ಜೋಕ್ಫೇಲೆ

ಇದು ಖಂಡಿತಾ ತಮಾಷೆಯ ವಿಚಾರ ಅಲ್ಲ!
ಆಕೆ ದ್ವಿತೀಯ ಪಿಯುಸಿ ಹುಡುಗಿ. ಮೊನ್ನೆ ಮೊನ್ನೆ ನಡೆದ ಪರೀಕ್ಷೆಯನ್ನು ಚೆನ್ನಾಗಿಯೇ ಎದುರಿಸಿದ್ದಳು. ಆದರೆ ಫಲಿತಾಂಶದ ದಿನ ಒಳಗೊಳಗೆ ಏನೋ ತಳಮಳ, ಅಂಜಿಕೆ. ಎಲ್ಲಿ ಫೇಲಾಗ್ತೀನೋ, ಕಡಿಮೆ ಅಂಕ ತೆಗೆದುಕೊಳ್ತೀನೋ ಅನ್ನೋ ಆತಂಕ. ಇವಳ ವಯಸ್ಸಿನ ಹುಡುಗ- ಹುಡುಗಿಯರಲ್ಲಿರುವ ಸಹಜ ಮನೋ ಪ್ರವೃತ್ತಿಯಿದು. ನಮ್ಮ ಈಗಿನ ಶಿಕ್ಷಣ, ಪೋಷಕರು, ಸುತ್ತಮುತ್ತಲ ಪರಿಸರ ಬಿತ್ತುತ್ತಿರುವ ಆತಂಕದ ಬೀಜದ ಫಲ ಇದು. ಪರೀಕ್ಷೆಯಲ್ಲಿ ತೆಗೆಯುವ ಅಂಕಗಳ ಮೇಲೆಯೇ ನಮ್ಮ ಭವಿಷ್ಯ ರೂಪುಗೊಳ್ಳುತ್ತದೆ ಎಂಬುದನ್ನು ಅವರು ಪದೇಪದೆ ನೆನಪಿಸುತ್ತಲೇ ಇರುತ್ತಾರೆ. ಹಾಗಿರುವಾಗ ವಿದ್ಯಾರ್ಥಿಗಳು ಇಂಥದ್ದೊಂದು ಮನೋಭಾವ ಬೆಳೆಸಿಕೊಂಡಿದ್ದರೆ ಅದರಲ್ಲಿ ವಿಶೇಷವೇನೂ ಇಲ್ಲ.
ಈ ಹುಡುಗಿಯೂ ಹಾಗೆಯೇ ಇದ್ದಳು. ಮೊನ್ನೆ ಪಿಯುಸಿ ಪರೀಕ್ಷೆ ಪ್ರಕಟವಾದಾಗ ಬಹುತೇಕ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಗೆಳೆಯ, ಗೆಳತಿಯರ ಜತೆಗೆ ಇಂಟರ್ನೆಟ್ ಸೆಂಟರ್ ಮುಂದೆ ಜಮಾಯಿಸಿದ್ದರೆ ಈ ಹುಡುಗಿ ಮಾತ್ರ ಮನೆಯಲ್ಲೇ ಇದ್ದಳು. ಆದರೆ, ಈಕೆಯ ಹಾಲ್ಟಿಕೆಟ್ ನಂಬರ್ ಪಡೆದುಕೊಂಡಿದ್ದ ಸಂಬಂಧಿಕರೊಬ್ಬರು ವೆಬ್ಸೈಟ್ನಲ್ಲೇ ಈಕೆಯ ಫಲಿತಾಂಶ ನೋಡಿದ್ದಾರೆ. ಫಲಿತಾಂಶ ನೋಡಿದ್ದೇ ತಡ ಈಕೆಗೆ ಕರೆ ಮಾಡಿ 'ನೀನು ಫೇಲ್ ಆಗಿದ್ದೀಯಾ ಕಣೇ' ಎಂದಿದ್ದಾರೆ. ಆ ಹುಡುಗಿಯನ್ನು ಸ್ವಲ್ಪ ಕಾಡಿಸಿ ಖುಷಿ ಪಡೆಯುವುದಷ್ಟೇ ಅವರ ಉದ್ದೇಶವಾಗಿತ್ತು.
ವಿಪರ್ಯಾಸ ಅಂದರೆ ಇಷ್ಟು ಮಾತು ಹೇಳುವಾಗಲೇ ಮೊಬೈಲ್ ನೆಟ್ವರ್ಕ್ ಕಡಿತಗೊಂಡಿತ್ತು. ಅವರು ಹೇಳಬೇಕಾದ ಖುಷಿಯ ವಿಚಾರ ಬಾಯಲ್ಲೇ ಉಳಿದಿತ್ತು. ಆದರೆ, ಈ ಕಡೆಯಿಂದ 'ಫೇಲಾಗಿದ್ದೀಯ' ಅನ್ನುವ ಮಾತು ಕೇಳಿಸಿಕೊಂಡಿದ್ದ ಹುಡುಗಿ ಆಘಾತಕ್ಕೊಳಗಾಗಿದ್ದಳು. ಮಾನ, ಬದುಕು ಕಳೆದುಕೊಂಡ ಭಾವದಲ್ಲಿದ್ದ ಈ ಅಮಾಯಕ ಬಾಲಕಿ ಅಷ್ಟರಲ್ಲಾಗಲೇ ತನ್ನ ಭವಿಷ್ಯಕ್ಕೆ ಷರಾ ಹೊಡೆಯಲು ನಿರ್ಧರಿಸಿ ಬಿಟ್ಟಿದ್ದಳು.
