ಲೀಡರ್ ಡೈಜಸ್ಟ್
ಕಾಲೇಜು ಕ್ಯಾಂಪಸ್ ಆಟ, ಪಾಠಕ್ಕಷ್ಟೇ ಸೀಮಿತ ಅಂದುಕೊಂಡ್ರೆ ತಪ್ಪಾದೀತು.

ಕಾಲೇಜು ಕ್ಯಾಂಪಸ್ ಆಟ, ಪಾಠಕ್ಕಷ್ಟೇ ಸೀಮಿತ ಅಂದುಕೊಂಡ್ರೆ ತಪ್ಪಾದೀತು. ಅಲ್ಲೊಂದು ರಾಜಕೀಯ ಚಟುವಟಿಕೆಯೂ ಗುಪ್ತಗಾಮಿನಿಯಾಗಿ ಹರಿಯುತ್ತಿರುತ್ತದೆ. ಆದರೆ, ದೆಹಲಿ, ಓಸ್ಮಾನಿಯಾ ವಿವಿ, ಕೋಲ್ಕತಾದ ಪ್ರೆಸಿಡೆನ್ಸಿ ಕಾಲೇಜು, ಮಂಗಳೂರು ವಿವಿ... ಹೀಗೆ ಕೆಲ ಕಾಲೇಜು, ವಿವಿಗಳಲ್ಲಷ್ಟೆ ಈ ರೀತಿಯ ರಾಜಕೀಯ ಸದ್ದು ಮಾಡುತ್ತದೆ. ಅದರಲ್ಲೂ ಎಬಿವಿಪಿ, ಎಸ್‌ಫ್‌ಐ, ಎನ್‌ಎಸ್‌ಯು ಮತ್ತಿತರ ರಾಜಕೀಯ ಹಿನ್ನಲೆ ಹೊಂದಿರುವ ಸಂಘಟನೆಗಳ ಬೆಂಬಲ ಅಭ್ಯರ್ಥಿಗಳಿಗಿದ್ದರಂತೂ ಮುಗಿದೇ ಹೋಯ್ತು. ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಒಂದು ಮಿನಿ ಸಮರವಾಗಿ ಪರಿವರ್ತನೆಯಾಗುತ್ತದೆ. ಕೆಲವೊಮ್ಮೆ ಇದು ಹೊಡೆದಾಟ ಬಡಿದಾಟಕ್ಕೂ ವೇದಿಕೆಯಾಗುವುದೂ ಇದೆ.
ಬಹುತೇಕ ಕಾಲೇಜುಗಳಲ್ಲಿ ಚುನಾವಣೆ ಕೇವಲ ಹೆಸರಿಗಷ್ಟೆ. ವಿದ್ಯಾರ್ಥಿಗಳ ಗುಂಪಿಗೆ ಒಬ್ಬ ನಾಯಕನನ್ನು ಆರಿಸಬೇಕು ಅಥವಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಒಬ್ಬ ವ್ಯಕ್ತಿ ಬೇಕು ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಗುಂಪಿಗೊಬ್ಬ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುತ್ತದೆ. ಸಾಹಿತ್ಯ ಸಂಘ, ಲಲಿತ ಕಲಾ ಸಂಘ, ಕ್ರೀಡಾಸಂಘ, ಮಾನವಿಕ ಸಂಘ, ಎನ್‌ಎಸ್‌ಎಸ್... ಹೀಗೆ ವಿವಿಧ ಆಸಕ್ತ ಕ್ಷೇತ್ರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಗಮನಿಸಿ ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಎಲ್ಲಾ ಕಾಲೇಜುಗಳಲ್ಲೂ ಪರಿಸ್ಥಿತಿ ಇದೇ ರೀತಿ ಇರುತ್ತದೆ ಎಂದೇನೂ ಇಲ್ಲ. ಇಲ್ಲಿ ಗುಂಪಿನ ಬೆಂಬಲ ಇದ್ದವನೇ ಬಾಸ್. ಆತ ತರಗತಿಗೆ ಸರಿಯಾಗಿ ಹಾಜರಾಗಬೇಕೆಂದೇನೂ ಇಲ್ಲ, ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕೆಂದೇನೂ ಇಲ್ಲ. ಕೈಯಲ್ಲೊಂದಿಷ್ಟು ಹಣ, ಬೆನ್ನ ಹಿಂದೆ ಪುಂಡರ ಪಡೆ, ಬೈಕು, ಕಾರು ಇದ್ದರಷ್ಟೆ ಸಾಕು. ಕಾಲೇಜು ಅಧ್ಯಕ್ಷಪಟ್ಟಕ್ಕೇರುವುದು ಸಲೀಸು.
