ಅರೆಯಿರಿ ಮದ್ದು

ಹೇಳಿ ಕೇಳಿ ಇದು ಸ್ಪರ್ಧಾತ್ಮಕ ಯುಗ. ಹಾಗಾಗಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸುವುದು ವಿದ್ಯಾರ್ಥಿಗಳಿಗೆ ಅನಿವಾರ್ಯ. ಅಂಕಗಳ ಆಧಾರದ ಮೇಲೆ ಉನ್ನತ ವ್ಯಾಸಂಗ ನಿರ್ಧಾರವಾಗುವುದರಿಂದಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಒತ್ತಡ ಸರ್ವೇ ಸಾಮಾನ್ಯ. ಇನ್ನೇನು ಮಾರ್ಚ್ ತಿಂಗಳು ಹತ್ತಿರ ಬರುತ್ತಿದೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಜ್ವರವೂ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.
ಪರೀಕ್ಷೆ ಎಂಬ ಶಬ್ದ ಕೇಳಿದ ತಕ್ಷಣ ಬಹುತೇಕ ವಿದ್ಯಾರ್ಥಿಗಳಿಗೆ ಭಯ. ಕೆಲವು ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷಾರಂಭದಿಂದಲೇ ಅಭ್ಯಾಸ ಮಾಡುತ್ತಿದ್ದರೂ ಪರೀಕ್ಷೆಗೆ ಹೇಗೆ ತಯಾರಿ ಮಾಡಬೇಕು ಎನ್ನುವ ಮಾರ್ಗದರ್ಶನ ಸೂತ್ರಗಳು ಸಿಗದೆ ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿರುತ್ತಾರೆ. ಇಂತಹ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೊಡೆದೋಡಿಸಲು ಹಾಗೂ ಹೆಚ್ಚಿನ ಅಂಕಗಳಿಸಲು ಏನು ಮಾಡಬಹುದು ಗೊತ್ತಾ?
ಪಾಠದ ಹಿಂದಿನ ಪ್ರಶ್ನೆಗಳನ್ನಷ್ಟೇ ಓದುವ ಅಭ್ಯಾಸ ಇದ್ದರೆ ಅದನ್ನು ಬಿಟ್ಟುಬಿಡಿ. ಇಡೀ ಪಠ್ಯಪುಸ್ತಕವನ್ನು ಓದಿ. ಅರ್ಥವಾಗದ ವಿಷಯಗಳನ್ನು ಶಿಕ್ಷಕರಲ್ಲಿ ಕೇಳಿ ತಿಳಿದುಕೊಳ್ಳಿ.
ಓದುವಾಗ ಯಾರು, ಎಲ್ಲಿ, ಏನು ಏಕೆ, ಹೇಗೆ ಯಾವುದು ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಓದಿ. ಪ್ರಮುಖ ಅಂಶಗಳಿಗೆ ಸ್ಕೆಚ್ ಪೆನ್ನಿನಿಂದ ಅಂಡರ್ಲೈನ್ ಮಾಡಿಕೊಳ್ಳಿ.
ಇಸವಿ, ಸೂತ್ರ, ಡಯಾಗ್ರಾಂಗಳ ಚಾರ್ಟ್ಗಳನ್ನ ಮಾಡಿ ಓದುವ ಕೋಣೆಯಲ್ಲಿ ಗೋಡೆಗೆ ಅಂಟಿಸಿ. ವಿರಾಮದ ಸಮಯದಲ್ಲಿ ಅವುಗಳೆಡೆಗೆ ಕಣ್ಣು ಹಾಯಿಸಿ.
ಇಷ್ಟವಿರುವ ವಿಷಯಗಳನ್ನು ಓದಿ ಉಳಿದ ವಿಷಯಗಳನ್ನು ನಾಳೆ ಓದಿದರಾಯಿತು ಬಿಡು ಎನ್ನುವ ಮನೋಭಾವ ಬೆಳೆಸಿಕೊಂಡಿದ್ದರೆ ಬಿಟ್ಟುಬಿಡಿ.
ಓದಲೆಂದು ನಿಮ್ಮದೇ ಆದ ಒಂದು ವೇಳಾಪಟ್ಟಿ ತಯಾರಿಸಿಕೊಳ್ಳಿ. ಆ ವೇಳಾಪಟ್ಟಿಯನ್ನು ಚಾಚೂ ತಪ್ಪದೆ ಪಾಲಿಸಿ. ಮನರಂಜನೆ, ಇತರೆ ಕೆಲಸಗಳಿಗೂ ವೇಳಾಪಟ್ಟಿಯಲ್ಲಿ ಸಮಯ ನಿಗದಿಪಡಿಸಿಕೊಳ್ಳಿ.
