ಯುವಜನ/ಮಕ್ಕಳು

ಬಿಟ್ಹಾಕು... ಬಿಟ್ಹಾಕು...

ಪ್ರೇಮ ವೈಫಲ್ಯ ಎಂಬ ಸುಂದರ ದುರಂತ

ಬಿಟ್ಹಾಕು... ಬಿಟ್ಹಾಕು...
Published On :


'TO Fall in love is awfully simple, but to fall out of love simply awful'
ಮೊನ್ನೆಮೊನ್ನೆವರೆಗೆ ಕೈಹಿಡಿದುಕೊಂಡು ಓಡಾಡುತ್ತಿದ್ದ ಹುಡುಗ ಇವತ್ತು ಇನ್ಯಾರದ್ದೋ ಜತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾನೆ. ನೀವಿಬ್ಬರೂ ಕೂಡಿ ಕಟ್ಟಿದ್ದ ಮನೆಯಲ್ಲಿ ಬೇರಿನ್ಯಾರನ್ನೋ ತಂದು ಕೂರಿಸಿದ್ದಾನೆ. ನಿಮಗೀಗ ಆತನ ಹೃದಯದಲ್ಲಿ ಜಾಗವೇ ಇಲ್ಲ. ನಿಮ್ಮ ಕನಸುಗಳನ್ನೆಲ್ಲ ಆಕೆಗೆ ಕೊಟ್ಟಿದ್ದಾನೆ. ನೋವು, ನೆನಪುಗಳನ್ನು ಮಾತ್ರ ನಿಮ್ಮ ಪಾಲಿಗೆ ಬಿಟ್ಟು ಹೋಗಿದ್ದಾನೆ. ಅವನ ಬದುಕಿನಲ್ಲೀಗ ನೀವಿಲ್ಲ, ಅವನ ಕನಸುಗಳಿಗೆ ನೀವು ಬೇಕಿಲ್ಲ...
ನೀವಿಬ್ಬರು ಎದುರು ಬದುರು ಕೂರುತ್ತಿದ್ದ ಕ್ಯಾಂಟೀನ್‌ನಲ್ಲೀಗ ಅವರಿಬ್ಬರು ಕಾಫಿ ಹೀರುತ್ತಿದ್ದಾರೆ. ಗಂಟೆಗಟ್ಟಲೆ ಕೂತು ಹರಟೆ ಹೊಡೆಯುತ್ತಿದ್ದ ಪಾರ್ಕ್‌ನ ಅದೇ ಜಾಗದಲ್ಲಿ ಅವರಿಬ್ಬರು ಪರಸ್ಪರ ಕೈಹಿಡಿದುಕೊಂಡು ನಗುತ್ತಿರುತ್ತಾರೆ... ಅವನ ಕನಸು, ಬದುಕಿನಲ್ಲಿದ್ದ ನಿಮ್ಮ ಜಾಗಗಳಲ್ಲೀಗ ಬರೀ ಅವಳೇ ತುಂಬಿಕೊಳ್ಳುತ್ತಿದ್ದಾಳೆ.
ಆದ್ರೂ ಈ ಹಾಳು ಮನಸ್ಸು ಕೇಳಬೇಕಲ್ಲಾ? ಕುಂತಲ್ಲಿ ನಿಂತಲ್ಲಿ ಆತನದ್ದೇ ನೆನಪು. ಬೇಡವೆಂದರೂ ಕಾಡುತ್ತದೆ ಆ ಹಳೆಯ ನೆನಪು. ಪದೆಪದೆ ಹೃದಯದ ಕದ ತಟ್ಟುತ್ತದೆ. ನೆನಪಿನ ಬುತ್ತಿ ಬಿಚ್ಚುತ್ತದೆ. ಹಳೆಯ ಗಾಯಕ್ಕೆ ಮತ್ತಷ್ಟು ಉಪ್ಪು ಸವರುತ್ತದೆ. ಊಟ ನಿದ್ದೆ ಎಲ್ಲವನ್ನೂ ಕಿತ್ತುಕೊಳ್ಳುತ್ತದೆ. ಇರುವುದೆಲ್ಲವ ಬಿಟ್ಟು ಎಲ್ಲೋ ದೂರ ಓಡಿ ಬಿಡೋಣ ಅನಿಸುತ್ತದೆ.
ಲವ್ವಲ್ಲಿ ಇದ್ದಷ್ಟು ದಿನ ಈ ಜಗತ್ತು ಎಷ್ಟು ಸುಂದರವಾಗಿ ಕಾಣಿಸುತ್ತಿತ್ತು. ಆದರೆ, ಆ ಸುಂದರ ಜಗತ್ತಿನ ಅಂತ್ಯ ಇಷ್ಟು ದುರಂತಮಯ, ಯಾತನಾಮಯ ಆಗಿರುತ್ತೆ ಅಂತ ಆಗ ಅನಿಸಿಯೇ ಇರಲಿಲ್ಲ. ಎರಡು ವರ್ಷಗಳಿಂದ ಆತನ ಜತೆಗೆ ಜತನದಿಂದ ಹೊಸ ಬದುಕು ಕಟ್ಟಿದ್ದಿರಿ. ಅದೀಗ ಮುರಿದು ಬಿದ್ದಿದೆ. ನಿಮ್ಮ ನಗು, ಸಂತೋಷ ಎಲ್ಲವನ್ನೂ ಕಿತ್ತುಕೊಂಡಿದೆ. ನಿಮ್ಮನ್ನು ಲವ್‌ಫೈಲೂರ್ ಎನ್ನುವ ನೋವಿನ ಕೂಪಕ್ಕೆ ತಳ್ಳಿದೆ.
ಹಾಗಿದ್ರೆ ಈ ಲವ್‌ಫೈಲೂರ್ ಎನ್ನುವ ನೋವಿನ ಕೂಪದಿಂದ ಹೊರಬರಲು ಸಾಧ್ಯವೇ ಇಲ್ವೇ? ಖಂಡಿತಾ ಸಾಧ್ಯ. ನೀವು ಮನಸ್ಸು ಮಾಡಬೇಕಷ್ಟೆ. ಬದುಕು ಯಾವತ್ತೂ ನಿಂತ ನೀರಲ್ಲ. ಅದು ನಮ್ಮನ್ನು ನಿಂತಲ್ಲಿ ನಿಲ್ಲಲು ಬಿಡುವುದೂ ಇಲ್ಲ. ಬೇಡವೆಂದರೂ ನಾವು ಮುಂದಡಿ ಇಡಲೇ ಬೇಕು ಎನ್ನುವ ಸತ್ಯ ಅರ್ಥವಾದರೆ
ಈ ವೈಫಲ್ಯದಿಂದ ಹೊರಬರುವುದು ಕಷ್ಟವೇನಲ್ಲ. ಅವನು ದೂರವಾದರೆ ಇಡೀ ಜಗತ್ತೇ ದೂರ ಆಯಿತೆಂದಲ್ಲ. ಜಗತ್ತು ಸುಂದರವಾಗಿದೆ. ಅವನಂತೆ ಪ್ರೀತಿಸುವ ಇನ್ನಷ್ಟು ಜೀವಗಳು ನಮ್ಮ ಸುತ್ತಮುತ್ತ ಇವೆ. ಕತ್ತಲೆ ಕಳೆದ ಮೇಲೆ ಮತ್ತೆ ಬೆಳಕು ಮೂಡಲೇ ಬೇಕು. ಅಷ್ಟಕ್ಕೂ 'Hearts will never be practical until they are made unbreakable'


