ಸಂದರ್ಶನ
ಪರೀಕ್ಷೆ ಫಲಿತಾಂಶ ಬರುವ ಮುನ್ನಾ ದಿನ ಲೈಟಾಗಿ ಜ್ವರ ಬರುವಂತೆ, ಸಂದರ್ಶನದ ಮೊದಲ ದಿನವೂ...

ಪರೀಕ್ಷೆ ಫಲಿತಾಂಶ ಬರುವ ಮುನ್ನಾ ದಿನ ಲೈಟಾಗಿ ಜ್ವರ ಬರುವಂತೆ, ಸಂದರ್ಶನದ ಮೊದಲ ದಿನವೂ ಇದೇ ಅನುಭವ... ನಾಳೆ ಏನಾಗುತ್ತದೋ? ಏನೇನು ಪ್ರಶ್ನೆ ಕೇಳುತ್ತಾರೋ? ಎಷ್ಟು ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿರುತ್ತವೆಯೋ? ಕೆಲಸ ಸಿಗುತ್ತಾ ಅಥವಾ ಖಾಲಿ ಕೈಯಲ್ಲಿ ವಾಪಸ್ಸಾಗಬೇಕಾ? ಹೀಗೆ ಒಂದರ ನಂತರ ಒಂದರಂತೆ ಪ್ರಶ್ನೆಗಳ ಮಳೆ. ರಾತ್ರಿಯಿಡೀ ಬಾರದ ನಿದ್ದೆ. ಯಾವುದೋ ಜಾವದಲ್ಲಿ ಬಂದರೂ ಮತ್ತೆ ಅದರದ್ದೇ ಕನಸು... ಈ ರೀತಿಯ ಅನುಭವ ಹೆಚ್ಚಿನವರಿಗೆ ಆಗುತ್ತದೆ. ನಿಜ ಹೇಳಬೇಕೆಂದರೆ ಸಂದರ್ಶನಕ್ಕೆ ಹೋಗುವಾಗ ಗಾಬರಿಯಾಗಬೇಕಾದ ಅಗತ್ಯವೇ ಇಲ್ಲ. ಕೆಲವೊಂದು ವಿಷಯಗಳನ್ನು ಮೊದಲೇ ತಿಳಿದುಕೊಂಡರೆ ಇಂಟರ್‌ವ್ಯೂ ಎದುರಿಸುವುದು ನೀರು ಕುಡಿದಷ್ಟೇ ಸುಲಭ...
ಸಂದರ್ಶನವೆಂದರೇನು?
ಉದ್ಯೋಗದಾತನು ತನ್ನ ಸಂಸ್ಥೆಗೆ ಸೇವೆ ಸಲ್ಲಿಸಲು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಧಾನವೇ ಸಂದರ್ಶನ. ಸಂದರ್ಶನಕ್ಕೂ ಮುನ್ನ ಉದ್ಯೋಗದಾತ ತನಗೆ ವಿವಿಧ ಅಭ್ಯರ್ಥಿಗಳಿಂದ ಬಂದ ರೆಸ್ಯೂಮೆಗಳನ್ನು ಪರಿಶೀಲಿಸಿ ಯಾರನ್ನೆಲ್ಲ ಸಂದರ್ಶನಕ್ಕೆ ಕರೆಸಬಹುದು ಎಂಬ ತೀರ್ಮಾನಕ್ಕೆ ಬರುತ್ತಾನೆ. ಅಂದರೆ, ನಿಮಗೆ ಸಂದರ್ಶನಕ್ಕೆ ಕರೆ ಬಂದಿತೆಂದರೆ, ನೀವು ಕೆಲಸಕ್ಕೆ ಯೋಗ್ಯನೆಂದು ಆತ ಭಾವಿಸಿದ್ದಾನೆಂದೇ ಅರ್ಥ. ಅದನ್ನು ನೀವು ಸಂದರ್ಶನದಲ್ಲಿ ಸಾಬೀತುಪಡಿಸಬೇಕು ಅಷ್ಟೆ.
