ಹಾರುವ ಆಸೆಯ ಮೀನು
ಕೊಳವೊಂದರಲ್ಲಿ ಅನೇಕ ಮೀನುಗಳಿದ್ದವು. ಅವುಗಳಲ್ಲಿ ಯುವಕ ಮೀನೊಂದಿತ್ತು. ಅದು 'ಹಠಮಾರಿ ಮೀನು' ಎಂದೇ ಪ್ರಖ್ಯಾತವಾಗಿತ್ತು...

ಕೊಳವೊಂದರಲ್ಲಿ ಅನೇಕ ಮೀನುಗಳಿದ್ದವು. ಅವುಗಳಲ್ಲಿ ಯುವಕ ಮೀನೊಂದಿತ್ತು. ಅದು 'ಹಠಮಾರಿ ಮೀನು' ಎಂದೇ ಪ್ರಖ್ಯಾತವಾಗಿತ್ತು. ತನ್ನ ಯೋಚನೆ ಲಹರಿಗಳೇ ಬೇರೆ. ವಿಭಿನ್ನವಾಗಿ ಯೋಚಿಸುತ್ತಿತ್ತು, ಅಲ್ಲದೆ ಹಿರಿಯರ ಮಾತು ಕೇಳದೆ ತನಗೆ ಅನಿಸಿದ್ದನ್ನು ಮಾಡಿಯೇ ತೀರುತ್ತಿತ್ತು. ಹೀಗಿರುವಾಗ ನಾವ್ಯಾಕೆ ಇಲ್ಲಿ ಹೀಗೆ ನೀರಲ್ಲಿ ಈಜುತ್ತಾ ಬದುಕಬೇಕು? ನಾವು ಕೂಡ ಹಕ್ಕಿಗಳಂತೆ ಆಕಾಶದಲ್ಲಿ ಹಾರಾಡಬಾರದೇಕೆ? ಎಂಬೆಲ್ಲ ಹಗಲುಗನಸುಗಳನ್ನು ಕಾಣತೊಡಗಿತು. ತಡ ಮಾಡದೇ ಅಜ್ಜಿ ಮೀನಿನ ಬಳಿ ಹೋಗಿ 'ಅಜ್ಜಿ, ನನಗೂ ಬಾನಿನಲ್ಲಿ ಹಕ್ಕಿಯಂತೆ ಹಾರುವ ಆಸೆ ಆಗುತ್ತಿದೆ, ಇದು ಸಾಧ್ಯವೇ?' ಎಂದಿತು. ಈ ಮಾತನ್ನು ಕೇಳಿ ಅಜ್ಜಿ ಮೀನು, 'ಬೇಡ ಮಗೂ, ಅಂಥಾ ಆಸೆಯನ್ನು ಇಟ್ಕೋಬಾರದು, ನಾವು ನೀರನ್ನು ಬಿಟ್ಟು ಕ್ಷಣವೂ ಇರಲಾರೆವು..' ಎಂದು ಬುದ್ಧಿವಾದ ಹೇಳಿತು. ಆದರೂ ಆ ಹಠಮಾರಿ ಮೀನಿಗೆ ಈ ಬುದ್ಧಿಮಾತು ರುಚಿಸಲಿಲ್ಲ. ಹೇಗಾದರೂ ಮಾಡಿ ಆಗಸದಲ್ಲಿ ಹಾರಾಡಲೇಬೇಕೆಂದು ನಿರ್ಧರಿಸಿತು.
