ಅಪ್ಡೇಟ್ ಜಿಂದಗಿ
ಇಪ್ಪತ್ತು ವರ್ಷಗಳ ಹಿಂದಿನ ಮಾತು. ನೂರೊಂದು ಕಲ್ಲು, ಮುಳ್ಳುಗಳ ದಾರಿಯಲ್ಲಿ ಸಾಗಿದಾಗ ಮಾತ್ರ ಜೀವನ ಒಂದು...

ಇಪ್ಪತ್ತು ವರ್ಷಗಳ ಹಿಂದಿನ ಮಾತು. ನೂರೊಂದು ಕಲ್ಲು, ಮುಳ್ಳುಗಳ ದಾರಿಯಲ್ಲಿ ಸಾಗಿದಾಗ ಮಾತ್ರ ಜೀವನ ಒಂದು ಹದಕ್ಕೆ ಬರುತ್ತಿತ್ತು. ಅದರಲ್ಲೂ ಕಾಲೇಜು ದಿನಗಳನ್ನು ಊಟಕ್ಕಾಗಿ, ಖರ್ಚಿಗಾಗಿ ಪರದಾಡಿಕೊಂಡೇ ಕಳೆದು ಪದವಿ ಪಡೆದಾಗ ಅನುಭವಿಸಿದ ಖುಷಿ ಯಶಸ್ಸಿನ ಮೆಟ್ಟಿಲೇರಿದ ಎಲ್ಲರಲ್ಲೂ ಎದ್ದು ಕಾಣುತ್ತಿತ್ತು.
ಈಗ ಕಾಲ ಬದಲಾಗಿದೆ. ಕಾಲೇಜು ಜೀವನಕ್ಕೆ ಅದರದ್ದೇ ಆದ ಆಯಾಮ ಸಿಕ್ಕಿದೆ. ಕಾಲೇಜು ಮೆಟ್ಟಿಲು ಹತ್ತುವ ಯುವ ಮನಸ್ಸುಗಳಿಗೂ ಹಾಗೆ. ನಾವು ಹೀಗೆಯೇ ಇರಬೇಕು. ಇಂಥ ಬಟ್ಟೆಯೇ ಬೇಕು, ಸುತ್ತಾಡಲು ಗಾಡಿ, ಖರ್ಚಿಗೆ ಪಾಕೆಟ್ ಮನಿ... ಹೀಗೆಯೇ ಅವರ ಆಸೆಯ ಬೇಡಿಕೆಯ ಕಟ್ಟೆ ವಿಸ್ತರಿಸುತ್ತಲೇ ಇದೆ.
ನನ್ನ ಬಳಿ ದುಡ್ಡಿನ ಕೊರತೆ ಇದೆ ಎನ್ನುವ ಕಷ್ಟದ ಮಾತು ಎಲ್ಲೂ ಈಗಿನ ಕ್ಯಾಂಪಸ್ನಲ್ಲಿ ಕೇಳಿಬರುವುದಿಲ್ಲ. ಊಟಕ್ಕಾಗಿ ಪರದಾಡುವವರಿಲ್ಲ, ಪುಸ್ತಕಗಳನ್ನು ಕೊಳ್ಳಲಾಗದೆ ಗೆಳೆಯರಿಂದ ಕೇಳಿ ಪಡೆದು ರಾತ್ರಿಯೆಲ್ಲಾ ಓದಿ ಬೆಳಗ್ಗೆ ಹಿಂದಿರುಗಿಸಬೇಕೆನ್ನುವ ಮನಸ್ಥಿತಿಯವರು ಇಲ್ಲವೇ ಇಲ್ಲ.
ಮನೆಯಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ ಈಗಿನ ಕಾಲೇಜು ಹುಡುಗರ ಕಿಸೆಯಲ್ಲಿ ಮಾತ್ರ ಸೆಲ್ಫೋನ್ ಇರುತ್ತದೆ. ದಿನಕ್ಕೊಂದು ರಂಗು ರಂಗಿನ ಬಟ್ಟೆ, ಓಡಾಡಲೊಂದು ಬೈಕು ಇರುತ್ತದೆ. ಈ ಎಲ್ಲ ಆಸೆಗಳನ್ನು ಈಡೇರಿಸಿಕೊಳ್ಳುವ ದಾರಿ ಕೂಡ ಅವರಿಗೆ ಗೊತ್ತಿರುತ್ತದೆ. ಈಗಿನ ಯುವಜನರ ಪ್ರಕಾರ ಇದೇ ಜೀವನ. ಇದೇ ಕಾಲೇಜು.
