ಹೊಸ ಆಸೆಯು ಮೂಡುತಿದೆ...
ಒಂಟಿತನ ಅನ್ನೋದು ಬೇಕು ಎಂದಾಗ ಸಿಗಲ್ಲ. ಬೇಡವೆಂದಾಗ ಬೆನ್ನುಬಿದ್ದು ಬಿಡುತ್ತದೆ. ಹೇಳದೆ ಬರುವ ಈ ಅತಿಥಿ ಸಿಕ್ಕಾಪಟ್ಟೆ ...

ಒಂಟಿತನ ಅನ್ನೋದು ಬೇಕು ಎಂದಾಗ ಸಿಗಲ್ಲ. ಬೇಡವೆಂದಾಗ ಬೆನ್ನುಬಿದ್ದು ಬಿಡುತ್ತದೆ. ಹೇಳದೆ ಬರುವ ಈ ಅತಿಥಿ ಸಿಕ್ಕಾಪಟ್ಟೆ ಕಾಡುತ್ತಾನೆ.
ರಜಾ ಇದೆ ಹೊರ ಹೋಗೋಣವೆಂದರೆ ಯಾರೂ ಜತೆಯಿಲ್ಲ.... ನಮ್ಮವರೆಂದುಕೊಂಡವರು ದೂರವಾದಾಗ, ಹೊಸ ಪ್ರದೇಶಕ್ಕೆ ಹೋಗಿ ನೆಲೆಸಿದಾಗ, ಸಂಬಂಧಗಳು ಮುರಿದಾಗ... ಹೀಗೆ ಬದುಕಿನ ಭರವಸೆ ಕಳೆದುಕೊಂಡಾಗ ಆವರಿಸಿಕೊಳ್ಳುವ 'ಒಬ್ಬಂಟಿತನ' ಎಲ್ಲರ ಸಂಗಾತಿ. ಈ ಸಂದರ್ಭವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಅನ್ನುವುದರ ಮೇಲೆ ನಮ್ಮ ಮುಂದಿನ ಬದುಕು ನಿರ್ಧಾರವಾಗುತ್ತೆ. ಅದು ನಮ್ಮೊಳಗಿನ ಶಕ್ತಿಯನ್ನೂ ಅನಾವರಣಗೊಳಿಸಬಹುದು, ನಮ್ಮೊಳಗೆ ಹೊಸ ಚೇತನವನ್ನೂ ಹುಟ್ಟು ಹಾಕಬಹುದು. ಆದರೆ, ಈ ವೇಳೆ ಸ್ವಲ್ಪ ಎಡವಿದರೂ ನಾವು ನಿರಾಶೆಯ ತೆಕ್ಕೆಗೆ ಬೀಳಬಹುದು. ಸುಂದರ ಬದುಕನ್ನು ವಿನಾಕಾರಣ ಹಾಳು ಮಾಡಿಕೊಳ್ಳಬಹುದು. ಆದರೆ, ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಆಯ್ಕೆ ನಮಗೇ ಬಿಟ್ಟದ್ದು.
ಒತ್ತಡದ ಬದುಕಿನಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಮಾತ್ರವಲ್ಲ ನಮ್ಮ ಬದುಕಿನ ಅಮೂಲ್ಯ ಸಮಯವನ್ನು ಬೇರೆಯವರಿಗಾಗಿ ಮೀಸಲಿಡುತ್ತೇವೆ. ಅದರಲ್ಲಿ ಒಂದು ಘಳಿಗೆ ನಮಗಾಗಿ ಮೀಸಲಿಟ್ಟರೆ... ಈ ಒಬ್ಬಂಟಿತನವನ್ನು ಕಳೆಯಲು ಅಗತ್ಯವಿಲ್ಲದಷ್ಟು ಕೆಲಸವನ್ನು ನೆಚ್ಚಿಕೊಂಡರೆ...
ಹೀಗೆ ಮಾಡಬಹುದು...
