ಮಂಥರೆಯ ಸ್ವಗತ
ಈ ಪ್ರಪಂಚದಲ್ಲಿ ಎಷ್ಟು ಜನರಿಗೆ ಗೊತ್ತಿದೆ- "ಮಂಥರೆಯೇ ಮಾಯೆ" ಎಂದು? ನನ್ನ ಹುಟ್ಟಿನ ಉದ್ದೇಶವೇ ಹೀಗಿರುವಾಗ ನಾನದನ್ನು ಮೀರುವುದಾದರೂ ಹೇಗೆ ಸಾಧ್ಯ?
ಕೈಕಯಿಯ ಆಪ್ತ ಸೇವಕಿಯಾಗಿ ನಾನು ಹುಟ್ಟಿ ಬಾರದೆ ಇರುತ್ತಿದ್ದರೆ, ರಾಮಾವತಾರದ ಮುಖ್ಯ ಉದ್ದೇಶವೇ ನೆರವೇರದಲ್ಲ? ಲೋಕದ ದೃಷ್ಟಿಯಲ್ಲಿ ನಾನೊಬ್ಬಳು ಕುಬ್ಜೆ, ಕುರೂಪಿ, ಕಪಟಿ ಹೆಂಗಸು. ರಾಮನ ತಮ್ಮನಾದ ಶತ್ರುಘ್ನನೇ ನನ್ನನ್ನು ಶಿಕ್ಷಿಸಲು ಮುಂದಾಗುತ್ತಾನೆಂದರೆ, ಈ ವಿಧಿವಿಲಾಸಕ್ಕೆ ಏನೆನ್ನಲಿ? ಇರಲಿ... ಇರಲಿ... ಲೋಕ ನನ್ನನ್ನು ಹೇಗೆ ಬೇಕಾದರೂ ತಿಳಿದುಕೊಳ್ಳಲಿ. ನನಗೇನು?
ರಾಮ ಈ ಧರೆಯಲ್ಲಿ ಜನ್ಮವೆತ್ತಿದ್ದಾದರೂ ಏಕೆ? ರಾವಣ- ಕುಂಭಕರ್ಣರಾಗಿ ಹುಟ್ಟಿ, ಲೋಕಕಂಟಕರಾಗಿ ಬೆಳೆದ, ವೈಕುಂಠದ ದ್ವಾರಪಾಲಕರಾಗಿ ಶಾಪಗ್ರಸ್ಥರಾಗಿದ್ದ ಜಯ- ವಿಜಯರ ಶಾಪವಿಮೋಚನೆಗಾಗಿ ಅಲ್ಲವೇ? ಪೂರ್ಣಾವತಾರಿಯಾಗಿ ಹುಟ್ಟಿಬಂದ ರಾಮ ಅಯೋಧ್ಯೆಯಲ್ಲೇ ಪಟ್ಟ ಕಟ್ಟಿಕೊಂಡು ಕುಳಿತುಬಿಟ್ಟರೆ ಕಾರ್ಯ ಮುಂದೆ ಸಾಗುವುದೆಂತು?
ಕೇಕೆಯ ವಂಶದ ಅರಸನಾದ ಅಶ್ವಪತಿರಾಜನ ಮುದ್ದಿನ ಮಗಳು ನನ್ನ ಕೈಕಯಿ. ಅಪ್ರತಿಮ ಸುಂದರಿ-ವೀರ-ಧೀರೆ- ಗಂಭೀರೆ. ಅವಳನ್ನು ಹೆತ್ತದ್ದು ನಾನಲ್ಲ ಎಂಬುದನ್ನು ಬಿಟ್ಟರೆ, ಅವಳನ್ನು ಎತ್ತಿ, ಆಡಿಸಿ, ಉಣ್ಣಿಸಿ, ಬೆಳೆಸಿದ್ದು ಈ ಮಂಥರೆಯೇ. ಹಾಗಾಗಿ ಈ ಮಂಥರೆಗೂ- ಕೈಕಯೀಗೂ ಅವಿನಾಭಾವ ಸಂಬಂಧ. ಒಬ್ಬರನೊಬ್ಬರು ಬಿಟ್ಟಿರಲಾರದ ಬಾಂಧವ್ಯ. ಎಂದಿಗೂ ನನ್ನ ಮಾತನ್ನು ಕೈಕಯಿ ಮೀರಲಾರಳು.
