ವಿನ್ಯಾಸ ವಲಯ

ಉದ್ಯಮ ಕ್ಷೇತ್ರದಲ್ಲಿ ಜಾಗತಿಕ ಟ್ರೆಂಡ್ ಮತ್ತು ಶೈಲಿಗಳಿಗೆ ಭಾರಿ ಮಹತ್ವವಿದೆ. ಈ ಕಾರಣಕ್ಕಾಗಿ ಎಲ್ಲಾ ಉದ್ಯಮಗಳಲ್ಲಿ ವಿನ್ಯಾಸಕಾರರಿಗೇ ಹೆಚ್ಚು ಡಿಮ್ಯಾಂಡ್. ಈ ಕ್ಷೇತ್ರದಲ್ಲಿ ಕರಿಯರ್ ಕಂಡುಕೊಳ್ಳ ಬಯಸುವವರು ಕಲೆ ಮತ್ತು ವಿನ್ಯಾಸದಲ್ಲಿ ಆಸಕ್ತಿ ಹೊಂದಿರಬೇಕು. ಸೂಕ್ತ ಶಾಲೆಯಲ್ಲಿ ಓದಿರಬೇಕು. ಫೌಂಡೇಷನ್ ವರ್ಷದಲ್ಲೇ ಸೂಕ್ತ ಶೈಕ್ಷಣಿಕ ಸಂಸ್ಥೆಗೆ ಸೇರುವುದು ಉತ್ತಮ. ಫೌಂಡೇಷನ್ ವರ್ಷವೆಂದರೆ 2ಡಿ ಸ್ಕೆಚ್ಚಿಂಗ್, ಲೈಫ್, ಅಬ್ಸರ್ವೇಶನಲ್ ಡ್ರಾಯಿಂಗ್, ಸ್ಕಲ್‌ಪ್ಟಿಂಗ್ ಇತ್ಯಾದಿಗಳ ಕಲಿಕೆ.
ಒಳಾಂಗಣ ವಿನ್ಯಾಸ ಕ್ಷೇತ್ರ
ಒಳಾಂಗಣ ವಿನ್ಯಾಸ ಅಥವಾ ಇಂಟೀರಿಯರ್ ಡಿಸೈನ್ ಎಂದರೆ ವಾಸ್ತವ್ಯದ ಜಾಗದ ವ್ಯವಸ್ಥೆ, ಸಂಘಟನೆ, ನಿರ್ವಹಣೆ, ಯೋಜನೆ. ಮನೆಯ ಕೊಠಡಿಗಳು, ಕಚೇರಿ, ಚಿಲ್ಲರೆ ಮಳಿಗೆಗಳು, ಶೋರೂಂ, ಹೋಟೆಲ್, ವಸ್ತುಪ್ರದರ್ಶನದ ಮಳಿಗೆಗಳು, ವಿಮಾನ ನಿಲ್ದಾಣ, ವಿಚಾರ ಸಂಕಿರಣ ಕೇಂದ್ರಗಳು, ಸಿನಿಮಾ ಮಂದಿರಗಳು, ಫಿಲ್ಮ್ ಸ್ಟುಡಿಯೋಗಳು, ವಾಣಿಜ್ಯ ಸಂಕೀರ್ಣಗಳು ಇತ್ಯಾದಿಗಳ ಒಳಾಂಗಣಕ್ಕೆ ಹೊಸ ರೂಪ ನೀಡುವುದಾಗಿದೆ. ಈ ಕ್ಷೇತ್ರ ಪ್ರತಿಭಾವಂತರನ್ನು ಕೈಬೀಸಿ ಕರೆಯುತ್ತಿದೆ.
ಫ್ಯಾಷನ್ ಡಿಸೈನಿಂಗ್
ಮೇರಿ ವಾನ್ ಎಬೆನಾರ್ ಎಸ್ಚೆನ್‌ಬಾಚ್ ಹೇಳಿದಂತೆ 'ಶೀಘ್ರ ಗತಿಯಲ್ಲಿ ಫ್ಯಾಷನ್ ಸಾರ್ವತ್ರಿಕವಾದಂತೆಲ್ಲ ಹಳೆತೆನಿಸುತ್ತದೆ'. ಫ್ಯಾಷನ್ ಕ್ಷೇತ್ರವೇ ಹಾಗೆ. ಇಲ್ಲಿ ಹೊಸತನಕ್ಕಷ್ಟೇ ಅವಕಾಶ. ಫ್ಯಾಷನ್ ಡಿಸೈನಿಂಗ್ ಬಟ್ಟೆಬರೆ ಮತ್ತು ಲೈಫ್‌ಸ್ಟೈಲ್ ಉತ್ಪನ್ನಗಳಿಗೆ ಸಂಬಂಧಿಸಿದ್ದು. ಇದೊಂದು ಅತ್ಯಾಕರ್ಷಕ ಕ್ಷೇತ್ರ. ಹೇರಳ ಉದ್ಯೋಗಾವಕಾಶವನ್ನೂ ಸೃಷ್ಟಿಸುತ್ತಿದೆ. ನಿಮ್ಮಲ್ಲಿ ಸೃಜನಶೀಲತೆ, ಕಲಾಸಕ್ತಿ, ಅಭಿರುಚಿ ಇದ್ದರೆ ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು. ಫ್ಯಾಶನ್ ಡಿಸೈನರ್ ಆಗಲು ಸೃಜನಶೀಲತೆಯ ಜತೆಗೆ ಔದ್ಯಮಿಕ ಕೌಶಲ್ಯ ಅಗತ್ಯ.
