ಪ್ರಧಾನ ಸುದ್ದಿ

ಇನ್ನೂ ಸಿಗದ ಸುಳಿವು

ಬೋಧಗಯಾ ಸರಣಿ ಬಾಂಬ್ ಸ್ಫೋಟ ಸಂಬವಿಸಿ 48 ಗಂಟೆಯಾದರೂ ತನಿಖಾ ಸಂಸ್ಥೆಗಳಿಗೆ ಇನ್ನೂ ಪ್ರಬಲ ಸಾಕ್ಷ್ಯಗಳು ಲಭ್ಯವಾಗಿಲ್ಲ.

ಇನ್ನೂ ಸಿಗದ ಸುಳಿವು
Published On :

ಪಿಟಿಐ, ನವದೆಹಲಿ/ ಬೋಧಗಯಾ, ಜು.8-
ಬೋಧಗಯಾ ಸರಣಿ ಬಾಂಬ್ ಸ್ಫೋಟ ಸಂಬವಿಸಿ 48 ಗಂಟೆಯಾದರೂ ತನಿಖಾ ಸಂಸ್ಥೆಗಳಿಗೆ ಇನ್ನೂ ಪ್ರಬಲ ಸಾಕ್ಷ್ಯಗಳು ಲಭ್ಯವಾಗಿಲ್ಲ. ದೇವಸ್ಥಾನದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಆದರೆ, ಇದರಿಂದ ತನಿಖೆಗೆ ಹೇಳಿಕೊಳ್ಳುವಂತಹ ಲಾಭವೇನೂ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು ಯುವಕ ಹಾಗೂ ಯುವತಿ ಜತೆಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸ್ಫೋಟದ ಸದ್ದು ಕೇಳಿಸಿದಾಗ ಕೆಲಕ್ಷಣ ಅಲ್ಲೇ ನಿಂತ ಅವರು ನಂತರ ಮುಂದೆ ಹೆಜ್ಜೆಹಾಕಿದ್ದಾರೆ.
ಸುಮಾರು 30 ವರ್ಷದ ವ್ಯಕ್ತಿಯೊಬ್ಬ ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು ತರಾತುರಿಯಲ್ಲಿ ದೇವಸ್ಥಾನದಿಂದ ಹೊರಗೆ ಹೋದ ದೃಶ್ಯವೂ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದರ ಆಧಾರದ ಮೇಲೆ ಎನ್‌ಎಸ್‌ಜಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಮಾಹಿತಿ ಕಲೆಹಾಕುವ ಕೆಲಸ ಆರಂಭಿಸಿವೆ.

ಜನರ ಪ್ರವೇಶಕ್ಕೆ ಮುಕ್ತ
ಬೋಧಗಯಾದಲ್ಲಿ ನಡೆದ ಸರಣಿ ಸ್ಫೋಟವು ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿದ್ದರೂ ಇಲ್ಲಿನ ಬೌದ್ಧ ಭಿಕ್ಷುಗಳ ನಂಬಿಕೆಯ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಸ್ಫೋಟದ ಮರುದಿನವೇ ದೇವಸ್ಥಾನದ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಮಹಾಬೋಧಿ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ. ಇದಕ್ಕೂ ಮೊದಲು ನೂರಾರು ಬೌದ್ಧ ಭಿಕ್ಷುಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

9 ಅಲ್ಲ 10 ಸ್ಫೋಟ
ಬಿಹಾರದ ಮಹಾಬೋಧಿಯಲ್ಲಿ ಸ್ಫೋಟಿಸಿದ್ದು ಒಂಬತ್ತು ಅಲ್ಲ ಬದಲಾಗಿ 10 ಬಾಂಬ್‌ಗಳು ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಹೇಳಿದ್ದಾರೆ. ಅಲ್ಲದೆ, 13 ಬಾಂಬ್ ಇಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

3-4 ಉಗ್ರರ ಕೆಲಸ
ಬೋಧಗಯಾದಲ್ಲಿ ಇಡಲಾಗಿದ್ದ ಪ್ರತಿ ಬಾಂಬ್‌ಗಳು ನಾಲ್ಕರಿಂದ ಐದು ಕೆ.ಜಿ.ಯಷ್ಟು ತೂಕ ಹೊಂದಿದ್ದವು. ಈ ಬಾಂಬ್‌ಗಳನ್ನು ಇಡುವ ಕಾರ್ಯಕ್ಕೆ ಕನಿಷ್ಠ ಮೂರರಿಂದ ನಾಲ್ಕು ಮಂದಿಯನ್ನು ಬಳಸಿರಬಹುದು ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.

ಉರ್ದು ಸಂಕೇತ ಪತ್ತೆ
ಸ್ಫೋಟದ ಹಿಂದೆ ಉಗ್ರರ ಕೈವಾಡವನ್ನು ಬಲಪಡಿಸುವ ಸಾಕ್ಷ್ಯವೊಂದು ಪೊಲೀಸರಿಗೆ ಸಿಕ್ಕಿದೆ. ನಿಷ್ಕ್ರಿಯಗೊಳಿಸಲಾಗಿರುವ ಮೂರು ಬಾಂಬ್‌ಗಳಲ್ಲಿ ಎರಡರಲ್ಲಿ ಉರ್ದು ಸಂಕೇತಗಳು ಪತ್ತೆಯಾಗಿವೆ. ಒಂದರಲ್ಲಿ ಬಡಾ ಬುದ್ಧ ಹಾಗೂ ಇನ್ನೊಂದರಲ್ಲಿ ಬಸ್ ಎಂದು ಬರೆಯಲಾಗಿದೆ. ಇದು ಒಂದು ಬಾಂಬ್ ಅನ್ನು ಬುದ್ಧನ 85 ಅಡಿ ಎತ್ತರದ ವಿಗ್ರಹದ ಬಳಿ ಹಾಗೂ ಇನ್ನೊಂದನ್ನು ಪ್ರವಾಸಿ ಬಸ್‌ನಲ್ಲಿ ಇಡಬೇಕು ಎನ್ನುವುದರ ಸಂಕೇತ ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.