ಯುವಜನ/ಮಕ್ಕಳು

ಬೊಂಬೆಯ ಮದುವೆ

ರಾಜಾರಾಯರ ಒಬ್ಬಳೇ ಮಗಳು ರಾಗಿಣಿಯ ಮದುವೆಗೆ ಹೊರಡಲು ಮನೆಯ ಮುಂದೆ ಬಸ್ಸು ಬಂತು. ಮನೆಯವರೂ, ಬಂಧುಗಳು...

ಬೊಂಬೆಯ ಮದುವೆ
Published On :

ರಾಜಾರಾಯರ ಒಬ್ಬಳೇ ಮಗಳು ರಾಗಿಣಿಯ ಮದುವೆಗೆ ಹೊರಡಲು ಮನೆಯ ಮುಂದೆ ಬಸ್ಸು ಬಂತು. ಮನೆಯವರೂ, ಬಂಧುಗಳು ಎಲ್ಲರು ಹತ್ತಿದರೂ ಮುಕ್ಕಾಲು ಭಾಗ ಖಾಲಿಯೇ ಇತ್ತು. 'ಅಯ್ಯೋ ಇಷ್ಟೊಂದು ಖಾಲಿ ಇದೆ' ಅಂತ ಯಾರೋ ಅಂದರು. ಈ ಮಾತು ರಾಗಿಣಿ ಬಾಲ್ಯದಲ್ಲಿ ಆಡುತ್ತಿದ್ದ ಬೊಂಬೆಗಳಿಗೆ ಕೇಳಿಸಿತು. ವಧು ರಾಗಿಣಿಯೂ ಸೇರಿ ಎಲ್ಲರೂ ಬಸ್ಸೇರಿದರು. ರಾಜಾರಾಯರು ಮನೆಗೆ ಬೀಗ ಹಾಕುವಾಗ ಕಿರಿ ಬೊಂಬೆ, 'ಹೇಗೂ ಬಸ್ಸಿನಲ್ಲಿ ಸೀಟು ಖಾಲಿ ಇದೆಯಲ್ಲ, ರಾಗಿಣಿ ಅಕ್ಕನ ಮದ್ವೆಗೆ ನಾವೂ ಬರ್ತೀವಿ' ಎಂದಿತು ವಿನಮ್ರವಾಗಿ. ಮನೆಗೆ ಬೀಗ ಹಾಕಿ ಹೊರಡುವ ಗಡಿಬಿಡಿಯಲ್ಲಿದ್ದ ರಾಯರಿಗೆ ಬೊಂಬೆಯ ಮಾತು ಕೇಳಲೇ ಇಲ್ಲ. ದಿಬ್ಬಣದ ಬಸ್ಸು ಹೊಗೆ ಉಗುಳಿ ಹೊರಟೇಬಿಟ್ಟಿತು.
ಮದುವೆಯನ್ನು ನೋಡಬೇಕೆಂದು ಕಿರಿ ಬೊಂಬೆ ಮನೆಯೊಳಗೇ ಹಠ ಹಿಡಿದು ಕಣ್ಣೀರು ಸುರಿಸಿ ರಂಪಮಾಡಿತು. ಬೇರೆ ಬೊಂಬೆಗಳು ಎಷ್ಟೇ ಸಮಾಧಾನ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅದಿರಲಿಲ್ಲ. ಪರಿಸ್ಥಿತಿ ಹತೋಟಿಗೆ ಬರದಿರಲು ಬೊಂಬೆಗಳೆಲ್ಲ ಸಭೆ ಕರೆದು ದೊಡ್ಡ ಅಜ್ಜಿ ಬೊಂಬೆಯ ಮೊಮ್ಮಗನನ್ನು, ದೊಡ್ಡ ಅಜ್ಜನ ತಂಗಿ ಮೊಮ್ಮಗಳಿಗೆ ಮದುವೆ ಮಾಡುವ ನಿರ್ಣಯ ತೆಗೆದುಕೊಂಡಾಗಷ್ಟೆ ಕಿರುಬೊಂಬೆಯ ಮೊಗದಲ್ಲಿ ಸಂತಸ ಝಳಪಿಸಿತು.