ಇಂಥ ಸ್ಥಿತಿಯಲ್ಲಿ ಕಾಲೇಜು ಚುನಾವಣೆ ವೇಳೆ ಕೆಲವು ಆಡಳಿತ ಮಂಡಳಿಗಳು ಪೊಲೀಸರನ್ನು ಕರೆಸಿಕೊಳ್ಳುವುದೂ ಇದೆ. ಯಾಕೆಂದರೆ ಚುನಾವಣೆ ದಿನ ಪರ, ವಿರೋಧಿ ಗುಂಪಿನ ನಡುವೆ ಹೊಡೆದಾಟ ಮಾಮೂಲಿ. ಇದೇ ಕಾರಣಕ್ಕೆ ಬಹುತೇಕ ಶಿಕ್ಷಕರಿಗೆ ಕಾಲೇಜು ಎಲೆಕ್ಷನ್ ಅಂದ್ರೆ ಅಲರ್ಜಿ. ಆದರೆ, ಈ ಕ್ಯಾಂಪಸ್ ಚುನಾವಣೆ ಭವಿಷ್ಯದ ಅದೆಷ್ಟೋ ರಾಜಕೀಯ ನಾಯಕರ ಸೃಷ್ಟಿಗೆ ಕಾರಣವಾಗಿದೆ ಎನ್ನುವುದನ್ನು ಯಾವತ್ತೂ ಮರೆಯಬಾರದು. ನಮ್ಮ ನಡುವಿನ ಅನೇಕ ನಾಯಕರು ಕಾಲೇಜು ದಿನಗಳಲ್ಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಅಲ್ಲದೆ, ಈ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸ್ಥಾನಗಳಿಗೆ ಅದರದ್ದೇ ಮಹತ್ವವೂ ಇದೆ. ಈ ನಾಯಕರಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಗುರುತರ ಹೊಣೆಯಿರುತ್ತದೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ಶಿಕ್ಷಕರಿಗೆ ವಿವರಿಸುವ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿಭಾಯಿಸುವ ಹೊಣೆ ಈ ನಾಯಕರ ಮೇಲಿರುತ್ತದೆ. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಂದಾಣಿಕೆ ಮತ್ತು ಸಂಘಟನಾ ಕೌಶಲ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಹೇಗಿರಬೇಕು ನಾಯಕ?
ಕಾಲೇಜು ನಾಯಕನಿಗೆ ಒಂದಷ್ಟು ಅರ್ಹತೆಗಳಿರಲೇಬೇಕು. ಆತ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವವನಾಗಿರಬೇಕು, ಆದಷ್ಟು ಸರಳ ಮತ್ತು ನೇರ ನಡೆನುಡಿ ಇರಬೇಕು, ಆತನ ಮಾತು, ವಿಚಾರಗಳು ಸ್ಪಷ್ಟವಾಗಿರಬೇಕು. ಸೇವಾ ಮನೋಭಾವ ಇರಬೇಕು. ಪಠ್ಯ ಮಾತ್ರವಲ್ಲ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯನಾಗಿರಬೇಕು.
- ವಿದ್ಯಾ ಇರ್ವತ್ತೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


