ಯುವಜನ/ಮಕ್ಕಳು

ಅಡ್ಡ ಸಂಬಂಧ

ಅಡ್ಡ ಸಂಬಂಧ
Published On :

ಆಕೆಗಿನ್ನೂ 30 ವರ್ಷ. ಗಂಡನ ಪಾಲಿಗೆ ಈಕೆ ಪರ್ಫೆಕ್ಟ್ ಹೌಸ್‌ವೈಫ್. ಗಂಡ ಕಚೇರಿಗೆ ಸಿದ್ಧವಾಗುವ ವೇಳೆಗೆ ಇಸ್ತ್ರಿ ಹಾಕಿದ ಬಟ್ಟೆ ರೆಡಿಮಾಡಿಟ್ಟಿರುತ್ತಾಳೆ. ಸ್ನಾನಕ್ಕೆ ಹೊರಡುವಾಗ ಟವೆಲ್, ಬಿಸಿ ನೀರು ತಪ್ಪದೆ ವ್ಯವಸ್ಥೆ ಮಾಡಿರುತ್ತಾಳೆ. ಅತ್ತೆ- ಮಾವಂದಿರಿಗೂ ಈಕೆಯನ್ನು ಕಂಡರೆ ಆದರ. ಎಲ್ಲರಿಗೂ ಇಂಥದ್ದೇ ಸೊಸೆ ಸಿಗಲಿ ಎಂದು ಹಾರೈಸುತ್ತಾರೆ...
ಆದರೆ, ಇತ್ತೀಚೆಗೆ ಗಂಡನಿಗೆ ಆಕೆಯಲ್ಲಿ ಏನೋ ಕೊರತೆ ಕಾಣಿಸುತ್ತಿದೆ. ಆಕೆ ಭಾವನಾತ್ಮಕವಾಗಿ ಹೆಚ್ಚು ಆತ್ಮೀಯವಾಗಿಲ್ಲ ಎನಿಸುತ್ತಿದೆ. ಮನೆಕೆಲಸ ಹೆಚ್ಚಾಯ್ತೋ ಏನೋ? ಅಂದುಕೊಳ್ಳುತ್ತಾನೆ ಗಂಡ. ಆಕೆಯ ಭಾವನಾತ್ಮಕ ತೊಳಲಾಟ ಕೊನೆಗೊಳ್ಳದಿದ್ದಾಗ ಒಂದು ದಿನ ಈಕೆಯನ್ನು ಆಪ್ತಸಮಾಲೋಚಕರ ಬಳಿ ಕರೆದೊಯ್ಯುತ್ತಾನೆ. ಆಗ ಆಕೆ ಒಪ್ಪಿಕೊಂಡ ಸತ್ಯ ಕೇಳಿ ಆತನಿಗೆ ಆಘಾತ. ಯಾಕೆಂದರೆ ಆಕೆ ಎರಡು ವರ್ಷದಿಂದ ಇನ್ನೊಂದು ಸಂಬಂಧದ ಸುಳಿಗೆ ಸಿಲುಕಿದ್ದಾಳೆ.

ಮದುವೆಯಾಗಿ ಆರು ವರ್ಷವಾಗಿದೆ. ಒಂದೇ ಒಂದು ದಿನ ಆಕೆ ಯಾವುದೇ ವಿಚಾರವಾಗಿಯೂ ದೂರು ಕೊಟ್ಟಿಲ್ಲ. ಗಂಡ ಸೇರಿ ಮನೆಯ ಯಾವೊಬ್ಬ ಸದಸ್ಯರೂ ಆಕೆಯನ್ನು ದೂರಿದ್ದಿಲ್ಲ. ದಾಂಪತ್ಯದ ಏಕೈಕ ಕುರುಹನ್ನೂ ಆಕೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ಆದರೂ ಯಾಕೆ ಹೀಗೆ?

