ಯುವಜನ/ಮಕ್ಕಳು

ನೆನಪಿನ ಕಚಗುಳಿ

ನೆನಪಿನ ಕಚಗುಳಿ
Published On :

ಒಂದು ಕಂಬಳಿ ಇದ್ದರೂ ಇನ್ನೊಂದು ಬೇಕೆನಿಸುತ್ತಿದ್ದಾಗಲೇ ಸರಕ್ಕನೆ ಜಾರಿ ಹೋಗಿದ್ದ ಆ ಚಳಿಗಾಲ ಮತ್ತೆ ಬಂದಿದೆ. ಕಾರ್ತಿಕದಲ್ಲಿ ಮೊಳಕೆಯೊಡೆದ ಅದು ಇದೀಗ ಹೇಮಂತ ಋತುವಿನಲ್ಲಿ ಹೆಮ್ಮರ. ದೂರದ ದೇವಸ್ಥಾನದ ದೀಪ ಮುಗಿಸಿ ಬರುವಾಗ ಉಲ್ಲನಿನ ಸ್ವೆಟರ್ ಇದ್ದರೂ, ಅದೆಲ್ಲಿಂದಲೋ ಬೀಸುವ ಗಾಳಿಯಿಂದ ಮೈ ಕೊರೆತ. ಮನೆಗೆ ಬಂದು ಉಪ್ಪರಿಗೆಯ ಹಾಸುಗೆಯಲ್ಲಿ ಕಂಬಳಿ ಹೊದ್ದು ಮಲಗಿದರೆ ಆ ದಿನದ ಚಳಿಗೊಂದು ಗುಡ್ ಬೈ.
ಮಣ್ಣು, ಮರದಿಂದ ಕೂಡಿದ ಉಪ್ಪರಿಗೆ ಎಲ್ಲಾ ಕೋಣೆಗಿಂತಲೂ ಹೆಚ್ಚು ಬೆಚ್ಚಗೆ. ಹಾಗಾಗಿ ಚಳಿಗಾಲದಲ್ಲಿ ಅಲ್ಲಿ ಮಲಗುವುದೇ ಸೂಕ್ತ. ಮರುದಿನ ಬೆಳಗಿನ ಚಳಿಗೆ ಬಿಸಿ ಕಾಫಿಯ ಸ್ವಾಗತ. ಹಲ್ಲು ಕಡಿಯುವಂತಾಗುವ ಆ ಚಳಿಗೆ ಬಿಸಿ ಕಾಫಿಯೇ ಮದ್ದು.  ಯಾರನ್ನೂ ಈ ಚಳಿ ಬಿಡುವುದಿಲ್ಲವೆಂಬುದಕ್ಕೆ ಬಿಸಿಯುಂಡೆಯ ಸೂರ್ಯನೇ ಸಾಕ್ಷಿ. ಬೇರೆ ದಿನಗಳಲ್ಲಿ ಬೇಗನೆ ಎದ್ದು ಬರುವ ಆತನದ್ದು, ಈ ಚಳಿಗಾದಲ್ಲಿ ಮಾತ್ರ ತಡವಾಗಿಯೇ ಆಗಮನ. ಬೆಚ್ಚನೆಯ ಬೆಡ್‌ಶೀಟ್ ಪ್ರಿಯರಿಗೆ ಅದು ವರವೇ.
ಬೆಡ್ ಕಾಫಿ ಮುಗಿಸಿದ ಮಕ್ಕಳನ್ನು ಕಂಡರೆ ಚಳಿಗೇನೋ ಒಲುಮೆ, ಮುದ್ದಾಡುವ ಬಯಕೆ. ಆದರೆ ಅದರಿಂದ ತಪ್ಪಿಸಿಕೊಳ್ಳಲು ಮಕ್ಕಳು ಓಡುವುದು ಎದುರು ಮನೆಯ ಅಡಕೆ ಒಲೆಯ ಮುಂದೆ. ಅದ್ಯಾವಗಲೋ ಜನ್ಮತಳೆದು ತನ್ನ ಯೌವ್ವನ ಮದದಲ್ಲಿ ಬಲಿಷ್ಠ ಕುಂಟೆಗಳನ್ನು ಸುಡುತ್ತಿರುವ ಈ ಬೆಂಕಿಗೆ ಚಳಿ ಎಂದರೆ ಆಜನ್ಮ ಶತ್ರು. ಹೀಗಾಗಿಯೇ ಚಳಿಯ ಬಾಹುಗಳು ಅಪ್ಪಿಕೊಳ್ಳಲು ಬಂದರೆ ಚಾಡಿ ಹೇಳುವುದು ಉರಿಯುತ್ತಿರುವ ಅಡಕೆ ಒಲೆಗೆ.