ಪುಸ್ತಕ ಓದಿ
ಭೂಮಿ ಸುತ್ತಿ ನೋಡು, ಕೋಶ ಓದಿ ನೋಡು ಅಂತಾರೆ ಹಿರಿಯರು. ಹೀಗೆ ಮಾಡುವುದರಿಂದ ಒಬ್ಬಂಟಿತನವನ್ನು ಖಂಡಿತಾ ದೂರ ಇಡಲು ಸಾಧ್ಯವಿದೆ. ಪುಸ್ತಕಗಳು ಪುಸ್ತಕ ಬದುಕುವುದನ್ನಷ್ಟೇ ಅಲ್ಲ ಜೀವನ ಪ್ರೀತಿಯನ್ನು ಕಲಿಸುತ್ತದೆ.
ದೇಶ ಸುತ್ತಿ
ಒಬ್ಬಂಟಿಯಾಗಿದ್ದೀರಾ..? ಹಾಗಂತ ಬೇಸರ ಮಾಡಿಕೊಳ್ಳಬೇಡಿ. ದೇವಾಲಯ, ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿ. ಹೊಸ ಸ್ಥಳ ಯಾರು ಎನಾಂತರೆ ಅನ್ನೋ ಭಯ ಇರಲ್ಲ. ಯಾಕೆಂದರೆ ನಿಮಗೆ ನೀವೇ ಸ್ನೇಹಿತರು. ಈ ಮೂಲಕ ಹೊಸ ಯೋಚನೆಗಳು ಮನವನ್ನು ತುಂಬಿಕೊಳ್ಳುತ್ತೆ. ನಮ್ಮ ಏಕಾಂಗಿತನವನ್ನೂ ದೂರ ಮಾಡುತ್ತವೆ.
ಸಂಬಂಧಿಕರನ್ನು ಭೇಟಿಯಾಗಿ
ಹೊಸ ವ್ಯಕ್ತಿಗಳನ್ನು ಭೇಟಿಯಾಗಿ. ಸಂಬಂಧಿಕರು, ಸ್ನೇಹಿತರ ಸುಖ, ದುಃಖಗಳಲ್ಲಿ ಭಾಗಿಯಾಗಿ. ಅವರ ಹವ್ಯಾಸಗಳನ್ನು ತಿಳಿದುಕೊಳ್ಳಿ. ಆ ಅನುಭವಗಳು ನಿಮ್ಮ ಬದುಕಿಗೂ ಮಾರ್ಗದರ್ಶನ ನೀಡಬಹುದು. ಹೊಸ ಹವ್ಯಾಸಗಳು ಮನಸ್ಸಿಗೆ ಮುದ ನೀಡುತ್ತವೆ. ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಏಕಾಂಗಿತನಕ್ಕಿಂತ ಒಳ್ಳೆ ಸಮಯ ಇನ್ನೊಂದಿಲ್ಲ.
ಕೃಷಿ ಚಟುವಟಿಕೆ, ಚಿತ್ರಕಲೆ, ಸಂಗೀತ ಆಲಿಸುವುದು, ಕಥೆ, ಕವನ, ಲೇಖನಗಳನ್ನು ಬರೆಯುವುದು, ಕರಕುಶಲ ಕಲೆಗಳನ್ನು ಕಲಿಯುವುದಕ್ಕೆ ಇದಕ್ಕಿಂತ ಒಳ್ಳೆಯ ಸಮಯ ಬೇರೆ ಯಾವುದಿದೆ...?
ಏಕಾಂಗಿತನ ಶಾಪ ಅನ್ನುತ್ತಾರೆ ಕೆಲವರು. ಆದರೆ, ಅನೇಕರಿಗೆ ಗೊತ್ತಿದ್ದಂತಿಲ್ಲ ಈ ಏಕಾಂಗಿತನದಲ್ಲೇ ನಾವು ನಮ್ಮನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಿದೆ. ನಮ್ಮ ಬದುಕಿನ ಹೆಚ್ಚಿನ ಅವಧಿಯನ್ನು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಕಳೆದಿರುತ್ತೇವೆ. ನಮ್ಮನ್ನು ನಾವು ಮರೆತೇಬಿಟ್ಟಿರುತ್ತೇವೆ. ಆದರೆ, ಈ ಏಕಾಂಗಿತನವಿದೆಯಲ್ಲಾ ಅದು ನಮ್ಮ ಬೇಕು ಬೇಡಗಳನ್ನು ಅರಿತುಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
- ವಿದ್ಯಾ ಇರ್ವತ್ತೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