ದಶರಥನಿಗೆ ಕೌಸಲ್ಯಾ, ಸುಮಿತ್ರೆಯರೆಂಬ ರಾಣಿಯರಿದ್ದಾಗ್ಯೂ, ತನಗಿಂತ ಅತಿ ಕಿರಿಯ ವಯಸ್ಸಿನ ಕೈಕಯಿಯನ್ನು ವರಿಸುವ ಇಚ್ಛೆ ಯಾಕಾಯಿತೊ? ವಿಧಿಯಾಟದ ಮುಂದೆ ಯಾರದೇನು? ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಗುವಿಗೆ ರಾಜ್ಯಾಭಿಷೇಕವನ್ನು ಮಾಡಬೇಕು ಎಂದು ಭರವಸೆಯನ್ನು ಕೇಳಿದ ಅಶ್ವಪತಿರಾಜ. ದಶರಥನಿಗೋ ಮಕ್ಕಳಾದರೆ ಸಾಕಿತ್ತು. "ಇಷ್ಟು ದಿನ ಕೌಸಲ್ಯಾ, ಸುಮಿತ್ರೆಯಿಂದ ಸಿಕ್ಕದ ಸಂತಾನ ಭಾಗ್ಯ ಕೈಕಯಿಯಿಂದ ದಕ್ಕುವುದಾದರೆ, ಅಯೋಧ್ಯೆಯ ಪಟ್ಟವನ್ನು ಆ ಮಗುವಿಗೆ ಕಟ್ಟುವುದರಲ್ಲಿ ತಪ್ಪೇನು?" ಎನ್ನಿಸಿದ್ದಿರಬೇಕು ದಶರಥನಿಗೆ. ಅಶ್ವಪತಿರಾಜನಿಗೆ ಭರವಸೆ ಇತ್ತು. ಕೈಕಯಿಯನ್ನು ಕೈಹಿಡಿದ. ಕೈಕಯಿಯ ಆಪ್ತ ಸೇವಕಿಯಾದ ನಾನೂ ದಶರಥನ ಚಿಕ್ಕರಾಣಿಯೊಡನೆ ಅಯೋಧ್ಯೆಯನ್ನು ಸೇರಿಕೊಂಡೆ.
ತಿಮಿಧ್ವಜನಿಗೂ- ಇಂದ್ರನಿಗೂ ಯುದ್ಧ ಒದಗಿದಾಗ, ಇಂದ್ರನ ಸಹಾಯಾರ್ಥವಾಗಿ ದಶರಥ ಯುದ್ಧಕ್ಕೆ ತೆರಳಿದ. ಜೊತೆಯಲ್ಲಿ ಪ್ರೀತಿಯ ಮಡದಿಯಾದ ಕೈಕಯಿಯೂ ಯುದ್ಧಭೂಮಿಗೆ ಹೋದದ್ದು ಯೋಗಾಯೋಗವೇ ಸರಿ. ತಿಮಿಧ್ವಜನ ಬಾಣದಿಂದ ಮೃತಪ್ರಾಯನಾಗಿ ಬಿದ್ದ ದಶರಥನನ್ನು ನೋಡಿ ರಥವನ್ನು ಕೈಕಯಿ ಅತ್ಯಂತ ಚಮತ್ಕಾರದಿಂದ, ಜಾಗ್ರತೆಯಿಂದ ಯುದ್ಧ ಭೂಮಿಯಿಂದ ದೂರಕ್ಕೆ ನಡೆಯಿಸಿಕೊಂಡು ಹೋಗಿ, ಪತಿಯನ್ನು ಉಪಚರಿಸಿದಳು. ಎಚ್ಚೆತ್ತ ದಶರಥ ವಿಷಯ ತಿಳಿದು, ಸಂತೋಷಭರಿತನಾಗಿ ಎರಡು ವರಗಳನ್ನು ಕೊಟ್ಟ. ಜಾಣೆ ನನ್ನ ಕೈಕಯಿ! "ಈಗ ಬೇಡ. ಸಕಾಲದಲ್ಲಿ ಕೇಳುತ್ತೇನೆ" ಎಂಬುದಾಗಿ ವರವನ್ನು ಕಾಯ್ದಿರಿಸಿಕೊಂಡಳು. ಅಶ್ವಪತಿರಾಜನಿಗೆ ದಶರಥ ಕೊಟ್ಟ ಮಾತು. ಕೈಕಯಿಗೆ ದಶರಥ ಕೊಟ್ಟವರ- ಇದೆಲ್ಲ ರಾಮಾವತಾರದ ಉದ್ದೇಶಕ್ಕೆ ಪೂರಕವಾದ ವಿಷಯಗಳೇ ಸರಿ. ಆದರೆ ಯಾವಾಗ ಪುತ್ರಕಾಮೇಷ್ಠಿ ಯಾಗದ ಫಲವಾಗಿ ದಶರಥ ನಾಲ್ಕು ಮಕ್ಕಳನ್ನು ಪಡೆದನೋ ಅಲ್ಲಿಗೆ ಆತ ಅಶ್ವಪತಿರಾಜನಿಗೆ ಕೊಟ್ಟ ಮಾತನ್ನು ಮರೆತುಬಿಟ್ಟ.
