ಯುವಜನ/ಮಕ್ಕಳು

ಯಮನಿಗೆ ಸಮಯದ ಪಾಠ

ಯಮನಿಗೆ ಸಮಯದ ಪಾಠ
Published On :

ಯಮರಾಜ ಒಮ್ಮೆ ಅವರ ಹತ್ತಿರದ ಸಂಬಂಧಿಕರ ಮದುವೆಗೆ ಹೋಗುವವನಿದ್ದ. ಆದರೆ, ಅಲ್ಲಿಗೆ ಹೋದರೆ ಸತ್ತು ಯಮಲೋಕ ಸೇರುವವರನ್ನು ಹೇಗೆ ನಿಭಾಯಿಸುವುದು ಎನ್ನುವುದೇ ಚಿಂತೆಯಾಯಿತು. ಆಪ್ತ ಸೇವಕನಾದ ಚಿತ್ರಗುಪ್ತನನ್ನು ಕರೆದು ಹೇಳಿದ; 'ನಾನು ಈಗಲೇ ತುರ್ತಾಗಿ ನಮ್ಮ ಸಂಬಂಧಿಕರ ಮದುವೆಗೆ ಹೋಗಬೇಕಿದೆ. ಈ ಅವಧಿಯಲ್ಲಿ ಯಾರೇ ಸತ್ತು ಈ ನನ್ನ ಲೋಕಕ್ಕೆ ಬಂದರೆ ಅವರನ್ನು ಒಳ ಬಿಡಬೇಡ. ಅವರ ತಪ್ಪುಸರಿಗಳನ್ನು ಅಳೆದು ಸ್ವರ್ಗ-ನರಕಗಳತ್ತ ಕಳಿಸಬೇಡ. ನಾನು ಬರುವ ತನಕ ಈ ನನ್ನ ಲೋಕದ ಮುಂಬಾಗಿಲಿನ ಹೊರಗೆ ಇರುವಂತೆ ಹೇಳು. ಅಲ್ಲದೆ, ನನ್ನ ಮೊಬೈಲ್‌ಗೆ ಫೋನ್ ಮಾಡಿ ತೊಂದರೆ ಕೊಡಬೇಡ' ಎಂದು ತಾಕೀತು ನೀಡಿ ಯಮ ಹೊರನಡೆದ.
ಸ್ವಲ್ಪ ಹೊತ್ತಿನಲ್ಲೇ ಯಮಲೋಕದ ಬಾಗಿಲು ಬಡಿದ ಸದ್ದು ಕೇಳಿಸಿತು. ಚಿತ್ರಗುಪ್ತನು ಬಾಗಿಲ ಪಕ್ಕದ ಕಿಟಕಿಯಿಂದ ಹೊರಗೆ ನೋಡಿದ. ಅಲ್ಲಿ ಮಧ್ಯವಯಸ್ಕನ ಆತ್ಮ ನಿಂತಿತ್ತು. ಚಿತ್ರಗುಪ್ತನು ವಿಚಾರಿಸಲಾಗಿ ಅದು ಒಬ್ಬ ಟೈಲರ್‌ನ ಆತ್ಮವಾಗಿತ್ತು. ಆಗ ಚಿತ್ರಗುಪ್ತನು 'ಅಯ್ಯಾ, ನೀನು ಅಲ್ಲೇ ಸ್ವಲ್ಪ ಹೊತ್ತು ಕಾಯಬೇಕು. ನಮ್ಮ ಧಣಿ ಯಮರಾಜರು ಸಂಬಂಧಿಕರ ಮದುವೆಗೆ ಹೋಗಿದ್ದಾರೆ, ಅವರು ಬರುವ ತನಕ ನೀನು ಕಾಯಲೇಬೇಕಾಗಿದೆ' ಎಂದನು.
ಅದನ್ನು ನಿರೀಕ್ಷಿಸಿರದ ಟೈಲರ್ 'ಪ್ರಭು ಚಿತ್ರಗುಪ್ತ, ನಾನು ನನ್ನ ಜೀವಮಾನದಲ್ಲಿ ಎಷ್ಟೊಂದು ಜನರಿಗೆ ಆಗ ಬಾ ಈಗ ಬಾ ಎಂದು ಅವರು ಕೊಟ್ಟ ಬಟ್ಟೆಗಳನ್ನು ಹೊಲಿದು ಕೊಡದೇ ತುಂಬಾ ದಿನಗಳು ಕಾಯಿಸಿ, ಸತಾಯಿಸಿ ತೊಂದರೆ ಕೊಟ್ಟಿದ್ದೇನೆ ನಿಜ. ಆದರೆ ಅದಕ್ಕೆ ಕಾರಣ ನನ್ನಲಿದ್ದ ನೈಪುಣ್ಯ. ನಾನು ಬೇಡ ಬೇಡವೆಂದರೂ ತಾ ಮುಂದು ನಾ ಮುಂದು ಎಂದು ಬಟ್ಟೆ ಕೊಟ್ಟು ಹೋದರೆ ಎರಡು ಕೈಯಲ್ಲಿ ಎಷ್ಟು ಬಟ್ಟೆಗಳನ್ನು ಚಾಣಾಕ್ಷತೆಯಿಂದ ಹೊಲಿದು ಕೊಡಬಹುದು ಹಾಗಾಗಿ ನಾನು ಸತಾಯಿಸುತ್ತಿದ್ದೆ ವಿನಾ ಬೇರೇನೂ ಅಲ್ಲ. ಅದೆಲ್ಲವನ್ನೂ ಲೆಕ್ಕವಿಟ್ಟು ಹೀಗೆ ಇಲ್ಲಿ ನನ್ನ ಒಳಬಿಡದೇ ಕಾಯಿಸುವುದು ಯಾವ ನ್ಯಾಯ ಹೇಳಿ ಪ್ರಭೂ... ಮೊದಲೇ ಗೊತ್ತಿದ್ದರೆ ಇನ್ನೊಂದಿಷ್ಟು ಬಟ್ಟೆ ಹೊಲಿದು ಬರುತ್ತಿದ್ದೆನಲ್ಲ' ಎಂದು ಪ್ರಲಾಪಿಸುತ್ತಿದ್ದ.
ಅಷ್ಟರಲ್ಲಿ ಯಮನ ವಾಹನದ ಸದ್ದು ಕೇಳಿ ಚಿತ್ರಗುಪ್ತನು ಮುಂಬಾಗಿಲನ್ನು ತೆಗೆದು ಹೊರಬಂದ. ಯಮರಾಜನು ಬಂದು ಅಲ್ಲಿ ನಿಂತಿದ್ದ ವ್ಯಕ್ತಿಯನ್ನು ಗಮನಿಸಿದ. ಒಳ ಕರೆದು ತರುವಂತೆ ಚಿತ್ರಗುಪ್ತನಿಗೆ ಸನ್ನೆ ಮಾಡಿದ. ಅಷ್ಟರವರೆಗೆ ಕಾದು ಸುಸ್ತಾಗಿದ್ದ ಟೈಲರ್‌ಗೆ ಸಿಟ್ಟು ಒತ್ತರಿಸಿ ಬಂದು ಯಮರಾಜನಿಗೆ ಕೇಳಿದ; 'ಹುಲು ಮಾನವನಾದ ನಾನೇ ನನ್ನದೇ ಮದುವೆಯ ದಿನ ಒಂದು ಗಂಟೆಯಷ್ಟು ಸಮಯವನ್ನು ಮದುವೆಗೆ ಮೀಸಲಿಟ್ಟು ನಂತರ ನನ್ನ ಕಾಯಕವನ್ನು ಮಾಡಿದ್ದೇನೆ. ನೀನು ಇಡೀ ಜೀವರಾಶಿಯ ಜವಾಬ್ದಾರಿಯನ್ನು ಹೊತ್ತವನು ಹೀಗೆ ಯಾವುದ್ಯಾವುದೋ ಮದುವೆ-ದಿಬ್ಬಣಗಳಿಗಾಗಿ ಕಾಲಹರಣ ಮಾಡುವುದು ಸರಿಯೇ? ಇದು ನಿನ್ನಂಥವನಿಗೆ ಶೋಭಿಸದು. ಈಗ ನನ್ನ ಕೆಲಸವೂ ಹಾಳು, ನಿನ್ನ ಕೆಲಸವೂ ಹಾಳು. ಇನ್ನು ಮೇಲಾದರೂ ಸಮಯದ ಮೌಲ್ಯವನ್ನು ಅರಿತು ಕೆಲಸ ಮಾಡು' ಎಂದು ತರಾಟೆ ತೆಗೆದುಕೊಂಡನು. ಯಮರಾಜನಿಗೆ ಟೈಲರ್‌ನ ಮಾತಿನಲ್ಲಿದ್ದ ಸತ್ಯದ ಅರಿವಾಯಿತು. ನಂತರ ಟೈಲರ್‌ನಲ್ಲಿ ಕ್ಷಮೆ ಯಾಚಿಸಿದ.

= ಚಿತ್ತಾ ಆರಿದ್ರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.