ಮನೆಯಲ್ಲಿ ಕಷ್ಟ ಇದ್ದರೂ 'ತಿನ್ನಲಿಕ್ಕೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎನ್ನುವ ಹಾಗೆ ಹೊಸದಕ್ಕೆ ನಾವು ಆಗಲೇ ಒಗ್ಗಿ ಹೋಗಿದ್ದೇವೆ ಎಂದು ತೋರಿಸಿಕೊಳ್ಳುವ ಆತುರ ಈಗಿನ ಬಹುತೇಕರಲ್ಲಿದೆ. ಓದಿನಲ್ಲಿ ಹಿಂದಿದ್ದರೂ ಪರವಾಗಿಲ್ಲ. ಆಧುನಿಕತೆಯಲ್ಲಿ ಅಪ್ಡೇಟ್ ಆಗಿದ್ದರೆ ಸಾಕು, ಕಾಲೇಜಿನ ಗೆಳೆಯರ ಗುಂಪೂ ಅವರನ್ನು ಕೈಚಾಚಿ ಕರೆಯುತ್ತದೆ. ಹೊಸ ಲೈಫ್ಸ್ಟೈಲ್ಗೆ ತನ್ನನ್ನು ತಾನು ಬಿಚ್ಚಿಕೊಂಡರೆ ಮಾತ್ರ ಗೆಳೆಯರೊಂದಿಗೆ ಬಿಂದಾಸ್ ಜೀವನ ಸಾಧ್ಯ ಎನ್ನುವ ಮೂರ್ಖ ಅಭಿಪ್ರಾಯ ಹಲವರ ತಲೆ ಹೊಕ್ಕಿರುತ್ತದೆ. ಇದಕ್ಕೆ ಪಾಕೆಟ್ ಮನಿ ಸಿಗದಾಗ ಕಾಲೇಜು ಮುಗಿದ ನಂತರ ಪಾರ್ಟ್ ಟೈಂ ಕೆಲಸಕ್ಕೆ ಸೇರಿ ದುಡಿದು ಸ್ಟೈಲ್ ಮಾಡುವ ಎಷ್ಟೋ ಮಂದಿ ಹುಡುಗರೂ ಇದ್ದಾರೆ.
ಈ ಬದಲಾದ ಕಾಲೇಜು ಕ್ಯಾಂಪಸ್ ಮನಸ್ಥಿತಿ ಏನೋ ಸಾಧಿಸಬೇಕೆಂಬ ಹಠದಿಂದ ಕಷ್ಟಪಟ್ಟು ಓದಿ ಎಸ್ಸೆಸ್ಸೆಲ್ಸಿ ಪಾಸಾದ ಹಳ್ಳಿ ಮಕ್ಕಳನ್ನು ಕೆಲವೊಮ್ಮೆ ಮೂಲೆಯಲ್ಲಿ ಕೂರಿಸುವುದುಂಟು.
ಯುವಜನರೇ ಕಾಲೇಜು ಕ್ಯಾಂಪಸ್ ಅಂದರೆ ಮೋಜು ಮಸ್ತಿಯ ತಾಣ ನಿಜ. ಬಟ್ಟೆ, ಫೋನು, ಫ್ಯಾಷನ್ ಎಲ್ಲ ಒಕೆ. ಆದರೆ, ಅದೇ ಜೀವನವಲ್ಲ ಎನ್ನುವುದನ್ನು ಮರೆಯದಿರಿ, ಯಾವುದೋ ಹುಚ್ಚು ಮನಸ್ಥಿತಿಗೆ ಬಿದ್ದು ಹಾಳಾಗದಿರಿ.
- ಜಮುನಾ ರಾಣಿ ಎಚ್.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


