ಕಾಲೇಜು ಮ್ಯಾಗಝಿನ್
ಕಾಲೇಜೊಂದರ ವಾರ್ಷಿಕ ಸಂಚಿಕೆ ಹೇಗಿರಬೇಕು? ಈ ಪ್ರಶ್ನೆಗೆ ಸಾವಿರ ಉತ್ತರ ದೊರೆತಾವು.

ಕಾಲೇಜೊಂದರ ವಾರ್ಷಿಕ ಸಂಚಿಕೆ ಹೇಗಿರಬೇಕು?
ಈ ಪ್ರಶ್ನೆಗೆ ಸಾವಿರ ಉತ್ತರ ದೊರೆತಾವು. ಸಂಚಿಕೆ ವೈವಿಧ್ಯಮಯವಾಗಿರಬೇಕು, ವಿದ್ಯಾರ್ಥಿಗಳ- ವಿದ್ಯಾಸಂಸ್ಥೆಗಳ ಪ್ರತಿಭೆಗೆ ಕನ್ನಡಿ ಹಿಡಿಯಬೇಕು, ವಿದ್ಯಾರ್ಥಿ ಜೀವನವನ್ನು ಜೀವಮಾನವಿಡೀ ಮೆಲುಕು ಹಾಕುವ ನೆನಪಿನ ಕೈಪಿಡಿಯಾಗಬೇಕು, ಒಟ್ಟಂದದಲ್ಲಿ ಸಂಗ್ರಹಯೋಗ್ಯವಾಗಿರಬೇಕು... ಹೀಗೆ.
ಕೆಲವು ಕಾಲೇಜುಗಳಿಗೆ ಇಯರ್ ಮ್ಯಾಗಝಿನ್‌ಗಳೆಂಬುದು ಬಹಳ ದೊಡ್ಡ ತಲೆನೋವು. ಇನ್ನು ಕೆಲವು ಕಾಲೇಜುಗಳಿಗೆ ನೀರು ಕುಡಿದಷ್ಟು ಸುಲಭದ ಕೆಲಸ. ಈ ಯಶಸ್ಸು ಯಾವತ್ತಿದ್ದರೂ ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ನಡುವಿನ ಹೊಂದಾಣಿಕೆ ಹಾಗೂ ಶ್ರಮದ ಪ್ರತಿಫಲವಾಗಿರುತ್ತದೆ. ಈ ಮೂರರಲ್ಲಿ ಒಂದರಲ್ಲಿ ಲೋಪವಾದರೂ ವಾರ್ಷಿಕ ಸಂಚಿಕೆ ಪುಟ ತಿರುವಿಹಾಕುವ ಪುಸ್ತಕವಾಗಿ ಉಳಿಯಬಹುದಷ್ಟೇ...
ಎಷ್ಟರ ಬಜೆಟ್?
ಶಾಲಾಕಾಲೇಜುಗಳಲ್ಲಿ ಆಟ, ಪಾಠಗಳು ನಡೆಯುತ್ತಿರುವಂತೆಯೇ ಇಯರ್ ಮ್ಯಾಗಝಿನ್‌ಗೂ ರೂಪುರೇಷೆ ತಯಾರಾಗುತ್ತದೆ. ಇದಕ್ಕೆಂದು ಕಾಲೇಜು ಆಡಳಿತ ಮಂಡಳಿ ಎಷ್ಟು ಮೊತ್ತವನ್ನು ನಿಗದಿಪಡಿಸಿದೆ ಎಂಬುದು ನಿರ್ಧಾರವಾದ ಬಳಿಕವೇ ಉಳಿದ ಯೋಜನೆಗಳನ್ನು ಹಮ್ಮಿಕೊಳ್ಳಬಹುದು. ಹಾಗೆಂದು ಹೆಚ್ಚು ಹಣವನ್ನು ಮ್ಯಾಗಝಿನ್‌ಗೆ ಹೂಡಿದೊಡನೆ ಉತ್ತಮವಾಗಿ ಮೂಡಿಬರುತ್ತದೆ ಎಂಬುದಾಗಲೀ ಕಡಿಮೆ ವೆಚ್ಚದಲ್ಲಿ ಉತ್ತಮ ಸಂಚಿಕೆ ಮೂಡಿ ಬರಲಾರದು ಎಂಬುದೆಲ್ಲಾ ತಪ್ಪು ಕಲ್ಪನೆ. ಅಂತಿಮವಾಗಿ ಗೆಲ್ಲುವುದು ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳ ಕ್ರಿಯಾಶೀಲತೆಯಷ್ಟೇ.
ಅದಕ್ಕಾಗೇ ಇಂತಿಷ್ಟು ಸಮಯ ಮೀಸಲಿರಿಸುವುದು ಮುಖ್ಯ. ಸಾಹಿತ್ಯ, ಕಲೆ, ಬರವಣಿಗೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಅಧ್ಯಾಪಕರ ಮಾರ್ಗದರ್ಶನದೊಂದಿಗೆ ಕ್ರಿಯಾಶೀಲರಾದಾಗ ಸಂಚಿಕೆ ಉತ್ತಮವಾಗಿ ಮೂಡಿಬರಲು ಸಾಧ್ಯ. ಪ್ರಬುದ್ಧ ಲೇಖಕರು, ಬದ್ಧ ಪತ್ರಕರ್ತರು ರೂಪುಗೊಳ್ಳುವ ಸಂದರ್ಭವಿದು. ಇಲ್ಲಿ ಎಲ್ಲಾ ವಿಭಾಗದ ಅಧ್ಯಾಪಕರ ಅನುಭವ ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಬರವಣಿಗೆಯಲ್ಲಿ, ಕಲೆ, ಸಾಹಿತ್ಯ, ವಿಜ್ಞಾನಗಳಲ್ಲಿ ಆಸಕ್ತಿ ಇರುವ ಬೇರೆ ಬೇರೆ ವಿದ್ಯಾರ್ಥಿಗಳು ತೊಡಗಿಕೊಂಡಾಗ ವೈವಿಧ್ಯ ಮೇಳೈಸುತ್ತದೆ.
