ಸ್ನೇಹದ ಕಡಲು
Tell me your friends, I will tell how you are ! ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆತ ಹೊಂದಿರುವ ಗೆಳೆಯರನ್ನು ನೋಡಿಯೇ ಹೇಳಬಹುದಂತೆ.

Tell me your friends, I will tell how you are !
ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆತ ಹೊಂದಿರುವ ಗೆಳೆಯರನ್ನು ನೋಡಿಯೇ ಹೇಳಬಹುದಂತೆ. ಯಾಕಂದ್ರೆ ಸ್ನೇಹಿತರು ನಮ್ಮ ಮನಸ್ಸಿನ, ವ್ಯಕ್ತಿತ್ವದ ಕನ್ನಡಿ. ಅದು ರಕ್ತ ಸಂಬಂಧದ ಹಂಗಿಲ್ಲದ, ಪದಗಳಿಗೆ ನಿಲುಕದ ವಿಶೇಷ ಬಂಧ. ಕುಟುಂಬ ಸದಸ್ಯರಿಂದ ಮುಚ್ಚಿಟ್ಟ ಅನೇಕ ವಿಚಾರಗಳನ್ನು ನಾವು ಅನೇಕ ಬಾರಿ ಸ್ನೇಹಿತರ ಮುಂದೆ ಬಿಚ್ಚಿ ಹಗುರಾಗುತ್ತೇವೆ. ಯಾಕೆಂದರೆ ನೊಂದ ಜೀವಕ್ಕೆ ನಿಜವಾದ ಭರವಸೆಯ ಬೆಳಕು ಸಿಗುವುದೇ ಸ್ನೇಹಿತರಿಂದ.
ಆಪತ್ತಿಗಾದವನು ಹೇಗೆ ನೆಂಟನೋ ಅದೇ ರೀತಿ ವಿಪತ್ತಿನಲ್ಲಿ ಜತೆಗಿರುವವನೇ ನಿಜವಾದ ಗೆಳೆಯ. ಆದರೆ, ಗೆಳೆತನವೆಂಬ ಈ ಸುಂದರ ಬಾಂಧವ್ಯಕ್ಕೂ ಒಂದಷ್ಟು ಇತಿಮಿತಿಗಳಿವೆ. ಈ ಇತಿಮಿತಿ ದಾಟಿದಾಗಲೇ ಸ್ನೇಹದಲ್ಲಿ ಅಪಸ್ವರ ಸೃಷ್ಟಿಯಾಗೋದು. ಹಾಗಾಗಿ ಸ್ನೇಹಕ್ಕೂ ಒಂದು ಪರಿಮಿತಿ ಇರಬೇಕು. ತೋರಿಕೆಯ ಪ್ರೀತಿ, ಅಪನಂಬಿಕೆಗೆ ಆಸ್ಪದ ಸಿಗದಂತೆ ನೋಡಿಕೊಳ್ಳಬೇಕು.
'ನಂಬಿ ಕೆಟ್ಟವರಿಲ್ಲವೋ' ಎನ್ನುವ ದಾಸವಾಣಿ ಬಲಿಷ್ಠ ಬಾಂಧವ್ಯದ ಮೂಲಮಂತ್ರ. ಸ್ನೇಹಿತರ ನಡುವೆ ಅಪನಂಬಿಕೆಗೆ ಯಾವತ್ತೂ ಅವಕಾಶ ಇರಬಾರದು. ಅಪನಂಬಿಕೆಯ ಸಣ್ಣ ಕಿಡಿಯೂ ಮುಂದೆ ದೊಡ್ಡದಾಗಿ ಹಲವು ವರ್ಷಗಳ ಸುಂದರ ಗೆಳೆತನಕ್ಕೇ ಕೊಳ್ಳಿ ಇಟ್ಟ ಅನೇಕ ಉದಾಹರಣೆಗಳು ನಮ್ಮ ನಡುವೆ ಸಾಕಷ್ಟಿವೆ.
ಹಾಗಾದರೆ, ಗೆಳೆತನ ಹೇಗಿರಬೇಕು?
ದುಃಖದಲ್ಲೂ ಜತೆಗೆ...
ಸ್ನೇಹಕ್ಕೆ ನಿಜವಾದ ಮೌಲ್ಯ ಬರುವುದೇ ಕಷ್ಟದ ಗಳಿಗೆಯಲ್ಲಿ. ಕೇಳದೆ ನೆರವು ನೀಡುವವನು, ಕಷ್ಟದಲ್ಲಿ ಜತೆಗಿರುವವನೇ ನಿಜವಾದ ಗೆಳೆಯ. ಕಷ್ಟದ ಗಳಿಗೆಗಳು ಗೆಳೆತನವನ್ನು ಅಗ್ನಿಪರೀಕ್ಷೆಗೊಳಪಡಿಸುತ್ತವೆ. ನಿಜವಾದ ಸ್ನೇಹಿತರು ಸುಖದಲ್ಲಷ್ಟೇ ಅಲ್ಲ, ಕಷ್ಟದಲ್ಲೂ ಬೆನ್ನಿಗಿರುತ್ತಾರೆ. ಕೈಹಿಡಿದು ಮುನ್ನಡೆಸುತ್ತಾರೆ. ಧೈರ್ಯದ ಮಾತುಗಳನ್ನಾಡುತ್ತಾರೆ.
ಸಮಾನ ಅಭಿರುಚಿ
ಸಮಾನ ಅಭಿರುಚಿಯೆಂಬುದು ಯಾವುದೇ ಗೆಳೆತನದ ಬುನಾದಿ. ಅಭಿರುಚಿ ವಿಭಿನ್ನವಾಗಿದ್ದಾಗ ವಾಗ್ವಾದಗಳು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಮ್ಮ ಆಸಕ್ತಿ, ವ್ಯಕ್ತಿತ್ವಕ್ಕನುಗುಣವಾಗಿ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಿ. ಎಲ್ಲರ ಜತೆಗೂ ಗೆಳೆತನ ಇರಲಿ, ಆದರೆ, ಆತ್ಮೀಯತೆ ಕೆಲವರ ಜತೆಗಷ್ಟೇ ಇಟ್ಟುಕೊಳ್ಳಿ.
ಪರಸ್ಪರ ಗೌರವ
ಸ್ನೇಹಿತರ ನಡುವೆ ವಾಗ್ವಾದ, ಬಿರುಕು ಸಹಜ. ವೈಯಕ್ತಿಕ ಗೌರವಕ್ಕೆ ಧಕ್ಕೆಯುಂಟಾದಲ್ಲಿ ಗೆಳೆತನ ವೈರತ್ವಕ್ಕೆ ತಿರುಗಬಹುದು. ಸ್ನೇಹಿತರು ಎಷ್ಟೇ ಆತ್ಮೀಯರಾಗಿದ್ದರೂ ಅವರನ್ನು ಗೌರವಿಸುವುದನ್ನು ರೂಢಿಸಿಕೊಳ್ಳಿ. ಸ್ನೇಹದ ವಿಚಾರದಲ್ಲಿ ಯಾವತ್ತೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಯಾಕೆಂದರೆ ಸ್ನೇಹಿತನಿಗಿಂತ ದೊಡ್ಡ ಶತ್ರು ಇನ್ನೊಬ್ಬನಿಲ್ಲ.
- ಭಾಗ್ಯ ನಂಜುಂಡಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


