ಯುವಜನ/ಮಕ್ಕಳು

ಬಾಯ್‌ಫ್ರೆಂಡ್ ಇರ್ಲೇಬೇಕಾ?

ಬಾಯ್‌ಫ್ರೆಂಡ್ ಇರ್ಲೇಬೇಕಾ?
Published On :

ರೇಖಾಳ ಬಾಲ್ಯದ ಗೆಳತಿ ಮೀರಾ ಇತ್ತೀಚೆಗೆ ಕೈಗೆ ಸಿಗದಷ್ಟು ಬ್ಯುಸಿ. ಸ್ಕೂಲಿನ ಮೆಟ್ಟಿಲು ಹತ್ತಿದಾಗಿನಿಂದಲೂ ಒಂದೇ ಜೀವ ಎರಡು ದೇಹ ಎಂಬಂತಿದ್ದರು. ಕಾಲೇಜಿಗೆ ಬಂದಾಕ್ಷಣ ನಿಧಾನವಾಗಿ ಮೀರಾ ತನ್ನನ್ನು ದೂರ ಮಾಡುತ್ತಿದ್ದಾಳೆ ಅನಿಸತೊಡಗಿತ್ತು ರೇಖಾಳಿಗೆ. ಕಾರಣ ಹುಡುಕಿದಾಗ ಬಯಲಾದದ್ದು ಮೀರಾ ಪ್ರೇಮ ಪುರಾಣ. ಹೋಗಲಿ ಬಿಡು, ಗೆಳತಿ ಪ್ರೀತಿಯಲ್ಲಿ ಬಿದ್ದಿದ್ದಾಳೆ... ಎಲ್ಲಿ ಹೋದಾಳು. ದಿನಾ ನನ್ನ ಜತೆಗೇ ಅಲ್ವೇ ಕಾಲೇಜಿಗೆ ಹೋಗೋದು, ಬರೋದು ಅನ್ನುವ ಸಮಾಧಾನ ರೇಖಾಳದು. ಈ ಪ್ರೀತಿ ತನ್ನ ಬಾಲ್ಯ ಸ್ನೇಹಕ್ಕೆ ಕೊಳ್ಳಿ ಇಡುತ್ತದೆ ಎಂದೂ ಅನಿಸಿರಲಿಲ್ಲ ರೇಖಾಳಿಗೆ. ಒಂದೂ ಮಾತು ಹೇಳದೆ ಆತನ ಜತೆ ಒಬ್ಬಳೇ ಶಾಪಿಂಗ್, ಪಾರ್ಕು ಅಂತ ಸುತ್ತಾಡುವಾಗಲೂ ತಾನೀಗ ಅವಳಿಗೆ ಬೇಡವಾದೆ ಎನ್ನುವ ನೋವು ಕಾಡಲಿಲ್ಲ. ತನ್ನ ಜತೆಗಿದ್ದಾಗಲೂ ಆತನ ಬಗ್ಗೆ ಆತನ ಕುರಿತೇ ಮಾತನಾಡುತ್ತಿದ್ದಾಗಲೂ ಹೊಟ್ಟೆಕಿಚ್ಚುಪಡಲಿಲ್ಲ.
