ಪುಟ್ಟ ಗುಬ್ಬಿಯ ಜಾಣತನ
ಒಂದು ಮರದಲ್ಲಿ ಪುಟ್ಟ ಗುಬ್ಬಿಯೊಂದು ಕುಳಿತು ಸಂತೋಷದಿಂದ ಚಿಂವ್ ಚಿಂವ್ ಎಂದು ಹಾಡತೊಡಗಿತ್ತು. ಆ ಮರದ ಕೆಳಗೆ ಕುಳಿತ ನರಿ ಇದನ್ನು ಕೇಳಿತು. ಹಸಿದು ಬೇಟೆಗಾಗಿ ಕನಸು ಕಾಣುತ್ತಿದ್ದ ನರಿ ಉಪಾಯದಿಂದ 'ಕಾಡಿನ ಹವೆ ಬಹಳ ಹಿತವಾಗಿದೆ, ಇಬ್ಬರೂ ಕೂಡಿ ಕೆಲ ಹೊತ್ತು ಆಟ ಆಡೋಣವೇ?' ಎಂದು ಗುಬ್ಬಿಯನ್ನು ಕೇಳಿತು.
ಗುಬ್ಬಿ ಪುಟ್ಟದಾಗಿದ್ದರೂ ಚುರುಕು ಹಾಗೂ ಬಹು ಜಾಣ ಪಕ್ಷಿ. ನರಿಯ ಮನದ ಇಚ್ಛೆಯನ್ನು ಅದು ಅರಿತುಕೊಂಡಿತು. ನರಿಯಿಂದ ತಪ್ಪಿಸಿಕೊಳ್ಳಲು ಅದಕ್ಕೇನೂ ಅಸಾಧ್ಯವಾಗಿರಲಿಲ್ಲ. ಪುರ್ರನೆ ಹಾರಿ ಹೋಗಬಹುದಾಗಿತ್ತು. ಆದರೆ, ಮೋಸಗಾರನಿಗೆ ಮೋಸ ಮಾಡಿ ತಕ್ಕ ಪಾಠ ಕಲಿಸಬೇಕೆಂದುಕೊಂಡು ಉಪಾಯವೊಂದನ್ನು ಕಂಡುಕೊಂಡಿತು.
ಯಾವನನ್ನಾದರೂ ಮೂರ್ಖನನ್ನಾಗಿಸಲು ಅವನಲ್ಲಿರುವ ದೌರ್ಬಲ್ಯವನ್ನು ಮೊದಲು ತಿಳಿದಿರಬೇಕು. ಅದರ ಬಲದಿಂದಲೇ ಅವನನ್ನು ಬೇಗ ಸೋಲಿಸಬಹುದು. ಇದನ್ನು ಪುಟ್ಟ ಗುಬ್ಬಿಗೆ ಅದರ ತಾಯಿ ಮತ್ತೆಮತ್ತೆ ಹೇಳುತ್ತಿದ್ದುದು ಈಗ ನೆನಪಾಯ್ತು. ಅದರ ಪ್ರಜ್ಞೆ ಜಾಗೃತವಾಯಿತು. ಆಗ ಗುಬ್ಬಿ 'ಅಯ್ಯಾ ನರಿರಾಯನೆ, ಇಂತಹ ಹಿತಕರ ವಾತಾವರಣದಲ್ಲಿ ಆಡಲು ನನ್ನ ಮನಸ್ಸೂ ಹಾತೊರೆಯುತ್ತಿದೆ. ಸ್ವಲ್ಪ ಕಾಯೋಣ. ನನ್ನ ಗೆಳೆಯನಾದ ನಾಯಿಯೂ ಈಗ ಬರುವುದಿದೆ. ಮೂವರೂ ಜೊತೆಗೂಡಿ ಆಟವಾಡಿದರೆ ಚೆನ್ನ ಅಲ್ಲವೆ?' ಎಂದು ನರಿಗೆ ಕೇಳಿತು.
ಸರಿ, ನಾಯಿಯ ಹೆಸರನ್ನು ಕೇಳಿದ ಕೂಡಲೇ ನರಿಯು ಅಂಜಿತು. ತಕ್ಷಣ ಬಾಲ ಮುದುರಿಕೊಂಡು, 'ತಾಳು, ಹೀಗೆ ಹೋಗಿ ಬರುವೆ' ಎಂದು ಓಟ ಕಿತ್ತಿತು! <
= ಗುರುರಾಜ ಬೆಣಕಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

