ಜಿರಾಫೆ ಅಷ್ಟೇಕೆ ಎತ್ತರ?
ಒಂದಾನೊಂದು ಕಾಲದಲ್ಲಿ ಸೃಷ್ಟಿಕರ್ತನು ಎಲ್ಲ ಪ್ರಾಣಿಗಳಂತೆಯೇ ಜಿರಾಫೆಯನ್ನೂ ಸೃಷ್ಟಿಸಿದ್ದ. ಅದರ ಕುತ್ತಿಗೆ ಮತ್ತು ಕಾಲುಗಳು ಉಳಿದ ಪ್ರಾಣಿಗಳಷ್ಟೇ ಎತ್ತರವಾಗಿದ್ದವು. ಭೂಮಿಯ ಮೇಲೆ ಎಲ್ಲವೂ ಸುಸುತ್ರವಾಗಿ ಸಾಗಿತ್ತು.
ಒಮ್ಮೆ ಭೂಮಿಗೆ ಭಯಂಕರ ಬರಗಾಲ ಬಂದೆರಗಿತು. ಅದು ಇಡೀ ಭೂಮಂಡಲವನ್ನೇ ವ್ಯಾಪಿಸಿಕೊಂಡಿತ್ತು. ಹಸಿರೆಲ್ಲ ನಾಶವಾಗಿ ಬರಿ ಕುರುಚಲು ಹುಲ್ಲು ಮತ್ತು ಒಣಗಿದ ರೆಂಬೆಗಳು ಮಾತ್ರ ಉಳಿದುಕೊಂಡಿದ್ದವು. ಪ್ರಾಣಿಗಳು ತೀವ್ರವಾದ ಹಸಿವಿಗೀಡಾದವು. ನೀರು, ಆಹಾರ ಹುಡುಕುತ್ತ ಅವು ಮೈಲುಮೈಲು ಅಲೆದವು.
ಒಂದು ದಿನ ಜಿರಾಫೆ ಗೆಳೆಯ ರೈನೋನನ್ನು ಭೇಟಿಯಾಯಿತು. ಇಬ್ಬರೂ ಜತೆ ಜತೆಗೆ ಅಲೆಯುತ್ತ ಬರಗಾಲದ ಭೀಕರತೆಯ ಬಗ್ಗೆ ಮಾತಾಡುತ್ತಿದ್ದವು. ಜಿರಾಫೆ ಅಂದಿತು, 'ಎಲೈ ಗೆಳೆಯನೆ, ನೋಡಲ್ಲಿ. ಎತ್ತರವಾದ ಜಾಲಿಗಿಡಗಳ ತುದಿಯಲ್ಲಿ ಚಿಗುರಿದೆ. ಅದು ನಮಗೆ ನಿಲುಕಲಾರದು. ಆ ಎತ್ತರವನ್ನು ನಾವು ತಲುಪುವಂತಾದರೆ, ಅಲ್ಲಿರುವ ಚಿಗುರು ನಾವು ತಿನ್ನುವಂತಾದರೆ ಅದೆಷ್ಟೊಂದು ಅದ್ಭುತವಲ್ಲವೇ?' ಅದಕ್ಕೆ ರೈನೊ, 'ಏನು ಮಾಡೋದು ಗೆಳೆಯಾ, ಆ ಗಿಡಗಳನ್ನು ನಾನೂ ಏರಲಾರೆ, ನೀನೂ ಏರಲಾರೆ' ಎಂದು ನಿಟ್ಟುಸಿರಿಟ್ಟಿತು. 'ಆದರೆ ನಾವು ಒಂದು ಕೆಲಸ ಮಾಡಬಹುದು. ಅಲ್ಲೊಬ್ಬ ಮಂತ್ರವಾದಿ ಇದ್ದಾನೆ. ಆತ ತುಂಬ ಬುದ್ಧಿವಂತ ಮತ್ತು ಶಕ್ತಿವಂತ. ಅವನನ್ನು ಕೇಳೋಣ. ಆತ ನಮಗೆ ದಾರಿ ತೋರಬಲ್ಲ' ಎಂಬ ಸಲಹೆಯನ್ನು ರೈನೊ ಕೊಟ್ಟಿತು.
'ಒಳ್ಳೆಯ ಸಲಹೆ. ಎಲ್ಲಿದ್ದಾನೆ ಆ ಮಾಂತ್ರಿಕ? ನಡೆ, ಈಗಲೇ ಹೋಗೋಣ' ಎಂದಿತು ಜಿರಾಫೆ.
