ್ ಮಾದರಿಯಲ್ಲಿ ಸಮಸ್ಯೆ ಇತ್ಯರ್ಥಗೊಳಿಸುತ್ತದೆ.
ಬಾಕಿ ಇರುವ ಅರ್ಜಿ ವಿಲೇವಾರಿ ಜತೆಗೆ ಅರ್ಜಿ ಯಾಕಾಗಿ ತಿರಸ್ಕೃತಗೊಂಡಿದೆ ಎಂಬುದನ್ನು ಅದಾಲತ್‌ನಲ್ಲಿ ಚರ್ಚಿಸುತ್ತಾರೆ. ಈ ಅದಾಲತ್‌ನಿಂದ ಅರ್ಜಿದಾರರ ಸಮ್ಮುಖ, ಸ್ಥಳದಲ್ಲೇ ಅರ್ಜಿ ಇತ್ಯರ್ಥಗೊಳ್ಳುತ್ತದೆ. ಇದರಿಂದ ಅರ್ಜಿ ತ್ವರಿತ ವಿಲೇವಾರಿಗೊಂಡು ಬಾಕಿ ಉಳಿದ ಅರ್ಹರಿಗೆ ಬೇಗನೆ ಪಿಂಚಣಿ ನೀಡಲು ಸಾಧ್ಯ ಎಂಬುದು ಸರ್ಕಾರದ ಉದ್ದೇಶ.
ಸಿಎಂ ನಿರ್ದೇಶನ: ರಾಜ್ಯದಲ್ಲಿ ಗ್ರಾಮ ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸುವಂತೆ ಸ್ವತಃ ಮುಖ್ಯಮಂತ್ರಿ  ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಜನಸ್ಪಂದನದಲ್ಲಿ ರೇಷನ್ ಕಾರ್ಡ್, ಮನೆ ನಿವೇಶನ, ಸ್ಮಶಾನ ರಸ್ತೆ, ರಸ್ತೆ ತಕರಾರುಗಳಿಗೆ ಅರ್ಜಿ ಸ್ವೀಕಾರ, ವಿಲೇವಾರಿ ಆಗುತ್ತಿತ್ತು. ಪಿಂಚಣಿ ಅದಾಲತ್‌ನಲ್ಲಿ ಕೇವಲ ಸಾಮಾಜಿಕ ಭದ್ರತೆ ಯೋಜನೆಗೆ ಸಂಬಂಧಿಸಿದ ಅರ್ಜಿಗಳಿಗೆ ಮಾತ್ರ ಅವಕಾಶ ಇರುತ್ತದೆ.
ಈಗ ಉಪ ತಹಸೀಲ್ದಾರ್‌ಗೆ ಅರ್ಜಿ ಇತ್ಯರ್ಥ ಅಧಿಕಾರ ನೀಡಿರುವುದರಿಂದ ಅದಾಲತ್‌ನಲ್ಲಿ ತಹಸೀಲ್ದಾರರು ಭಾಗವಹಿಸಬೇಕಿಲ್ಲ.

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.