ಏಕಾಂಗಿ ನಾನಲ್ಲ!

ಅಂದು ಕ್ಲಾಸ್ ಮುಗಿಸಿ ಸೀದಾ ಲೈಬ್ರರಿಗೆ ಹೋಗಿದ್ದೆ. ಪತ್ರಿಕೆ, ಮ್ಯಾಗಜಿನ್‌ಗಳನ್ನೆಲ್ಲ ತಿರುವಿ ಹಾಕಿದೆ. ಆದರೆ, ಯಾಕೋ ಬೇಜಾರು. ಕೈಯಲ್ಲೊಂದು ಪುಸ್ತಕ ಹಿಡಿದು ಕೂತೆ. ಮನಸ್ಸು ಕೇಳಬೇಕಲ್ವಾ... ಅದ್ಯಾಕೋ ಇವತ್ತು ಮಾಮೂಲಿನಂತಿರಲಿಲ್ಲ. ಒಂದರ್ಧ ಗಂಟೆಯಲ್ಲೇ ಹಾಸ್ಟೆಲ್‌ಗೆ ಹೋಗಿ ಬಿದ್ಕೊಳೊಣ ಅಂತನ್ನಿಸಿಬಿಡ್ತು.
ಒಂದೈದು ನಿಮಿಷ ನಡೆದಿರಬಹುದು, ಅಷ್ಟರಲ್ಲೇ ಮಳೆ ಧೋ ಎಂದು ಸುರಿಯಲಾರಂಭಿಸಿತು. ದಾರಿ ಮಧ್ಯ ಮರದ ಪಕ್ಕ ಸಣ್ಣದೊಂದು ಚಾವಣಿ ಕೆಳಗೆ ಜಾಗ ಇತ್ತು. ಓಡಿ ಹೋಗಿ ಅದರಡಿ ನಿಂತೆ. ಹಿತವೆನಿಸಿದರೂ ಭಯ. ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಇನ್ನೊಂದು ಕಡೆ ಒಬ್ಬಂಟಿ ಎನ್ನುವ ಭಯ. ಅಷ್ಟರಲ್ಲೇ ಆ ಕಡೆಯಿಂದ ಒಬ್ಬ ಯುವಕ ಓಡೋಡಿ ಬಂದ. ಪಾಪ ಮಳೆಗೆ ನೆನೆದಿದ್ದರಿಂದಲೋ ಏನೋ, ಚಳಿಯಿಂದ ನಡುಗುತ್ತಿದ್ದ. ಅಯ್ಯೋ ಅನಿಸಿತು. ಅಬ್ಬಾ, ನಾನು ಒಬ್ಬಂಟಿ ಅಲ್ವಲ್ಲ ಎನ್ನುವ ಖುಷಿಯಲ್ಲಿ ಆತನ ಜತೆ ಏನಾದರೂ ಮಾತನಾಡೋಣ ಅನ್ನಿಸ್ತು. ಇನ್ನೇನು ಬಾಯಿ ತೆರೆಯಬೇಕೆನ್ನುವಷ್ಟರಲ್ಲೇ ಅವನ ಫೋನು ರಿಂಗಣಿಸಿತು.
'ಹಲೋ' ಎಂದವನೇ ಇಹವನ್ನೇ ಮರೆತುಬಿಟ್ಟ. ಮೊಬೈಲ್ ಸಂಭಾಷಣೆಯಿಂದ ಆತ ಯಾವುದೋ ಸಮಸ್ಯೆಯಲ್ಲಿರುವುದು ಗೊತ್ತಾಯ್ತು. ಆತ ಮಾತನಾಡುತ್ತಲೇ ಇದ್ದ... ಎಷ್ಟು ಹೊತ್ತು ಹೀಗೆ ಫೋನ್‌ನಲ್ಲಿ ಕಳೆದನೋ ಗೊತ್ತಿಲ್ಲ. ಆದ್ರೆ, ನನ್ನ ಮನಸ್ಸು ಮಾತ್ರ ಆತ ಆದಷ್ಟು ಬೇಗ ಫೋನ್ ಇಟ್ಟು ಬಿಡ್ಲಿ ಅಂತಿತ್ತು. ಮಳೆಯೂ ಜೋರಾಯ್ತು. ನಾವಿಬ್ಬರೂ ಹತ್ತಿರ ನಿಂತೆವು. ನನಗೇನೋ ಭಯ... ಆದ್ರೂ ಅವನನ್ನು ಮಾತನಾಡಿಸಬೇಕು... ಪರಿಚಯ ಮಾಡಿಕೊಳ್ಳಬೇಕು, ಸಮಸ್ಯೆ ಏನೆಂದು ಕೇಳಬೇಕು ಎನ್ನುವ ತವಕ. ಆದ್ರೆ ಮಳೆಗೆ ಇದು ಬೇಕಿರಲಿಲ್ಲ. ಅಷ್ಟು ಹೊತ್ತು ಧೋ ಎಂದು ಸುರಿಯುತ್ತಿದ್ದ ಮಳೆ ದಿಢೀರ್ ಸುಮ್ಮನಾಯ್ತು. ಆತನಿಗೂ ಎಲ್ಲೋ ಹೋಗಬೇಕಿತ್ತೇನೋ? ಬಿರುಸಾಗಿ ಹೆಜ್ಜೆ ಹಾಕಿದ... ಹಾಗೆ ಹೋಗುವಾಗ ಒಮ್ಮೆ ತಿರುಗಿ ನೋಡಿ ನನ್ನತ್ತ ಮುಗುಳ್ನಕ್ಕ. ಅಷ್ಟೂ ಹೊತ್ತು ಪಕ್ಕದಲ್ಲೇ ನಿಂತರೂ ಒಂದೇ ಒಂದು ಅಕ್ಷರ ಮಾತನಾಡಿಸದ್ದಕ್ಕೋ...
ಕೆಲವೇ ಸಮಯದಲ್ಲಿ ಮನಸ್ಸಿಗೆ ತೀರಾ ಹತ್ತಿರದವ ಅನಿಸಿದ್ದಕ್ಕೋ... ಹಾಸ್ಟೆಲ್‌ಗೆ ಹೋದ ಬಳಿಕವೂ ಆ ಘಟನೆ ಪದೇ ಪದೇ ಕಾಡುತ್ತಲೇ ಇತ್ತು.
- ನಿರ್ಮಲಾ, ಗುರ್ಲ್ಬರ್ಗಾ ವಿವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


