ಇರುತ್ತಾ, ಹೋಗುತ್ತಾ?
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಡೆಯುವ ಉಪಹಾರ ಸಭೆ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿದೆಯೇ?...

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜ.22
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಡೆಯುವ ಉಪಹಾರ ಸಭೆ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿದೆಯೇ?
ಯಡಿಯೂರಪ್ಪ ಬೆಂಬಲಿಗ ಶಾಸಕರು ನೀಡಿರುವ ಹೇಳಿಕೆ ಪ್ರಕಾರ, ನಾಲ್ವರು ಸಚಿವರು ಮತ್ತು 24 ಶಾಸಕರು ಬುಧವಾರ ರಾಜಿನಾಮೆ ನೀಡಲಿದ್ದಾರೆ. ಜೊತೆಗೆ ರಾಜಿನಾಮೆ ಪತ್ರವನ್ನು ವಿಧಾನಸಭೆ ಸ್ಪೀಕರ್ ಮತ್ತು ರಾಜ್ಯಪಾಲರಿಗೆ ತಲುಪಿಸಲಿದ್ದಾರೆ.
ಒಂದು ವೇಳೆ ಈ ಹೇಳಿಕೆಯಂತೆ ಎಲ್ಲವೂ ನಡೆದರೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ.
ಆದರೆ, 20 ಶಾಸಕರು ಹಾಗೂ ನಾಲ್ವರು ಸಚಿವರು ಒಂದೇ ಬಾರಿಗೆ ಅಂದರೆ ಬುಧವಾರವೇ ರಾಜಿನಾಮೆ ನೀಡುವ ಸಾಧ್ಯತೆ ಇಲ್ಲ. ಎರಡು ಹಂತದಲ್ಲಿ ರಾಜಿನಾಮೆ ನೀಡುವ ಬಗ್ಗೆ ಉಪಾಹಾರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.
ರಾಜಿನಾಮೆ ಕುರಿತಂತೆ ಬಿ.ಎಸ್. ಯಡಿಯೂರಪ್ಪ ಹಾಗೂ ಲೋಕೋಪಯೋಗಿ ಖಾತೆ ಸಚಿವ ಸಿ.ಎಂ. ಉದಾಸಿ ಮಂಗಳವಾರ ಸಂಜೆ ಮಾತುಕತೆ ನಡೆಸಿದರು. ಉದಾಸಿ ನಿವಾಸದಲ್ಲಿ ನಡೆದ ಈ ಮಾತುಕತೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಬುಧವಾರದ ಬೆಳಗಿನ ಸಭೆಯಲ್ಲಿ ಈ ಕುರಿತು ನಿರ್ಣಯ ಆಂಗೀಕರಿಸಲು ನಿರ್ಧರಿಸಲಾಗಿದೆ. ಇಷ್ಟಾದರೂ, ಲೋಕೋಪಯೋಗಿ ಖಾತೆ ಸಚಿವ ಸಿ.ಎಂ. ಉದಾಸಿ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ನೆಹರು ಓಲೆಕಾರ, ಬಿ.ಪಿ. ಹರೀಶ್, ಡಿ.ಎಸ್. ಸುರೇಶ್, ಹರತಾಳು ಹಾಲಪ್ಪ ಸೇರಿದಂತೆ 10 ಶಾಸಕರು ಬುಧವಾರವೇ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ಇದಾದ ನಂತರ, ಸಚಿವರಾದ ಬೊಮ್ಮಾಯಿ, ವಿ. ಸೋಮಣ್ಣ, ನಿರಾಣಿ, ಇನ್ನೂ 10 ಶಾಸಕರು ಎರಡನೇ ಹಂತದಲ್ಲಿ ರಾಜಿನಾಮೆ ಸಲ್ಲಿಸಲಿದ್ದಾರೆ ಎಂದು ಕೆಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸಲು ಅವಕಾಶ ಇರಬಾರದು. ಸರ್ಕಾರ ಅಲ್ಪಮತಕ್ಕೆ ಕುಸಿಯಬೇಕು ಎಂಬುದು ಕೆಜೆಪಿಯ ನಡೆಯಾಗಿದೆ. ಅಲ್ಲದೆ, ಕೆಜೆಪಿಯೊಂದಿಗೆ ಯಾವ ಶಾಸಕರೂ ಇಲ್ಲ ಎಂಬ ಮಾತನ್ನು ಹುಸಿ ಮಾಡುವ ತಂತ್ರವನ್ನೂ ಅನುಸರಿಸಲಾಗುತ್ತಿದೆ. ಸರ್ಕಾರ ಅಲ್ಪಮತಕ್ಕೆ ಕುಸಿದರೆ, ಅನಂತರ ರಾಜ್ಯಪಾಲರು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಫೆ.4ರಂದು ಭಾಷಣ ಮಾಡುವುದಾದರೂ ಹೇಗೆ? ಹೀಗಾಗಿ, ರಾಜ್ಯಪಾಲರು 'ಕಾರ್ಯಪ್ರವೃತ್ತ'ರಾಗುವಂತೆಯೂ ಮಾಡುವ ಉದ್ದೇಶವೂ ಇದರ ಹಿಂದೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


