ಪ್ರಧಾನ ಸುದ್ದಿ

ಮಳೆನಾಡು

ಕಳೆದ 36 ಗಂಟೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ತನ್ನ ಗತವೈಭವಕ್ಕೆ ಮರಳಿದರೆ,ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ನದಿಗಳು ಉಕ್ಕೇರುತ್ತಿವೆ.

ಮಳೆನಾಡು
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.3
ಕಳೆದ 36 ಗಂಟೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ತನ್ನ ಗತವೈಭವಕ್ಕೆ ಮರಳಿದರೆ, ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ನದಿಗಳು ಉಕ್ಕೇರುತ್ತಿವೆ. ಕೊಡಗಿನ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ಬುಧವಾರ ಪ್ರವಾಹೋಪಾದಿಯಾಗಿ ಹರಿಯುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ.
ಮಲೆನಾಡು ಪ್ರದೇಶದಲ್ಲಿ ತುಂಗಾ, ಭದ್ರಾ, ಶರಾವತಿ, ಮಾಲತಿ, ವರದಾ ಹಾಗೂ ಕರಾವಳಿ ಪ್ರದೇಶದಲ್ಲಿ ನೇತ್ರಾವತಿ, ಕುಮಾರಧಾರಾ, ಕೊಡಗು ಜಿಲ್ಲೆಯಲ್ಲಿ ಕಾವೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಗಾವಳಿ, ಅಘನಾಶಿನಿ, ಚಂಡಿಕಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಹಾಗಾಗಿ, ಆಯಾ ನದಿ ಪಾತ್ರಗಳ ತಗ್ಗು ಪ್ರದೇಶಗಳಿಗೆ ನೀರು ಹೊಕ್ಕಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಪಕ್ಷಿಧಾಮ ಸಂಪೂರ್ಣ ಜಲಾವೃತವಾಗಿದ್ದು, ನೂರಾರು ಪಕ್ಷಿಗಳು ನದಿಯಲ್ಲಿ ಕೊಚ್ಚಿಹೋದವು. ಆಗುಂಬೆ ಹಾಗೂ ಹುಲಿಕಲ್‌ನಲ್ಲಿ ಪೈಪೋಟಿಗೆ ಬಿದ್ದಂತೆ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಮಲೆನಾಡು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕೆಲವಡೆ ಭೂ ಕುಸಿತ ಸಂಭವಿಸಿದ್ದು, ಆತಂಕಕ್ಕೆ ಕಾರಣವಾಗಿದೆ. ಮತ್ತೆ ಕೆಲವಡೆ ಹೆದ್ದಾರಿಗಳ ಮೇಲೆ ನೀರು ಬಂದಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೊಸಮಠ ವ್ಯಾಪ್ತಿಯಲ್ಲಿ ಗುಂಡ್ಯ ಹೊಳೆಯಲ್ಲಿ ನೀರು ಹೆಚ್ಚಿದ ಪರಿಣಾಮ ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಹೊಸಮಠ ಸೇತುವೆ ಮುಳುಗಡೆಯಾಗಿದೆ.
ಮಳೆರಾಯನ ತ್ರಾಸು
ಮಲೆನಾಡಿನಲ್ಲಿ ಎಲ್ಲ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ. ಹಾಗೆಯೇ ಒಂದೆಡೆ ಮಲೆನಾಡಿನಲ್ಲಿ ಮಳೆಯ ವೈಭವ, ಮತ್ತೊಂದು ಕಡೆ ಜನಜೀವನ ಅಸ್ತವ್ಯಸ್ತ. ತುಂಗಾ ನದಿ ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿ ಅಪಾಯಮಟ್ಟದಲ್ಲಿ ಹರಿದ ಪರಿಣಾಮ ನದಿ ಪಾತ್ರದ ತಗ್ಗುಪ್ರದೇಶದ ಜನರು ಆತಂಕಕ್ಕೀಡಾಗಿದ್ದಾರೆ. ಹಲವೆಡೆ ಆಸ್ತಿಪಾಸ್ತಿ ಹಾನಿಯಾಗಿದೆ. ಶಿವಮೊಗ್ಗ-ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಬುಧವಾರವಿಡೀ ನೀರು ನಿಂತು ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಹೊಸನಗರ- ತೀರ್ಥಹಳ್ಳಿ, ತೀರ್ಥಹಳ್ಳಿ-ಆಗುಂಬೆ ರಸ್ತೆಯೂ ಅಲ್ಲಲ್ಲಿ ನೀರಿನಿಂದ ಜಲಾವೃತವಾಗಿತ್ತು. ಶಿಕಾರಿಪುರದ ಶಿವಮೊಗ್ಗ ರಸ್ತೆಯ ಮೇಲೆ ನೀರು ನಿಂತ ಕಾರಣ ಬುಧವಾರ ಬೆಳಗ್ಗೆಯೇ ಸಂಚಾರ ಬಂದ್ ಆಯಿತು. ಉಳಿದಂತೆ ತಾಳಗುಪ್ಪ-ಹೊನ್ನೆಮರಡು ರಸ್ತೆ, ಸೊರಬ-ಉದ್ರಿ ರಸ್ತೆ ಮೇಲೆ ಕೆರೆಯ ನೀರು ಹರಿದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿತ್ತು.
