ಸಿತಾರ್ ಜಮೀನ್ ಪರ್!

ಸಿತಾರ್! ಹಿಂದೂಸ್ತಾನೀ ಸಂಗೀತದ ಪರಮೋಚ್ಚ ಆವಾಹನೆಯ ವಿಶಿಷ್ಟ ವಾದನ. ಇದರ ಕಲಿಕೆ ಬಗೆಗಿನ ಸಮಗ್ರಚಿಂತನೆಯನ್ನು ಇಲ್ಲಿ ಖ್ಯಾತ ಸಿತಾರ್ ವಾದಕ ಸಂಜೀವ್ ಕೊರ್ತಿ (ಮೊ. 9731099577) ನೀಡಿದ್ದಾರೆ. ಇವರು 18 ವರ್ಷಗಳ ಕಾಲ ಉಸ್ತಾದ್ ಶಫ್ಹೀಕ್ ಖಾನರ ಬಳಿ ಶಾಸ್ತ್ರೀಯವಾಗಿ ಸಿತಾರ್ ಅಭ್ಯಾಸ ನಡೆಸಿ, ಸದ್ಯ ಸ್ವರತರಂಗ್ ಅಕಾಡೆಮಿ ಸ್ಥಾಪಿಸಿ ಸಿತಾರ್ ಕಲಿಸುತ್ತಿದ್ದಾರೆ. ಇವರ ಸಂಗೀತ ಸೇವೆಗೆ ಪತ್ನಿ ಸ್ನೇಹಲತಾ ಮತ್ತು ಮಗ ಸುಯೋಗ್ ನೀಡುತ್ತಿರುವ ಸಾಥ್ ಅನನ್ಯ. ಸಿತಾರ್ ಕಲಿಕೆ ಬಗ್ಗೆ ಅವರೊಂದಿಗೊಂದು ಮಾತುಕತೆ...
ಸಿತಾರಿನ ಉಗಮ ಮತ್ತು ಬೆಳವಣಿಗೆ ಬಗ್ಗೆ ಹೇಳಿ.
ಸಿತಾರ್ ಶಬ್ದದ ವ್ಯುತ್ಪತ್ತಿಯು ಪರ್ಷಿಯನ್ ಮೂಲದ 'ಸೌಹ್ತಾರ್' ಎಂಬ ಶಬ್ದದಲ್ಲಿದೆ. ಹಿಂದೂಸ್ತಾನಿ ಸಂಗೀತದ ಸ್ವತಂತ್ರ ವಾದ್ಯಗಳಲ್ಲಿ ಸಿತಾರ್ ಶಿಖರಪ್ರಾಯ ವಾದ್ಯ. ಸಿತಾರ್ ಉಗಮಕ್ಕೆ ಭಾರತದ ಪ್ರಾಚೀನ ವಾದ್ಯ ಬೀನ್ (ವೀಣೆ) ಮೂಲ ಕಾರಣ. ಅಮೀರ್ ಖುಸ್ರೋ ಎಂಬ ಸಂಗೀತಜ್ಞ ಈ ವಾದ್ಯವನ್ನು ವೀಣೆಯ ಪ್ರಭಾವದಿಂದ, ಕೆಲವೊಂದಷ್ಟು ಹೊಸ ತಂತ್ರಗಳನ್ನಳವಡಿಸಿ, ಸ್ವತಂತ್ರವಾಗಿ ರಚಿಸಿದ ಎಂಬ ಮಾತಿದೆ. ಮೊಟ್ಟ ಮೊದಲು ಸಿತಾರಿನ ರಚನೆ ಆತನಿಂದಲೇ ಆದದ್ದು ಸತ್ಯವಾದರೂ ಅವನ ಕಾಲಕ್ಕೆ ಸಂಬಂಧಪಟ್ಟಂತೆ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯವಿದೆ. ನಂತರ ಪ್ರಖ್ಯಾತ ಬೀನ್ ವಾದಕರಾಗಿದ್ದ ಉಸ್ತಾದ್ ಬಂದೇ ಅಲಿ ಖಾನ್, ಮೂಲ ವೀಣೆಯಲ್ಲಿ ತಂತ್ರಕಾರಿ ದೃಷ್ಟಿಯಿಂದ ಕೆಲವೊಂದಿಷ್ಟು ಬದಲಾವಣೆಗಳನ್ನು ಸೃಷ್ಟಿಸಿದರು. ಆದರೆ ಧಾರವಾಡದ ರಹಮತ್ ಖಾನರ ಕೊಡುಗೆ, ಈ ವಿಚಾರದಲ್ಲಿ ಅಪಾರ. ಸಂಗೀತದಲ್ಲಿ, ಅದರಲ್ಲೂ ವಾದ್ಯ ಸಂಗೀತದಲ್ಲಿ ಮಂದ್ರ, ತಾರ ಸಪ್ತಕಗಳಲ್ಲಿ ನುಡಿಸುವುದು ಸಾಮಾನ್ಯ. ಆದರೆ ಇವರು ಅತಿಮಂದ್ರಸಪ್ತಕದಲ್ಲಿ ನುಡಿಸಲು ಸಹಾಯವಾಗುವಂಥ 'ಖರ್ಜ್ ಪಂಚಮ್' ತಂತಿಯನ್ನು ಸಿತಾರಿಗೆ ಅಳವಡಿಸಿದರು. ಇನ್ನು 50ರ ದಶಕದಲ್ಲಿ ಉಸ್ತಾದ್ ವಿಲಾಯತ್ ಖಾನ್ ಈ 'ಖರ್ಜ್ ಪಂಚಮ್' ಸಿತಾರನ್ನು 'ಗಾಂಧಾರ್ ಪಂಚಮ್' ಆಗಿ ಬದಲಿಸಿದರು. ಸಿತಾರಿನಲ್ಲಿ ಮುಖ್ಯವಾಗಿ ಎರಡು ಅಂಗಗಳಿವೆ. ಒಂದು, ಮಾಧುರ್ಯಕ್ಕೆ ಒತ್ತು ಕೊಡುವ ಗಾಯನದ ಶೈಲಿಯಲ್ಲಿ ನುಡಿಸುವ ಗಾಯಕೀ ಅಂಗ. ಈ ಶೈಲಿಯಲ್ಲಿ ಮುಖ್ಯ ತಂತಿಯನ್ನು ಕಟ್ಟುನಿಟ್ಟಾಗಿ ಎಳೆದು ಮುಂದಿನ ಅನೇಕ ಸ್ವರಗಳನ್ನು ಮುಟ್ಟುತ್ತ ಅಲಾಪಿಸುವ ಪದ್ಧತಿ, ಮಾಧುರ್ಯದ ಸ್ವರದಲ್ಲಿ ಹಾಡಿದಂತೆ ಕೇಳುತ್ತದೆ. ಇನ್ನೊಂದು ತಾಳಪ್ರಧಾನವಾದ ತಂತ್ರಕಾರೀ ಅಂಗ. ಒಟ್ಟಿನಲ್ಲಿ ಸಿತಾರ್ ಕಾಲಕಾಲಕ್ಕೆ ತನ್ನ ತಂತ್ರಗಳನ್ನು ಪ್ರಖ್ಯಾತ ಉಸ್ತಾದರಿಂದ ಬದಲಿಸಿಕೊಳ್ಳುತ್ತ ಬಂದಿದೆಯಷ್ಟೆ.
ಸಿತಾರಿನಲ್ಲೂ ಘರಾಣಾಗಳಿವೆಯೆ?