ಇನ್ನು, ಈ ಅಯೋಧ್ಯೆಯಲ್ಲಿ ರಾಜನಾದ ದಶರಥನದೇ ಅಧಿಕಾರ! ಹಿರಿಯ ಮಗ ರಾಮನಿಗೆ ಕೇಡುಂಟಾಗಬಹುದಾದ ಯಾವ ಕಾರ್ಯವೂ ಇಲ್ಲಿ ನಡೆಯಲಾರವು. ಹಾಗೆ ಹಠ ಹಿಡಿದು, ದಶರಥನ ಆಜ್ಞೆಯನ್ನು ಮೀರಿ, ತನ್ನ ಮಾತನ್ನು ನಡೆಯಿಸಿಕೊಳ್ಳುವ ದೃಢಚಿತ್ತ ಇರುವುದು ನನ್ನೊಡತಿ ಕೈಕಯಿಯಲ್ಲಿ ಮಾತ್ರ. ಅದಕ್ಕೇ ಅಲ್ಲವೇ? ನನ್ನದು ಕೈಕಯಿಯಲ್ಲಿನ ದಾಸತ್ವ! ನನ್ನ ಮಾತನ್ನು ಕೈಕಯಿ ಮೀರಲಾರಳು. ಕೈಕಯಿ ಮಾತನ್ನು ದಶರಥ ಚಕ್ರವರ್ತಿ ಮೀರಲಾರ. ಮೀರಬಾರದು!
ಲಂಕೆಯಲ್ಲಿ ಮೆರೆಯುತ್ತಿರುವ ರಾವಣ- ಕುಂಭಕರ್ಣರ ವಧೆಯಾಗುವುದಕ್ಕೆ ವೇದಿಕೆ ಸಿದ್ಧಪಡಿಸಬೇಕು. ರಾವಣನ ವಧೆಯಾಗಬೇಕಾದರೆ, ಕೊಂಬೆಗಳನ್ನು ಕಡಿದು ನಂತರ ಮರದ ಕಾಂಡ ಕಡಿಯುವಂತೆ, ರಾವಣನಿಗೆ ಪೂರಕವಾಗಿರುವವರ ಸಂಹಾರವಾಗಬೇಕು. ರಾವಣನ ಮಗನಾದ ಇಂದ್ರಜಿತುವಾದರೋ ಬ್ರಹ್ಮನನ್ನೇ ಮೆಚ್ಚಿಸಿ 'ಹನ್ನೆರಡು ವರ್ಷ ಕಾಲ ಅನ್ನ-ಆಹಾರ- ನಿದ್ದೆ- ಸ್ತ್ರೀಸಂಗದಿಂದ ದೂರವಿರುವವರಿಗೆ ಮಾತ್ರ ಮರಣ' ಎಂಬುದಾಗಿ ವರ ಪಡೆದಿದ್ದಾನೆ. ಹಾಗಾದರೆ ಇಂದ್ರಜಿತುವನ್ನು ಕೊಲ್ಲುವುದಕ್ಕೆ ವೀರನೊಬ್ಬನ ವ್ರತಾಚಾರಣೆಯೂ ನಡೆಯಬೇಕಲ್ಲ! ಒಟ್ಟಿನಲ್ಲಿ ರಾಮ ಊರು ಬಿಡಬೇಕು. ಬೇರೆ ದಾರಿಯಿಲ್ಲ. ಜೊತೆಗೆ ಸೀತೆ- ಲಕ್ಷ್ಮಣರೂ ಊರುಬಿಟ್ಟರಲ್ಲ... ಇದೂ ವಿಧಿಯಾಟವೇ!
