ಅಜ್ಜಿ ಮನೆಯೆಂಬ ಚಂದಿರನೂರು...

ಎಷ್ಟೋ ವರ್ಷಗಳ ನಂತರ ಅಜ್ಜಿ ಮನೆ ಕಾಣುವ ಭಾಗ್ಯ ನನ್ನದಾಯಿತು. ಅಜ್ಜಿಗೆ ಹುಶಾರಿಲ್ಲ ಎಂಬ ನೆಪ, ಬಾಲ್ಯದ ಹಳೆಯ ನೆನಪುಗಳನ್ನು ಒಟ್ಟೊಟ್ಟಿಗೆ ಬಿಚ್ಚಿಕೊಳ್ಳಲು ಎಡೆಮಾಡಿಕೊಟ್ಟಿತ್ತು. ಹೊಂಗೆ ಮರದ ತಪ್ಪಲಿನಲ್ಲಿ ಜುಳು ಜುಳು ಹರಿಯುವ ತೊರೆಯಲ್ಲಿನ ಹೊತ್ತು ಮುಳುಗುವವರೆಗಿನ ಸ್ನಾನ, ಅಜ್ಜಿ ಮಾಡುತ್ತಿದ್ದ ಈರುಳ್ಳಿ ಬೋಂಡ, ಬಿಸಿಬಿಸಿಯಾಗಿ ತಟ್ಟಿಕೊಡುತ್ತಿದ್ದ ಅಕ್ಕಿ ರೊಟ್ಟಿಯೊಂದಿಗಿನ ಕಾಯಿ ಚಟ್ನಿ, ತೋಟದ ಒಗರು ಸೀಬೆಕಾಯಿ, ಹಾಲು ಸುರಿಸುವ ಭತ್ತದ ತೆನೆಯ ಕಾಳುಗಳನ್ನು ಒಂದೊಂದಾಗಿ ತಿನ್ನುವಾಗ ಇರುವ ಮಜಾ, ಮಾಮ ತಂದು ಕೊಡುತ್ತಿದ್ದ ಹೊಸ ಬಟ್ಟೆಗಳು, ರಜೆಯ ಹತ್ತು ಹದಿನೈದು ದಿನ ಅಮ್ಮನಾಗಿರುತ್ತಿದ್ದ ಅತ್ತೆಯ ಪ್ರೀತಿ, ರಾತ್ರಿ ಊಟದ ನಂತರ ತೆರೆದ ಮಹಡಿಯ ಮೇಲೆ ಮಲಗಿದಾಗ ಸೊಳ್ಳೆ ಪರದೆಯೊಳಗಿನಿಂದ ಅಜ್ಜಿಯ ನೂರೊಂದು ಕಥೆಗಳಿಗೆ ಬೆಳಕ ಚೆಲ್ಲುತಾ ಮುಗುಳು ನಗುವ ತನ್ನೊಳಗೆ ಜಿಂಕೆಯನೋ, ಮೊಲವನ್ನೋ ಇಟ್ಟುಕೊಂಡ ಚಂದ್ರಮ... ಒಂದಾ ಎರಡಾ ಅಜ್ಜಿ ಮನೆಯ ಅದ್ಭುತಗಳು?
ಮೊಮ್ಮಕ್ಕಳನ್ನು ಸುತ್ತ ಕೂಡಿಸಿಕೊಂಡು ಕೈ ತುತ್ತು ಹಾಕುತ್ತಾ ಅಮೃತವನ್ನು ಉಣಿಸುತ್ತಿದ್ದ ಅಂದಿನ ಅಜ್ಜಿಯ ಜಾಗವ ವಹಿಸಿಕೊಂಡಿರುವ ಮಾಡ್ರನ್ ಅಜ್ಜಿಯರು ಕಣ್ಣೀರ ಧಾರಾವಾಹಿಗಳ ದಾಸಿಗಳಾಗಿದ್ದಾರೆ. ಅಂದಿನ ಜಗುಲಿ, ತೆರೆದ ಮಹಡಿಯ ತಂಪಲ್ಲಿ ಆಡುವ, ಮಲಗುವ ಭಾಗ್ಯವ ಕಳ್ಳಕಾಕರ ಭಯ, ನವೀಕರಣ, ನಗರೀಕರಣದ ಆಕಾಶವ ಚುಂಬಿಸುವ ಅಪಾರ್ಟ್ಮೆಂಟ್ಗಳು ನುಂಗಿಕೊಂಡಿವೆ. ಹಿಂದೊಮ್ಮೆ ಮಕ್ಕಳು ಅಳುವಾಗ ರಂಜಿಸುತ್ತಿದ್ದ ಚಂದ ಮಾಮ ಚಕ್ಕುಲಿ ಮಾಮನನ್ನು ಇಂದು ಕ್ಯಾರೇ ಎನ್ನುವವರಿಲ್ಲದೆ ಮೂಲೆ ಗುಂಪಾಗಿದ್ದಾನೆ ಎನಿಸುತ್ತದೆ.
