ಅದೊಂದು ಸಂತಸದ ಸಂತೆ
ಕಾಲೇಜಿನಲ್ಲಿ ಓದುತ್ತಿದ್ದಾಗ ನಿತ್ಯ ಜೈಲಿಗೆ ಹೋಗಿ ಬಂದಂತೆ ಭಾಸವಾಗುತ್ತಿತ್ತು. ಆದರೀಗ ಓದು ಮುಗಿಸಿ, ಕೆಲಸಕ್ಕೆ ಸೇರಿದ ನಂತರ...

ಕಾಲೇಜಿನಲ್ಲಿ ಓದುತ್ತಿದ್ದಾಗ ನಿತ್ಯ ಜೈಲಿಗೆ ಹೋಗಿ ಬಂದಂತೆ ಭಾಸವಾಗುತ್ತಿತ್ತು. ಆದರೀಗ ಓದು ಮುಗಿಸಿ, ಕೆಲಸಕ್ಕೆ ಸೇರಿದ ನಂತರ, ಆ ಜೈಲುವಾಸ ನಮ್ಮ ಜೀವನದ ಅತ್ಯಮೂಲ್ಯ ದಿನಗಳೆಂಬುದು ಅರಿವಾಗುತ್ತದೆ. ಬಿಡುವಿಲ್ಲದೆ ಕೆಲಸ ಮಾಡುವಾಗ ಕಾಲೇಜಿನ ಆ ಮೋಜು ನೆನಪಾಗುತ್ತದೆ. ಗಡಿಬಿಡಿಯಲ್ಲಿ ಬಾಯಿಗೆರಡು ಬಿಸ್ಕತ್ತುಗಳನ್ನು ತುರುಕಿಸಿ ಮತ್ತೆ ಕೆಲಸದತ್ತ ಓಡುತ್ತಿರುವಾಗ ಕಾಲೇಜು ಕ್ಯಾಂಟೀನ್ನಲ್ಲಿ ಹರಟೆ ಹೊಡೆಯುತ್ತಾ ಕಾಲಹರಣ ಮಾಡಿತ್ತಾ ಕುಳಿತ ಘಳಿಗೆ ನೆನಪಾಗುತ್ತವೆ. ಬಸ್ಸಿನಲ್ಲಿ ಚಿಲ್ಲರೆಗಾಗಿ ನಿರ್ವಾಹಕರ ಜತೆ ನಿತ್ಯ ಚರ್ಚಿಸುವಾಗ ಗೆಳೆಯರ ಜತೆ ಮಾತನಾಡುತ್ತಾ ಕಾಲೇಜಿಗೆ ಕಿಲೋಮೀಟರ್ಗಟ್ಟಲೆ ನಡೆದುಕೊಂಡೇ ಹೋದ ದಿನಗಳು ನೆನಪಾಗುತ್ತವೆ. ರಜೆಗಾಗಿ ಬಾಸ್ ಜತೆ ಅಂಗಲಾಚಿದಾಗ ಗೆಳೆಯರನ್ನು ಭೇಟಿ ಮಾಡಲು ರಜಾ ದಿನಗಳಲ್ಲೂ ಸ್ಪೆಶಲ್ ಕ್ಲಾಸಿದೆ ಎಂದು ಮನೆಯಲ್ಲಿ ರೀಲು ಬಿಟ್ಟು ಕಾಲೇಜಿಗೆ ತೆರಳಿದ ದಿನಗಳು ನೆನಪಾಗುತ್ತವೆ. ನೆನಪುಗಳು ಒಂದೋ, ಎರಡೋ! ಹೀಗೇ ಆಗೊಮ್ಮೆ ಈಗೊಮ್ಮೆ ನೆನಪುಗಳು ನಮ್ಮ ಬಿಜೀ ಜೀವನದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದಾಗ ಸಂತಸದ ಆ ದಿನಗಳು ಕಣ್ಣೀರು ತರಿಸುತ್ತವೆ, ಅಲ್ಲವೇ?
ಕಾಲೇಜಿನಲ್ಲಿದ್ದಾಗ ಬಿಂದಾಸ್ ಆಗಿದ್ದ ನಾವುಗಳು ಉದ್ಯೋಗ ಸಿಕ್ಕ ಕೂಡಲೇ ಗೌತಮ್ ಗಂಭೀರರಾಗಿ ಬಿಡುತ್ತೇವೆ. ನಗಲು ಕಾರಣ ಹುಡುಕುತ್ತೇವೆ. ತಲೆ ನೋವು, ಸಮಸ್ಯೆ ಮತ್ತು ಕೆಲಸದೊತ್ತಡವನ್ನು ಮನೆಗೂ ಕೊಂಡೊಯ್ಯುತ್ತೇವೆ. ಕಾಲೇಜಿನಲ್ಲಿ ಆಡಿದ ಜಗಳ ಎರಡು ನಿಮಿಷಗಳ ನಂತರ ಮರತೇ ಹೋಗುತ್ತದೆ. ಆದರೆ ಪ್ರೌಢರಾದ ಮೇಲೆ ದ್ವೇಷ ವರ್ಷಗಟ್ಟಲೆ ಸಾಧಿಸುತ್ತಿರುತ್ತೇವೆ. ಕೋಪಕ್ಕೆ ನೀರುಣಿಸುತ್ತೇವೆ. ಆ ಮುಗ್ಧತೆ ಎಲ್ಲಿ ಹೋಯಿತು? ಈ ಕ್ರೋಧ ಎಲ್ಲಿಂದ ಬಂತು? ಆ ದೇವರೇ ಬಲ್ಲ!