ಗೆಳೆಯರಿಬ್ಬರೂ ಮಾಂತ್ರಿಕನಿದ್ದಲ್ಲಿಗೆ ಹೊರಟರು. ತುಂಬ ದೂರದ ನಡಿಗೆ. ಒಂದು ಇಡೀ ರಾತ್ರಿ, ಅರ್ಧ ಹಗಲು ನಡೆದರು. ದಾರಿಯಲ್ಲಿ ಒಂದು ತಗ್ಗಿನಲ್ಲಿ ನಿಂತ ರಾಡಿ ನೀರನ್ನೇ ಕುಡಿದರು. ಕೊನೆಗೂ ಮಾಂತ್ರಿಕನ ಗುಡಿಸಲು ಬಂದೇಬಿಟ್ಟಿತು. ಜಿರಾಫೆ-ರೈನೊ ತಮ್ಮ ಸಮಸ್ಯೆಯನ್ನು ಹೇಳಿಕೊಂಡವು. ಮಾಂತ್ರಿಕ ನಗುತ್ತ ನುಡಿದನು, 'ನಿಮ್ಮ ಸಮಸ್ಯೆಗೆ ಪರಿಹಾರ ತುಂಬ ಸುಲಭವಿದೆ. ನಾಳೆ ಮಧ್ಯಾಹ್ನ ಇಲ್ಲಿಗೆ ಬನ್ನಿ. ನಿಮಗೆ ತಿನ್ನಲು ಮಂತ್ರಿಸಿದ ಗಿಡಮೂಲಿಕೆ ಕೊಡುವೆ. ನಿಮ್ಮ ಕಾಲು ಮತ್ತು ಕುತ್ತಿಗೆಗಳು ಎತ್ತರವಾಗುವಂತೆ ಮಾಡುವೆ. ಎಷ್ಟು ಎತ್ತರವೆಂದರೆ, ನಿಮಗೆ ಏನೆಲ್ಲ ನಿಲುಕುವಂತಾಗಬೇಕು' ಎನ್ನುತ್ತ ಮಾಂತ್ರಿಕ ಗಿಡಮೂಲಿಕೆಗಳನ್ನು ಅರೆಯುತ್ತ, ಅವುಗಳಿಗೆ ಮಂತ್ರಶಕ್ತಿ ತುಂಬತೊಡಗಿದ. ಇದನ್ನು ನೋಡಿದ ಗೆಳೆಯರಿಬ್ಬರೂ ರೋಮಾಂಚಿತರಾದರು. ಅಲ್ಲಿಂದ ಹೊರಟ ಜಿರಾಫೆ-ರೈನೊ ಕೆಸರಿನಂತಿದ್ದ ತಗ್ಗು ಪ್ರದೇಶಕ್ಕೆ ಹೋದವು.
ಮರುದಿನ ಮಾಂತ್ರಿಕನ ಬಳಿ ಜಿರಾಫೆ ಸಮಯಕ್ಕೆ ಸರಿಯಾಗಿ ಬಂದೇಬಿಟ್ಟಿತು. ರೈನೊ ಬೆಳಗ್ಗೆಯೇ ಎಲ್ಲಿಗೋ ಹೊರಟುಹೋಗಿತ್ತು. 'ಅದಕ್ಕೆ ಎಲ್ಲೋ ಹುಲ್ಲು-ನೀರಿದ್ದ ಪ್ರದೇಶ ದೊರಕಿರಬೇಕು. ಹಾಗಾಗಿ ಅದು ಮಾಂತ್ರಿಕನ ಬಳಿ ಬರಲು ಮರೆತಿರಬೇಕು' ಅಂದುಕೊಂಡಿತು ಜಿರಾಫೆ.
ದಾರಿ ಕಾದು ಕಾದು ಸುಸ್ತಾದ ಜಿರಾಫೆ ಮಾಂತ್ರಿಕ ಕೊಟ್ಟ ಗಿಡಮೂಲಿಕೆಯನ್ನೆಲ್ಲ ತಾನೊಬ್ಬನೇ ತಿಂದು ಮುಗಿಸಿತು. ತಿನ್ನುತ್ತಿದ್ದಂತೆಯೇ ಅದರ ಕಾಲು ಮತ್ತು ಕುತ್ತಿಗೆ ಎತ್ತರೆತ್ತರ ಬೆಳೆಯಲಾರಂಭಿಸಿತು. ಜಿರಾಫೆ ಒಮ್ಮೆ ಕಣ್ಣು ಮುಚ್ಚಿ ತೆರೆಯಿತು. ಅದಕ್ಕೆ ಮೈಲು ಮೈಲು ದೂರದಲ್ಲಿರುವ ವಸ್ತುಗಳು ಕಾಣಿಸತೊಡಗಿದವು. ದೊಡ್ಡ ಹೆಜ್ಜೆಗಳನ್ನಿಡುತ್ತ ಅದು ನಡೆಯತೊಡಗಿತು. ಅದಕ್ಕೆ ಜಾಲಿಗಿಡಗಳ ಎತ್ತರವಾದ ಟೊಂಗೆಗಳು ನಿಲುಕತೊಡಗಿದವು. ಜಿರಾಫೆ ತನ್ನ ಎತ್ತರಕ್ಕೆ ತಾನೇ ಬೆರಗುಗೊಂಡಿತು.
(ಆಫ್ರಿಕಾ ದೇಶದ ಕಥೆ)
- ಜಯವಂತ ಕಾಡದೇವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