ಇದ್ಯಾವುದರ ಅರಿವೇ ಇಲ್ಲದ ಸಂಬಂಧಿ ಆ ಕಡೆಯಿಂದ ಈ ಹುಡುಗಿ ಫಸ್ಟ್ ಕ್ಲಾಸಲ್ಲಿ ಪಾಸ್ ಆದ ವಿಚಾರ ತಿಳಿಸಲು ಹಲವು ಬಾರಿ ಕರೆ ಮಾಡಿದ್ದಾರೆ. ಈಕೆ ಕರೆ ಸ್ವೀಕರಿಸದಾಗ ಆತಂಕಗೊಂಡು ಮನೆಯತ್ತ ಓಡೋಡಿ ಬಂದಿದ್ದಾರೆ. ಹುಡುಗಿಗಾಗಿ ಇಡೀ ಮನೆಯನ್ನು ಹುಡುಕಾಡಿದ್ದಾರೆ. ಆದರೆ, ಈ ಹುಡುಗಿ ಪತ್ತೆಯೇ ಇಲ್ಲ. ಕೊನೆಗೆ ಈ ಹುಡುಗಿ ಸಿಕ್ಕಿದ್ದು ಮನೆ ಪಕ್ಕದ ಬಾವಿಯಲ್ಲಿ ಶವವಾಗಿ! ಆ ಒಂದು ತಮಾಷೆಯ ಕರೆ ಫಸ್ಟ್ಕ್ಲಾಸ್ನಲ್ಲಿ ಪಾಸಾಗಿದ್ದರೂ ಈ ವಿದ್ಯಾರ್ಥಿನಿಯ ಬದುಕನ್ನೇ ಬಲಿ ಪಡೆದಿತ್ತು. ಬಹುಶಃ ಆ ರೀತಿ ತಮಾಷೆಯ ಕರೆ ಮಾಡಿದ ವ್ಯಕ್ತಿಗೂ ತನ್ನದೊಂದು ತಮಾಷೆಯ ಪರಿಣಾಮ ಇಷ್ಟೊಂದು ದುರಂತಮಯವಾಗಿರುತ್ತದೆ ಎಂದು ಖಂಡಿತಾ ಅಂದುಕೊಂಡಿರಲಿಕ್ಕಿಲ್ಲ.
ಈಗ ಹೇಳಿ... ಇದು ತಮಾಷೆಯ ವಿಚಾರವೇ? ಜೀವನದಲ್ಲಿ ತಮಾಷೆ, ಫನ್, ಹುಡುಗಾಟಿಕೆ ಇರಲೇಬೇಕು. ಆದರೆ, ಪ್ರತಿಯೊಂದಕ್ಕೂ ವಿಚಾರಕ್ಕೂ ಇರುವಂತೆ ಅದಕ್ಕೂ ಒಂದು ಇತಿಮಿತಿ ಇರಬೇಕು. ಅನೇಕ ಬಾರಿ ನಾವು ತಮಾಷೆ ಮಾಡುವಾಗ ವ್ಯಕ್ತಿ, ಸಂದರ್ಭವನ್ನೂ ಪರಿಗಣಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಸೂಕ್ಷ್ಮ ಮನಸ್ಥಿತಿಯ ವ್ಯಕ್ತಿಗಳ ಮುಂದೆ ತಮಾಷೆ ಮಾಡುವಾಗ ತುಸು ಹೆಚ್ಚೇ ಜಾಗರೂಕರಾಗಿರಬೇಕು. ಅಷ್ಟಕ್ಕೂ ನಮಗೆ ತಮಾಷೆ ಅನಿಸಿದ್ದು ಅವರಿಗೆ ತಮಾಷೆಯಾಗಿ ಕಾಣಬೇಕೆಂದೇನೂ ಇಲ್ಲವಲ್ಲ.
ಒಂದು ಸಣ್ಣ ತಮಾಷೆಯನ್ನೇ ಅವರು ಗಂಭೀರವಾಗಿ ತೆಗೆದುಕೊಳ್ಳಬಹುದು. ಹಿಂದೆ- ಮುಂದೆ ಯೋಚಿಸದೆ ದುಡುಕು ನಿರ್ಧಾರಗಳಿಗೆ ಕೈ ಹಾಕಬಹುದು. ಸಂಬಂಧ, ಬದುಕಿನಲ್ಲಿ ತಮಾಷೆಗಳಿರಬೇಕು ನಿಜ. ಹಾಗಂತ ತಮಾಷೆಯೇ ಬದುಕು, ಸಂಬಂಧಗಳನ್ನು ಕಿತ್ತುಕೊಳ್ಳುವಂತಾಗಬಾರದು. ಅಷ್ಟಕ್ಕೂ ತಮಾಷೆಯ ಉದ್ದೇಶ ಪ್ರೀತಿಪಾತ್ರರನ್ನು ಖುಷಿಪಡಿಸುವುದು... ದುಃಖಕ್ಕೆ ದೂಡುವುದಲ್ಲ ಅಲ್ವಾ...?
- ಅಜಿತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