ಆದರೆ, ಆ ದಿನ ಮಾತ್ರ ಯಾಕೋ ರೇಖಾಳಿಗೆ ಪಿಚ್ಚೆನಿಸಿತು. ಆವತ್ತು ಕಾಲೇಜಿಂದ ಮೀರಾ ಜತೆಗೆ ಖುಷಿಯಿಂದ ಹರಟುತ್ತಾ ಬರುತ್ತಿರುವಾಗ ದಾರಿ ಮಧ್ಯ ಬೈಕಲ್ಲಿ ಬಂದವ ಸ್ವಲ್ಪ ದೂರ ನಿಲ್ಲು... ಮೀರಾ ಜತೆ ಸ್ವಲ್ಪ ಮಾತನಾಡಬೇಕಿದೆ ಅಂದು ಬಿಟ್ಟ. ಅಷ್ಟೇ ಸಾಕಿತ್ತು. ರೇಖಾಳ ಮನಸ್ಸು ಚುರ್ ಅನ್ನತೊಡಗಿತು. ಅವರಿಬ್ಬರೇ ವಾಸವಾಗಿದ್ದ ಮನೆಯ ಬಾಗಿಲನ್ನು ಹೊತ್ತಲ್ಲದ ಹೊತ್ತಲ್ಲಿ ಆತ ತಟ್ಟಿದಾಗಲೂ ಅವರಿಬ್ಬರಿಗೂ ಏಕಾಂತ ಸಿಗಲಿ ಎಂದು ಗಂಟೆಗಟ್ಟಲೆ ಹೊರಗೆ ಕಾಯುವಾಗ ಹೃದಯದೊಳಗೆ ಏನೋ ವಿಚಿತ್ರ ಸಂಕಟ. ಅಲ್ಲಿಯ ವರೆಗೆ ಮೀರಾಳ ಸ್ನೇಹದ ಗುಂಗಿನಲ್ಲೇ ಇದ್ದ ರೇಖಾಳಿಗೆ ಈಗೀಗ ಪ್ರೀತಿಯಲ್ಲೇನೋ ಜಾದೂ ಇದೆ ಅನಿಸತೊಡಗಿದೆ. ನೆನೆದಾಗಲೆಲ್ಲ ಓಡೋಡಿ ಬರುವ ಗೆಳೆಯ ಬೇಕು ಅಂತ ಯಾವತ್ತೂ ರೇಖಾ ಅಂದುಕೊಂಡವಳಲ್ಲ. ಆದರೆ, ನನಗೂ ಒಬ್ಬ ಗೆಳೆಯ ಬೇಕು, ನನ್ನನೇ ಪ್ರೀತಿ ಮಾಡಬೇಕು ಎನ್ನುವ ಭಾವ ರೇಖಾಳಲ್ಲೂ ಬೆಳೆಯಲು ಹತ್ತಿದೆ.
ಮೀರಾಳ ಸಹವಾಸ ಆಕೆಯಲ್ಲಿ ಇಂಥದ್ದೊಂದು ಭಾವನೆ ಬೆಳೆಯಲು ಕಾರಣವಾ ಅಥವಾ ಈ ವಯಸ್ಸೇ ಅಂಥದ್ದಾ?
ಕಾಲೇಜು ಬಿಡಿ... ಈಗ ಹೈಸ್ಕೂಲ್ ಮುಖ ನೋಡಿದ ತಕ್ಷಣ ಬಾಯ್‌ಫ್ರೆಂಡ್ ಇಲ್ಲಾಂದ್ರೆ ಗುಂಪಿಗೆ ಸೇರದ ಪದ ಆಗಿ ಬಿಡುತ್ತಾರೆ. ಬಾಯ್‌ಫ್ರೆಂಡ್ ಇಲ್ಲದ ಹುಡುಗಿಯರನ್ನು ಕೆಲವು ಶಾಲೆಗಳಲ್ಲಿ ಗುಂಪಿಗೇ ಸೇರಿಸಲ್ಲ. ಬಾಯ್‌ಫ್ರೆಂಡ್ ಇಲ್ವಾ ಅಂತಕೇಳಿ ವ್ಯಂಗ್ಯವಾಡುವ ಸಹಪಾಠಿಗಳು, 'ಇಲ್ಲಾ' ಅಂದ್ರೆ ವ್ಯಕ್ತಿತ್ವದಲ್ಲೋ ಏನೋ ದೋಷ ಇದೆ ಎನ್ನುವ ರೀತಿಯಲ್ಲಿ ಮುಸಿ ಮುಸಿ ನಗುವ ಗೆಳತಿಯರ ವ್ಯಂಗ್ಯದಿಂದ ಮುಜುಗರಕ್ಕೊಳಗಾಗುವ ಹುಡುಗಿಯರು ಅದೆಷ್ಟೋ ಮಂದಿ...
ಇದು ಹುಡುಗಿಯರನ್ನಷ್ಟೇ ಅಲ್ಲ, ಹುಡುಗರನ್ನೂ ಕಾಡುವ ಸಮಸ್ಯೆ. ಗರ್ಲ್‌ಫ್ರೆಂಡ್ ಇಲ್ಲ ಅಂದ್ರೆ ವೇಸ್ಟ್‌ಫೆಲೋ ಅನ್ನುವ ಭಾವನೆ ಹಲವು ಶಾಲೆ, ಕಾಲೇಜುಗಳಲ್ಲಿ ಗೆಳೆಯರ ಗುಂಪಿನ ನಡುವೆ ಸೃಷ್ಟಿಸಲಾಗುತ್ತದೆ. ಈಗ ಪ್ರೇಮ, ಫ್ಲರ್ಟ್ ಅಥವಾ ಇನ್ಯಾವುದೇ ಉದ್ದೇಶಕ್ಕಿರಲಿ ಗೆಳೆಯ ಅಥವಾ ಗೆಳತಿ ಇರಲೇಬೇಕಷ್ಟೆ. ಅದೊಂದು ಹೊಸ ಟ್ರೆಂಡ್ ಆಗಿ ಬಿಟ್ಟಿದೆ.
