ನಮ್ಮನ್ನು ನಾವು ಪ್ರೀತ್ಸೋಣ!

ಹದಿಹರೆಯದಲ್ಲಿ ಗೆಳೆತನ, ಪ್ರೀತಿ ಪ್ರೇಮ ಅಂತ ಒಂದಷ್ಟು ತಲೆಕೆಡಿಸಿಕೊಳ್ಳುವುದು ಮಾಮೂಲಿ. ಈ ವಯಸ್ಸಿನಲ್ಲಿ ನಾವು ಅಕ್ಕ, ತಂಗಿ, ಅಣ್ಣ, ತಮ್ಮ, ಗೆಳೆಯ, ಗೆಳತಿ... ಹೀಗೆ ನಮ್ಮ ಸುತ್ತಮುತ್ತ ವಿಶೇಷ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ರಕ್ತ ಸಂಬಂಧಕ್ಕಿಂತ ಹೊರತಾದ ಈ ಪ್ರೀತಿಗಾಗಿ ನಮ್ಮ ಬದುಕಿನ ಅಮೂಲ್ಯ ಕ್ಷಣವನ್ನು ಕಳೆದುಬಿಡುತ್ತೇವೆ. ಇನ್ನೊಬ್ಬರ ಕಷ್ಟಗಳನ್ನು ನಮ್ಮದೇ ಎನ್ನುವಂತೆ ಹೊತ್ತುಕೊಂಡು ತಿರುಗುತ್ತೇವೆ. ಆದರೆ, ಎಷ್ಟೋ ವೇಳೆ ಈ ಪ್ರೀತಿಯಿಂದ ಪ್ರತಿಫಲವಾಗಿ ನೋವು ಬಿಟ್ಟರೆ ಬೇರಿನ್ನೇನೂ ಸಿಗದು. ಈ ಹತಾಶೆಯಿಂದ ಹೊರಬರಲಾಗದೆ ನಮಗೆ ನಾವು ಇನ್ನಷ್ಟು ನೋವು ಕೊಟ್ಟುಕೊಳ್ಳುತ್ತೇವೆ. ಇನ್ನೊಬ್ಬರಿಗೆ ಪ್ರೀತಿ ಹಂಚುವುದು ತಪ್ಪೇನಲ್ಲ. ಆದರೆ, ಈ ಪ್ರೀತಿ ಹಂಚುವ ಭರದಲ್ಲಿ ನಮ್ಮನ್ನು ನಾವು ಪ್ರೀತಿಸಲು ಮರೆಯಬಾರದು.
ಮೊಬೈಲ್ ಸ್ವಿಚ್ಡ್ ಆಫ್ ಮಾಡಿ
ಈಗೀಗ ನಾವು ದಿನದ ಬಹುತೇಕ ಅವಧಿಯನ್ನು ಗ್ಯಾಜೆಟ್‌ಗಳ ನಡುವೆಯೇ ಕಳೆಯುತ್ತೇವೆ. ಸಾಮಾಜಿಕ ಜಾಲತಾಣ ಜಗತ್ತಿನೊಳಗೆ ಸೇರಿಬಿಡುತ್ತೇವೆ. ಯಾರ್ಯಾರೋ ಫೋನ್ ಮಾಡ್ತಾರೆ. ಅದಕ್ಕೆಲ್ಲ ಕಿವಿಯಾನಿಸುವುದರಲ್ಲೇ ನಮ್ಮ ಬದುಕಿನ ಬಹುತೇಕ ಸಮಯವನ್ನು ಕಳೆದುಬಿಡುತ್ತೇವೆ. ಇದರ ಮಧ್ಯ ನಮ್ಮ ಬಗ್ಗೆ ಕಾಳಜಿ ವಹಿಸಲು ಪುರುಸೊತ್ತೇ ಸಿಗುವುದಿಲ್ಲ. ಕನಿಷ್ಠ ವಾರಕ್ಕೊಂದು ದಿನವಾದರೂ ಬಿಡುವು ಮಾಡಿಕೊಳ್ಳಿ. ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ನಿಂದ ದೂರ ಇರಿ. ಯಾವುದಾದರೂ ಆಹ್ಲಾದಕರ ಪ್ರದೇಶಕ್ಕೆ ಭೇಟಿ ಕೊಡಿ. ರಿಲ್ಯಾಕ್ಸ್ ಆಗಿ.
ಶಹಬ್ಬಾಸ್‌ಗಿರಿ ಕೊಟ್ಟುಕೊಳ್ಳಿ
ನೀವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ತಪ್ಪು ಹುಡುಕುವವರು, ಕಾಲೆಳೆಯುವವರು ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನೀವೇನು ಅನ್ನುವುದು ನಿಮಗೆ ಗೊತ್ತು. ಅದನ್ನು ಇನ್ನೊಬ್ಬರಿಗೆ ಅರ್ಥ ಮಾಡಿಸುವ ಅಗತ್ಯವಿಲ್ಲ. ನೀವು ಮಾಡಿದ ಉತ್ತಮ ಕೆಲಸಕ್ಕೆ ನಿಮಗೆ ನೀವೇ ಶಹಬ್ಬಾಸ್‌ಗಿರಿ ಕೊಟ್ಟುಕೊಳ್ಳಿ. ಆದರೆ, ಅದು ನಿಮ್ಮ ಒಳ್ಳೆಯ ಕೆಲಸಕ್ಕಷ್ಟೇ ಸೀಮಿತವಾಗಿರಲಿ.
