ನಿಯತ್ತಿನ ಫಲ

ಒಬ್ಬ ಚಿನ್ನದ ವ್ಯಾಪಾರಿಯು ಹಲವು ನಗರಗಳಲ್ಲಿ ದೊಡ್ಡ ದೊಡ್ಡ ಚಿನ್ನದ ಅಂಗಡಿಗಳನ್ನು ತೆರೆದಿದ್ದ. ಇವನ ಪ್ರಸಿದ್ಧಿ ಎಷ್ಟಿತ್ತೆಂದರೆ ರಾಜ ಪರಿವಾರದವರು ಆತನಿಂದಲೇ ಚಿನ್ನದ ಆಭರಣಗಳನ್ನು ಖರೀದಿಸುತ್ತಿದ್ದರು. ಹಬ್ಬಗಳ ವೇಳೆ ಅರಮನೆಯಿಂದ ಈ ಚಿನ್ನದ ವ್ಯಾಪಾರಿಗೆ ಕರೆ ಬರುವುದು ಸಾಮಾನ್ಯವಾಗಿತ್ತು. ಆತನ ಅಂಗಡಿಗಳಲ್ಲಿ ಮೂರು ವಿಭಾಗಗಳಿದ್ದವು. ಅತಿ ಬೆಲೆಬಾಳುವ ಆಭರಣಗಳನ್ನು ಅಂಗಡಿಯ ಒಳ ಭಾಗದಲ್ಲಿರುವ ತಿಜೋರಿಗಳಲ್ಲಿ ಇರಿಸಲಾಗುತ್ತಿತ್ತು. ಮಧ್ಯದ ವಿಭಾಗದಲ್ಲಿ ಕಡಿಮೆ ಬೆಲೆಬಾಳುವ ಆಭರಣಗಳು ಇರುತ್ತಿದ್ದವು. ಹೊರಭಾಗದಲ್ಲಿ ತೀರಾ ಕಡಿಮೆ ಬೆಲೆ ಬಾಳುವ ಇಮಿಟೇಷನ್ ಆಭರಣಗಳನ್ನು ಇರಿಸಲಾಗುತ್ತಿತ್ತು.
ಒಮ್ಮೆ ಒಬ್ಬ ಮಹಿಳೆ ಹೊರಭಾಗದಿಂದ ಮುತ್ತಿನ ಸರವನ್ನು ಖರೀದಿಸಿದಳು. ಆ ಹಾರ ಬಹಳ ಸುಂದರವಾಗಿತ್ತು, ಅದನ್ನು ಧರಿಸಿ ಅವಳು ಹೊರಗೆ ಹೊರಟರೆ ಎಲ್ಲರ ದೃಷ್ಟಿಯೂ ಹಾರದ ಮೇಲೆಯೇ ಇರುತ್ತಿತ್ತು. ಒಂದೊಮ್ಮೆ ಆ ಹಾರ ತುಂಡಾಯಿತು. ಮುತ್ತುಗಳೆಲ್ಲ ಚೆಲ್ಲಾಪಿಲ್ಲಿಯಾದವು. ಕೂಡಲೇ ಒಂದೂ ಬಿಡದಂತೆ ಎಲ್ಲ ಮುತ್ತುಗಳನ್ನು ಆರಿಸಿಕೊಂಡಳು. ಆದರೂ ಅದರಲ್ಲಿನ ಒಂದು ಮುತ್ತು ಕಾಣೆಯಾಗಿ ಸರಕ್ಕೆ ಒಂದು ಮುತ್ತು ಕಡಿಮೆ ಬಿತ್ತು. ಒಂದೇ ಒಂದು ಮುತ್ತು ಕಡಿಮೆಯಾದರೂ ಆ ಹಾರದ ಸೌಂದರ್ಯ ಕೆಡುತ್ತಿತ್ತು. ಆದ್ದರಿಂದ ಒಂದು ಮುತ್ತನ್ನು ಖರೀದಿಸಲು ಆ ಹಾರವನ್ನು ತೆಗೆದುಕೊಂಡು ಅದೇ ಅಂಗಡಿಗೆ ಹೋದಳು. ಹಾರವನ್ನು ಗುರುತಿಸಿದ ಅಂಗಡಿಯ ಮಾಲೀಕ 'ಈ ಒಂದು ಮುತ್ತಿನ ಬೆಲೆ 300 ರು.ಗಳಾಗುತ್ತವೆ' ಎಂದ.
ಮಾಲೀಕನ ಮಾತನ್ನು ಕೇಳಿ ಮಹಿಳೆಗೆ ದಿಗ್ಭ್ರಮೆ. 'ನಾನು ಇಡೀ ಹಾರವನ್ನೇ 60 ರು.ಗೆ ಖರೀದಿಸಿದ್ದೇನೆ. ಆದರೆ ನೀವು ಒಂದು ಮುತ್ತಿನ ಬೆಲೆ 300 ರು. ಆಗುತ್ತದೆ ಅಂತೀರಲ್ಲಾ?' ಎಂದಳು ಅಚ್ಚರಿಯಿಂದ. 'ನೀವು 60 ರು.ಗೆ ಈ ಹಾರವನ್ನು ಖರೀದಿಸಿದ್ದೇನೋ ನಿಜ. ಆದರೆ ನಮ್ಮ ಅಂಗಡಿಯ ನೌಕರನ ತಪ್ಪಿನಿಂದಾಗಿ ಬೆಲೆಬಾಳುವ ಈ ಹಾರ ನಿಮಗೆ ತುಂಬ ಕಡಿಮೆ ಬೆಲೆಯಲ್ಲಿ ದೊರಕಿದೆ. ಒಳಗೆ ತಿಜೋರಿಯಲ್ಲಿರಬೇಕಾದ ಹಾರವನ್ನು ನಮ್ಮ ನೌಕರನ ತಪ್ಪಿನಿಂದ ಹೊರಗಿನ ವಿಭಾಗದಲ್ಲಿ ಇದ್ದುದರಿಂದ ಈ ಪ್ರಮಾದ ಜರುಗಿದೆ. ಅವನು ಮಾಡಿದ ತಪ್ಪಿಗಾಗಿ ನಾನು ಅವನನ್ನು ಅಂದೇ ಕೆಲಸದಿಂದ ತೆಗೆದು ಹಾಕಿದ್ದೇನೆ ಕೂಡ' ಎಂದ ಆ ಮಾಲೀಕ.
ಅದನ್ನು ಕೇಳಿ ಮಹಿಳೆ ಚಕಿತಳಾದಳು. ಹಾಗಾದರೆ ತಾನು ಇಷ್ಟು ದಿನ ಧರಿಸಿದ್ದು ಮಹಾರಾಣಿಯಂಥವರು ಧರಿಸುವಂಥ ಬೆಲೆಬಾಳುವ ಹಾರವೆಂದು ಅವಳಿಗೆ ಅರ್ಥವಾಯಿತು. ಹಾಗಾಗಿಯೇ ಜನ ಬೆರಗಿನಿಂದ ಹಾರವನ್ನು ನೋಡುತ್ತಿದ್ದರು. ಸ್ವಲ್ಪ ಹೊತ್ತು ಆ ಮಹಿಳೆ ಏನನ್ನೋ ಯೋಚಿಸಿದಳು. ನಂತರ ಒಂದು ನಿರ್ಧಾರಕ್ಕೆ ಬಂದ ಅವಳು 'ತಪ್ಪು ಎಲ್ಲರಿಂದಾಗುತ್ತದೆ. ನಿಮ್ಮ ನೌಕರನು ಮಾಡಿದ ತಪ್ಪಿನಿಂದಾಗಿ ಬೆಲೆಬಾಳುವ ಹಾರ ನನಗೆ ಕಡಿಮೆ ಬೆಲೆಗೆ ದೊರಕಿದೆ. ವಿಷಯ ತಿಳಿದ ಮೇಲೂ ಆ ಹಾರವನ್ನು ನಾನು ಇಟ್ಟುಕೊಳ್ಳುವುದು ತಪ್ಪಾಗುತ್ತದೆ. ಆದ್ದರಿಂದ ಹಾರ ನಿಮ್ಮಲ್ಲೇ ಇರಲಿ. ಆದರೆ ನನ್ನದೊಂದು ಪ್ರಾರ್ಥನೆ, ಕೆಲಸದಿಂದ ತೆಗೆದು ಹಾಕಿದ ಆ ನೌಕರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಿ' ಎಂದು ಹೇಳಿದ ಮಹಿಳೆ ಹಾರವನ್ನು ಅಲ್ಲೇ ಬಿಟ್ಟು ಹೊರಡಲು ಸಿದ್ಧಳಾದಳು. ಆಗ ಅವಳನ್ನು ತಡೆದ ಚಿನ್ನದ ಅಂಗಡಿಯ ಮಾಲೀಕ 'ನೀವು ಬರಿಗೈಯಿಂದ ಹೋಗಲಾರಿರಿ. ನೀವು ತೋರಿದ ಸಜ್ಜನಿಕೆಗಾಗಿ ನಾನು ಸೋತಿದ್ದೇನೆ. ನಿಮ್ಮ ಪ್ರಾರ್ಥನೆಯಂತೆ ಆ ನೌಕರನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತೇನೆಯಲ್ಲದೆ, ಯಾವುದೇ ಹಣ ಪಡೆಯದೇ ಈ ಹಾರಕ್ಕೆ ಒಂದು ಮುತ್ತನ್ನು ಕೂಡಿಸಿ ಚೆಂದ ಮಾಡಿಸಿ ಕೊಡುತ್ತೇನೆ' ಎಂದು ಹೇಳಿ ಆ ಮಹಿಳೆಗೆ ಕೂರಲು ಆಸನವನ್ನು ತೋರಿದ.
= ಮುರಳೀಧರ ಕುಲಕರ್ಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