ಪದವಿಗೆ ಪೈಪೋಟಿ!
ದಕ್ಷಿಣ ಭಾರತದ ಚಿರಾಪುಂಜಿ ಎಂಬ ಪದವಿಗೆ ಪೈಪೋಟಿ ನಡೆಸುತ್ತಿರುವ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹಾಗೂ ಹೊಸನಗರ ತಾಲೂಕಿನ ಹುಲಿಕಲ್‌ನಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಹುಲಿಕಲ್‌ನಲ್ಲಿ 40 ಸೆಂ.ಮೀ., ಆಗುಂಬೆಯಲ್ಲಿ 27 ಸೆಂ.ಮೀ., ಹೊಸನಗರದಲ್ಲಿ 29 ಸೆಂ.ಮೀ. ಮಳೆಯಾಗಿದೆ. ತೀರ್ಥಹಳ್ಳಿ, ಸೊರಬ, ಸಾಗರ ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದೆ.ಜೋಗ ಬಳಿ ಭೂ ಕುಸಿತ: ಜೋಗ ಸಮೀಪದ ಜೋಗಿನಮಠ ಬಳಿ ಭೂ ಕುಸಿತ ಉಂಟಾಗಿ, ರಸ್ತೆ ಮೇಲೆ ರಾಶಿಯಾಗಿ ಮಣ್ಣು ಬಿದ್ದ ಪರಿಣಾಮ ಸಂಪರ್ಕ ಕಡಿತಗೊಂಡಿತ್ತು.
ಶಾಲೆಗಳಿಗೆ ರಜೆ: ಸುಳ್ಯ ತಾಲೂಕಿನ ಎಲ್ಲ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಹಾಗೆಯೇ, ಮಲೆನಾಡಿನ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ಹೊಸನಗರ, ತೀರ್ಥಹಳ್ಳಿ, ಸೊರಬ ಹಾಗೂ ಕೊಪ್ಪ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ಎಲ್ಲ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಗಂಗಾವಳಿ ರೌದ್ರ ನರ್ತನ: ಕರಾವಳಿ ತಲ್ಲಣ
ಕಾರವಾರ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಸುಂಕಸಾಳ ಬಳಿ ಗಂಗಾವಳಿ ನದಿ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ, ಸಂಚಾರ ಸ್ಥಗಿತಗೊಂಡಿದೆ. ತಾಲೂಕಿನ ನಡುಗಡ್ಡೆ ಪ್ರದೇಶವಾದ ಕೂರ್ವೆ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಕೂರ್ವೆ ನಡುಗಡ್ಡೆಯಲ್ಲಿ ವಾಸಿಸುತ್ತಿದ್ದ 50 ಕುಟುಂಬಗಳ 120 ಸದಸ್ಯರನ್ನು ಹಾಗೂ ಹಿಚ್ಚಡ ಪ್ರದೇಶದ 60 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲು ತಾಲೂಕು ಆಡಳಿತ ಪ್ರಯತ್ನ ನಡೆಸಿದೆ.
