ಪರಿ ಪರಿ ಪರಿಚಯ
ಮಾತಿಗೆ ಮೊದಲಿನ ಮಧುರ ಮುನ್ನುಡಿ
'ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ....' ಹೀಗೊಂದು ಸಂಸ್ಕೃತದ ಪ್ರಾಚೀನ ಸುಭಾಷಿತ. ಒಳ್ಳೆಯ ಮಾತನಾಡುವುದರಿಂದ ಮಾನವ, ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲಾ ರೀತಿಯ ಜೀವಿಗಳೂ ಸಂತೋಷಗೊಳ್ಳುತ್ತವೆ. ಆದ್ದರಿಂದ ಅಂತಹ ಒಳ್ಳೆಯ ಮಾತು ಆಡೋಣ, ಮಾತಿಗೇನು ಬಡತನವಿಲ್ಲವಷ್ಟೇ..' ಎಂಬುದು ಸಾರ.
ಮಾತಿಗಾರಂಭಿಸುವವರು ತಮ್ಮ ವಿಷಯ ಹೇಳುವ ಮೊದಲು ತಾವು ಯಾರು ಎಂಬದನ್ನು ತಿಳಿಸುವುದೇ ಕಿರು ಪರಿಚಯ. ಇದು ಆಕರ್ಷಕವಾಗಿದ್ದರೆ ಮುಂದೆ ವಿಷಯ ಮಂಡನೆಗೂ ಸಹಕಾರಿಯಾಗುತ್ತದೆ.
ಇಂಟರ್ ವ್ಯೂನಲ್ಲಿ
ಆಗಷ್ಟೇ ಕಾಲೇಜು ವ್ಯಾಸಂಗ ಮುಗಿಸಿ ಕೆಲಸ ಹುಡುಕುವ ಸಮಯ. ಹಾಕಿದ ಅರ್ಜಿ ಫಲಿಸಿ ಸಂದರ್ಶನಕ್ಕೆ ಕರೆ ಬಂದಿದೆ. ಈ ಸಂದರ್ಭದಲ್ಲಿ ಕಾಲೇಜಿನಲ್ಲಿನ ಹಮ್ಮು, ಅಹಮ್ಮು ತೋರಿಸಿಕೊಳ್ಳದೆ ಸಂದರ್ಶಕನೆದುರಿಗೆ ಕುಳಿತಾಗ ತನ್ನ ಹೆಸರು, ವಿದ್ಯಾರ್ಹತೆ ಹೇಳಿಕೊಂಡು ಸಂಕ್ಷಿಪ್ತವಾಗಿ ತಮ್ಮ ಪರಿಚಯ ಮಾಡಿಕೊಳ್ಳುವ ಮೂಲಕ ಸಂದರ್ಶಕನ ಮನಸ್ಸು ಗೆಲ್ಲಬೇಕು. ನಿಮ್ಮ ಪರಿಚಯದ ಮಾತಿನಿಂದಲೇ ಅವರು ನಿಮ್ಮ ಆಯ್ಕೆಯ ಅವಶ್ಯಕತೆಯನ್ನು ಅರಿಯುವಂತಿರಬೇಕು.
ಸೆಲೆಬ್ರಿಟಿಯೊಂದಿಗೆ
ಹಲವು ಖ್ಯಾತನಾಮರೊಂದಿಗೆ ಗುರುತಿಸಿಕೊಳ್ಳುವ, ಅವರು ನಮ್ಮನ್ನು ಗುರುತಿಸಬೇಕು ಎನ್ನುವ ಹಂಬಲ ಸಹಜವಾಗಿ ಇರುತ್ತದೆ. ಒಮ್ಮೆ ಅವರನ್ನು ಭೇಟಿಯಾದವರು ಇನ್ನೊಂದು ಬಾರಿ ಭೇಟಿಯಾದಾಗ ತಮ್ಮ ಪರಿಚಯ ಅಂದೇ ಆಗಿರುವುದರಿಂದ ಮತ್ತೊಮ್ಮೆ ಪರಿಚಯಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೇವಲ ಹೆಸರು ಹೇಳಿಕೊಳ್ಳುತ್ತಾರೆ. ಆದರೆ ನೆನಪಿರಲಿ, ಪ್ರಸಿದ್ಧ ವ್ಯಕ್ತಿಗಳಿಗೆ ನೀವೊಬ್ಬರೇ ಪರಿಚಿತರಲ್ಲ. ಪ್ರತಿದಿನ ಸಾವಿರಾರು ಮಂದಿ ಅವರನ್ನು ಭೇಟಿಯಾಗುತ್ತಾರೆ. ಎಷ್ಟು ಬಾರಿ ಅಂತಹವರು ಸಿಕ್ಕಿದರೂ ಮತ್ತೆ ಹೊಸದಾಗಿ, ಪೂರ್ಣವಾಗಿಯೇ ಪರಿಚಯಿಸಿಕೊಳ್ಳಿ.
ದೂರದ ಸಂಬಂಧಿಗಳೊಂದಿಗೆ
ಕೆಲವರು ನಮ್ಮ ಸಂಬಂಧಿಗಳಾಗಿದ್ದರೂ ಕಾಲ ಸರಿದಂತೆ ಅನಿವಾರ್ಯವಾಗಿ ದೂರ ಹೋಗಿರುತ್ತಾರೆ. ಆದರೆ, ಆಕಸ್ಮಿಕವಾಗಿ ಎದುರು ಸಿಕ್ಕಿದಾಗ ಅವರಿಗೆ ನಮ್ಮ ಪರಿಚಯವಾಗದಿರಬಹುದು. ಅಂತಹ ಸಂದರ್ಭದಲ್ಲಿ ನೀವೇ ಅವರನ್ನು ಮಾತನಾಡಿಸಿ, ಇಂತಹವರ ಮಗ/ಳು, ಮೊಮ್ಮಗ/ಳು ಎಂದು ಹಿರಿಯ ತಲೆಮಾರಿನವರ ಮೂಲಕ ಪರಿಚಯಿಸಿಕೊಳ್ಳಿ. ನಿಮ್ಮ ಬಾಲ್ಯವನ್ನು ನೋಡಿದ್ದ ಅವರು ಇಂದಿನ ನಿಮ್ಮ ಬೆಳವಣಿಗೆ ನೋಡಿ ಆನಂದಿಸುತ್ತಾರೆ. ಇದರಿಂದ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಮಾಸ್ತರರಿಗೆ ನಮನ
1 ನೇ ತರಗತಿಯಿಂದ ಕಾಲೇಜು ಮುಗಿಯುವವರೆಗೂ ಹತ್ತು ಹಲವು ಶಿಕ್ಷಕರನ್ನು ಕಂಡಿರುತ್ತೇವೆ. ಶಿಕ್ಷಕರೂ ನಮ್ಮ ನೂರು ಪಟ್ಟು ಹೆಚ್ಚು ವಿದ್ಯಾರ್ಥಿಗಳನ್ನು ಕಂಡಿರುತ್ತಾರೆ. ಅಂತಹ ಶಿಕ್ಷಕರ ಭೇಟಿಯಾದಾಗ ಅವರಿಗೆ ಆತ್ಮೀಯವಾಗಿ ವಂದಿಸಿ, ಅವರು ನಿಮ್ಮ ಯಾವ ತರಗತಿಗೆ ಗುರುಗಳಾಗಿದ್ದರು ಎನ್ನುವುದನ್ನು ಮೊದಲು ತಿಳಿಸಿ. ಪ್ರತಿವರ್ಷ ನೂರಾರು ವಿದ್ಯಾರ್ಥಿಗಳನ್ನು ನೋಡಬೇಕಾಗಿರುವಾಗ ಕೂಡಲೇ ನೆನಪು ಅವರಿಗೆ ಬಾರದಿರಬಹದು. ಆಗ ಅಂದು ನೀವು ಕಾರಣವಾಗಿದ್ದ ಯಾವುದೋ ತುಂಟತನದ ಘಟನೆಯ ಮೂಲಕ ವಿವರಿಸಿ ಹೇಳಿ. ಅಂದು ಸಿಟ್ಟಿಗೆ ಕಾರಣವಾಗಿದ್ದ ವಿಷಯವೇ ಇಂದು ಪೂರಕವಾಗಿ,ನಿಮಗೂ, ಶಿಕ್ಷಕರಿಗೂ ಹಿತವೆನಿಸುತ್ತದೆ.
ಮೊಬೈಲ್, ಮೆಸೇಜ್
ಹೊಸ ಸೆಲ್ ಕೊಂಡಾಢಿಗ ಅಥವಾ ಸಿಮ್ ಬದಲಿಸಿದಾಗ ಎಲ್ಲಾ ಸ್ನೇಹಿತರಿಗೂ ನಿಮ್ಮ ಹೆಸರಿನ ಮೂಲಕ ಹೊಸ ನಂಬರ್ ಕಳಿಸುವುದು ಮರೆಯದಿರಿ. ಅದು ಬಿಟ್ಟು ಹೆಸರಿರದ ಅಪರಿಚಿತ ನಂಬರ್‌ನಿಂದ ಮೆಸೇಜ್ ಮಾಡಿದರೂ ಅದು ನೀವೇ ಎಂದು ಎಲ್ಲರಿಗೂ ತಿಳಿಯಬೇಕು ಎಂದು ಹಠ ಹಿಡಿದರೆ ಅದು ಸಾಧ್ಯವಾಗದು.
ಇದರಿಂದ ಒಂದಷ್ಟು ಸಮಯ ವರ್ಥ್ಯ, ಮನಸ್ತಾಪ ಉಂಟಾಗಬಹುದುದೇ ಹೊರತು ಯಾರಿಗೂ ಲಾಭವಾಗುವುದಿಲ್ಲ. ಪ್ರತಿದಿನ ಹತ್ತು ಹಲವು ಮಂದಿಯನ್ನು ಅನಿವಾರ್ಯವಾಗಿ ಪರಿಚಯ ಮಾಡಿಕೊಳ್ಳಲೇಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಾತಿಗೆ ಮೊದಲಿನ ಮುನ್ನುಡಿ ಮಧುರವಾಗಿದ್ದರೆ ನಿಮ್ಮ ಕಾರ್ಯ ಸುಸೂತ್ರ.
-ಸುಧೀಂದ್ರ ಜಮ್ಮಟಿಗೆ
sudheeja@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