ಪ್ರತಿ ಒಂದು ತಾಸಿನ ಓದಿನ ಬಳಿಕ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ದಿನಕ್ಕೆ ಐದಾರು ಗಂಟೆಗಳ ಓದು ಉತ್ತಮ.
ಓದುವ ಕೊಠಡಿ ಬೆಳಕು ಮತ್ತು ಗಾಳಿಯಿಂದ ಕೂಡಿರಲಿ. ಬೇರೆಯವರಿಂದ ನಿಮಗೆ ತೊಂದರೆಯಾಗದಂಥ ಜಾಗವನ್ನು ಆರಿಸಿಕೊಳ್ಳಿ.
ಓದುವಾಗಲೇ ಕಿರು ಟಿಪ್ಪಣಿಗಳನ್ನು ತಯಾರಿಸಿಕೊಳ್ಳಿ. ಇದು ಪರೀಕ್ಷೆಯ ಹಿಂದಿನ ಕೆಲ ದಿನಗಳ ಓದಿಗೆ ನೆರವಾಗುತ್ತದೆ.
ಓದಿದ ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಮತ್ತು ಪ್ರತಿ ರಾತ್ರಿ ಮಲಗುವ ಮುನ್ನ ತಪ್ಪದೇ ಪುನರಾವಲೋಕನ ಮಾಡಿಕೊಳ್ಳುವುದು ಉತ್ತಮ.
ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯ ರೂಢಿಯ ಸಲುವಾಗಿ ಮತ್ತು ನೀವು ಯಾವ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಅಸಮರ್ಥರಾಗಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲು ಹಿಂದಿನ ಸಾಲಿನ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ. ಕೊಟ್ಟ ಸಮಯದಲ್ಲಿ ಉತ್ತರ ಬರೆಯಲು ಪ್ರಯತ್ನಿಸಿ. ಈ ತೆರನಾದ ಪ್ರಯತ್ನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಈ ಹಿಂದಿನ ವರ್ಷದಲ್ಲಿ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿ.
ಲಿಖಿತ ಪರೀಕ್ಷೆಯಾಗಿರುವುದರಿಂದ ನೀವು ಬರವಣಿಗೆಯ ಬಗೆಗೆ ಲಕ್ಷ್ಯ ಹರಿಸಲೇಬೇಕು. ದಿನ ನಿತ್ಯ ಸುಮಾರು ಐದರಿಂದ ಆರು ಪುಟಗಳನ್ನು ಬರೆಯಿರಿ. ಬರವಣಿಗೆ ಸ್ಪಷ್ಟವಾಗಿರಲಿ ಮತ್ತು ಯಾವುದೇ ತಪ್ಪಿಲ್ಲದಂತೆ ಎಚ್ಚರವಹಿಸಿ.
ಬರವಣಿಗೆಯ ರೂಢಿ ಇರದಿದ್ದರೆ ಪರೀಕ್ಷೆಯಲ್ಲಿ ಉತ್ತರಗಳು ಗೊತ್ತಿದ್ದರೂ ಒದ್ದಾಡಬೇಕಾದೀತು.
ಸರಿಯಾದ ಸಮಯಕ್ಕೆ ಊಟ, ನಿದ್ದೆ ಮಾಡಬೇಕು. ನಿದ್ದೆಗೆಟ್ಟು ಓದಿದರೆ ಪರೀಕ್ಷೆ ಬರುವ ವೇಳೆಗೆ ನಿಮ್ಮ ಆರೋಗ್ಯ ಹದಗೆಡುತ್ತದೆ. ಇದರಿಂದ ನೀವು ಪಟ್ಟ ಪರಿಶ್ರಮ ವ್ಯರ್ಥವಾಗುವುದು.
ಪರೀಕ್ಷೆ ಕೋಣೆಯಲ್ಲಿ ಶಾಂತವಾಗಿರಿ. ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಸಾವಕಾಶವಾಗಿ ಓದಿ. ನಿಮಗೆ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ.
ಅಂಕಗಳ ಆಧಾರದ ಮೇಲೆ ನಿಮ್ಮ ಉತ್ತರವಿರಲಿ. ದೀರ್ಘ ಉತ್ತರಗಳನ್ನು ಬರೆಯುವಾಗ ಪ್ಯಾರಾಗಳಲ್ಲಿ ಬರೆಯಿರಿ. ಪ್ರಮುಖ ಅಂಶಗಳ ಕೆಳಗೆ ಅಡಿಗೆರೆಯನ್ನು ತಪ್ಪದೆ ಹಾಕಿ. ಪೀಠಿಕೆ, ಮುಖ್ಯಾಂಶಗಳ ವಿವರಣೆ ಮತ್ತು ಉಪಸಂಹಾರವಿರಲಿ.
= ಜಯಶ್ರೀ ಅಬ್ಬಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


