ಮುನಿಸು ತರವೇ...?
ತಾಳ್ಮೆ ತಪ್ಪಿದ ಕೂಡಲೇ ಬರುವುದು ಸಿಟ್ಟು. ಅದರಲ್ಲೂ ಯುವ ಮನಸ್ಸುಗಳ ಕುದಿರಕ್ತಕ್ಕೆ...

ಯುವಕನೊಬ್ಬನ ತಂಗಿ ಮಾದಕ ವ್ಯಸನಿ ಶ್ರೀಮಂತ ಶೋಕಿವಾಲನ (ವಿಲನ್)ನ ಕಾಮತೃಷೆಗೆ ಬಲಿಯಾಗಿ ಸಾಯುತ್ತಾಳೆ. ಸಿಟ್ಟಿಗೆದ್ದ ಯುವಕ ತನ್ನ ಸಹಚರರೊಂದಿಗೆ ಸೇರಿ ಆರೋಪಿಯನ್ನು ನಿರ್ಜನ ಪ್ರದೇಶಕ್ಕೊಯ್ದು ಹಿಂಸೆ ನೀಡಿ, ಬರ್ಭರವಾಗಿ ಹತ್ಯೆ ಮಾಡುತ್ತಾನೆ... ಅಲ್ಲಿಗೆ ಸೇಡು ತೀರಿತೆಂದುಕೊಳ್ಳುತ್ತಾನೆ...
ಇದು, 'ಫೇಸ್ ಟು ಫೇಸ್' ಮಲಯಾಳಂ ಚಲನಚಿತ್ರದ ಸಣ್ಣ ಭಾಗ. ಇದು ಬಹುತೇಕ ಯುವ ಮನಸ್ಸುಗಳ ಪ್ರತೀಕವೂ ಹೌದು. ಎಲ್ಲರೂ ಸಿಟ್ಟಿನಲ್ಲಿ ಕೊಲ್ಲುತ್ತಾರೆಂದಲ್ಲ, ಆತುರಕ್ಕೆ ಬಿದ್ದು ಸಿಟ್ಟಿನ ವಶರಾಗಿ ತಮ್ಮನ್ನೇ ತಾವು ಕೊಂದುಕೊಳ್ಳುತ್ತಾರೆ.!
ತಾಳ್ಮೆ ತಪ್ಪಿದ ಕೂಡಲೇ ಬರುವುದು ಸಿಟ್ಟು. ಅದರಲ್ಲೂ ಯುವ ಮನಸ್ಸುಗಳ ಕುದಿರಕ್ತಕ್ಕೆ ಸಿಟ್ಟು ಆಜ್ಯ ಹೊಯ್ದಂತೆ. ಅಲ್ಲಿಗಲ್ಲಿಗೇ ಶಮನವಾದರೆ ಲೇಸು. ಆದರೆ, ಒಳಗೊಳಗೆ ಕೊಲೆಸ್ಟ್ರಾಲ್‌ನಂತೆ ಬೆಳೆಯುತ್ತಾ ಹೋಗುವ ಸಿಟ್ಟಿದೆಯಲ್ಲ, ಅದು ತುಂಬಾ ಅಪಾಯಕಾರಿ. ಮುಂದೊಂದು ದಿನ ಭಯಂಕರವಾಗಿ ಸ್ಫೋಟಗೊಂಡು ಸಿಟ್ಟಿಗೊಳಗಾದವನನ್ನೇ ಸುಡಬಹುದು.
ಯಾಕೆ ಸಿಟ್ಟು?: 'ಪುರ್ಸೊತ್ತಿಲ್ಲದ' ಬದುಕಿನಲ್ಲಿ ಅತಿಯಾದ ನಿರೀಕ್ಷೆ, ಎಲ್ಲವೂ ಬೇಗ ಆಗಬೇಕೆನ್ನುವ ಚಡಪಡಿಕೆ ಹಾಗೂ ತಪ್ಪು ಗ್ರಹಿಕೆಗಳೂ ಸಿಟ್ಟು ಹುಟ್ಟಿಕೊಳ್ಳಲು ಕಾರಣ. ಅಂದುಕೊಂಡದ್ದು ಈ ಕ್ಷಣ ಆಗಿ ತೀರದ ಕೂಡಲೇ ಬರುವುದು ಸಿಟ್ಟು. ಕಾಲೇಜಿನಲ್ಲಿ ಟೀಸ್ ಮಾಡಿದ್ದು, ಮೇಷ್ಟ್ರು ಕ್ಲಾಸ್‌ನಿಂದ ಆಚೆ ಕಳಿಸಿದ್ದು, ನಿಮ್ಮ ಸ್ನೇಹಿತೆ ಇನ್ನೊಬ್ಬನಿಗೆ ಮೆಸೇಜ್ ಮಾಡಿದ್ದು, ನಿಮ್ಮ ಸಹೋದ್ಯೋಗಿಯೊಬ್ಬ ಹೇಳಿದ ಕೆಲ್ಸ ಮಾಡದೇ ಬಂದಿದ್ದು...ಹೀಗೆ ಸಿಟ್ಟಿಗೆ ಹತ್ತಾರು ಜನಕರು...!