ಸಾಮಾನ್ಯವಾಗಿ ವಾರ್ಷಿಕ ಸಂಚಿಕೆಗಳಿಗೆ ವಿಷಯ ವೈವಿಧ್ಯತೆ ಇದ್ದಷ್ಟು ಉತ್ತಮ. ಸಾಮಾನ್ಯವಾಗಿ ಒಂದಿಷ್ಟು ಛಾಯಾಚಿತ್ರಗಳು, ಕಲೆ, ಸಾಹಿತ್ಯಗಳಿಗಷ್ಟೇ ವಾರ್ಷಿಕ ಸಂಚಿಕೆಗಳು ಮೀಸಲಾಗಿ ಬಿಡುವುದುಂಟು. ಹಾಗಾಗದೆ ಜಾನಪದ, ವಿಜ್ಞಾನ, ತಂತ್ರಜ್ಞಾನ, ಆಧುನಿಕ ಜಗತ್ತು, ವಿದ್ಯಮಾನಗಳು ಒಳಗೊಂಡಾಗ ಸಂಚಿಕೆ ಉತ್ತಮವಾಗಿ ಮೂಡಿ ಬರುವುದರಲ್ಲಿ ಸಂಶಯವಿಲ್ಲ.
ಪ್ರತಿಭೆಗೆ ವೇದಿಕೆ
ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಾರ್ಷಿಕ ಸಂಚಿಕೆ ಉತ್ತಮ ವೇದಿಕೆ ಎಂಬುದರಲ್ಲಿ ಅನುಮಾನವಿಲ್ಲ. ಸಂಚಿಕೆ ಒಬ್ಬ ಉತ್ತಮ ಲೇಖಕ, ಛಾಯಾಗ್ರಾಹಕ, ಚಿತ್ರಕಾರ, ವ್ಯಂಗ್ಯಚಿತ್ರಕಾರ, ಪುಟ ವಿನ್ಯಾಸಕನನ್ನು ಬೆಳಕಿಗೆ ತರಬಲ್ಲುದು.
ತರಾತುರಿ ಬೇಡ
ಸಾಮಾನ್ಯವಾಗಿ ಡೆಡ್‌ಲೈನ್ ಹತ್ತಿರ ಬಂದಂತೆ ವಾರ್ಷಿಕ ಸಂಚಿಕೆಯ ಕಾರ್ಯಗಳು ಗಡಿಬಿಡಿಯಲ್ಲಿ ಮುಗಿಸಿ ಬಿಡುತ್ತಾರೆ. ಕೊನೆಗೆ ಹೇಗಾದರೂ ಸರಿ. ಹಾಗೂ ಹೀಗೂ ಕಳಿಸಿದರಾಯಿತು ಎಂಬಂಥ ಉದಾಸೀನ ಧೋರಣೆಯವರೂ ಇರುತ್ತಾರೆ. ಹಾಗಾದಿರಲಿ. ವರ್ಷದ ಪ್ರಾರಂಭದಿಂದಲೇ ತರಗತಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸಂಚಿಕೆ ಕಾರ್ಯಗಳನ್ನು ಹಚ್ಚಿಕೊಂಡರೆ ಕೊನೆ ಕ್ಷಣದ ಗಡಿಬಿಡಿಯನ್ನು ತಪ್ಪಿಸಬಹುದು. ಮಾದರಿ ಸಂಚಿಕೆ ಸಿದ್ಧಪಡಿಸಬಹುದು.
ಮನೀಷಾ, ದರ್ಶನ ಮಾದರಿ
ಕಾಲೇಜು ಮ್ಯಾಗಝಿನ್ ಕೇವಲ ಒಂದು ಹೊತ್ತಿಗೆ ಅಲ್ಲ. ಅದು ಕಾಲೇಜು ವಿದ್ಯಾರ್ಥಿಗಳ ಸೃಜನಶೀಲತೆ, ಆಸಕ್ತಿಗೆ ಹಿಡಿದ ಕನ್ನಡಿ. ಯಾರಾದರೂ ಇಂಥ ಮ್ಯಾಗಝಿನ್ ಅನ್ನು ಕೈಗೆತ್ತಿಕೊಂಡರೆ ಕಾಲೇಜು ಬಗ್ಗೆ ಸದಭಿಪ್ರಾಯ ಮೂಡುವಂತಿರಬೇಕು. ಉಜಿರೆ ಎಸ್‌ಡಿಎಂ ಕಾಲೇಜಿನ 'ಮನೀಷಾ', ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ 'ದರ್ಶನ' ಇದಕ್ಕೆ ಉತ್ತಮ ಉದಾಹರಣೆಗಳು.
- ಗಣಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