ಹೌದು. ಆದರೆ ಗಾಯನ ಪದ್ಧತಿಯಲ್ಲಿರುವಷ್ಟು ಘರಾನೆಗಳು ನಮ್ಮಲ್ಲಿಲ್ಲ. ಕೆಲವು ಮುಖ್ಯ ಘರಾನಾಗಳು ಎಂದರೆ, ಉಸ್ತಾದ್ ಅಲ್ಲಾವುದ್ದೀನ್ ಖಾನರ ಮೈಹರ್ ಘರಾನಾ. ಪಂಡಿತ್ ರವಿಶಂಕರ್ ಮತ್ತು ನಿಖಿಲ್ ಬ್ಯಾನರ್ಜಿ ಇದೇ ಘರಾನಾದವರು. ಇಮ್ದಾದ್ ಖಾನೀ ಘರಾನಾ- ಉಸ್ತಾದ್ ವಿಲಾಯತ್ ಖಾನರು ಈ ಘರಾನೆಗೆ ಸೇರುತ್ತಾರೆ. ಬೀನ್ ಕಾರ್ ಘರಾನಾ- ಇದು ಧಾರವಾಡದ ಸಿತಾರ್ ರತ್ನ ರಹಮತ್ ಖಾನರ ಘಾರಾನಾ. ಇದಲ್ಲದೇ ಪಂಡಿತ್ ಮಣಿಲಾಲ್ ನಾಗ್ ಅವರ ವಿಷ್ಣುಪುರ್ ಘರಾನಾ, ಉಸ್ತಾದ್ ಮುಷ್ತಾಕ್ ಅಲಿ ಖಾನರ ಸೇನಿಯಾ ಘರಾನಾ ಮುಂತಾಗಿ ಹಲವು ಘರಾನೆಗಳಿವೆ. ಪ್ರತಿಯೊಂದು ಘರಾನೆಗಳಿಗೂ ಅವುಗಳದ್ದೆ ಆದ ಸೌಂದರ್ಯವಿದೆ, ಪಕ್ಕಾ ಶೈಲಿಯಿದೆ.
ಹಿಂದೂಸ್ತಾನಿ ಸಂಗೀತದ ಉಚ್ಛ್ರಾಯದಲ್ಲಿ ಸಿತಾರಿನ ಪಾತ್ರವೇನು?
ಹಿಂದುಸ್ತಾನಿ ಸಂಗೀತದಲ್ಲಿ ಗಾಯನ ಹೊರತುಪಡಿಸಿದರೆ, ವಾದ್ಯಗಳಲ್ಲಿ ಸ್ವತಂತ್ರವಾಗಿ ಅನನ್ಯವಾಗಿ ಸಂಗೀತವನ್ನು ಹೊಮ್ಮಿಸಲು, ಪಸರಿಸಲು ಸಾಧ್ಯವಾದ ವಾದ್ಯಗಳಲ್ಲಿ ಸಿತಾರ್ಗೆ ಅಗ್ರಸ್ಥಾನ. ಮೂಲತಃ ಸಿತಾರಿನಿಂದ ಹೊಮ್ಮುವುದು ಕೇವಲ ಸಂಗೀತವಲ್ಲ. ಇಲ್ಲೊಂದು ಧ್ವನಿವಿಶೇಷತೆಯಿದೆ. ಹಿಂದೂಸ್ತಾನೀ ಸಂಗೀತದ ವಾದ್ಯಪ್ರಕಾರವಾದ ಸಿತಾರ್, ಹಿಂದೆ ಹೇಳಿದಂತೆ, ತನ್ನ ಗಾಯಕಿ ಅಂಗದಿಂದ, ತಂತ್ರಕಾರಿ ಅಂಗದಿಂದ ಕಲಾರಸಿಕರ ಮನೋಮಂಡಲವನ್ನು ಸಂತಸ ಆವರಿಸಿಕೊಳ್ಳುತ್ತ ಬಂದಿದೆಯಷ್ಟೆ.
ಗುರುಶಿಷ್ಯ ಪರಂಪರೆ ಅಂದಿಗೂ ಇಂದಿಗೂ ಹೇಗೆ ಬದಲಾಗಿದೆ?
