ಯುವಜನ/ಮಕ್ಕಳು

ಸಿಪಾಯಿಯಾದ ಬೇಡರ ಹುಡುಗ

ಸಿಪಾಯಿಯಾದ ಬೇಡರ ಹುಡುಗ
Published On :

ಒಂದು ರಾಜಧಾನಿಯಲ್ಲಿ ಭಿಕ್ಷುಕ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದ ಕುಟುಂಬವೊಂದಿತ್ತು. ಅವರ ತಂಡದಲ್ಲಿ ರಂಗನೆಂಬ ಹೆಸರಿನ ಬಾಲಕನೊಬ್ಬನಿದ್ದ. ಬಡತನದಲ್ಲಿದ್ದರಿಂದ ಓದಿಸಿರಲಿಲ್ಲ. ಅಪ್ಪ-ಅಮ್ಮನ ಜೊತೆಗೆ ಭಿಕ್ಷೆಗೆ ಹೋಗುತ್ತಿದ್ದರೂ ಅದು ಅವನಿಗೆ ಇಷ್ಟವಿರಲಿಲ್ಲ. ಸದೃಢನಾದ ನಾನು ಇನ್ನು ಮುಂದೆ ಭಿಕ್ಷೆ ಎತ್ತಬಾರದು  ಎಂಬ ದೃಢ ನಿರ್ಧಾರ ತಳೆದು ಕೆಲಸ ಅರಸತೊಡಗಿದ್ದ.
ರಂಗನನ್ನು 'ಬೇಡರ ಹುಡುಗ'ನೆಂದು ತಾತ್ಸಾರದಿಂದ ನೋಡುತ್ತಿದ್ದರೇ ವಿನಃ ಯಾರೊಬ್ಬರೂ ಕೆಲಸ ನೀಡಲು ಮುಂದಾಗಲಿಲ್ಲ. ರಂಗ ವಿದ್ಯೆ ಕಲಿಯಲಿಲ್ಲ ನಿಜ. ಆದರೆ ಆತನು ಅಪ್ರತಿಮ ಬಿಲ್ವಿದ್ಯೆಕಾರ. ನಿಖರವಾಗಿ ಬಾಣ ಪ್ರಯೋಗ ಮಾಡಬಲ್ಲ. ರಾಜನ ಸೈನ್ಯಕ್ಕೆ ಸೇರಬೇಕೆಂದು ಸೇನಾಧಿಪತಿಯನ್ನು ಭೇಟಿಯಾದ. 'ಬಾಣ ಎಲ್ಲರೂ ಬಿಡುತ್ತಾರೆ. ಬರೆಯಲಿಕ್ಕೆ ಓದಲಿಕ್ಕೆ ಬಾರದವನಿಗೆ ಕೆಲಸವಿಲ್ಲ' ಎಂದು ಸೇನಾಧಿಪತಿ ಹೀಯಾಳಿಸಿಬಿಟ್ಟ.
ಒಂದು ದಿನ ಬೇಸರದಿಂದ ರಂಗ ನದಿಯ ತೀರದ ಕಡೆ ಹೆಜ್ಜೆ ಹಾಕಿದ. ಅಲ್ಲಿ ಕಲ್ಲು ಬಂಡೆಯ ಮೇಲ್ಗಡೆ ಕುಳಿತು ಬಾಣ ಪ್ರಯೋಗ ಮಾಡಿ ಮೀನು ಹಿಡಿಯುವಲ್ಲಿ ನಿರತನಾದ. ಅಲ್ಲಿಯೇ ಪಾರಿವಾಳಗಳೆರಡು ದಡದಲ್ಲಿದ್ದ ಕಾಳು ತಿನ್ನುತ್ತಿದ್ದವು. ಈ ಪಾರಿವಾಳ ತಿನ್ನಲು ಹೊಂಚು ಹಾಕಿ ಮೊಸಳೆಯೊಂದು ನಿಧಾನವಾಗಿ ಬರುತ್ತಿತ್ತು. ಕಾಳು ತಿನ್ನುತ್ತಿದ್ದ ಪಾರಿವಾಳವೆರಡೂ ತಿಳಿಯದೇ ಮೊಸಳೆ ಇದ್ದೆಡೆಗೇ ಸರಿಯುತ್ತಿದ್ದವು. ಇದೇ ಸಮಯ ನದಿ ದಡದಲ್ಲಿ ವಿಹರಿಸುತ್ತಿದ್ದ ಮಹಾರಾಜ ಮತ್ತು ಮಹಾರಾಣಿಯರ ದೃಷ್ಟಿ ಪಾರಿವಾಳಗಳ ಕಡೆ ಸರಿಯಿತು. ಬಾಯ್ತೆರೆದ ಮೊಸಳೆ ಇನ್ನೇನು ಪಾರಿವಾಳಗಳನ್ನು ತಿಂದೇ ಬಿಡುತ್ತದೆ ಎನ್ನುವಷ್ಟರಲ್ಲಿ ಎಲ್ಲಿಂದಲೋ ವೇಗವಾಗಿ ಬಂದ ಬಾಣ ಮೊಸಳೆ ಬಾಯಿಗೆ ಚುಚ್ಚಿಕೊಂಡಿತು. ಮೊಸಳೆಯ ಬಾಯಿಯೊಳಗೆ ಪಾರಿವಾಳ ಸಿಕ್ಕಿ ಬಿದ್ದರೂ ಅದಕ್ಕೆ ಬಾಯಿ ಮುಚ್ಚಲಾಗಲಿಲ್ಲ. ಬಿಟ್ಟ ಬಾಣ ಮೊಸಳೆಯ ಬಾಯಿಯ ಮೇಲೂ ಕೆಳಗೂ ಸರಿಯಾಗಿ ಚುಚ್ಚಿದ್ದರಿಂದ ಬಾಯಿ ತೆರೆದಂತೆ ಇತ್ತು. ಮಹಾರಾಜನ ಸೇವಕರು ಓಡಿ ಬಂದು ಪಾರಿವಾಳಗಳನ್ನು ಎತ್ತಿಕೊಂಡರು.
ರಾಜ ಆತುರದಿಂದ ಕೇಳಿದ 'ಯಾರು ಬಾಣ ಬಿಟ್ಟವರು?', ಅಂಗರಕ್ಷಕರು 'ನಾವಲ್ಲ' ಎಂದರು. ತುಸು ದೂರದ ಬಂಡೆಯೊಂದರ ಮೇಲೆ ಬಿಲ್ಲು ಬಾಣಗಳೊಂದಿಗೆ ಕುಳಿತ ವ್ಯಕ್ತಿಯನ್ನು ಗಮನಿಸಿದ. ಕೂಡಲೇ ಆತನನ್ನು ಕರೆ ತರಲು ಆಜ್ಞಾಪಿಸಿದ.
'ಪಾರಿವಾಳಗಳನ್ನು ಕಾಪಾಡಿರುವೆ. ನಿನ್ನ ಬಿಲ್ಲು ವಿದ್ಯೆಯ ಸಾಹಸ ಅಮೋಘವೇ ಸರಿ. ನಿನ್ನ ಬಾಣದ ವೈಖರಿಯನ್ನು ಮೆಚ್ಚಿದೆ. ಯಾರು ನೀನು?' ಎಂದ ರಾಜ.
'ಮಹಾರಾಜ, ನಾನೊಬ್ಬ ಸಾಧಾರಣ ಭಿಕ್ಷುಕನ ಮಗ. ನನ್ನ ಅಂಗಸೌಷ್ಟವ ಕಂಡ ಜನ ಭಿಕ್ಷೆ ಹಾಕಲಿಲ್ಲ. ದುಡಿದು ತಿನ್ನು ಎಂದು ಅಟ್ಟಿದರು. ಕೆಲಸ ಕೇಳಿದೆ ಓದು ಬರಹ ಗೊತ್ತಿಲ್ಲದವನಿಗೆ ಕೆಲಸವಿಲ್ಲ ಎಂದರು. ಬೇಸರದಿಂದ ಮೀನು ಹಿಡಿಯಲು ಬಂದಿದ್ದೆ' ಎಂದ.
'ನಿನ್ನಂಥ ವೀರನಿಗೆ, ಯುವಕನಿಗೆ ನಾನು ಕೆಲಸ ಕೊಡುತ್ತೇನೆ. ಯಾವ ಕೆಲಸ ಮಾಡಬಲ್ಲೆ?'
'ನೀವು ಅವಕಾಶ ಕೊಟ್ಟರೆ ನಿಮ್ಮ ಸೈನ್ಯದಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸುವ ಆಸೆ' ಎಂದ.
'ಬರಿ ಸಿಪಾಯಿಯಲ್ಲ. ನಿನ್ನನ್ನು ಇಂದಿನಿಂದಲೇ ನಮ್ಮ ಸೈನ್ಯದ ಸೇನಾಧಿಪತಿಯನ್ನಾಗಿ ಘೋಷಿಸುವೆ. ಆದರೆ ನಮ್ಮ ಎಲ್ಲಾ ಸೈನಿಕರಿಗೂ ಬಿಲ್ಲು ವಿದ್ಯೆ ಕಲಿಸಿ  ಅವರನ್ನು ಪಳಗಿಸಬೇಕು' ಎಂದು ರಾಜ ಆಜ್ಞೆ ಮಾಡಿದ.
ರಂಗನು ಮಹಾರಾಜರ ಮಾತಿಗೆ ಸಮ್ಮತಿ ಸೂಚಿಸಿ ಅವರ ಹಿಂದೆ ಹೊರಟ. ಹೀಗೆ ಬೇಡರ ಹುಡುಗನೊಬ್ಬ ಸೇನಾಧಿಪತಿಯಾದ.


- ದತ್ತಗುರು ಕಂಠಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.