ಅಜ್ಜಿ ಮನೆಯೆಂಬ ಅರಮನೆಯ ನೋಡಲು ಕಾಯುತ್ತಿದ್ದ ದಸರಾ, ಬೇಸಿಗೆ ರಜೆಗಳು ಇಂದು ರೆಸಾರ್ಟ್, ವಂಡರ್ಲಾ, ಇನ್ನೋವೇಟಿವ್ ಸಿಟಿಗಳ ಪಾಲಾಗಿವೆ. ವರುಷಕ್ಕೊಮ್ಮೆ ಬರುವ ಜಾತ್ರೆಯಲಿ ಅಜ್ಜಿ ಕೊಡಿಸುತ್ತಿದ್ದ ಬತ್ತಾಸು, ಹಸಿರು ಹಳದಿ ಕೆಂಪು ಟೇಪು, ಪೀಪಿಗಳ ಜಾಗವನ್ನು ಪಾನಿಪೂರಿ, ಪಿಜ್ಜಾ, ಟಾಕಿಂಗ್ ಟಾಮ್, ಥಾಮಸ್ ಆ್ಯಂಡ್ ಫ್ರೆಂಡ್ಸ್, ಬಾರ್ಬಿ ಡಾಲ್ಗಳು ಆಕ್ರಮಿಸಿಕೊಂಡಿವೆ. ಬರಿಗಾಲಲ್ಲಿ ಆಡುತ್ತಿದ್ದ ಕುಂಟೆ ಬಿಲ್ಲೆ, ಚಿನ್ನಿದಾಂಡು, ಆಟಗಳನ್ನು ಕ್ರಿಕೆಟ್, ವಿಡಿಯೋ ಗೇಮ್ಸ್, ಮೊಬೈಲ್ ಗೇಮ್ಸ್ ತಿಂದುಹಾಕಿವೆ. ಮನೆಯಿಂದ ಹೊರಗಿರಲಿ ಮನೆಯಲ್ಲಿ ನಡೆಯಲೂ ಚಪ್ಪಲಿಯ ಬಯಸುತಿವೆ ಇಂದಿನ ಮಕ್ಕಳು.
ಇದಕ್ಕೆಲ್ಲ ಹೊಣೆ ನಾವೇ ಎಂದು ತಿಳಿದಿದ್ದರೂ ಆಧುನಿಕತೆಯನ್ನು ದೂರುತ್ತೇವೆ. ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಅನುಭವಿಸಬಾರದು ಎಂದು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆಗಳು ಅವರನ್ನು ಹಾಳುಮಾಡುತಿವೆ. ಅಜ್ಜಿ ಹೇಗೆ ನೋಡಿಕೊಳ್ಳುವಳೋ ಎನ್ನುವ ಅಮ್ಮನ ಭಯ ಮೊಮ್ಮಕ್ಕಳನ್ನು ಅಜ್ಜಿಯ ಮನೆಯಿಂದಲೇ ದೂರಮಾಡಿದೆ. ಹರಿವ ತೊರೆಯ ಜುಳು ಜುಳು, ಮಕ್ಕಳ ಸದ್ದಿಲ್ಲದೆ ನೀರವ ಮೌನವ ತಾಳಿದೆಯೇನೋ ಯಾರಿಗೆ ಗೊತ್ತು? ತೋಟದ ಕಾಡು ಸೀಬೆ ಮರದ ಕಾಯಿಗಳು, ಹೊಲದಲ್ಲಿನ ಭತ್ತದ ಹಾಲು ರುಚಿ ನೋಡುವವರಿಲ್ಲದೆ ಬಹುಶಃ ಬಿದ್ದು ಹೋಗುತ್ತಿರಬಹುದು. ಸೊಳ್ಳೆಯ ಪರದೆಯ ಒಳಗಿನಿಂದ ಕಣ್ಣು ಹೊಡೆಯುತ್ತಿದ್ದ ಚಂದಿರ ಕಣ್ಣು ಮುಚ್ಚಿ ತೂಕಡಿಸುತ್ತಾ ತನ್ನ ಕಾಯಕಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತಿರುವವನು. ಒಂಟಿಯಾಗಿರುವೆನು ಎಂದು ಹಾಡುತಾ...
ಜಮುನಾ ರಾಣಿ ಎಚ್.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