ಅಂದು ಎಲ್ಲ ವಿದ್ಯೆಗಳೂ ಶುದ್ಧವಾಗಿ ಪರಂಪರಾಪ್ರಾಯದಲ್ಲೇ ನಡೆಯುತ್ತಿದ್ದವು. ಕಾಲಕ್ರಮೇಣ ಎಲ್ಲ ವಿದ್ಯೆಗಳು ಗುರುಸಮ್ಮುಖದಲ್ಲೇ ಹಗಲು ರಾತ್ರಿ ನಡೆಯಲು ಬದುಕಿನ ನಿಯಮಗಳು, ಮಾನವ ನಿರ್ಮಿತ ಕಟ್ಟುಗಳು ಅಡ್ಡಿಯಾಗುತ್ತ ಬಂದವು. ಅದರಂತೆಯೇ ಸಂಗೀತ ಕೂಡ.
ಆದರೆ, ಈ ಗುರುಶಿಷ್ಯ ಪರಂಪರೆಯಲ್ಲಿ, ಕೊಂಚವಾದರೂ ಶಿಷ್ಯನಿಂದ ತನ್ಮಯತೆ, ಶ್ರದ್ಧೆ, ಭಕ್ತಿಗಳನ್ನು ಅಪೇಕ್ಷಿಸುವಂಥ ಹಂದರವುಳ್ಳದ್ದು ಸಂಗೀತ ಮಾತ್ರ. ಎರಡರ ನಡುವಿನ ವ್ಯತ್ಯಾಸ ಖಂಡಿತ ಮುಖ್ಯವಲ್ಲ. ಗುರುಸಮ್ಮುಖದಲ್ಲಿ ಹಗಲೂ ರಾತ್ರಿ ಗುರುಗಳ ಮನೆಯ ದೈನಂದಿನ ಕೆಲಸದಿಂದ ಆರಂಭವಾಗುವ ಕಲಿಕೆಯು, ಶ್ರದ್ಧೆಯನ್ನೂ, ಜೀವನೋತ್ಸಾಹವನ್ನೂ ಮತ್ತು ತತ್ಫಲರೂಪಿಯಾಗಿ ಅಸಾಧಾರಣ ಜ್ಞಾನವನ್ನೂ ಶಿಷ್ಯನಲ್ಲಿ ಒಡಮೂಡಿಸುತ್ತಿತ್ತು. ಆದರೆ ಈಗ ಹಾಗಲ್ಲ. ಒಂದೆರಡು ತಾಸಿನ ಸೀಮಿತ ಅವಕಾಶದಲ್ಲಿ ಗುರುವು ಶಿಷ್ಯನಿಗೆ ತಾನು ಕಲಿಸಬೇಕಾದದ್ದನ್ನು ಕಲಿಸಬೇಕು, ಮಾತ್ರವಲ್ಲ, ಶಿಷ್ಯನೂ ತಾನು ಕಲಿಯಬೇಕಾದ್ದನ್ನು ಕಲಿಯಬೇಕು. ಈಗ, ಯೂಟ್ಯೂಬಿನಲ್ಲಿ ವೈವಿಧ್ಯ ಘರಾನಾದ, ವಿಶ್ವದ ಸಕಲ ಸಂಗೀತಗಳು ಸಿಗುತ್ತವೆ. ಈ ವಿಚಾರವಾಗಿ ಆಲೋಚಿಸಿದರೆ, ಇಂದು ಸಂಗೀತಗಾರನಾಗಬಯಸುವ ಶಿಷ್ಯನಿಗೆ ಶುದ್ಧತೆಯನ್ನು ಹೊಂದುವ ವಿಚಾರದಲ್ಲಿ ಹಿಂದಿನ ಕಾಲಕ್ಕಿಂತ ಕಷ್ಟಗಳೇ ಹೆಚ್ಚು.
= ಅಂಜಲಿ ರಾಘವ
anjalijuly25@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


