ಮಕ್ಕಳ ಎಕ್ಸಾಮ್ ಮನೇಲಲ್ವೆ?

ಪರೀಕ್ಷೆ... ಯಾರಿಗೆ? ಮಕ್ಕಳಿಗೊ, ಹೆತ್ತವರಿಗೊ? ಎಕ್ಸಾಮ್ ಅನ್ನೋದು ಇಬ್ಬರಿಗೂ ಕಿರಿಕಿರಿ ಅನ್ನೋದಂತೂ ನಿಜ ಬಿಡಿ. ಓದಿನತ್ತ ಆಸಕ್ತಿ ಇಲ್ಲದ ಮಕ್ಕಳಿಗೆ 'ಓದು ಓದು' ಎಂದು ದುಂಬಾಲು ಬೀಳುವುದು ಹೆತ್ತವರಿಗೂ ಪರೀಕ್ಷೆ ಬರೆದಷ್ಟೇ ಕಠಿಣವಾಗಿ ಬಿಡುತ್ತದೆ. ಕೆಲಸ, ಕಾರ್ಯಗಳನ್ನೆಲ್ಲಾ ಬದಿಗೊತ್ತಿ ಮಕ್ಕಳ ಓದಿಗೆ ಹೆಚ್ಚು ಸಮಯ ಮೀಸಲಿಡಬೇಕು. ಹೀಗಾಗಿ ಮಕ್ಕಳಿಗೆ ಮಾತ್ರವಲ್ಲ, ಹೆತ್ತವರಿಗೂ ಪರೀಕ್ಷೆ ಎಂಬಂತಾಗಿದೆ.
ಪರೀಕ್ಷೆ ಅಂದ್ರೆ ಅದು ಮಕ್ಕಳಿಗಷ್ಟೇ ಅನ್ನುವ ಕಾಲ ಹೊರಟ್ಹೋಗಿದೆ. ಮಕ್ಕಳ ಜತೆಗೆ ಪೋಷಕರೂ ಪರೀಕ್ಷೆ ಸಿದ್ಧತೆ ನಡೆಸಬೇಕು. ಕಚೇರಿ, ಮನೆ ಕೆಲಸ ಬಿಟ್ಟು ಮಕ್ಕಳ ಓದಿನ ಮೇಲೆ ಕಣ್ಣಿಡಬೇಕು. ಅದರಲ್ಲೂ ಮಕ್ಕಳು ತರ್ಲೆಗಳಾಗಿದ್ದರೆ ಪರೀಕ್ಷೆ ವೇಳೆ ಅವರ ದಿನಚರಿಯನ್ನು ದುರ್ಬೀನು ಹಿಡಿದು ಕಣ್ಗಾವಲು ಇಡುವುದು ಅನಿವಾರ್ಯ. ಹೀಗಾಗಿ ಪರೀಕ್ಷೆ ಬಂದ್ರೆ ಪೋಷಕರು ಪಡುವ ಪಡಿಪಾಟಲು ಒಂದೆರಡಲ್ಲ.
ಸಣ್ಣಮಕ್ಕಳಾದರೆ ಕುಂಡೆಗೆರಡು ಬಾರಿಸಿ ಪುಸ್ತಕ ಕೈಗಿಡಬಹುದು ಅಥವಾ ಚಾಕಲೇಟ್ ಆಸೆ ತೋರಿಸಿ ಓದಲು ಪ್ರೇರೇಪಿಸಬಹುದು. ಎಸ್ಸೆಸ್ಸೆಲ್ಸಿ ಪಿಯುಸಿ ಮಕ್ಕಳಾದರೆ ಕಷ್ಟ ಕಷ್ಟ... ಅವರನ್ನು ಪುಟ್ಟಮಕ್ಕಳಂತೆ ಎದುರು ಕೂರಿಸಿ ಓದಿಸುವುದು ಅಸಾಧ್ಯ. ಹಾಗಂತ ಅವರನ್ನು ಅವರಷ್ಟಕ್ಕೆ ಬಿಡುವಂತೆಯೂ ಇಲ್ಲ. ಕೋಣೆಗೆ ಕದ ಹಾಕಿ ಓದಿ ಅಂತ ಬೆಬಿಟ್ಟು ಹೋದರೆ ಮಧ್ಯಾಹ್ನದ ಹೊತ್ತಿಗೆ ಗಡದ್ದಾಗಿ ನಿದ್ದೆ ಹೊಡೆದಿರುತ್ತಾರೆ. ಗ್ರೂಪ್ ಸ್ಟಡಿ ಅಂತ ಫ್ರೆಂಡ್ಸ್ ಮನೆಗೆ ಹೋದವರು ಕ್ರಿಕೆಟ್ ಆಡುತ್ತಿರುತ್ತಾರೆ. ಹಾಗಂತ ಅವರನ್ನು