ನಿಮಗೆ ನೀವೇ ಗೆಳೆಯರಾಗಿ...
ಜಗತ್ತಿನಲ್ಲಿ ನಿಮಗಿಂತ ಒಳ್ಳೆಯ ಗೆಳೆಯ ಬೇರೊಬ್ಬನಿಲ್ಲ. ನಿಮಗೆ ನೀವೇ ಗೆಳೆಯನಾಗುವುದರಿಂದ ಯಾವತ್ತೂ ನೀವು ಮೋಸಹೋಗುವ ಭಯ ಇರುವುದಿಲ್ಲ. ಅಲ್ಲದೆ, ಈ ಗೆಳೆಯ ನಿಮ್ಮ ವಿಚಾರಗಳನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳುವುದೂ ಇಲ್ಲ. ಸುಳ್ಳು ವಿಮರ್ಶೆಯನ್ನೂ ಮಾಡನು.
ಹೋಲಿಕೆ ಬೇಡ
ನಿಮ್ಮನ್ನು ನೀವು ಯಾವತ್ತೂ ಇನ್ನೊಬ್ಬರ ಜತೆಗೆ ಹೋಲಿಸಬೇಡಿ. ನೀವು ಬೇರೆಯವರಿಗಿಂತ ಭಿನ್ನ. ನೀವು ಯಾವತ್ತೂ ಇನ್ನೊಬ್ಬರಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಜಗತ್ತಿನಲ್ಲಿ ಪ್ರತಿ ವಸ್ತುವಿಗೂ ಅದರದ್ದೇ ವಿಶೇಷತೆ ಇದೆ. ನಿಮ್ಮಲ್ಲೂ ಏನೋ ವಿಶೇಷತೆ ಇದ್ದೇ ಇರುತ್ತದೆ. ಅದಕ್ಕಾಗಿ ಹೆಮ್ಮೆಪಟ್ಟುಕೊಳ್ಳಿ. ನಿಮ್ಮನ್ನು ನೀವು ಇತರರೊಂದಿಗೆ ಹೋಲಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.
ಪರ್ಫೆಕ್ಟ್ ಆಗುವ ಯತ್ನ ಬೇಡ
ನೀವು ಎಲ್ಲಾ ವಿಚಾರದಲ್ಲೂ ಪರ್ಫೆಕ್ಟ್ ಅಲ್ಲ. ಎಲ್ಲರೂ ಎಲ್ಲಾ ವಿಚಾರದಲ್ಲೂ ಪರ್ಫೆಕ್ಟ್ ಆಗಲು ಸಾಧ್ಯವೂ ಇಲ್ಲ. ಪರ್ಫೆಕ್ಟ್ ಆಗದಿರುವುದಕ್ಕೆ ನಿಮ್ಮನ್ನು ನೀವು ಯಾಕೆ ಟೀಕಿಸಿಕೊಳ್ಳಬೇಕು? ಇನ್ನೊಬ್ಬರ ನಿರೀಕ್ಷೆಗಳು ನಿಮ್ಮ ಮೇಲೆ ಒತ್ತಡ ಹಾಕದಂತೆ ನೋಡಿಕೊಳ್ಳಬೇಡಿ.
ನಿಮ್ಮನ್ನು ನೀವು ಕ್ಷಮಿಸಿ
ಈ ಹಿಂದೆ ನೀವೇನಾದರೂ ತಪ್ಪುಮಾಡಿದ್ದರೆ ಅದಕ್ಕಾಗಿ ಜೀವನದುದ್ದಕ್ಕೂ ಕೊರಗುತ್ತಲೇ ಕೂರಬೇಕೆಂದೇನೂ ಇಲ್ಲ. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಸಾಧ್ಯವಿದ್ದರೆ ಅದನ್ನು ತಿದ್ದಿಕೊಳ್ಳಲು ಯತ್ನಿಸಿ. ಆ ನೋವನ್ನು ಪದೇಪದೇ ನೆನಪಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ.
ಆತ್ಮವಿಶ್ವಾಸ ಬೆಳೆಸಿಕೊಳ್ಳಿ
ಆತ್ಮವಿಶ್ವಾಸ ಹೆಚ್ಚಿಸುವ ಅವಕಾಶಗಳನ್ನು ಕೈಬಿಡಬೇಡಿ. ಒಂದು ವೇಳೆ ನೀವು ನಿರ್ದಿಷ್ಟ ವಿಷಯ, ಕೆಲಸದಲ್ಲಿ ಉತ್ತಮ ಸಾಧನೆ ತೋರುತ್ತಿದ್ದರೆ ಅದಕ್ಕೆ ಹೆಚ್ಚಿನ ಸಮಯ ಮೀಸಲಿಡಿ. ಈ ಕೆಲಸ, ವಿಷಯದಲ್ಲಿ ನೀವು ತೋರುವ ಸಾಧನೆ ಇತರೆ ಕೆಲಸಗಳ ಮೇಲೂ ಪ್ರಭಾವ ಬೀರುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


