ಯುವಜನ/ಮಕ್ಕಳು

ಗ್ಯಾಜೆಟ್ ಗೋಳು

Published On :

'ಇಡೀ ದಿನ ಓದಿದ್ರೂ ನನ್ನ ಮಗನಿಗೆ ಒಂದಕ್ಷರವೂ ತಲೆಗೆ ಹತ್ತಲ್ಲ ಡಾಕ್ಟ್ರೇ...' ಇದು ವೈದ್ಯರ ಬಳಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ಅನೇಕ ಪೋಷಕರ ಗೋಳು.
ತಮಾಷೆಯೆಂದರೆ ವಿದ್ಯಾರ್ಥಿಗಳ ಇಂಥ ಸಮಸ್ಯೆಗಳಿಗೆ ಕೆಲವೊಮ್ಮೆ ಪೋಷಕರ ಬಳಿಯೇ ಪರಿಹಾರ ಇರುತ್ತದೆ. ಯಾಕೆಂದರೆ ಏಕಾಗ್ರತೆ ಕೊರತೆಯ ಶೇ.90ರಷ್ಟು ಸಮಸ್ಯೆಗಳ ಮೂಲ ಇರುವುದೇ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ಗಳಂಥ ಗ್ಯಾಜೆಟ್‌ಗಳಲ್ಲಿ. ಇಂದಿನ ವಿದ್ಯಾರ್ಥಿಗಳು ಗ್ಯಾಜೆಟ್ ಗೀಳಿಗೆ ಬೀಳುತ್ತಿದ್ದಾರೆ. ಮೊನ್ನೆ ಮೊನ್ನೆವರೆಗೆ ತರಗತಿ ಮಧ್ಯೆ ಎಸ್‌ಎಂಎಸ್ ರವಾನಿಸುತ್ತಿದ್ದ ವಿದ್ಯಾರ್ಥಿಗಳು ಇಂದು ಪಾಠದ ನಡುವೆ ಐಪಾಡ್ ಬಳಸಿ ಹಾಡುಕೇಳುತ್ತಾರೆ. ವೀಡಿಯೋ ಗೇಮ್ ಆಡುತ್ತಾರೆ. ಫೇಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಾರೆ.
ಜತೆಗೆ, ಈವರೆಗೆ ಉದ್ಯೋಗಸ್ಥರಿಗೇ ಸೀಮಿತವಾಗಿದ್ದ ಹೊಸ ಗ್ಯಾಜೆಟ್ ಕೊಳ್ಳುವ ಹುಚ್ಚನ್ನೂ ಈಗಿನ ಕಾಲೇಜು ವಿದ್ಯಾರ್ಥಿಗಳು ಮೈಗಂಟಿಸಿಕೊಂಡಿಸಿದ್ದಾರೆ. ಈ ವಿಚಾರದಲ್ಲಿ ಅವರು ಸಹಪಾಠಿಗಳ ಜತೆಗೇ ಸ್ಪರ್ಧೆಗೆ ನಿಲ್ಲುತ್ತಿದ್ದಾರೆ. ಹಾಗಂತ ಈ ಸ್ಪರ್ಧೆ ಶೈಕ್ಷಣಿಕ ಉದ್ದೇಶಕ್ಕಾಗಿ ಆಗಿದ್ದರೆ ಏನೂ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಈ ಸ್ಪರ್ಧೆ ನಡೆಯುವುದು ಪ್ರತಿಷ್ಠೆಗಾಗಿ. ಇದರ ಪರಿಣಾಮವಾಗಿ ಪೋಷಕರು ಹೊರೆ ಹೊರಬೇಕಾಗುತ್ತದೆ. ಮಕ್ಕಳು ಬಯಸಿದ ಗ್ಯಾಜೆಟ್‌ಗಳನ್ನು ಕೊಳ್ಳಲು ಅವರು ಅನಗತ್ಯವಾಗಿ ವೆಚ್ಚ ಮಾಡಬೇಕಾಗುತ್ತದೆ. ಕೆಲವೊಮ್ಮೆ ಈ ವಿಚಾರ ಮಕ್ಕಳು ಹಾಗೂ ಪೋಷಕರ ನಡುವೆ ಮನಸ್ತಾಪಕ್ಕೂ ಕಾರಣವಾಗುತ್ತದೆ. ಒಂದು ವೇಳೆ, ಮಕ್ಕಳು ಕೇಳಿದ್ದನ್ನು ತೆಗೆಸಿಕೊಟ್ಟರೆ ಕಲಿಕೆ ಮೇಲೆ ಮಕ್ಕಳ ಆಸಕ್ತಿ ಕಡಿಮೆಯಾಗಿ, ಗ್ಯಾಜೆಟ್ ಗೀಳು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ದೆಹಲಿ ಮೂಲದ ಕೌನ್ಸೆಲರ್ ನೀಲ್ ಪೌಲ್.
ಶಾಲಾ ಮಕ್ಕಳಿಗೂ ಅಂಟಿದ ಗೀಳು..
ಕೆಲ ಮಹಾನಗರಗಳಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳನ್ನೂ ಈ ಗೀಳು ಆವರಿಸಿಕೊಳ್ಳುತ್ತಿದೆ. ಹೈಸ್ಕೂಲ್ ವಿದ್ಯಾರ್ಥಿಗಳು ಅತ್ಯಾಧುನಿಕ ಮೊಬೈಲ್, ಟ್ಯಾಬ್ಲೆಟ್‌ಗಳನ್ನು ಹಿಡಿದು ಓಡಾಡುತ್ತಿದ್ದಾರೆ. ಶಾಲಾ ಹಂತದಲ್ಲೇ ಮಕ್ಕಳು ಈ ರೀತಿ ಗ್ಯಾಜೆಟ್ ಹುಚ್ಚಿಗೆ ಬೀಳುವುದು ಅಪಾಯಕಾರಿ ಎನ್ನುತ್ತಾರೆ ಶಿಕ್ಷಣ ತಜ್ಞರು.
ಹೈಸ್ಕೂಲ್ ಹಂತವು ವಿದ್ಯಾರ್ಥಿಗಳು ಸಂವಹನ, ಸಾಮಾಜಿಕ ಸಹಭಾಗಿತ್ವ ಮತ್ತು ಸಂಘಟನೆಯಲ್ಲಿ ಪಳಗುವ ಕಾಲಘಟ್ಟ. ಆದರೆ, ಇಂಥ ಸಮಯದಲ್ಲಿ ಗ್ಯಾಜೆಟ್‌ನೊಳಗೆ ತೂರಿಕೊಳ್ಳುವುದರಿಂದ ಅವರು ಸಾಮಾಜಿಕ ಸಂಪರ್ಕದಿಂದ ದೂರ ಉಳಿಯುತ್ತಾರೆ. ಜಗತ್ತೇ ಕೈಯಲ್ಲಿಟ್ಟುಕೊಳ್ಳುತ್ತಾರೆ. ಆದರೆ, ಆಂತರ್ಯದಲ್ಲಿ ಏಕಾಂಗಿಯಾಗಿ ಬಿಡುತ್ತಾರೆ ಎನ್ನುತ್ತಾರೆ ತಜ್ಞರು.
ಆರೋಗ್ಯಕ್ಕೂ ಹಾನಿ
ಗ್ಯಾಜೆಟ್‌ಗಳೊಂದಿಗೆ ಹೆಚ್ಚಿನ ಸಮಯ ಕಳೆಯುವ ವಿದ್ಯಾರ್ಥಿಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ತುತ್ತಾಗುತ್ತಾರೆ ಎನ್ನುತ್ತದೆ ಇತ್ತೀಚೆಗೆ ನಡೆದ ಒಂದು ಅಧ್ಯಯನ. ಗ್ಯಾಜೆಟ್ ಗೀಳಿನಿಂದ ನಿದ್ದೆಗೆ ತೊಂದರೆಯಾಗುತ್ತದೆ, ಒತ್ತಡ ಹೆಚ್ಚಾಗುತ್ತದೆ, ಸುಸ್ತು, ವಿಶ್ರಾಂತಿಯ ಕೊರತೆ ಕಾಣಿಸಿಕೊಳ್ಳುತ್ತದೆ. ಇದರ ಒಟ್ಟು ಪರಿಣಾಮ ವಿದ್ಯಾರ್ಥಿಗಳ ಅಧ್ಯಯಯದ ಮೇಲಾಗುತ್ತದೆ.

-ಅಜಿತ್ ಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.