ಈ ಪ್ರಶ್ನೆಗೆ ಬಹುಶಃ ಉತ್ತರ ಹುಡುಕುವುದು ಕಷ್ಟ. ಈ ಹಿಂದೆ ಕೆಲಸಕ್ಕೆ ಹೋಗುವ ಪುರುಷರಷ್ಟೇ ವಿವಾಹೇತರ ಸಂಬಂಧಕ್ಕೆ ಬಲಿ ಬೀಳುತ್ತಾರೆ ಎನ್ನುವ ಭಾವನೆ ಇತ್ತು. ಆದರೆ, ಅದೀಗ ಬದಲಾಗಿದೆ. ಬೆಂಗಳೂರಿನಂಥ ಐಟಿ ನಗರದಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರೂ ಇಂಥ ಸಂಬಂಧಕ್ಕೆ ಬಲಿಬೀಳುವುದು ಹೆಚ್ಚಾಗುತ್ತಿದೆ. ಅದರಲ್ಲೂ ಈ ರೀತಿಯ ಸಂಬಂಧದ ಸೆಳೆತಕ್ಕೆ 28ರಿಂದ 35 ವರ್ಷದೊಳಗಿನವರೇ ಸಿಕ್ಕಿಹಾಕಿಕೊಳ್ಳುವುದು ಹೆಚ್ಚುತ್ತಿದೆ. ಮಹಾನಗರಗಳ ಬಹುತೇಕ ಡೈವೋರ್ಸ್‌ಗಳಿಗೆ ಈ ವಿಹಾಹೇತರ ಸಂಬಂಧವೇ ಪ್ರಮುಖ ಕಾರಣವಾಗುತ್ತಿದೆ. ಗಮನಿಸಬೇಕಾದ ವಿಚಾರ ಏನೆಂದರೆ, ಕೆಲಸಕ್ಕೆ ಹೋಗುವ ಮಹಿಳೆಯರಲ್ಲದೆ ಇತ್ತೀಚೆಗೆ ಗೃಹಿಣಿಯರೂ ಈ ರೀತಿಯ ಸಂಬಂಧಕ್ಕೆ ಬಲಿಬೀಳುವುದು ಹೆಚ್ಚುತ್ತಿದೆ.

ಕಾರಣ ಏನು?
ವಿವಾಹೇತರ ಸಂಬಂಧ ಇಟ್ಟುಕೊಳ್ಳಲು ಇಂಥದ್ದೇ ಕಾರಣ ಬೇಕೆಂದೇನೂ ಇಲ್ಲ. ಗಂಡ- ಹೆಂಡತಿ ನಡುವೆ ಸಣ್ಣದೊಂದು ಅಂತರ ಬಂದರೂ ಸಾಕು ಅವರಿಬ್ಬರೂ ವಿವಾಹೇತರ ಸಂಬಂಧ ಎನ್ನುವ ಸಮಸ್ಯೆಯ ಗುಂಡಿಗೆ ಸುಲಭವಾಗಿ ಬೀಳಬಹುದು ಎನ್ನುತ್ತಾರೆ ವೈವಾಹಿಕ ಆಪ್ತಸಮಾಲೋಚಕ ಡಾ. ನಿಶು ಶುಕ್ಲಾ.