ತೀರಾ ದಂಡಿಸುವಂತೆಯೂ ಇಲ್ಲ. ದಂಡಿಸಿದರೆ ಮುನಿಸಿಕೊಂಡು ಓದಿನ ಗೊಡವೆಯೇ ಬೇಡ ಅಂತ ಇದ್ದುಬಿಡಬಹುದು. ಈ ಸಮಸ್ಯೆಯಿಂದಾಗಿ ಪರೀಕ್ಷೆ ಹತಹತ್ರ ಬಂದ್ರೆ ಪೋಷಕರು ತಾವೇ ಪರೀಕ್ಷೆ ಬರೆಯುತ್ತಿದ್ದೇವೆ ಎನ್ನುವ ಪರಿಸ್ಥಿತಿಯನ್ನು ಆವಾಹನೆ ಮಾಡಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಪರೀಕ್ಷೆ ಅಂದ್ರೆ ಮಕ್ಕಳಿಗಷ್ಟೇ ಅಲ್ಲ ಹೆತ್ತವರಿಗೂ ಭಯ. ಪರೀಕ್ಷೆ ಮುಗಿಯುವ ವೇಳೆಗೆ ಮಕ್ಕಳಂತೆ ತಾವೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಪೋಷಕರು.
ಎಲ್ಲಾ ಮಕ್ಕಳಿಗೂ ಪರೀಕ್ಷೆಯಲ್ಲಿ ಪಾಸಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ತರ್ಲೆ ಮಕ್ಕಳಿಗೂ ಅಷ್ಟೆ. ಇಂತಹ ಮಕ್ಕಳಿಗೆ ಟೈಮ್ ಟೇಬಲ್ ಹಾಕಿಕೊಟ್ಟು ಓದಿಸುವುದು ಒಳಿತು. ಪರೀಕ್ಷೆ ಹತ್ತಿರ ಬಂದಾಗ ಇಂತಹ ಮಕ್ಕಳಿಗಾಗಿ ಶಾಲೆಯಲ್ಲಿ ಹೆಚ್ಚುವರಿ ತರಗತಿ ತೆಗೆದುಕೊಂಡು ಅವರಿಗೆ ಸುಲಭವಾಗುವ ರೀತಿಯಲ್ಲಿ, ಮನಮುಟ್ಟುವಂತೆ ಪಠ್ಯಗಳನ್ನು ಹೇಳಿಕೊಡುವುದು ಉತ್ತಮ. ಹೆಚ್ಚಿನ ಮಕ್ಕಳಿಗೆ ಗಣಿತ, ವಿಜ್ಞಾನ, ಇಂಗ್ಲಿಷ್ ಎಂದರೆ ಭಯ. ಆದರೆ, ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಅಧ್ಯಯನ ಮಾಡಿಸಿದರೆ ಯಾವುದೂ ಕಷ್ಟವಲ್ಲ ಎನ್ನುತ್ತಾರೆ ಶಿರ್ಲಾಲು ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಫ್ಯಾನಿ ಜಾಯ್.
ಪರೀಕ್ಷೆ ಸಮಯದಲ್ಲಿ ಓದು ಮಾತ್ರವಲ್ಲ, ಮಕ್ಕಳ ಆರೋಗ್ಯದ ಕಡೆಗೂ ಈ ಸಂದರ್ಭ ಹೆಚ್ಚಿನ ಗಮನಹರಿಸುವುದು ಅಗತ್ಯ ಎನ್ನುತ್ತಾರೆ ಗೃಹಿಣಿ ಮಂಗಳೂರಿನ ಲೀಲಾ ಹೊಳ್ಳ.
ಏನು ಮಾಡಬಹುದು?