ಕುಂಟೆಗಳು ಕಪ್ಪಾಗುವುದನ್ನೇ ಕಾಯುತ್ತಿರುವ ಚಳಿಯ ಸೆಳವು ಕಣ್ಣಿಗೆ ಕಾಣದಂತೆ ತಣ್ಣಗೆ ತಲೆಯನ್ನು ಮುಟ್ಟಿ ಜೂಟಾಟದಲ್ಲಿ ಔಟು ಮಾಡಿದ ಸಂಭ್ರಮ ಅನುಭವಿಸುತ್ತಿರುವಾಗಲೇ ಜಗಲಿಯ ಮೇಲಿನ ಬಿಸಿಲ ಕೋಲು ಕೈಬೀಸಿ ಕರೆಯುತ್ತಿರುತ್ತದೆ. ಅದಕ್ಕೆ ಆಶ್ರಯ ಒದಗಿಸಿದ ಸಂಭ್ರಮ. ಚಳಿಗೆ ಸೋಲಿನ ಸೂತಕ. ಬಿಸಿಲೇರಿತೆಂದು ಮನೆ ಮಾಳಿಗೆಗೆ ಹೋದರೆ ಹೊಂಚು ಹಾಕಿ ಕಾಯುತ್ತಿದ್ದ ಚಳಿಯ ಸೇಚನ. ಅದಕ್ಕೆ ಮತ್ತೆ ಗೆದ್ದ ನಗು.  ಇದೀಗ ಚಳಿಯನ್ನೂ ಒಂದಿಷ್ಟು ಹೊತ್ತು ಹೊದ್ದು ಅದಕ್ಕೆ ಬುದ್ಧಿ ಕಲಿಸಲು ಬಚ್ಚಲ ಹಂಡೆಯ ನೀರಿಂದ ಬಿಸಿ ಬಿಸಿ ಸ್ನಾನ. ಚಳಿಯೊಂದಿಗಿನ ಜೂಟಾಟದಲ್ಲಿ ಗೆಲುವಿನ ಸಂಭ್ರಮ ಅನುಭವಿಸುವ ತಲ್ಲೀನತೆಯಲ್ಲಿ ನೀರು ತಳ ಮುಟ್ಟಿದರೂ ತಿಳಿಯದು. ಇನ್ನೂ ಹೊರ ಬರಲಿಲ್ಲವೆಂಬ ಅಮ್ಮನ ಹುಸಿಕೋಪಕ್ಕೆ ತಟ್ಟನೆ ಎಚ್ಚರ. ಚಳಿಗದು ಗೆಲುವಿಗೆ ಮೂರೇ ಗೇಣು...!
ಇಷ್ಟಾದರೂ ಚಳಿಯನ್ನು ಸೋಲಿಸಲೇಬೇಕೆಂಬ ಹಠ ತೊಟ್ಟಾಗ ನೆನಪಾಗುವುದು ಅಡಕೆ ಚಪ್ಪರದ ಮೇಲೆ ಮೈಚೆಲ್ಲಿ ನಲಿಯುತ್ತಿರುವ ಬಿಸಿಲ ಬಳ್ಳಿ. ಕೆಲವೇ ನಿಮಿಷದಲ್ಲಿ ಮೈಚಳಿ ಬಿಡಿಸುವ ಆ ಬಳ್ಳಿಗಳಿಗೆ ಬೆನ್ನು ತಾಗಿಸಿ ಕುಳಿತರೆ ಚಳಿಯು ಬರಲಾಗದೇ ತನ್ನ ತಂಗಾಳಿಯ ಕೈಯನ್ನು ಬೀಸಿ ಹಿಡಿಯಲು ಪ್ರಯತ್ನಸಿದರೂ, ಅದು ಬಿಸಿಯಾಗಿಯೇ ನಮ್ಮ ಮೈಮುಟ್ಟಿ ಸೋಲಿನ ದುಃಖದಲ್ಲಿ ಮರಳುತ್ತದೆ.
ಇಲ್ಲಿಗೇ ಮುಗಿಯದು ಚಳಿ ಜೊತೆಗಿನ ಜೂಟಾಟ. ಪಾಟಿ ಚೀಲ ಹೊತ್ತು ಶಾಲೆಯ ಕೊಣೆಗೆ ಹೊದಾಗಲಂತೂ ಚಳಿಯದ್ದೇ ಸಾಮ್ರಾಜ್ಯ. ದೂರದಲ್ಲಿ ಕಂಡರೂ ತಾನರೆಂದು ತಿಳಿಯದಂತೆ ಮುಖ ಅತ್ತ ತಿರುಗಿಸಿಕೊಂಡಿರುವ ಬಿಸಿಲು.  ದೂರ ಹೋಗೆಂದು ಚಳಿಗೆ ಮನದಲ್ಲಿ ಬೈದುಕೊಳ್ಳುತ್ತಿರುವಾಗಲೇ, ಯಾವುದೋ ಮಗ್ಗಿ ತಪ್ಪು ಹೇಳಿ ಮೇಸ್ಟರ ಬೆತ್ತದ ಏಟು ತಿನ್ನುವ ಹುಡುಗನ ಕೈಯನ್ನು ತಣ್ಣಗೆ ಮರಗಟ್ಟಿಸಿ ಕೈಗೆ ನೋವಾಗದಂತೆ ಮಾಡಿದಾಗಲಂತೂ ಚಳಿಯ ಕಡೆಗೊಂದು ಹೆಮ್ಮೆಯ ನೋಟ. ಅಂತೂ ಸೋಲು, ಗೆಲುವಿಲ್ಲದೆ ಸುಖಾಂತ್ಯದಲ್ಲಿ ಮುಗಿದ ಚಳಿಯೊಂದಿಗಿನ ಜೂಟಾಟ.

- ಸುಧೀಂದ್ರ ಜಮ್ಮಟಿಗೆ
sudheeja@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.