ಸಿಟ್ಟಿನಿಂದ ದಕ್ಕೋದು...: ದಿಢೀರ್ ಸಿಟ್ಟು, ಅಸಮಾಧಾನ, ಹಗೆ, ವಾಗ್ವಾದ, ಹೊಡೆದಾಟದಿಂದ ಸ್ಪಷ್ಟ ಫಲಿತಾಂಶವನ್ನಾಗಲಿ, ಸಮಸ್ಯೆಗೆ ಶಾಶ್ವತ ಪರಿಹಾರವಾಗಲಿ ಸಿಗಲು ಸಾಧ್ಯವಿಲ್ಲ. ಸಿಟ್ಟು ಮಾಡಿಕೊಂಡವರು ಗುಂಪಿನಲ್ಲಿ ಪ್ರತ್ಯೇಕನಾಗ್ತಾನೆ ಮಾತ್ರವಲ್ಲ, ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತದೆ. ಎಷ್ಟೋ ಬಾರಿ, ಮಾಡಿಕೊಂಡ ಸಿಟ್ಟಿನ ಬಗ್ಗೆ ಸಮಾಧಾನದಿಂದ ಕುಳಿತು ಯೋಚಿಸಿದಾಗ 'ಅಷ್ಟೊಂದು ಹಾರಾಟ ಬೇಕಿತ್ತಾ' ಎಂದೂ ಅನ್ನಿಸಬಹುದು. ಸಿಟ್ಟು ಹುಟ್ಟಿಸಿದ ವ್ಯಕ್ತಿಯಾದ್ರೂ ಆರಾಮದಿಂದ ಇರಬಹುದು. ಸಿಟ್ಟು ಮಾಡ್ಕೊಂಡಾತ ಮನಃಶಾಂತಿ ಕಳೆದುಕೊಳ್ಳುವುದು ಖಚಿತ.
- ಸಿಟ್ಟಿನಿಂದ ಅನಗತ್ಯ ವಾಗ್ವಾದ, ಪ್ರಸ್ತಾಪ, ದೂಷಣೆ, ಹೊಸದೊಂದು ದ್ವೇಷ ಹುಟ್ಟಿಕೊಳ್ಳುತ್ತದೆ.
- ಕಾಲೇಜು, ಕಚೇರಿಯ ವಾತಾವರಣ ಕದಡುತ್ತದೆ.
- ಒಂದು ಸಮಸ್ಯೆ ಹೋಗಿ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳಬಹುದು.
- ಸಿಟ್ಟಿನಿಂದಾಗಿ ಇನ್ನೊಬ್ಬರು ಹೇಳುವುದನ್ನು ಕೇಳಿಸಿಕೊಳ್ಳುವ ತಾಳ್ಮೆ ಕಳೆದುಕೊಂಡು ವಿಷಯವನ್ನು ತಪ್ಪಾಗಿ ಗ್ರಹಿಸುವ ಅಪಾಯವಿದೆ.
- ಮಾತ್ರವಲ್ಲ, ಸಿಟ್ಟಿನ ಪರಿಣಾಮ ತಲೆನೋವು, ಜೀರ್ಣ ವ್ಯವಸ್ಥೆ ಹಾಳಾಗುವುದು, ಆತಂಕ, ಖಿನ್ನತೆ, ಹೆಚ್ಚು ರಕ್ತದೊತ್ತಡ, ಹೃದಯಾಘಾತಗಳೂ ಕಂಡುಬರಬಹುದು.
- ಆ ಕ್ಷಣಕ್ಕೆ ಸಿಟ್ಟು ನಿಯಂತ್ರಣ ಅಸಾಧ್ಯವೆನಿಸಿದರೆ, ತಾತ್ಕಾಲಿಕವಾಗಿ ಆ ಜಾಗದಿಂದ ದೂರ ಹೋಗಲು ಪ್ರಯತ್ನಿಸಿ.
- ಭಾವೋದ್ರೇಕ ಸಾಮಾನ್ಯ ಬದುಕಿನ ಒಂದು ಭಾಗ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
- ಸಿಟ್ಟಿಗೆ ಕಾರಣ ಕಂಡುಕೊಂಡ ಬಳಿಕ ಸಿಟ್ಟಗೊಳ್ಳುವ ಬದಲು ಶಾಂತವಾಗಿ ಸಮಸ್ಯೆಯಿಂದ ಹೊರಬರಲು ದಾರಿಗಳನ್ನು ಹುಡುಕಿ.
- ದೇಹಕ್ಕೆ ವ್ಯಾಯಾಮ ಕೊಡುವ ಆಟಗಳು, ಓಟ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಿ.
- ಒಂದು ಡೈರಿಯಲ್ಲಿ, ತುಂಬಾ ಸಿಟ್ಟುಗೊಂಡಾಗ ನೀವು ತೋರಿಸುವ ಅತಿರೇಕಗಳ ಪಟ್ಟಿ ಮಾಡಿ ನಂತರ ಓದಿ.
- ಧ್ಯಾನ, ಪ್ರಾಣಾಯಾಮಗಳ ಪ್ರಯೋಗ ಮಾಡಿ.
- ಇನ್ನೂ ಸಿಟ್ಟು ಕಡಿಮೆಯಾಗದಿದ್ದರೆ ಕೌನ್ಸೆಲರ್‌ಗಳು ಅಥವಾ ಮನೋವೈದ್ಯರ ಸಲಹೆ ಪಡೆಯುವುದು ವಾಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