ಇನ್ನು ರಾವಣನೋ 'ನರಮನುಷ್ಯರು ನನಗೆ ಲೆಕ್ಕಕ್ಕೇ ಇಲ್ಲ. ಬೇರೆ ಯಾರಿಂದಲೂ ತನಗೆ ಮರಣ ಬರಬಾರದು ಎಂಬುದಾಗಿ ಬ್ರಹ್ಮನಿಂದ ವರ ಪಡೆದಿದ್ದಾನೆ. ವರಬಲದಿಂದ ಮೇರೆ ಮೀರಿ ಮೆರೆಯುತ್ತಿದ್ದಾನೆ. ಆತನ ಅಂತ್ಯಕ್ಕಾಗಿಯೇ ಅಲ್ಲವೆ ವಿಷ್ಣು- ರಾಮಾವತಾರಿಯಾಗಿ ಅರ್ಥಾತ್ ನರನಾಗಿ ಬಂದದ್ದು!'
ಯಜ್ಞ ಸಂರಕ್ಷಣೆಗಾಗಿ ವಿಶ್ವಾಮಿತ್ರ ಮಹಾಮುನಿಗಳು ರಾಮ-ಲಕ್ಷ್ಮಣರನ್ನು ಕಲುಷಕಾನನಕ್ಕೆ ಕರೆದೊಯ್ದಾಗಲೇ ಅವರಿಗೆ ಕೆಲವೊಂದು ಮಂತ್ರೋಪದೇಶಗಳನ್ನು ಮಾಡಿದ್ದರು. ಆ ಮಂತ್ರ ಪಠಣದ ಪ್ರಭಾವದಿಂದ ರಾಮ- ಲಕ್ಷ್ಮಣರು ಹಸಿವು- ನಿದ್ದೆ- ಬಳಲಿಕೆಯಿಂದ ಮುಕ್ತರಾಗಬಹುದಿತ್ತು. ತಮ್ಮ ತಪಸ್ಸಿನ ಸರ್ವ ಶಕ್ತಿಯನ್ನು ರಾಮ-ಲಕ್ಷ್ಮಣರಲ್ಲಿ ನಿಕ್ಷೇಪಿಸಿದ ವಿಶ್ವಾಮಿತ್ರ ಮಹಾಮುನಿಗಳೂ ರಾಮಾವತಾರದ ಉದ್ದೇಶಕ್ಕೆ ಪೂರಕವಾಗಿಯೇ ವರ್ತಿಸಿದರು ಎಂಬುದನ್ನು ಎಷ್ಟು ಜನ ಅರಿತಾರು?
ನನಗೆ ರಾಮ ರಾಜನಾಗಲೇಬಾರದು ಎಂಬ ಉದ್ದೇಶವೇನೂ ಇರಲಿಲ್ಲ. ಹಾಗೊಮ್ಮೆ ಇದ್ದ ಪಕ್ಷದಲ್ಲಿ 'ರಾಮ, ಜೀವನ ಪರ್ಯಂತ ಕಾಡಿಗೆ ಹೋಗಲಿ' ಎಂಬ ವರವನ್ನೇ ಕೇಳುವಂತೆ ಕೈಕಯಿಯ ಮನವೊಲಿಸುತ್ತಿದ್ದೆ. ನನ್ನ ಉದ್ದೇಶ 'ಲೋಕ ಕಂಟಕನಾದ ರಾವಣ- ಕುಂಭಕರ್ಣರ ಅಂತ್ಯವಾಗಲಿ. ಅರ್ಥಾತ್ ಜಯ-ವಿಜಯರು ಮತ್ತೆ ವೈಕುಂಠವನ್ನು ಸೇರುವುದಕ್ಕೆ ದಾರಿ ಸುಗಮವಾಗಲಿ' ಎಂಬುದಾಗಿತ್ತು. ಮತ್ತೆ ರಾಮ ಅಯೋಧ್ಯೆಯನ್ನು ಆಳಿಕೊಂಡಿರಲಿ. ಬೇಡವೆನ್ನುವವರು ಯಾರು? ರಾಮರಾಜ್ಯವನ್ನು ಕಾಣುವ ಆಸೆ ನನಗೂ ಇದೆ... ಎಷ್ಟೆಂದರೂ ನಾನು, ಜಗನ್ನಿಯಾಮಕ ವಿಷ್ಣುವಿನ ಪಗಡೆಯಾಟದ ಕಾಯಿಯಲ್ಲವೇ? ಅವನು ನಡೆಸಿದಂತೆ ನಡೆಯಬೇಕು!!!
ಸುರೇಖಾ ಭಟ್ ಭೀಮಗುಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