ಉತ್ಪನ್ನಗಳ ವಿನ್ಯಾಸ
ಈ ವಿನ್ಯಾಸಕಾರರಿಗೆ ಸೃಜನಶೀಲತೆ ಮುಖ್ಯ. ನಾವು ಬಳಸುವ ವಸ್ತುವನ್ನು ಭಿನ್ನ ಮತ್ತು ಸೃಜನಶೀಲವಾಗಿ ನೋಡುವ ಒಳದೃಷ್ಟಿ ಬೇಕು. ಪ್ರತಿಭೆ ಮತ್ತು ವಿನ್ಯಾಸದ ಸಂಗಮವೇ ಪ್ರಾಡಕ್ಟ್ ಡಿಸೈನ್‌ನ ಲಕ್ಷಣ. ಉತ್ಪನ್ನದ ಜಾಗತಿಕಮಟ್ಟದ ಅರಿವು, ಮಾರುಕಟ್ಟೆ ಪರಿಜ್ಞಾನ, ಗ್ರಾಹಕರ ಅಭಿರುಚಿ, ಹೊಸತನ ಈ ಕ್ಷೇತ್ರದಲ್ಲಿ ಅಗತ್ಯ. ಉತ್ಪನ್ನಗಳನ್ನು ಹೊಸ ಖದರಿನಲ್ಲಿ ಪರಿಚಯಿಸುವಲ್ಲಿ ಪ್ರಾಡಕ್ಟ್ ಡಿಸೈನರ್ ನಿರ್ಣಾಯಕ ಪಾತ್ರ ವಹಿಸುತ್ತಾನೆ. ಯಾವುದೇ ಸೂಕ್ತ ಸಂಸ್ಥೆಯಲ್ಲಿ ಎಂಟ್ರಿ ಮಟ್ಟದ ಪದವಿ ಪಡೆದ ನಂತರ ಪ್ರಾಡಕ್ಟ್ ಡಿಸೈನರ್ ಆಗಿ ಕರಿಯರ್ ಆರಂಭಿಸಬಹುದು. ಪ್ರಾಡಕ್ಟ್ ಡಿಸೈನರ್‌ಗಳು ಮಾತ್ರವಲ್ಲದೆ ಕಮರ್ಷಿಯಲ್ ಆರ್ಟಿಸ್ಟ್, ಕಾಸ್ಟ್ ಎಸ್ಟಿಮೇಟರ್ಸ್, ಪ್ರಾಡಕ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ಎಕ್ಸಿಕ್ಯೂಟಿವ್ ಇತ್ಯಾದಿಯಾಗಿಯೂ ಹೊರಹೊಮ್ಮಬಹುದು.
ಗ್ರಾಫಿಕ್ ಡಿಸೈನಿಂಗ್
ಗ್ರಾಫಿಕ್ ಡಿಸೈನಿಂಗ್ ವಿಭಿನ್ನವಾದ ಆಯಾಮವನ್ನೊಳಗೊಂಡಿದೆ. ಗ್ರಾಫಿಕ್ ವಿನ್ಯಾಸಕಾರರು ಅಕ್ಷರಗಳು, ಬಣ್ಣಗಳು, ಪ್ಯಾಟರ್ನ್, ಇಲ್ಲಸ್ಟ್ರೇಷನ್, ಛಾಯಾಗ್ರಹಣ, ಮಾಹಿತಿ, ಭೌತಿಕ ವಸ್ತುಗಳು, ಸೃಜನಶೀಲತೆಯನ್ನು ಬಳಸಬೇಕಾಗುತ್ತದೆ. ವಾರ್ಷಿಕ ವರದಿಯಿಂದ ಹಿಡಿದು ಕಾರ್ಪೊರೇಟ್ ಲೋಗೋ, ಮ್ಯಾಪ್‌ಗಳಿಂದ ಡಯಾಗ್ರಂ ತನಕ ವೈವಿಧ್ಯಮಯವಾಗಿ ಹರಡಿದೆ ಈ ವಲಯ. ಗ್ರಾಫಿಕ್ ಡಿಸೈನರ್‌ಗೆ ಗ್ರಾಫಿಕ್ ಆರ್ಟ್ ಮ್ಯಾನೇಜರ್, ಕ್ರಿಯೇಟಿವ್ ನಿರ್ದೇಶಕ, ಕಲಾ ನಿರ್ದೇಶಕ, ಕಲಾ ಉತ್ಪಾದನೆ ವ್ಯವಸ್ಥಾಪಕ, ಹ್ಯಾಂಡ್ಸ್ ಆನ್ ಗ್ರಾಫಿಕ್ ಡಿಸೈನರ್, ಬ್ರ್ಯಾಂಡ್ ಐಡೆಂಟಿಟಿ ಡೆವಲಪರ್, ಬ್ರಾಡ್‌ಕಾಸ್ಟ್ ಡಿಸೈನರ್, ಲೋಗೊ ಡಿಸೈನರ್ ಇಲ್ಯುಸ್ಟ್ರೇಟರ್, ಮಲ್ಟಿ ಮೀಡಿಯಾ ಡೆವಲಪರ್, ಕಂಟೆಂಟ್ ಡೆವಲಪರ್, ವಿಶುವಲ್ ಜರ್ನಲಿಸ್ಟ್, ಇಂಟರ್‌ಫೇಸ್ ಡಿಸೈನರ್, ವೆಬ್ ಡಿಸೈನರ್, ಪ್ಯಾಕೇಜ್ ಡಿಸೈನರ್ ಇತ್ಯಾದಿಯಾಗಿ ಕರಿಯರ್ ರೂಪಿಸಿಕೊಳ್ಳಲು ಅನೇಕ ಅವಕಾಶಗಳಿವೆ.
- ಅವಿ ಕೇಶ್ವಾ
ನಿರ್ದೇಶಕರು- ಲೀಸಾ ಸ್ಕೂಲ್ ಆಫ್ ಡಿಸೈನ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