ಭೂಕುಸಿತ: ಸಿದ್ದಾಪುರ ತಾಲೂಕಿನ ಕಾನಸೂರು-ಕೋಡ್ಸರ ನಡುವೆ ಭೂ ಕುಸಿತ ಉಂಟಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಕಾನಸೂರು ಗ್ರಾಪಂ ವ್ಯಾಪ್ತಿಯಲ್ಲೂ ಮಳೆ ಸಾಕಷ್ಟು ಆಧ್ವಾನ ಉಂಟುಮಾಡಿದೆ. ಶಿರಸಿ-ಸಿದ್ದಾಪುರ ರಸ್ತೆಯ ಕಾನಸೂರಿನಿಂದ ಮಾದ್ನಕಳ್-ಅರೆಹಳ್ಳ-ಗಿರಿಗಡ್ಡೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದೇ ವೇಳೆ, ಹೊನ್ನಾವರ ತಾಲೂಕಿನ ಗುಂಡಬಾಳ ಹೊಳೆ ಉಕ್ಕೇರಿ ಪ್ರವಾಹ ಕಾಣಿಸಿಕೊಂಡಿದ್ದು, ಹೊಳೆತೀರದ 60 ಮನೆ ಜಲಾವೃತಗೊಂಡಿವೆ.
ತುಂಬಿ ಹರಿದಿವೆ ನೇತ್ರಾವತಿ, ಕುಮಾರಧಾರಾ: ಸತತ ಮಳೆಯಿಂದಾಗಿ ದಕ್ಷಿಣ ಕನ್ನಡದ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ಉಪ್ಪಿನಂಗಡಿ ಭಾಗದಲ್ಲಿ ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ನೆರೆ ನೀರು ನುಗ್ಗಿದೆ. ಉಪ್ಪಿನಂಗಡಿಯ ನಟ್ಟಿಬೈಲು, ಕಜೆಕ್ಕಾರು, ಕೂಟೇಲು ಪ್ರದೇಶಗಳಲ್ಲಿ ನದಿ ನೀರು ಒಳಪ್ರದೇಶಗಳಲ್ಲಿ ನುಗ್ಗಿ ಕೃಷಿ ಬೆಳೆಗಳನ್ನು ಆವರಿಸಿಕೊಂಡಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಉಪ್ಪಿನಂಗಡಿ- ಕಡಬ ನಡುವಣದ ಹೊಸಮಠ ಸೇತುವೆ ಬುಧವಾರ ಮಧ್ಯಾಹ್ನದಿಂದ ಮುಳುಗಡೆಯಾಗಿದ್ದು, ವಾಹನ ಸಂಚಾರ ತಡೆಹಿಡಿಯಲ್ಪಟ್ಟಿತು. ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಆಸುಪಾಸಿನಲ್ಲಿ ಭಾರಿ ಮಳೆಯಾಗಿದೆ.
ಪ್ರವಾಹೋಪಾದಿಯಾಗಿ ಕಾವೇರಿ!: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಾವೇರಿ ನದಿ ಉಗಮ ತಾಣವಾದ ತಲಕಾವೇರಿ, ಭಾಗಮಂಡಲದಲ್ಲಿ ಮಳೆಯ ರೌದ್ರತೆ ಕಂಡುಬಂದಿದ್ದು, ಭಗಂಡೇಶ್ವರ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಪ್ರವಾಹೋಪಾದಿಯಾಗಿ ಹರಿಯುತ್ತಿದ್ದಾಳೆ. ಭಾಗಮಂಡಲದಿಂದ ಮಡಿಕೇರಿ ಮತ್ತು ಅಯ್ಯಂಗೇರಿಗೆ ಸಾಗುವ ರಸ್ತೆ ನದಿ ನೀರಿನಿಂದ ಮುಚ್ಚಿಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಇದೇ ಸ್ಥಿತಿ ಮುಂದುವರಿದರೆ ಭಾಗಮಂಡಲ ದ್ವೀಪಸದೃಶವಾಗುತ್ತದೆ. ಮಡಿಕೇರಿ ನಗರದಲ್ಲಿ ಮಳೆ ಅಬ್ಬರ ಕಡಿಮೆ ಇತ್ತಾದರೂ ಜಿಲ್ಲೆಯ ಕಾವೇರಿ ನದಿ ಪಾತ್ರಗಳಲ್ಲಿ ಉತ್ತಮ ಮಳೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.