ಯುವಜನ/ಮಕ್ಕಳು

ಪ್ಲಾಸ್ಟಿಕ್ ಗೊಂಬೆ?

ಮಕ್ಕಳು ಒಂದು ಹಂತದ ಪ್ರೌಢಾವಸ್ಥೆಗೆ ತಲುಪುವವರೆಗೂ ಆಟಿಕೆಗಳ ಸಹವಾಸ ಬೇಕೇಬೇಕು.

ಪ್ಲಾಸ್ಟಿಕ್ ಗೊಂಬೆ?
Published On :

ಆಟಿಕೆ, ಗೊಂಬೆಗಳೊಂದಿಗೆ ಆಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಗೊಂಬೆಗಳು ಮೌನದಲ್ಲಿಯೇ ಮುಗ್ಧ ಮಕ್ಕಳಿಗೆ ಮುಂದಿನ ಜೀವನದ ಕುರಿತಾಗಿ ಪಾಠ ಹೇಳಿಕೊಡುವುದು ಸೋಜಿಗ.
ಮಾತುಬಾರದ, ಚಟುವಟಿಕೆ ತೋರದ ಆಟಿಕೆಗಳಿಗೆ ಜೀವ ನೀಡಿ ಸಂಗಾತಿಯನ್ನಾಗಿಸಿಕೊಳ್ಳುವ ಭಾವುಕತೆ ಮಕ್ಕಳಿಗೆ ಮಾತ್ರ ಸಾಧ್ಯ. ಮಕ್ಕಳು ಒಂದು ಹಂತದ ಪ್ರೌಢಾವಸ್ಥೆಗೆ ತಲುಪುವವರೆಗೂ ಆಟಿಕೆಗಳ ಸಹವಾಸ ಬೇಕೇಬೇಕು. ಬಸ್ಸು, ಕಾರು, ವಿಮಾನ, ಹಡಗು ಇತ್ಯಾದಿಗಳನ್ನು ಮನದಲ್ಲೇ ನೆನಸಿಕೊಂಡು ಕೈಯಲ್ಲಿರುವ ಆಟಿಕೆಯನ್ನು ಚಲಿಸುತ್ತ ಖುಷಿಪಡುವುದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕಲ್ಪನಾಶಕ್ತಿಯನ್ನು ವೃದ್ಧಿಗೊಳಿಸುವ ಇಂತಹ ಕಲ್ಪಿತ ಆಟಿಕೆಗಳು ಬಾಲ್ಯದ ಚುರುಕುತನಕ್ಕೆ ಇಂಬು ನೀಡುತ್ತವೆ.
ಬೇಸರದ ವಿಚಾರ ಎಂದರೆ ಇತ್ತೀಚಿನ ಮಕ್ಕಳನ್ನು ಆಟಿಕೆಗಳಿಂದ ದೂರವಿಟ್ಟಿರುವುದು. ಕಂಪ್ಯೂಟರ್ ಗೇಮ್ಸ್ ಕಲಿಸಿ ಆಡಲು ಬಿಡುವ ಪೇ೤ರೆಂಟ್‌ಗಳಂತೆ ವರ್ತಿಸುವವರೇ ಅಧಿಕ. ನಾಗರೀಕತೆ ಬದಲಾಯಿತು ಸರಿ, ಆದರೆ ಮಕ್ಕಳ ಮನಸ್ಸನ್ನೂ ಬದಲಿಸಲು ಹೊರಟಿರುವುದು ಮಾತ್ರ ತಪ್ಪು. ಆಟಿಕೆಗಳೊಂದಿಗೆ ಆಡುವುದು ಮಕ್ಕಳ ಹಕ್ಕು. ಟಾಮ್ ಎಂಡ್ ಜೆರ್ರಿ, ಮಿಕ್ಕಿಮೌಸ್ ಇತ್ಯಾದಿ ಅನಿಮೇಟೆಡ್ ದೃಶ್ಯಗಳಿಗಿಂತ ಆಟಿಕೆಗಳೊಂದಿಗಿನ ಆಟ ಹೆಚ್ಚು ಪ್ರಭಾವಶಾಲಿ. ಆಟಿಕೆ, ಗೊಂಬೆಗಳನ್ನು ತಯಾರಿಸುವುದೂ ಒಂದು ಕಲೆ. ಹಳೆ ಬಟ್ಟೆಗಳನ್ನು ಹೊಲಿದು ಹುಲ್ಲು ಅಥವಾ ಬಟ್ಟೆಗಳನ್ನು ತುಂಬಿ ಮೃದುವಾದ ಚೆಂದನೆಯ ಗೊಂಬೆಯನ್ನು ಮಾಡಿ ಮಗುವಿಗೆ ಆಡಲು ಕೊಡುತ್ತಿದ್ದರು. ಹೆಣ್ಮಕ್ಕಳಿಗೆ ಮಾನವಾಕೃತಿಯ ಹೆಣ್ಣುಗೊಂಬೆ ಅಚ್ಚುಮೆಚ್ಚು. ತಲೆಬಾಚುವುದು, ಸೀರೆ ಉಡಿಸುವುದು, ಮಗುವಂತೆ ಲಾಲಿಸುವುದು ಇತ್ಯಾದಿ ಚಟುವಟಿಕೆಯಿಂದ ಆನಂದ ಪಡೆಯುತ್ತಾರೆ.