ಮನೆಯ ಹಿತ್ತಲಿನಲ್ಲಿ ಎರಡು ಚಪ್ಪರ ಹಾಕಿ ಒಂದರಲ್ಲಿ ಮದುವೆ, ಮತ್ತೊಂದರಲ್ಲಿ ಮದುವೆಯ ಅಡುಗೆ ಮಾಡಿದವು. ಕರಡಿ ಬೊಂಬೆಯು ಮುಖಂಡನಾಗಿ ಸೊಗಸಾದ ಭೋಜನ ತಯಾರಿಸಿತು. ನರಿರಾಯ ಮಂತ್ರ ಹೇಳಿ ತಾಳಿ ಕಟ್ಟಿಸಿದ. ಆನೆ ಬೊಂಬೆ ಮದುವೆಯ ಉಸ್ತುವಾರಿ ನೋಡಿತು. ಸಂಜೆಯ ಆರತಕ್ಷತೆಗೆ ಗಿಳಿರಾಮನ ಹಾಡು, ಜಿಂಕೆಯ ನೃತ್ಯ, ಮೊಲದ ಜಾದೂ ಹಾಗೂ ಮಂಗನ ಸರ್ಕಸ್ಸುಗಳ ಪ್ರದರ್ಶನ ನಡೆಯಿತು. ಕಿರಿ ಬೊಂಬೆಗೆ ಸಂತಸವೋ ಸಂತಸ. ಬಿದ್ದು ಬಿದ್ದು ನಕ್ಕಿತು.
ಅಷ್ಟರಲ್ಲೇ ಮದುವೆ ಮುಗಿಸಿಕೊಂಡು ರಾಯರ ಕುಟುಂಬ ವಾಪಸ್ಸಾಯಿತು. ಮನೆಯಲ್ಲಿನ ಬೊಂಬೆ ಮದುವೆಯ ಸಂಭ್ರಮವನ್ನು ಕಂಡು ಬೆರಗಾದರು. ತಕ್ಷಣವೇ ಅಜ್ಜ ಬೊಂಬೆ ಮುಂದೆ ಬಂದು ಕಿರಿಬೊಂಬೆಗೋಸ್ಕರ ಈ ಮದುವೆ ಮಾಡಿಬೇಕಾಯ್ತು ಎಂದು ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಅನುಮತಿ ಇಲ್ಲದೆ ಈ ಕಾರ್ಯ ಮಾಡಿದ್ದಕ್ಕೆ ಕ್ಷಮೆಯಾಚಿಸಿತು. ಆಗ ರಾಯರು 'ನೀವು ಒಳ್ಳೆಯ ಕೆಲಸವನ್ನೇ ಮಾಡಿದ್ದೀರ, ರಾಗಿಣಿಯ ಮದುವೆಗೆ ನಿಮ್ಮೆಲ್ಲರನ್ನೂ ಕರೆದುಕೊಂಡು ಹೋಗದೆ ನಾವೇ ತಪ್ಪು ಮಾಡಿದೆವು' ಎಂದರು. ಅಲ್ಲದೆ ಅಲ್ಲಿಯೇ ಇದ್ದ ಬೊಂಬೆ ಮದುವೆಯ ವಧು- ವರರಿಗೆ ಹರಸಿ, ಕಾಣಿಕೆ ಕೊಟ್ಟು ಬೊಂಬೆಗಳ ಊಟದ ಸಾಲಿನಲ್ಲಿ ತಾವು ಕುಳಿತು ಭೋಜನ ಸವಿದರು. ಆದರೆ ಕಿರಿಬೊಂಬೆ ಮಾತ್ರ ರಾಗಿಣಿ ಅಕ್ಕನನ್ನು ಹುಡುಕುತ್ತಲೇ ಇತ್ತು.

- ಶಿವನಾಪುರ ನರಸಿಂಹಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.