- ಮಕ್ಕಳು ಸ್ವಲ್ಪ ತರ್ಲೆ ಸ್ವಭಾವದವರಾಗಿದ್ದರೆ ಪೋಷಕರೇ ಕೂರಿಸಿಕೊಂಡು ಓದಿಸುವುದು ಒಳಿತು. ಓದಿನ ನಡುವೆ ಮಕ್ಕಳಿಗೆ ನೀತಿಯಾಧರಿತ ಸಣ್ಣ ಕಥೆಗಳನ್ನು ಹೇಳಿ. ಇದು ಅವರಲ್ಲಿ ಓದುವ ಉತ್ಸಾಹ ತುಂಬುತ್ತದೆ.
- ಪರೀಕ್ಷೆ ಹತ್ತಿರ ಬಂದಾಗ ಮನೆಯಲ್ಲೇ ಒಂದು ಪರೀಕ್ಷೆ ನಡೆಸಿ. ತಪ್ಪಾಗಿ ಉತ್ತರಿಸಿದ್ದರೆ ತಿದ್ದಿ. ಆಗ ಪರೀಕ್ಷೆಯಲ್ಲಿ ಉತ್ತರ ಮರೆತು ಹೋಗುವ ಸಾಧ್ಯತೆ ಕಡಿಮೆ.
- ಬರೆದು ಓದುವ ಹವ್ಯಾಸ ಬೆಳೆಸಿದರೆ ಮತ್ತೂ ಉತ್ತಮ. ಯಾಕೆಂದರೆ ಪರೀಕ್ಷೆ ಹತ್ತಿರವಿದೆ ಎಂದಾಗ ಹೆಚ್ಚಿನೆಲ್ಲಾ ಮಕ್ಕಳು ಬಾಯಿಪಾಠ ಮಾಡುತ್ತಾರೆ. ಪರೀಕ್ಷೆ ಕೊಠಡಿಯಲ್ಲಿ ಭಯ ಕಾಡಿದರೆ ಎಲ್ಲಾ ಮರೆತು ಬಿಡುತ್ತಾರೆ. ಬರೆದು ಓದುವುದರಿಂದ ಮರೆತು ಹೋಗುವ ಸಾಧ್ಯತೆ ಕಡಿಮೆ.
- ರಜಾ ಅವಧಿಯಲ್ಲಿ ಪ್ರವಾಸಕ್ಕೆ ಹೋಗುವ ಆಮಿಷ ತೋರಿಸಿ ಓದಲು ಪ್ರೇರೇಪಿಸಬಹುದು. ಆದರೆ, ಹೈಸ್ಕೂಲು, ಕಾಲೇಜು ಮಕ್ಕಳಿಗೆ ಬೈಯ್ದು, ಹೊಡೆದು ಓದಲು ಹೇಳುವುದು ಕಷ್ಟ. ಇಂತಹ ಮಕ್ಕಳಿಗೆ ಹೆತ್ತವರು ಓದಿನ ಪ್ರಾಮುಖ್ಯತೆ ವಿವರಿಸಬೇಕು. ಅವರಾಗಿಯೇ ಓದಲು ಕೂರುವಂತೆ ಮಾಡಬೇಕು
- ತುಂಟ ಮಕ್ಕಳನ್ನು ಓದಿಸುವುದು ಹರಸಾಹಸ. ಅವರ ಮೇಲೆ ಸದಾ ನಿಗಾ ಇಟ್ಟಿರಬೇಕು. ಇಂತಹ ಮಕ್ಕಳ ಓದಿಗೆ ಟೈಂ ಟೇಬಲ್ ಸಿದ್ಧಮಾಡಿಕೊಡಬೇಕು. ಪುಸ್ತಕ ಹಿಡಿದುಕೊಂಡಿದ್ದಾಗಲೂ ಅವರ ಮನಸ್ಸು ಯಾವತ್ತೂ ಆಟದ ಕಡೆಗೇ ಇರುತ್ತದೆ. ಹಾಗಾಗಿ ಅವರು ಕೆಲಹೊತ್ತು ಅಟವಾಡಲೂ ಅವಕಾಶ ನೀಡಬೇಕು.
- ಓದಿನ ಮಧ್ಯೆ ಬ್ರೇಕ್ ನೀಡಿ ಅವರಿಗೆ ಮನಸ್ಸು ರಿಲಾಕ್ಸ್ ಮಾಡಿಸಿ, ಓದಿರುವುದರಲ್ಲಿ ನೆನಪಲ್ಲಿ ಉಳಿದಿರುವುದನ್ನು ಹೇಳಿಸಬೇಕು. ಹೀಗೆ ಮಾಡುವುದರಿಂದ ಅವರ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