ಒಂದು ದಿನ ಮಧ್ಯಾಹ್ನದ ವೇಳೆ ಹದ್ದೊಂದು ಬಾಯಾರಿಕೆ ನೀಗಿಸಿಕೊಳ್ಳಲು ಕೊಳದ ದಂಡೆಗೆ ಬಂದು ನೀರು ಕುಡಿಯುತ್ತಿತ್ತು. ಇದನ್ನು ಕಂಡ ಹಠಮಾರಿ ಮೀನು ಹದ್ದಿನ ಹತ್ತಿರ ಬಂದು 'ಹದ್ದಣ್ಣಾ.. ಹದ್ದಣ್ಣಾ.. ನೀನು ದಿನಾಲು ಮೇಲೆ ಆಗಸದಲ್ಲಿ ಹಾರಾಡುತ್ತಿರುವೆಯಲ್ಲ, ನನಗೂ ನಿನ್ನ ಹಾಗೇ ಹಾರುವಾಸೆ...' ಎಂದಿತು. ಹದ್ದಿಗೆ ಈ ಮೀನಿನ ಮಾತು ಕೇಳಿ ನಗು ಬಂತು. 'ಸರಿ ಈಗ ನಿನ್ನ ಆಸೆ ಈಡೇರಲು ನಾನೇನು ಮಾಡಬೇಕು ಹೇಳು.' ಎಂದಿತು. ಪೋರ ಮೀನು ಕೂಡಲೇ 'ಹದ್ದಣ್ಣಾ, ನಿನ್ನ ರೆಕ್ಕೆಗಳ ಮಧ್ಯೆ ನನ್ನ ಕೂರಿಸಿಕೊಂಡು ಆಕಾಶದಲ್ಲಿ ಹಾರಬಹುದಲ್ವಾ?', 'ಆಯ್ತಪ್ಪಾ, ನಿನ್ನ ಆಸೆ ಅಷ್ಟೆ ತಾನೇ, ಹಾಗೇ ಮಾಡ್ತೀನಿ ಬಾ' ಎಂದಿತು. ಆದರೆ ಒಂದು ಶರತ್ತು ನನ್ನನ್ನು ತಿನ್ನುವುದಿಲ್ಲವೆಂದು ಮಾತು ಕೊಟ್ಟರೆ ಮಾತ್ರ ನಾನು ನಿನ್ನೊಂದಿಗೆ ಬರೋದು.' ಎಂದು ತನ್ನ ಜಾಣ್ಮೆಯನ್ನು ತೋರಿಸಿತು. 'ಹಾಗೇ ಆಗಲಿ ಮಾರಾಯಾ, ಬಾ ನಿನ್ನ ಆಸೆ ಈಡೇರಿಸಿಕೋ ಎಂದು ಆ ಮೀನನ್ನು ತನ್ನ ರೆಕ್ಕೆಗಳ ಮಧ್ಯೆದಲ್ಲಿ ಕೂರಿಸಿಕೊಂಡು ಸರ್ರನೆ ಆಕಾಶಕ್ಕೆ ಚಿಮ್ಮಿತು. ಮೀನಿಗೆ ತನ್ನ ಆಸೆ ಪೂರೈಸಿತಲ್ಲ ಎಂದು ಬಿಟ್ಟ ಕಣ್ಣು ಬಿಟ್ಟ ಹಾಗೆ ಗಿಡ, ಮರ, ಬೆಟ್ಟ, ನೀಲಾಕಾಶ ಎಲ್ಲವನ್ನು ನೋಡಿ ಸ್ವರ್ಗವೇ ತನ್ನ ಕೈಗೆ ಸಿಕ್ಕಿತೆಂದು ಖುಷಿಯಲ್ಲಿ ಕುಣಿಯತೊಡಗಿತು. ನೀರಿನಿಂದ ಹೊರಬಂದಿದ್ದರಿಂದ ಉಸಿರಾಟದ ತೊಂದರೆ ಕಾಡತೊಡಗಿತು. ಅರೆ ಕ್ಷಣದಲ್ಲೇ ಆಯತಪ್ಪಿ ಹದ್ದಿನ ರೆಕ್ಕೆಯಿಂದ ಜಾರಿತು. ಜಾರಿ ತರಗೆಲೆಯಂತೆ ತೇಲಾಡಿ ನೆಲಕ್ಕೆ ಬಡಿಯಿತು. ಮರುಕ್ಷಣದಲ್ಲೆ ವಿಲವಿಲ ಒದ್ದಾಡಿ ತನ್ನ ಪ್ರಾಣಬಿಟ್ಟಿತು. ಹದ್ದು ಎಲ್ಲವನ್ನು ಗಮನಿಸುತ್ತ ಮೂಕ ಪ್ರೇಕ್ಷಕನಾಯಿತು.
-ಅಮರಯ್ಯ ಪತ್ರಿಮಠ, ಸುರಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