ಹೊಸ ವ್ಯಕ್ತಿಯಾಗಲು ಹೀಗ್ಮಾಡಿ



ದ್ವೇಷ ಬೇಡ
ಪ್ರೀತಿಯಲ್ಲಿ ಕೈಕೊಟ್ಟವರನ್ನು ದ್ವೇಷಿಸಿದರೆ ಪ್ರೇಮ ವೈಫಲ್ಯದ ನೋವಿನಿಂದ ಹೊರಬರಬಹುದು ಎನ್ನುವ ಕಲ್ಪನೆ ಬಹುತೇಕರಲ್ಲಿದೆ. ಅದು ತಪ್ಪು. ದ್ವೇಷ ನಮ್ಮ ನೋವನ್ನು ಹೆಚ್ಚಿಸುತ್ತದೆಯೇ ಹೊರತು ಕಡಿಮೆ ಮಾಡುವುದಿಲ್ಲ. ಅದಕ್ಕಿಂತ ಅವರನ್ನು ಮರೆಯಲು ಪ್ರಯತ್ನಿಸುವುದೇ ಲೇಸು.
ಪ್ರವಾಸ ಹೋಗಿ
ಕಳೆದು ಹೋದ ಪ್ರೀತಿಗಾಗಿ ಎಷ್ಟು ದಿನ ಕೊರಗುತ್ತಾ ಕೂರುತ್ತೀರಿ? ಪ್ರವಾಸಕ್ಕೆ ಹೋಗಿ. ಪ್ರಕೃತಿಯ ನಡುವೆ ಕೆಲಕಾಲ ಆತ್ಮೀಯರ ಜತೆ ಕಳೆಯಿರಿ.
ಪ್ರೇಮಗೀತೆಯಿಂದ ದೂರ ಇರಿ
ಸಾಧ್ಯವಾದಷ್ಟು ಪ್ರೇಮಗೀತೆಯಿಂದ ದೂರ ಇರಿ. ಕನಿಷ್ಠ ಒಂದು ತಿಂಗಳಾದರೂ ವಿರಹ, ಪ್ರೇಮಗೀತೆಗೆ ಕಿವಿಯಾನಿಸುವುದನ್ನು ನಿಲ್ಲಿಸಿ.
ಬ್ಯುಸಿಯಾಗಿ
ಓದು, ಕೆಲಸದಲ್ಲಿ ಬ್ಯುಸಿಯಾಗಲು ಪ್ರಯತ್ನಿಸಿ. ಪ್ರತಿಕ್ಷಣವೂ ನಿಮ್ಮ ಬದುಕಿನ ಗುರಿ, ಧ್ಯೇಯಗಳ ಬಗ್ಗೆಯಷ್ಟೇ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ.


ಹವ್ಯಾಸ
ನಿಮಗಿಷ್ಟವಾದ ಕ್ರೀಡೆ ಅಥವಾ ಇನ್ಯಾವುದೋ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ. ಸ್ವಲ್ಪ ಸಮಯದವರೆಗೆ ಈ ಹವ್ಯಾಸಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸಿ.

-ಕ್ಷಮಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.