ಬಹುತೇಕ ವಿವಾಹೇತರ ಸಂಬಂಧಗಳಲ್ಲಿ ದೈಹಿಕ ಆತ್ಮೀಯತೆಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಆದರೂ, ಭಾರತದಲ್ಲಿ ಹೆಚ್ಚಿನ ವಿವಾಹೇತರ ಸಂಬಂಧ ಹುಟ್ಟಿಕೊಳ್ಳುವುದು ಭಾವನಾತ್ಮಕ ಸೆಳೆತದಿಂದ. ಗಂಡಸರು ಸೆಕ್ಸ್‌ಗಾಗಿ ಈ ಸಂಬಂಧಕ್ಕೆ ಬಿದ್ದರೆ, ಬಹುತೇಕ ಮಹಿಳೆಯರು ಭಾವನಾತ್ಮಕ ಬೆಸುಗೆಗಾಗಿ ಈ ರೀತಿಯ ಸಂಬಂಧವನ್ನು ಅಪ್ಪಿಕೊಳ್ಳುತ್ತಾರೆ.
ಮಹಿಳೆಯರ ಪಾಲಿಗೆ ಸೆಕ್ಸ್ ಎನ್ನುವುದು ಯಾವತ್ತೂ ಸೆಕೆಂಡರಿ. ಬಹುತೇಕ ಸಲ ದಾಂಪತ್ಯದ ಆರಂಭದ ಒಂದೆರಡು ವರ್ಷಗಳಲ್ಲಿ ಸಿಗುವ ಭಾವನಾತ್ಮಕ ಬೆಸುಗೆ ನಂತರ ಸಡಿಲವಾಗುತ್ತಾ ಹೋಗುತ್ತದೆ. ಆರಂಭದಲ್ಲಿ ಹೆಂಡತಿ ಕುರಿತು ವಿಶೇಷ ಕಾಳಜಿ ವಹಿಸುವ ಗಂಡಂದಿರು ನಂತರ ಭವಿಷ್ಯದ ಚಿಂತೆಯಲ್ಲಿ ಮುಳುಗಿ ಬಿಡುತ್ತಾರೆ. ಹಾಗಂತ ಅವರಿಗೆ ಹೆಂಡತಿ ಕುರಿತು ಕಾಳಜಿ ಕಡಿಮೆಯಾಗಿದೆ ಅಂತೇನೂ ಅಲ್ಲ. ಆದರೂ, ಇಂಥದ್ದೊಂದು ಬದಲಾವಣೆ ಹೆಣ್ಣುಮಕ್ಕಳಲ್ಲಿ ಅಭದ್ರತೆಯ ಭಾವ ಬೆಳೆಸುತ್ತದೆ. ಇದರ ಪರಿಣಾಮ ಅವರು ಇಂಥ ಸಂಬಂಧಗಳಿಗೆ ಬಹುಬೇಗ ಸಿಲುಕಿ ಬಿಡುತ್ತಾರೆ ಎನ್ನುತ್ತಾರೆ ಮನೋವೈದ್ಯರು.

ಇಷ್ಟಾದರೂ ವಿವಾಹೇತರ ಸಂಬಂಧದಲ್ಲಿರುವ ಪುರುಷರಾಗಲಿ, ಮಹಿಳೆಯರಾಗಲಿ ಅಷ್ಟು ಸುಲಭಕ್ಕೆ ಡೈವೋರ್ಸ್‌ಗೆ ಮುಂದಾಗುವುದಿಲ್ಲ. ಇದಕ್ಕೆ ಈ ಸಂಬಂಧದ ಕುರಿತು ಇರುವ ಅಭದ್ರತೆಯೇ ಮುಖ್ಯ ಕಾರಣ ಎನ್ನುತ್ತಾರೆ ಮನಃಶ್ಶಾಸ್ತ್ರಜ್ಞೆ ಸುಮತಿ ಕನ್ವರ್ ಚೌಹಾಣ್. ಜನ ಏನಂತಾರೆ? ಮಕ್ಕಳ ಗತಿ ಏನು? ಎನ್ನುವ ಭಾವನೆ ಇಂತಹ ವಿವಾಹೇತರ ಸಂಬಂಧಕ್ಕೆ ಬೀಳುವವರನ್ನೂ ಕಾಡುತ್ತದೆ. ಹಾಗಾಗಿ ಅವರು ಒಂದು ಸಂಬಂಧದಲ್ಲಿ ಇದ್ದುಕೊಂಡೇ ಮತ್ತೊಂದು ಸಂಬಂಧ ಮುಂದುವರಿಸಿಕೊಂಡಿರುತ್ತಾರೆ. ಕೊನೆಗೆ ಎಲ್ಲಾ ಸಂಬಂಧಗಳಿಂದ ದೂರವಾಗಿ ಬಿಡುತ್ತಾರೆ. ಕೊನೆಗೆ ಒಂಟಿಯಾಗಿ ಬಿಡುತ್ತಾರೆ.

- ತೇಜಸ್ವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.