ಯುವಜನ/ಮಕ್ಕಳು

ಆ ಸಾವು ನಮ್ಮ ಎದೆ ತಟ್ಟಿತು...

ಆ ಸಾವು ನಮ್ಮ ಎದೆ ತಟ್ಟಿತು...
Published On :

ಕ್ಯಾಂಪಸ್‌ನಲ್ಲಿ ಅಡ್ಡಾದಿಡ್ಡಿಯಾಗಿ ಅಲೆದಾಡುತ್ತಿದ್ದ ಸಂದರ್ಭದಲ್ಲಿ ನಾವು ಸಾವಿನ ಸುದ್ದಿಯನ್ನು ಟ್ರೀಟ್ ಮಾಡುವ ಪರಿಯೇ ಬೇರೆಯಾಗಿತ್ತು. ಜಗತ್ತು ಸಾವನ್ನು ನೋವೆಂದು ಸ್ವೀಕರಿಸಿದರೆ ನಾವು ಸಾವಿಗೂ ಸಂಭ್ರಮ ಲೇಪಿಸುತ್ತಿದ್ದೆವು.
ಯಾರಾದರೂ ಗಣ್ಯರು ಮೃತಪಟ್ಟರೆ ನಮ್ಮ ತಲೆಯಲ್ಲಿ ಓಡುತ್ತಿದ್ದ ಮೊದಲ ಯೋಚನೆ ಅಂದರೆ 'ಕಾಲೇಜಿಗೆ ರಜೆ ಘೋಷಿಸುತ್ತಾರೋ, ಇಲ್ವೋ ಅನ್ನೋದು. ಅಪ್ಪಿತಪ್ಪಿ ಕಾಲೇಜಿಗೆ ರಜೆ ಇದ್ದ ದಿನವೇ ಯಾರಾದರೂ ಗಣ್ಯ ವ್ಯಕ್ತಿ ಸತ್ತರೆ ನಮ್ಮ ಪಾಲಿಗದು ಬೇಸರದ ಸುದ್ದಿ. ಅನ್ಯಾಯವಾಗಿ ಒಂದು ರಜೆ ಮಿಸ್ ಆಯ್ತಲ್ಲ ಅನ್ನುವುದೇ ಬೇಸರಕ್ಕೆ ಕಾರಣ.
ಬಿಇ ಓದುತ್ತಿದ್ದಾಗ ನಮ್ಮ ಕಾಲೇಜು ಲೆಕ್ಚರರ್ ಒಬ್ಬರು ಅಕಾಲಿಕ ಸಾವಿಗೀಡಾದರು. ಅವರ ಸಾವಿನ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅದಾದ ಕೆಲವೇ ದಿನಗಳ ನಂತರ ಮತ್ತೊಬ್ಬ ಉಪಾಧ್ಯಾಯರು ಮೃತಪಟ್ಟಿದ್ದಾರೆ ಎನ್ನುವ ಗಾಳಿ ಸುದ್ದಿ ಬೆಳ್ಳಂಬೆಳಗ್ಗೆ ಎಲ್ಲರ ಮೊಬೈಲ್‌ಗಳ ಇನ್‌ಬಾಕ್ಸ್‌ಗೆ ಬಂದು ಬಿದ್ದಿತ್ತು. ಆ ಸುದ್ದಿ ನಿಜವೆಂದು ನಂಬಿದ್ದ ಹಲವರು ಅಂದು ಕಾಲೇಜಿಗೆ ರಜೆ ಘೋಷಿಸುತ್ತಾರೆ ಎಂದೇ ಭಾವಿಸಿದ್ದರು. ಹಾಗೆ ಸುಮ್ಮನೆ ಕಾಲೇಜಿಗೆ ಒಂದು ವಿಸಿಟ್ ಕೊಟ್ಟು ಹೋಗೋಣವೆಂದು ಬಂದಿದ್ದರು. ಕಾಲೇಜಿಗೆ ಬಂದ ಮೇಲೆ ಅವರ ನಿರೀಕ್ಷೆಗಳೆಲ್ಲ ತಲೆಕೆಳಗಾಗಿದ್ದವು. ಅವರು ನಿಧನರಾಗಿದ್ದಾರೆಂದೇ ಭಾವಿಸಿದ್ದ ಲೆಕ್ಚರರ್ ಕೈಯಲ್ಲಿ ಡಸ್ಟರ್, ಚಾಕ್ ಪೀಸ್ ಹಿಡಿದು ಕ್ಲಾಸ್ ತೆಗೆದುಕೊಳ್ಳಲು ಆಗಮಿಸಿದಾಗ ಶಾಕ್. ರಜೆಯ ನಿರೀಕ್ಷೆಯಲ್ಲಿದ್ದವರ ತಲೆಗೆ ತಣ್ಣೀರು ಎರಚಿದಂತಾಗಿತ್ತು. ಆ ಮೆಸೇಜ್ ಕಳುಹಿಸಿದವನಿಗೆ ಸಾಕಷ್ಟು ಶಾಪಹಾಕಿದ್ದರು.
ಕಾಲೇಜಿನಲ್ಲಿ ಓದುವ ಸಂದರ್ಭದಲ್ಲೂ ಹಾಗೆ ಗೆಳೆಯರೊಡನೆ ಮಾತನಾಡುವಾಗ ಸಾಯೋದ್ ಸಾಯ್ತೀಯ... ಬೆಳಗ್ಗೆಯಿಂದ ಸಂಜೆವರೆಗೂ ಕ್ಲಾಸ್ ಇರೋ ದಿನನಾದ್ರೂ ಸಾಯಿ... ಈ ನನ್ಮಗ ಸತ್ರೆ ನಮ್ಗೆ ಒಂದು ದಿನ ರಜೆನಾದ್ರೂ ಸಿಗುತ್ತೆ... ಅಂತೆಲ್ಲ ಹೇಳುವುದು ಮಾಮೂಲಿಯಾಗಿತ್ತು. ನಾವು ಸಾವನ್ನು ಗಂಭೀರವಾಗಿ ತೆಗೆದುಕೊಂಡವರೇ ಅಲ್ಲ. ಆದರೆ, ಅವರಿವರ ಸಾವಿನ ಕುರಿತು ಉಡಾಫೆಯಿಂದ ಮಾತನಾಡುತ್ತಿದ್ದ ನಮಗೆ, ಎಕ್ಸಾಂನಲ್ಲಿ ಫೇಲ್, ಕ್ಯಾಂಪಸ್ ಸೆಲೆಕ್ಷನ್ ಆಗ್ಲಿಲ್ಲ, ಲವ್ ಫೈಲ್ಯೂರ್ ಅನ್ನೋ ಕಾರಣಕ್ಕೆ ನಮ್ಮ ನಡುವೆ ಅಡ್ಡಾಡಿಕೊಂಡಿದ್ದ ಗೆಳೆಯ ಇದ್ದಕ್ಕಿದ್ದಂತೆ ಬಾರದ ಲೋಕಕ್ಕೆ ಹೋದಾಗ ಮಾತ್ರ ಆಘಾತವಾಗಿತ್ತು. ಸಾವಿನ ಸುತ್ತ ಹರವಿಕೊಂಡಿರುವ ನೋವಿನ ತೀವ್ರತೆಯ ಪರಿಚಯ ಮೊದಲ ಬಾರಿಗೆ ಆಗಿತ್ತು.

-  ಎಚ್.ಕೆ. ಶರತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.