ಯುವಜನ/ಮಕ್ಕಳು

ಸುಳ್ಳೇ ಸುಳ್ಳು ಮೂರ್ಛೆ ಬೀಳುತ್ತಿದ್ದೆ ಗೆಳೆಯಾ...

Published On :

ಪ್ರಿಯ ಗೆಳೆಯ ಭಂಡಾರಿ,
ಈ ಮಾತನ್ನು ನಾನು ಎಂದೋ ಹೇಳಬೇಕಿತ್ತು. ಇಂದು ವೇದಿಕೆ ಸಿಕ್ಕಿದೆ ಅಷ್ಟೆ. ನನ್ನ ವಿಳಾಸ, ಸಂಪರ್ಕ ನನಗಿಲ್ಲದಿರುವುದರಿಂದ ಈ ಮೂಲಕ ತಿಳಿಸುತ್ತಿದ್ದೇನೆ. ಸುಮಾರು 20 ವರ್ಷ ಹಿಂದಿನ ಮಾತು. ನೀನು ನನ್ನ ಬಾಲವಾಡಿಯ ಆತ್ಮೀಯ ಗೆಳೆಯ. ಆ ವಯಸ್ಸಿನ ಮುಗ್ಧತನವೋ ಅಥವಾ ನನ್ನದೇ ಕಪಟತನವೋ ನೀನು ನನ್ನ ಗೆಳೆಯನಾದರೂ ನಿನಗೆ ಟೀಚರ್‌ರಿಂದ ಬೆನ್ನ ಮೇಲೆ 'ಗುನ್ನು' ಬಿದ್ದರೆ ನನಗೇನೋ ಖುಷಿ. ನೀನು ಚೆನ್ನಾಗಿ ಓದಿ ಬರೆದು ಟೀಚರ್‌ರಿಂದ ಶಹಭಾಶ್‌ಗಿರಿ ಪಡೆಯುತ್ತಿದ್ದಿ. ಆ ಹೊಗಳಿಕೆ ಸಿಗದ್ದಕ್ಕೋ ಏನೋ ನಿನಗೆ ಹೊಡೆಸುವುದೆಂದರೆ ನನಗೆ ಆಸಕ್ತಿ.
ನನಗೆ ಚೆನ್ನಾಗಿ ನೆನಪಿದೆ. ಒಂದು ದಿನ ನನಗೆ ಕಚ್ಚಿದ್ದಾಗಿ ನಿನಗೆ ಚೆನ್ನಾಗಿ ಗೂಸಾ ಬಿದ್ದಿತ್ತು. 'ನಾನು ಮಾಡಿಲ್ಲ... ನಾನು ಮಾಡಿಲ್ಲ...' ಎಂದು ಅಂದು ಏನೂ ಗೊತ್ತಿಲ್ಲದ ನೀನು ಪರಿಪರಿಯಾಗಿ ಬೇಡಿಕೊಂಡಿದ್ದೂ ವ್ಯರ್ಥವಾಗಿತ್ತು. ಉಚ್ಚೆಗೆ ಬಿಟ್ಟಾಗ ನನ್ನ ಕೈಯನ್ನು ನಾನೇ ಹಲ್ಲು ಮೂಡುವಂತೆ ಕಚ್ಚಿ ಟೀಚರ್‌ಗೆ ನಿನ್ನ ಮೇಲೆ ದೂರಿತ್ತಿದ್ದೆ. ಆ ಹಲ್ಲು ಮೂಡಿದ ಸಾಕ್ಷಿಯ ಮುಂದೆ ನೀನು ಬೇಡಿಕೊಂಡದ್ದು ಟೀಚರ್ ಕಿವಿಗೆ ಬೀಳಲೇ ಇಲ್ಲ. ಈಗನ ನನ್ನ ವರ್ತನೆಗೆ ನಗುವಿನ ಜತೆಗೆ ನಿನ್ನ ಮುಗ್ಧತನದ ದುರುಪಯೋಗದ ಪಶ್ಚಾತಾಪವೂ ಆಗುತ್ತಿದೆ.
ನಿನಗೆ ನೆನಪಿರಬಹುದು. ನನಗೆ ಆಗಾಗ 'ಫಿಟ್ಸ್‌' ಬರುತ್ತಿತ್ತು. ವಿಶೇಷವೆಂದರೆ ನಿನ್ನಿಂದ ಏನಾದರೂ ಕೆಲಸಬೇಕಾದಾಗ ಮಾತ್ರ ಆ ಫಿಟ್ಸ್ ಬರುತ್ತಿತ್ತು. ಫಿಟ್ಸ್ ಬಂದಾಗ ಮುಂದಿಡುತ್ತಿದ್ದ ನನ್ನ ಯಾವ ಬೇಡಿಕೆಯನ್ನೂ ನೀನು ತಿರಸ್ಕರಿಸುತ್ತಿರಲಿಲ್ಲ. ನನಗೆ ನೆನಪಿದ್ದ ಹಾಗೆ ನೀನು ನನಗೆ 2 ರುಪಾಯಿ ಸಾಲ ಹಿಂತಿರುಗಿಸದಿದ್ದಾಗ ನನಗೆ ಫಿಟ್ಸ್ ಬಂದಿತ್ತು. ಮರುದಿನವೇ ನೀನು ಹೇಗೋ ನನ್ನ 2 ರುಪಾಯಿ ವಾಪಸ್ ಕೊಟ್ಟಿದ್ದೆ. ವಾಸ್ತವದಲ್ಲಿ ನನಗೆ ಬರುತ್ತಿದ್ದ ಮೂರ್ಛೆರೋಗ ಕಪಟ ನಾಟಕವಾಗಿತ್ತು.
ಈ ಪತ್ರದಲ್ಲಿ ನನ್ನ ಹೆಸರು ಹಾಕಿಲ್ಲ. ಆದರೆ, ಈ ಪತ್ರವನ್ನು ಯಾರು ಬರೆದದ್ದು ಎಂಬುದು ನಿನಗೆ ಖಂಡಿತಾ ತಿಳಿಯುತ್ತದೆ ಎನ್ನುವ ವಿಶ್ವಾಸ ನನಗಿದೆ. ಸಾಧ್ಯವಿದ್ದರೆ ನನ್ನನ್ನು ಸಂಪರ್ಕಿಸು.
= ನಿನ್ನ ಕಪಟ ಗೆಳೆಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.