ಇವು ನೆನಪಿರಲಿ
ನಿಮ್ಮ ಅರ್ಹತೆಯನ್ನು ನೀವೇ ನಿರ್ಧರಿಸಿ
ಸಂಸ್ಥೆಗೆ ನೆರವಾಗುವಂತಹ ಕೌಶಲಗಳು ನಿಮ್ಮಲ್ಲೇನಿವೆ ಎಂಬುದನ್ನು ಮೊದಲೇ ಪಟ್ಟಿಮಾಡಿಕೊಳ್ಳಿ. ನೀವು ಸೇರಿಕೊಳ್ಳಲು ಬಯಸುವ ಸಂಸ್ಥೆಗೆ ಹಾಗೂ ಹುದ್ದೆಗೆ ನೀಡಬಹುದಾದ ಮೌಲ್ಯದ ವಿಚಾರವನ್ನು ಮನನ ಮಾಡಿಕೊಳ್ಳಿ.
ಸಂಸ್ಥೆ ಬಗ್ಗೆ ವಿಶ್ಲೇಷಣೆ
ಸಂದರ್ಶನಕ್ಕೆ ಹೋಗುವ ಮುನ್ನ ಆ ಸಂಸ್ಥೆಯ ಬಗ್ಗೆ ಮಾಹಿತಿ ಕಲೆಹಾಕಿಕೊಳ್ಳಿ. ಕಂಪನಿಯ ವೆಬ್‌ಸೈಟ್ ಸರ್ಚ್ ಮಾಡಿ, ಕಂಪನಿಯ ವಾರ್ಷಿಕ ವರದಿ, ಬ್ರೋಷರ್‌ಗಳ ಬಗ್ಗೆ ತಿಳಿದುಕೊಳ್ಳಿ. ಜಾಬ್ ಬೋರ್ಡ್ ಅಥವಾ ನೇಮಕಾತಿ ಸೈಟ್‌ಗಳ ಮೂಲಕ ಕಂಪನಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ.
ಉದ್ಯೋಗದ ಇತಿಹಾಸ
ನಿಮ್ಮ ಹಿಂದಿನ ಸಾಧನೆಗಳನ್ನು ನೆನಪು ಮಾಡಿಕೊಂಡು, ಕೆಲಸದ ಅನುಭವದ ಬಗ್ಗೆ ವಿವರಿಸಿ ಹೇಳಿ. ನಿಮ್ಮ ಸಾಧನೆಗೆ ಪೂರಕವಾದ ದಾಖಲೆಗಳನ್ನು ಉದ್ಯೋಗದಾತನ ಮುಂದೆ ಪ್ರಸ್ತುತಪಡಿಸಿ.
ಪ್ರಶ್ನೆಗಳನ್ನು ನಿರೀಕ್ಷಿಸಿ
ಸಾಮಾನ್ಯವಾಗಿ ಕೇಳಬಹುದಾದ ಪ್ರಶ್ನೆಗಳನ್ನು ಮೊದಲೇ ಊಹಿಸಿಕೊಳ್ಳಿ. 'ನಿಮ್ಮ ಬಗ್ಗೆ ಹೇಳು' ಇದು ಇಂತಹ ಪ್ರಶ್ನೆಗಳಲ್ಲಿ ಒಂದು. ಈ ಪ್ರಶ್ನೆ ಕೇಳಿದರೆ ತಕ್ಷಣ ನಿಮ್ಮ ಬ್ಯಾಕ್‌ಗ್ರೌಂಡ್ ಹಾಗೂ ಕೆಲವೊಂದು ವೃತ್ತಿಪರ ಮತ್ತುವೈಯಕ್ತಿಕ ಯಶಸ್ಸುಗಳನ್ನು ತಿಳಿಸಿ. ಉದಾಹರಣೆಗೆ, ನಿಮ್ಮ ಸೇಲ್ಸ್ ರೆಕಾರ್ಡ್‌ಗಳು, ನೀವು ಮಾಡಿರುವ ಪ್ರಾಜೆಕ್ಟ್‌ಗಳು, ಭಾಷಾ ಜ್ಞಾನ, ಸಂವಹನ ಕೌಶಲ್ಯ, ಉತ್ಪಾದಕತೆ ಇತ್ಯಾದಿ. ಎಲ್ಲ ಪ್ರಶ್ನೆಗಳಿಗೂ ಧನಾತ್ಮಕವಾಗಿಯೇ ಉತ್ತರ ನೀಡಲು ಮರೆಯದಿರಿ.
ಊಹಿಸಬಹುದಾದ ಕೆಲವೊಂದು ಪ್ರಶ್ನೆಗಳು ಹೀಗಿವೆ:
- ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳೇನು?
- ಇತ್ತೀಚೆಗಿನ ಉದ್ಯೋಗದ ಪರ್ಫಾಮೆನ್ಸ್ ಬಗ್ಗೆ ಹೇಳಿ.
