ಯುವಜನ/ಮಕ್ಕಳು

ಹೊಸ ಹೆಜ್ಜೆ

ಇಷ್ಟವಾದ ಸಬ್ಜೆಕ್ಟ್ ಆಯ್ಕೆ ಮಾಡಿದ್ದಾಯ್ತು, ಕಾಲೇಜು, ವಸತಿ ನಿಲಯ ವ್ಯವಸ್ಥೆಯನ್ನೂ...

ಹೊಸ ಹೆಜ್ಜೆ
Published On :

ಇಷ್ಟವಾದ ಸಬ್ಜೆಕ್ಟ್ ಆಯ್ಕೆ ಮಾಡಿದ್ದಾಯ್ತು, ಕಾಲೇಜು, ವಸತಿ ನಿಲಯ ವ್ಯವಸ್ಥೆಯನ್ನೂ ನೋಡಿ ಮೆಚ್ಚಿದ್ದಾಯ್ತು. ಇನ್ನೇನು ಮನೆ ಬಿಟ್ಟು ಹೊರಡಬೇಕು ಎಂದಾಗ ಮನೆ, ಮನದೊಳಗೆ ಏನೋ ದುಗುಡ ಶುರುವಾಗುತ್ತದೆ.
ಇಷ್ಟು ದಿನ ಹತ್ತಿರವಿದ್ದ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ದೂರದೂರಿಗೆ ಹೋಗಬೇಕಾದ ಪರಿಸ್ಥಿತಿ. ಈ ಸಂದರ್ಭದಲ್ಲಿ ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ. ಹೊಸ ಜನ, ಹೊಸ ಪರಿಸರದಲ್ಲಿ ಮಗ/ ಮಗಳು ಹೊಂದಿಕೊಳ್ಳುತ್ತಾರೋ ಇಲ್ಲವೋ ಎಂಬ ಸಂದೇಹ ಪೋಷಕರನ್ನು ಕಾಡುವುದು ಸಹಜ.
ಅದೇ ರೀತಿ ಮಕ್ಕಳಿಗೂ ಹೊಸ ಪರಿಸರ, ಕಾಲೇಜ್, ಹಾಸ್ಟೆಲ್ ನಿಯಮ ಹೇಗಿರುತ್ತೋ...? ಶಿಕ್ಷಕರು ಇಷ್ಟವಾಗುತ್ತಾರೋ ಇಲ್ವೋ...? ಎಂಬ ಭಯ ಆವರಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸಿದ್ಧತೆಯೊಂದಿಗೆ ಮಾನಸಿಕ ಸಿದ್ಧತೆಯೂ ಅಗತ್ಯ.

ಪೋಷಕರೇ ಹೀಗೆ ಮಾಡಿ...
ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ದೂರದೂರಿಗೆ ಹೊರಟು ನಿಂತಾಗ ಅವರಲ್ಲಿ ವಿಶ್ವಾಸ ತುಂಬಿ. ಹೊಸ ವಾತಾವರಣದಲ್ಲಿ ಹೇಗಿರಬೇಕು, ಯಾವ ರೀತಿ ಹೊಂದಿಕೊಳ್ಳಬೇಕು ಎಂಬುದನ್ನು ತಿಳಿಹೇಳಿ. ಅವರ ಧ್ಯೇಯೋದ್ದೇಶ ಏನು ಎಂಬುದನ್ನು ನೆನಪಿಸಿ. ಮನೆಯವರಿಂದ ಯಾವುದೇ ರೀತಿಯ ಸಹಕಾರ ಕೇಳಲು ಅವರು ಹಿಂದೇಟು ಹಾಕದಂತೆ ನೋಡಿಕೊಳ್ಳಿ.
ಮಕ್ಕಳ ಅಗತ್ಯ ವಸ್ತುಗಳೊಂದಿಗೆ ಅವರಿಗಿಷ್ಟವಾಗುವ ವಸ್ತುಗಳನ್ನು ಕೊಡುವುದು ಮರೆಯಬೇಡಿ. ಹೆಚ್ಚು ಬೆಲೆಬಾಳುವ ವಸ್ತುಗಳು ಬೇಡ. ಕಾಲೇಜು, ಹಾಸ್ಟೆಲ್‌ನಲ್ಲಿ ನಡೆಯುವ ಪ್ರತಿ ದಿನದ ಪಠ್ಯ, ಪಠ್ಯೇತರ ವಿಷಯಗಳನ್ನು ನಿಮ್ಮೊಂದಿಗೆ ಮಕ್ಕಳು ಮುಕ್ತವಾಗಿ ಹಂಚಿಕೊಳ್ಳುವಂತೆ ನೋಡಿಕೊಳ್ಳಿ. ಮಕ್ಕಳ ಮನಸ್ಸಲ್ಲಿ ಯಾವುದಾದರೂ ಸಂದೇಹ, ಸಂಶಯಗಳಿದ್ದರೆ ನಿವಾರಿಸಿ. ಟ್ಯೂಷನ್‌ನ ಅಗತ್ಯವಿದೆ ಅನಿಸಿದರೆ ಕಾಲೇಜು ಶಿಕ್ಷಕರಲ್ಲೇ ಈ ಬಗ್ಗೆ ಮಾತಾಡಿ. ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದು, ಮಕ್ಕಳ ನಡವಳಿಕೆ ಬಗ್ಗೆ ತಿಳಿದುಕೊಳ್ಳಿ. ಇದನ್ನು ಮಕ್ಕಳಿಂದ ಮುಚ್ಚಿಡಬೇಡಿ. ಇದರಿಂದ ಮಕ್ಕಳು ಹೊಸ ಪರಿಸರದಲ್ಲೂ ಮುಕ್ತವಾಗಿ ಎಲ್ಲರೊಂದಿಗೆ ಬೆರೆಯಲು ಸಹಕಾರಿಯಾಗುತ್ತದೆ. ಕಾಲೇಜಿಗೆ ಹೋಗುವ ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣಕ್ಕಾಗಿ ದೂರದೂರಿಗೆ ಹೋಗುವ ಮಕ್ಕಳಿಗೆ ತಂದೆ- ತಾಯಿ ಸ್ನೇಹಿತರಂತಿರಬೇಕು. ಇದು ಪೋಷಕರು ಮತ್ತು ಮಕ್ಕಳ ಸಂಬಂಧವನ್ನು ಹೆಚ್ಚು ಗಾಢವಾಗಿಸುತ್ತದೆ.

ವಿದ್ಯಾರ್ಥಿಗಳಿಗೆ ಸಲಹೆ
ನೀವು ಎಷ್ಟೋ ದೂರದಲ್ಲಿದ್ದರೂ ತಂದೆ- ತಾಯಿ ನೀವು ಸರಿಯಾಗಿ ಊಟ ಮಾಡ್ತೀರೋ ಇಲ್ವೋ..., ಸರಿಯಾಗಿ ಓದುತ್ತಿದ್ದಾರೋ... ಹೀಗೆ ನಿಮ್ಮ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಆದ್ದರಿಂದ ನೀವು ಅವರಿಂದ ದೂರವಾಗುತ್ತಿದ್ದೀರಿ ಎಂಬ ಕೊರಗು ಅವರನ್ನು ಕಾಡದಂತೆ ನೋಡಿಕೊಳ್ಳಿ. ಶಿಕ್ಷಣ, ಮುಂದಿನ ನಿಮ್ಮ ಜೀವನ ಹೇಗಿರಬೇಕು ಎಂಬ ಬಗ್ಗೆ ಪೋಷಕರೊಂದಿಗೆ ಹಂಚಿಕೊಳ್ಳಿ. ನಿಮಗೆ ಕಷ್ಟವೆನಿಸುವ ಪಠ್ಯ, ಪಠ್ಯೇತರ ಚಟುವಟಿಕೆ ವಿಷಯ ಮಾತ್ರವಲ್ಲ ನಿಮಗಾಗುವ ಖುಷಿಯ ವಿಚಾರಗಳನ್ನು ಮನೆಯವರೊಂದಿಗೆ ಹಂಚಿಕೊಳ್ಳಿ.  
ನಿತ್ಯ ಕರೆ ಮಾಡಿ ಒಂದರ್ಧ ನಿಮಿಷವಾದರೂ ಮಾತನಾಡಿ ಮನೆಯವರ ಯೋಗಕ್ಷೇವು ವಿಚಾರಿಸಿ. ಅವರಿಗೆ ನಿಮ್ಮ ನೆನಪು ತುಂಬಾ ಕಾಡಿದಾಗ ಹೇಗೆ ಅವರನ್ನು ಖುಷಿಯಲ್ಲಿರಿಸಬಹುದು ಎಂಬುದನ್ನು ಯೋಚಿಸಿ. ಸರ್‌ಪ್ರೈಸ್ ನೀಡಿ. ಕಾಲೇಜ್, ಹಾಸ್ಟೆಲ್, ಶಿಕ್ಷಕರು, ಸ್ನೇಹಿತರೊಂದಿಗಿನ ವಿಚಾರಗಳನ್ನು ಪೋಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ಹೊಸ ಫ್ರೆಂಡ್ಸ್‌ಗಳನ್ನು ಮನೆಯವರಿಗೂ ಪರಿಚಯಿಸಿ. ಇದರಿಂದ ಅವರಿಗೆ ನಿಮ್ಮ ಬಗೆಗಿನ ಆತಂಕ ಸ್ವಲ್ಪ ಕಡಿಮೆಯಾಗುತ್ತದೆ.
ಅದೇನೇ ಇರಲಿ. ಈಗ ಹೊಸ ಪರಿಸರ, ಲೋಕಕ್ಕೆ ಕಾಲಿಡುತ್ತಿದ್ದೀರಿ. ನಿಮ್ಮ ಹೊಸ ಬದುಕಿಗೆ ಬೆಸ್ಟ್ ಆಫ್ ಲಕ್...

- ವಿದ್ಯಾ ಇರ್ವತ್ತೂರು
vidyairvathur.@yahoo.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.