ಗೆಳೆಯ ಅಥವಾ ಗೆಳತಿ ಇಲ್ಲ ಅಂದರೆ ಉಳ್ಳವರ ಎದುರು ಇಲ್ಲದವರ ಸದ್ದು ಅಡಗುತ್ತದೆ. ಛೇಡಿಸುವ ಮಾತುಗಳಿಂದ ಮನಸ್ಸು ಮುದುಡಿ ನೋವನುಭವಿಸುತ್ತದೆ. ಅರಿವಿಗೆ ಬಾರದಂತೆ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ, ಕೀಳರಿಮೆ, ನಿರಾಸೆ ಹುಟ್ಟಿಕೊಳ್ಳುವುದೂ ಇದೆ. ಹದಿಹರೆಯದ ಮಕ್ಕಳು ಕೈತಪ್ಪಿ ಹೋಗುವುದು ಇಲ್ಲೇ. ತನ್ನ ಸುತ್ತಮುತ್ತಲಿನ ಪರಿಸರವನ್ನು ನೋಡಿ ಆ ಕ್ಷಣಕ್ಕೆ ಗೆಳೆಯ ಅಥವಾ ಗೆಳತಿ ಬೇಕು ಅಂತ ಹುಡುಗಾಟಕ್ಕೆ ಬೀಳುತ್ತಾರಲ್ಲ, ಆಗಲೇ ತಮ್ಮ ಕೈಯಾರೆ ತೋಡಿದ ಹಳ್ಳಕ್ಕೆ ಬೀಳೋದು. ಸಿಕ್ಕಿದ ಪ್ರೀತಿಯ ಆಳ- ಅಗಲ ಅರಿಯದೆ ಆಕರ್ಷಣೆಯನ್ನೇ ಪ್ರೀತಿಯೆಂದು ನಂಬಿ ನಿಷ್ಕಲ್ಮಷ ಮನಸ್ಸನ್ನು ಕದೀಮರ ಕೈಗೆ ಇಟ್ಟು ಬಿಡೋದು. ಕದೀಮರು ಇಲ್ಲದ ಪ್ರೀತಿ ತೋರಿಸಿ ನಂತರ ಹುಡುಗಿಯರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. ನಿಮ್ಮ ವ್ಯಕ್ತಿತ್ವಕ್ಕೇ ಮಸಿ ಬಳಿಯುವ ಕೆಲಸ ಮಾಡುತ್ತಾರೆ. ಭವಿಷ್ಯವನ್ನೇ ಕಿತ್ತುಕೊಳ್ಳುತ್ತಾರೆ.
ಈಗ ಹೇಳಿ... ಬಾಯ್‌ಫ್ರೆಂಡ್ ಇಲ್ಲದೆ ಬದುಕೋದು ಕಷ್ಟನಾ? ಹೌದು ಎಂಬ ಉತ್ತರ ನಿಮ್ಮದಾದರೆ ನೀವಿನ್ನೂ ಪ್ರಪಂಚದ ನಿಜ ಮುಖವನ್ನೇ ನೋಡಿಲ್ಲದ ಎಳಸು ಎಂದರ್ಥ. ಓದುವ ಸಮಯದಲ್ಲಿ ಓದೇ ಜತೆಗಾರನಾಗಿದ್ದರೆ ಚೆನ್ನ. ಪ್ರೀತಿ ಸುಂದರ, ಪ್ರಪಂಚ ನಿಜ. ಅರ್ಥ ಮಾಡಿಕೊಳ್ಳುವವರು ಜತೆಗಿದ್ದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. ಹಾಗಂತ ಆಕರ್ಷಣೆಯನ್ನೇ ಪ್ರೀತಿ ಎಂದು ನಂಬಿ ಯಾರ ಮೇಲೂ ಡಿಪೆಂಡ್ ಆಗಿ ಇಮೋಷನಲ್ ಫೂಲ್ ಆಗಬೇಡಿ...


-ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.