- ನಮ್ಮ ಕಂಪನಿಯಲ್ಲಿ ನಿಮಗೆ ಆಸಕ್ತಿದಾಯಕವೆನಿಸಿದ್ದು ಯಾವುದು?
- ಈಗಿರುವ ಕೆಲಸವನ್ನು ಏಕೆ ಬಿಡುತ್ತಿದ್ದೀರಿ?
ನಿಮ್ಮದೇ ಪ್ರಶ್ನೆಗಳು
ನಿಮ್ಮ ಉತ್ತರಗಳಷ್ಟೇ ನಿಮ್ಮ ಪ್ರಶ್ನೆಗಳ ಬಗ್ಗೆಯೂ ಉದ್ಯೋಗದಾತರು ಆಸಕ್ತಿ ಹೊಂದಿರುತ್ತಾರೆ. ನಿಮ್ಮ ಬುದ್ಧಿವಂತ ಪ್ರಶ್ನೆಗಳು ಅವರನ್ನು ಇನ್ನಷ್ಟು ಇಂಪ್ರೆಸ್ ಮಾಡಬಲ್ಲವು.
ಕಲ್ಪಿಸಿಕೊಳ್ಳಿ
ಸಂದರ್ಶನದ ಬಗ್ಗೆ ಮೊದಲೇ ಕಲ್ಪಿಸಿಕೊಳ್ಳಿ. ನಿಮ್ಮ ಪರ್ಫಾಮೆನ್ಸ್ ಬಗ್ಗೆಯೂ ಯೋಚಿಸಿ. ಮೊದಲ ಕೆಲ ನಿಮಿಷಗಳ ಕಾಲ ನೀವು ಸೃಷ್ಟಿಸುವ ಇಂಪ್ರೆಷನ್ ಮೇಲೆಯೇ ಸಂದರ್ಶನದ ಯಶಸ್ಸು ಅಡಗಿದೆ. ನೀವು ಒಬ್ಬ ವೃತ್ತಿಪರ, ಸ್ಪರ್ಧಾತ್ಮಕ ಹಾಗೂ ಆಸಕ್ತಿದಾಯಕ ವ್ಯಕ್ತಿ ಎಂಬುದನ್ನು ನಿರೂಪಿಸಿ. ನೀವು ಕಂಪನಿಗೆ ಒಂದು ಉತ್ತಮ ಆಸ್ತಿ ಎಂಬುದನ್ನು ತೋರಿಸುವುದೇ ಗುರಿಯಾಗಿರಲಿ.
ಇತರೆ
- ಅನಗತ್ಯ ಒತ್ತಡವನ್ನು ತಗ್ಗಿಸಲು ಸಂದರ್ಶನದ ಮೊದಲ ದಿನ ರಾತ್ರಿಯೇ ಎಲ್ಲ ಸಿದ್ಧತೆ ನಡೆಸಿಕೊಳ್ಳಿ. ವಸ್ತ್ರಗಳಿಗೆ ಇಸ್ತ್ರಿ ಹಾಕಿ, ಶೂಗಳನ್ನು ಪಾಲಿಶ್ ಮಾಡಿಟ್ಟುಕೊಳ್ಳಿ. ಕೂದಲನ್ನು, ಉಗುರುಗಳನ್ನು ಕತ್ತರಿಸಿಕೊಂಡು ಸ್ವಚ್ಛವಾಗಿಟ್ಟುಕೊಳ್ಳಿ.
- ಉದ್ಯೋಗದಾತನ ಹೆಸರು, ಸಂದರ್ಶನದ ದಿನಾಂಕ, ಸಮಯ, ಸ್ಥಳವನ್ನು ದೃಢಪಡಿಸಿಕೊಳ್ಳಿ.
- ಸರ್ಟಿಫಿಕೇಟ್‌ಗಳು, ರೆಫರೆನ್ಸ್‌ಗಳು, ಸಂದರ್ಶನದ ಪತ್ರ ಇತರೆ ಅಗತ್ಯ ವಸ್ತುಗಳನ್ನು ಫೈಲ್‌ನಲ್ಲಿಟ್ಟುಬಿಡಿ.
- ಹೆಚ್ಚುವರಿ ಫೋಟೋ ಹಾಗೂ ರೆಸ್ಯೂಮೆ ಪ್ರತಿಯನ್ನು ಇಟ್ಟುಕೊಂಡಿರಿ.
- ದಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