ಅಂದೆಲ್ಲಾ ಗೊಂಬೆ ತಯಾರಿಕೆಗೆ ಸಾಕಷ್ಟು ಕಚ್ಛಾವಸ್ತುಗಳನ್ನೇ ಬಳಸುತ್ತಿದ್ದರು. ಮಕ್ಕಳ ಬೆಳವಣಿಗೆಗೆ ಮಹತ್ವ ನೀಡುವ ಗೊಂಬೆಗಳ ಬಳಕೆ ಯಾವಾಗಿನಿಂದ ಪ್ರಾರಂಭವಾಯಿತೆಂದು ಗುರುತಿಸುವುದು ಕಷ್ಟ. ಆದರೆ ಟಾಯ್ ಎಂಬ ಪದವನ್ನು 14ನೇ ಸೆಂಚುರಿಯಲ್ಲಿ ಮೊದಲ ಬಾರಿಗೆ ಬಳಸಲು ಪ್ರಾರಂಭಿಸಿದರು ಎನ್ನಲಾಗಿದೆ.
ಆಟಿಕೆ ಬಳಕೆ ಇತಿಹಾಸಕ್ಕೂ ನಿಲುಕದು ಎಂದೆನಿಸುತ್ತದೆ. ಮಗು ಹುಟ್ಟಿನಿಂದಲೇ ಯಾವುದಾದರೊಂದು ವಸ್ತುವಿನೊಂದಿಗೆ ಆಡುವುದು ಸಹಜವಾಗಿ ಬಂದುಬಿಡುತ್ತದೆ. ಇಂಡಸ್ ವ್ಯಾಲಿ ನಾಗರಿಕತೆಯಲ್ಲಿ ಆಟಿಕೆಗಳ ಬಳಕೆ ಇದ್ದವು ಎಂಬುದಕ್ಕೆ ಉಲ್ಲೇಖಗಳಿವೆ. ಕುದುರೆ, ಮಂಗಗಳನ್ನು ಹೋಲುವ ವಸ್ತುಗಳು ಸಿಕ್ಕಿರುವುದು ಗೊಂಬೆಗಳಿದ್ದವು ಎಂಬುದಕ್ಕೆ ಪುಷ್ಟಿ. ಪ್ರಕೃತಿಯಲ್ಲಿ ಸಿಗುತ್ತಿದ್ದ ವಸ್ತುಗಳೇ ಆಟದ ಗೊಂಬೆಗಳಾಗಿ ಮೊದಲು ಬಳಸಲಾಗುತ್ತಿದ್ದವು. ಕಲ್ಲು, ಮರದ ತುಂಡು, ಮಣ್ಣು ಇತ್ಯಾದಿಗಳು ಬಳಕೆಯಲ್ಲಿದ್ದವು. ಸಾವಿರಾರು ವರ್ಷಗಳ ಹಿಂದೆ ಈಜಿಪ್ತ್‌ನ ಮಕ್ಕಳು ರೆಕ್ಕೆ ಮತ್ತು ನಡೆದಾಡುವ ಕಾಲುಗಳನ್ನು ಹೊಂದಿದ್ದ ಗೊಂಬೆಗಳಲ್ಲಿ ಆಡುತ್ತಿದ್ದರಂತೆ. ಹೆಚ್ಚಿನ ಗೊಂಬೆಗಳು ಮಣ್ಣು ಮತ್ತು ಮರದ ತುಂಡುಗಳಿಂದ ನಿರ್ಮಿಸಲಾಗಿದ್ದವಂತೆ. ಗ್ರೀಕ್ ಮತ್ತು ರೋಮ್‌ನ ಮಕ್ಕಳು ಆಟವಾಡುತ್ತಿದ್ದುದು ಕೋಲು, ಮೇಣ, ಬಿಲ್ಲು, ಬಾಣ ಇತ್ಯಾದಿಗಳಿಂದ ಮಾಡಿದ ಆಟಿಕೆಗಳಿಂದ.
ಪ್ಲಾಸ್ಟಿಕ್, ಫೈಬರ್‌ಗಳ ಬಳಕೆ ಮಾರಕ ಎಂಬ ಸತ್ಯ ಗೊತ್ತಿದ್ದರೂ ತಮ್ಮ ಮಕ್ಕಳಿಗೆ ಮಾರುಕಟ್ಟೆಯಲ್ಲಿ ಸಿಗುವ ಆಟಿಕೆಗಳನ್ನೇ ಕೊಡಿಸುವುದು ಅಷ್ಟು ಸಮಂಜಸವಲ್ಲ. ಪ್ರಕೃತಿಯಿಂದ ಸಿಗುವ, ತಾವೇ ತಯಾರಿಸಿದ ಗೊಂಬೆಗಳನ್ನು ಪರಿಚಯಿಸಬೇಕು. ಕಲ್ಲು, ಮಣ್ಣು, ಮರ ಗಿಡಗಳ ಸಖ್ಯವೂ ಬೆಳೆಯುತ್ತದೆ. ಬಾಲ್ಯದಿಂದಲೇ ಪರಿಸರದ ಬಗ್ಗೆ ಒಲವು ಮೂಡಿಸಬೇಕಾದರೆ ಆಟಿಕೆಗಳ ಮೂಲಕ ಸಾಧ್ಯ. ರಿಮೋಟ್ ಕಂಟ್ರೋಲ್ ಆಟಿಕೆಗಳು ಬೇಡ. ಪರಿಸರಸ್ನೇಹಿ ಆಟಿಕೆಗಳಿಗೆ ಮಣೆಹಾಕಿ.

- ಮಂಜುನಾಥ ಎಲ್.ಕೆ., ಲಕ್ಷ್ಮೀಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.