ಯುವಜನ/ಮಕ್ಕಳು

ಎಲ್ಲೋ ಸ್ನೇಹದ ಮಳೆಯಾಗಿದೆ...

ನನ್ಗೆ ತುಂಬಾ ನೋವಾಗಿದೆ. ಸಂಬಂಧಿಗಳೇ ನನಗೆ ದೊಡ್ಡ ಆಘಾತ ನೀಡಿದ್ದಾರೆ. ಸಹೋದ್ಯೋಗಿಗಳು ...

ಎಲ್ಲೋ ಸ್ನೇಹದ ಮಳೆಯಾಗಿದೆ...
Published On :

ನನ್ಗೆ ತುಂಬಾ ನೋವಾಗಿದೆ. ಸಂಬಂಧಿಗಳೇ ನನಗೆ ದೊಡ್ಡ ಆಘಾತ ನೀಡಿದ್ದಾರೆ. ಸಹೋದ್ಯೋಗಿಗಳು ಮನಸ್ಸಿಗೆ ನೋವುಣಿಸಿದ್ದಾರೆ. ಆಪ್ತ ಮಿತ್ರರಿಂದಲೇ ಅಪಹಾಸ್ಯಕ್ಕೆ ಒಳಗಾಗಿ ಮನಸ್ಸು ತುಂಬಾ ನೊಂದಿದೆ ಎನ್ನುವ ಮಾತುಗಳನ್ನು
ನಾವು ಆಗಾಗ ಗೆಳೆಯರ ಮೂಲಕ ಕೇಳಿಯೇ ಇರುತ್ತೇವೆ. ಕೆಲವೊಮ್ಮೆ ನೀವೂ ಇದೇ ರೀತಿಯ ನೋವಿಗೆ ಗುರಿಯಾಗಿರುತ್ತೀರಿ.
ಹೌದು, ನಾವೀಗ ಮಾತನಾಡುತ್ತಿರುವುದು ನಮ್ಮ ನಮ್ಮ ಮನಸ್ಸಿನ ನೋವುಗಳ ಬಗ್ಗೆಯೇ. ಯಾವುದೇ ವ್ಯಕ್ತಿಯ ದೈಹಿಕ ಸಾರ್ಮಥ್ಯದ ಮೇಲೆ ಆತನ ಮನಸ್ಸು ಬಲವಾದ ಹಿಡಿತ ಹೊಂದಿರುತ್ತದೆ. ಮನಸ್ಸು ಸರಿಯಾಗಿದ್ದಲ್ಲಿ ಮಾತ್ರ ದೇಹ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಸಾಧ್ಯ. ಮೈಮೇಲಿನ ಗಾಯ ಮರೆಯಾಗಬಹುದು. ಆದರೆ, ಮನಸ್ಸಿಗಾದ ಗಾಯ, ಜೀವಿತಾವಧಿ ಮುಗಿಯುವರೆಗೂ ಮಾಯವಾಗುವುದಿಲ್ಲ. ಆಗಾಗ್ಗೆ ನೆನಪಾಗುತ್ತಾ ಮನಸ್ಸಿಗೆ ಮತ್ತಷ್ಟು ನೋವುಂಟು ಮಾಡುತ್ತಲೇ ಇರುತ್ತದೆ. ಇದರಿಂದ ಮುಕ್ತಿ ಹೊಂದಬೇಕಾದರೆ ಮನಸ್ಸಿಗಾದ ಗಾಯವನ್ನು ಬದುಕಿನ ತಾಕತ್ತಾಗಿ ಪರಿವರ್ತಿಸಬೇಕು.
ಮನಸ್ಸಿಗೆ ನೋವಾಗುವಂಥ ಘಟನೆಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆಯುತ್ತವೆ. ಇದಕ್ಕಾಗಿ ಕೊರಗುವ ಬದಲು ಕಾರಣ ಹುಡುಕಲೆತ್ನಿಸಬೇಕು. ಅದರಲ್ಲಿ ನನ್ನ ತಪ್ಪೇನಿದೆ? ಎನ್ನುವ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಬೇಕು. ಇದರಿಂದ ತಪ್ಪಿನ ಬಗ್ಗೆ ಪದೇಪದೆ ತಪಿತಸ್ಥ ಭಾವನೆ ಮೂಡುವುದು ಕಡಿಮೆಯಾಗುತ್ತದೆ. ಆ ತಪ್ಪನ್ನು ಮತ್ತೆ ಮಾಡದಂತೆ ಎಚ್ಚರ ವಹಿಸಿ, ಆಗಿರುವ ನೋವಿನ ಕುರಿತು ಚಿಂತಿಸದೆ, ನೋವು ಮಾಡಿರುವ ವ್ಯಕ್ತಿಗಳಿಗೆ ನಿಮ್ಮ ಸಾಧನೆ ಮೂಲಕ ಉತ್ತರಿಸಬೇಕು. ಇದಕ್ಕಾಗಿ ಪಾಸಿಟಿವ್ ಥಿಂಕಿಂಗ್ ಇರಲಿ, ಓದುವ ಹವ್ಯಾಸ ಬೆಳೆಸಿಕೊಳ್ಳಿ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರೊಂದಿಗೆ ಸಮಯ ಕಳೆಯಿರಿ. ಕುಟುಂಬದಲ್ಲಿರುವ ಎಲ್ಲರೊಂದಿಗೆ ಬೆರೆಯುವ ಮೂಲಕ, ಆಗಿರುವ ನೋವು ಮರೆಯಲೆತ್ನಿಸಿ. ಸಮಸ್ಯೆ, ಅವಮಾನಗಳು ದೇವರನ್ನೂ ಬಿಟ್ಟಿಲ್ಲ ಎನ್ನುವ ಹಿರಿಯರ ಮಾತನ್ನು ಪದೇಪದೆ ನೆನಪಿಸಿಕೊಂಡು ನಿತ್ಯವೂ ಹೊಸತನದಿಂದ ಕೆಲಸಕ್ಕೆ ಅಣಿಯಾಗಿ.
ಎಚ್ಚರ ವಹಿಸಿ
ಮನಸ್ಸಿಗೆ ನೋವುಂಟಾಗಿದೆ ಎಂದು ಮಾಡುವ ಕೆಲಸದ ಬಗ್ಗೆ ನಿರ್ಲಕ್ಷಿಸಬೇಡಿ. ಇದು ಮತ್ತೊಂದು ತೊಂದರೆಗೆ ಆಹ್ವಾನ ನೀಡುತ್ತದೆ. ನೋವು ಮರೆಯಲು ಕುಡಿತ, ಸಿಗರೇಟಿನಂಥ ದುಶ್ಚಟದ ದಾಸರಾಗಬೇಡಿ. ಅದು ಮನಸ್ಸಿನ ಗಾಯಗೊಂದಿಗೆ ದೈಹಿಕ ಸಾಮರ್ಥ್ಯಕ್ಕೂ ಕುಂದು ತರಲಿವೆ.
ಪ್ರೀತಿಸಿದ ಹುಡುಗಿ ದೂರವಾದ ನೋವಿನಿಂದ ಹೊರಬರಲು ತಕ್ಷಣಕ್ಕೆ ಇನ್ನೊಂದು ಸಂಬಂಧಕ್ಕೆ ಅಂಗಲಾಚಬೇಡಿ. ಅದು ಮತ್ತಷ್ಟು ಸಮಸ್ಯೆಯನ್ನೇ ಸೃಷ್ಟಿಸಲಿದೆ. ಜತೆಗಿದ್ದ ಗೆಳೆಯ ಕ್ಷುಲ್ಲಕ ಕಾರಣಕ್ಕಾಗಿ ದೂರವಾದ, ಮನಸ್ಸು ನೋಯಿಸಿದ ಎಂದ ಮಾತ್ರಕ್ಕೆ ಬದುಕೇ ಮುಗಿದು ಹೋಗುವುದಿಲ್ಲ. ಮತ್ತೊಂದು ಉತ್ತಮ ಸ್ನೇಹ ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎನ್ನುವ ಆಶಾಭಾವನೆ ಬೆಳೆಸಿಕೊಳ್ಳಿ.

- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.