ನಾಚಿಕೆ ಮತ್ತು ಹೆದರಿಕೆ ಎಂಬ ಪದಗಳು ನಮ್ಮ ನಿಘಂಟಿನಲ್ಲಿ ಇರಲೇ ಇಲ್ಲ. ಇಲ್ಲಿದೆ ಉದಾಹರಣೆ- ತರಗತಿಗೆ ಒಳ ನುಗ್ಗುವಷ್ಟರಲ್ಲೇ ನನ್ನ ಚಪ್ಪಲಿ ತುಂಡಾಯಿತು. ಉಪನ್ಯಾಸಕರು ಐದು ನಿಮಿಷ ಮೊದಲೇ ಬಂದಿದ್ದರು. ಬಾಗಿಲ ಬಳಿ ದ್ವಾರಪಾಲಕನಂತೆ ನಿಂತಿದ್ದ ನನ್ನನ್ನು ನೋಡಿ 'ಬಾರಮ್ಮ ಒಳಗೆ, ಯಾಕೆ ಅಲ್ಲೇ ನಿಂತಿದ್ದೀಯಾ?' ಎಂದರು ಉಪನ್ಯಾಸಕರು. ಕಾಲು ಮುಂದೆ ಮಾಡಿದರೆ ಚಪ್ಪಲಿ ಅಲ್ಲೇ ಬಾಕಿ! ಕಾಲಲ್ಲೇ ಎಳೆದುಕೊಂಡು ಹೋಗೋಣವೆಂದರೆ ಚಪ್ಪಲಿ ನನ್ನ ಮಾತು ಕೇಳಬೇಕಲ್ಲವೇ? ನಾನು ಪಡುತ್ತಿದ್ದ ಪಾಡು ಉಪನ್ಯಾಸಕರಿಗೆ ಅರ್ಥವಾಗುತ್ತಿರಲಿಲ್ಲ. ಸರ್ಕಸ್ ಮಾಡಿದ್ದು ಸಾಕು ಎಂದುಕೊಂಡು ಕೈಯಲ್ಲಿ ಚಪ್ಪಲಿ ಎತ್ತಿಕೊಂಡು ತರಗತಿ ಪ್ರವೇಶಿಸಿದೆ. ತರಗತಿಯಲ್ಲಿ ಸಂಪೂರ್ಣ ಮೌನ! ಉಪನ್ಯಾಸಕರು ಕಕ್ಕಾಬಿಕ್ಕಿ. ನಾನು ಅವರನ್ನು ಥಳಿಸಲು ಬಂದೆಯೆಂದುಕೊಂಡು 'ಯಾಕಮ್ಮ?' ಎಂದು ಭಯದಿಂದ ಕೇಳಿದರು. 'ಸರ್, ಚಪ್ಪಲಿ ತುಂಡಾಯಿತು' ಎಂದು ನಗುತ್ತಾ ಹೇಳಿದಾಗ ನನ್ನ ಸಹಪಾಠಿಗಳೆಲ್ಲ ಗಹಗಹಿಸಿ ನಕ್ಕರು. ಅದಾದ ಬಳಿಕ ಚಪ್ಪಲಿ ಹಿಡಿದು ತರಗತಿಗೆ ಬಂದವಳೆಂದೇ ಕಾಲೇಜಿನಲ್ಲಿ ನಾನು ಫೇಮಸ್ ಆದೆ. ಈಗ ಚಪ್ಪಲಿ ತುಂಡಾದರೆ, ಹೊಸ ಚಪ್ಪಲಿ ಕೊಂಡುಕೊಂಡೇ ಕೆಲಸಕ್ಕೆ ಹೋಗುವಷ್ಟು ಬದಲಾಗಿದ್ದೇವೆ. ಈಗಲೂ ಗೆಳೆಯರು ಆ ಘಟನೆಯನ್ನು ನೆನಪಿಸಿ ನಗುತ್ತಾರೆ. ಆದರೆ ಬೇಕೆಂದರೂ ಮತ್ತೆ ಮರಳಿ ಹೋಗಲಾಗುವುದಿಲ್ಲ ಆ ಸಮಯಕ್ಕೆ. ಎಲ್ಲಿ ಹೋದವು ಆ ದಿನಗಳು? ಎಲ್ಲಿ ಹೋದವು...
- ಅದಿತಿಮಾನಸ ಟಿ.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


